ಹಬ್ಬಗಳ ಆಚರಣೆಯಲ್ಲಿ ಪರಿಸರ ಜಾಗೃತಿ ಇರಲಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು


ಭಾರತ ಹಬ್ಬಗಳ ದೇಶ. ಮಳೆಗಾಲದಲ್ಲಿ ನಾಗರಪಂಚಮಿಯಂದು ನಮ್ಮ ಹಬ್ಬಗಳ ಸರಮಾಲೆ ಆರಂಭವಾಗುತ್ತದೆ. ಇದು ಮುಗಿಯುವುದು ನಮ್ಮೂರ ದೇವಸ್ಥಾನದ ಜಾತ್ರೋತ್ಸವದಲ್ಲಿ. ಇದರ ನಡುವೆಯೇ ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ, ಸೀಮಂತ ಇವೆಲ್ಲವೂ ನಮಗೆ ಹಬ್ಬದ ದಿನಗಳೇ ಆಗಿವೆ. ಹಬ್ಬವೆಂದರೆ ನೆಂಟರು, ಇಷ್ಟರು, ಊರಿನವರು ಸೇರುತ್ತಾರೆ. ಗೌಜಿ ಗಮ್ಮತ್ತು ಇರಲೇಬೇಕು. ನಮ್ಮ ದೇಶದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ನವರಾತ್ರಿಯಂದು ಬಣ್ಣದ ವೇಷ ಹಾಕಿ ಮೆರವಣಿಗೆ ಮಾಡಿ, ಊರೆಲ್ಲ ನರ್ತಿಸಿ, ರಾವಣ ಸಂಹಾರದ ಕಾರ್ಯಕ್ರಮದೊಂದಿಗೆ ಆಚರಿಸುತ್ತೇವೆ. ದೀಪಾವಳಿಯಲ್ಲಿ ಬೆಳಕಿನ ಲೋಕವನ್ನು ಸೃಷ್ಟಿಸಿ, ಸುಡುಮದ್ದುಗಳನ್ನು ಬಳಸಿ, ಶಬ್ದ ಮತ್ತು ಬೆಳಕಿನ ಆಟವನ್ನು ಆಡುತ್ತೇವೆ. ಸಂಕ್ರಾಂತಿಯಲ್ಲಿ ಊರನ್ನೇ ಜಾತ್ರೆ ಸೇರಿಸಿ, ಎತ್ತುಗಳನ್ನು ಬೆಂಕಿಯ ಚಕ್ರದಲ್ಲಿ ಹಾರಿಸಿ ಸಂಭ್ರಮ ಪಡುತ್ತೇವೆ. ಶಿವರಾತ್ರಿಯಂದು ಸಾಮೂಹಿಕವಾಗಿ ಕಾಲ್ನಡಿಗೆಯಲ್ಲಿ ಇಷ್ಟದೇವರ ದೇವಸ್ಥಾನ ಸಂದರ್ಶನಕ್ಕೆ ಹೊರಟುಬಿಡುತ್ತೇವೆ. ಇನ್ನು ಜಾತ್ರೆಯ ನೂಕುನುಗ್ಗಲಂತೂ ಹೇಳುವುದೇ ಬೇಡ. ಎಂತಹ ಸಣ್ಣ ಹಳ್ಳಿಯಾದರೂ ರಥೋತ್ಸವ ಸಂದರ್ಭದಲ್ಲಿ ಸಾವಿರಾರು ಜನ ತೇರೆಳೆದು ಕೃತಾರ್ಥರಾಗುತ್ತಾರೆ.
ಇವೆಲ್ಲವೂ ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದ್ದರೂ, ಹಬ್ಬಗಳ ಸಾರ್ವಜನಿಕ ಆಚರಣೆಯ ಬಗ್ಗೆ ಸ್ವಲ್ಪ ಚಿಂತಿಸಬೇಕಾದ ಕಾಲ ಒದಗಿ ಬಂದಿದೆ.
ಮುಖ್ಯವಾಗಿ ದೇಶದಾದ್ಯಂತ ಕೊರೊನಾ ಮಹಾಮಾರಿ ಲಕ್ಷಾಂತರ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿರುವ ಈ ಸಂದರ್ಭದಲ್ಲಿ ನಾವು ಜಾಗೃತರಾಗಿರುವುದು ಅತ್ಯವಶ್ಯಕವಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಜೀವಹಾನಿಯಾಗಿದೆ. ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಆದುದರಿಂದ ಈ ವರ್ಷ ಈ ಹಬ್ಬಗಳ ಸಮಯದಲ್ಲಿ ಜನಸಂದಣಿಯ ಕುರಿತಂತೆ ನಾವೆಲ್ಲರೂ ಎಚ್ಚರ ವಹಿಸಲೇಬೇಕಾಗಿದೆ. ಸರಕಾರ ಸೂಚಿಸಿದಂತೆ ಆರು ಅಡಿಗಳ ಅಂತರ, ಮುಖಕ್ಕೆ ಮುಖವಾಡ ಮತ್ತು ಅನ್ಯ ವಸ್ತುಗಳನ್ನು ಮುಟ್ಟಿದ ನಂತರ ಕೈತೊಳೆದುಕೊಳ್ಳುವ ಪರಿಪಾಠವನ್ನು ಅಗತ್ಯವಾಗಿ ಪಾಲಿಸಬೇಕು. ಸಾರ್ವಜನಿಕ ಪ್ರದರ್ಶನಗಳಲ್ಲಿ ಸರಳತೆಯನ್ನು ಇಟ್ಟುಕೊಳ್ಳೋಣ.
ಸಾರ್ವಜನಿಕವಾಗಿ ಹಬ್ಬಗಳ ಆಚರಣೆ ಸಂದರ್ಭ ಉಂಟಾಗುವ ಪರಿಸರ ಹಾನಿಗಳ ಬಗ್ಗೆಯೂ ನಾವಿಂದು ಜಾಗ್ರತೆ ವಹಿಸಬೇಕಾಗಿದೆ. ‘ದೀಪಾವಳಿ’ಯನ್ನು ನಮ್ಮಲ್ಲಿ ‘ಹಬ್ಬಗಳ ರಾಜ’ ಎಂದು ಕರೆಯುತ್ತಾರೆ. ಸುಮಾರು 3-4 ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಸಂದರ್ಭ ನಾವು ಕೋಟ್ಯಾಂತರ ರೂಪಾಯಿಯ ಸುಡುಮದ್ದುಗಳನ್ನು, ಬಿರುಸುಬಾಣಗಳನ್ನು ಬಳಸುತ್ತೇವೆ. ಸುಡುಮದ್ದುಗಳ ಹೊಗೆಯಿಂದ ವಾತಾವರಣ ಸಾಕಷ್ಟು ಕಲುಷಿತವಾಗುತ್ತದೆ. ಪಟಾಕಿಗಳ ಶಬ್ದದಿಂದ ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತದೆ. ಅಲ್ಲಲ್ಲಿ ಸುಟ್ಟು ಬಿಸಾಡಿದ ಪಟಾಕಿಗಳ ತುಣುಕುಗಳು ಕಷ್ಟಪಟ್ಟು ನಾವು ಕಾಯ್ದುಕೊಂಡಿರುವ ಸ್ವಚ್ಛತೆಯನ್ನು ಹಾಳುಗೆಡವುತ್ತವೆ. ಪಟಾಕಿ ತಯಾರಿಕೆಯು ಅಪಾಯಕಾರಿ ಉದ್ದಿಮೆ. ಅಲ್ಲದೇ ಇದರಲ್ಲಿ ಕಾನೂನುಬಾಹಿರವಾಗಿ ಮಕ್ಕಳನ್ನು ಬಳಸುತ್ತಾರೆಂಬ ದೂರೂ ಇದೆ. ಮಕ್ಕಳಿಗೆ ಆಕರ್ಷಕವಾಗಿರುವ ಪಟಾಕಿಗಳನ್ನು ಸುಡುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತಗಳಿಗೂ ಕಮ್ಮಿಯಿಲ್ಲ. ಹೀಗಾಗಿ ಅದ್ದೂರಿಯ ಪಟಾಕಿಯ ಬಳಕೆ ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗಬಹುದು. ಹೀಗೆ ಪರಿಸರ ಸ್ವಚ್ಛತೆಯನ್ನು ಹಾಳುಗೆಡಹುವ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಜೀವಹಾನಿಯನ್ನುಂಟು ಮಾಡಬಹುದಾದ ಪಟಾಕಿ ಬಳಕೆಗಳನ್ನು ಆದಷ್ಟು ಕಡಿಮೆ ಮಾಡೋಣ. ಬದಲಾಗಿ ಪಾರಂಪರಿಕವಾಗಿ ತಯಾರಾದ ಮಣ್ಣಿನ ಹಣತೆಗಳನ್ನು ಬಳಸಿ, ಕುಂಬಾರಿಕೆ ಉದ್ಯಮಕ್ಕೆ ಜೀವ ನೀಡೋಣ. ಹಣತೆಯನ್ನು ಹಚ್ಚಿ, ಹೊಸ ಬಟ್ಟೆ ಧರಿಸಿ ದೀಪಾವಳಿಯನ್ನು ಆಚರಿಸೋಣ. ಪರಿಸರಸ್ನೇಹಿ ಹಬ್ಬಗಳ ಆಚರಣೆಯನ್ನು ಮಾಡೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *