ಹಣತೆಯಿಂದ ಹಣತೆಯ ಹಚ್ಚುತಾ…

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಜಗತ್ತಿನಲ್ಲಿನಲ್ಲಿರುವ ಎಲ್ಲ ಚರಾಚರ ವಸ್ತುಗಳು, ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಲೇ ಇರುತ್ತವೆ. ಅದೇ ರೀತಿ ಮನುಷ್ಯನ ಅಂತಸ್ತು ಮತ್ತು ಮನಸ್ಥಿತಿಯು ಸಹಿತ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಾ ಇರುತ್ತದೆ. ಸ್ವಾತಂತ್ರö್ಯ ಸಿಕ್ಕ ನಂತರ ಸುಮಾರು ೩೦ ವರ್ಷಗಳವರೆಗೂ ದೇಶದಲ್ಲಿ ಸಾಕಷ್ಟು ಬಡತನ ಇತ್ತು. ಜನರಿಗೆ ಮೂಲ ಅಗತ್ಯಗಳಾದ ಅನ್ನ, ವಸ್ತç, ವಸತಿ ಇವುಗಳು ಸಿಕ್ಕುವುದೇ ಕಷ್ಟವಾಗಿತ್ತು. ಅಂದಿನ ಕಾಲದ ಬಡತನವೆಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ.
ಎಂಬತ್ತರ ದಶಕದ ನಂತರ ನಿಧಾನವಾಗಿ ಬಡತನದ ವ್ಯಾಖ್ಯೆ ಬದಲಾಗಿದೆ. ಇಂದಿನ ದಿನಗಳಲ್ಲಿ ಊಟಕ್ಕೆ ಗತಿಯಿಲ್ಲದವರನ್ನು ಕಾಣಲು ಸಾಧ್ಯವಿಲ್ಲ. ಒಂದೊಮ್ಮೆ ಅಂತಹವರೆಲ್ಲಿಯಾದರು ಕಂಡುಬAದರೆ ಅವರಿಗೆ ಸಮಾಜದ ಬಂಧುಗಳೇ ಉಣ ಬಡಿಸುತ್ತಾರೆ. ದುಡಿಯುವ ಸಾಮರ್ಥ್ಯವಿದ್ದವರಿಗೆ ದುಡಿಯಲು ಬೇಕಾದಷ್ಟು ಅವಕಾಶಗಳ ನಿರ್ಮಾಣವಾಗಿದೆ. ಸರಕಾರದ ಯೋಜನೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘ – ಸಂಸ್ಥೆಗಳ ಅವಿರತ ಪ್ರಯತ್ನದಿಂದ ಕಡುಬಡವರಲ್ಲಿಯೂ ಉಳಿತಾಯದ ಸಾಮರ್ಥ್ಯ ಬಂದಿದೆ. ಅಂದಿನ ಕಾಲದಲ್ಲಿದ್ದ ‘ದಾನಿಗಳೆಂದರೆ ಶ್ರೀಮಂತರು, ದೀನನೆಂದರೆ ಬಡವರು’ಎಂಬ ಯೋಚನಾ ಲಹರಿ ಇಂದು ಬದಲಾಗಿದೆ. ಬಡವರಲ್ಲಿಯೂ ಸಾಮರ್ಥ್ಯ ಹೆಚ್ಚಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಬಡವರ ಸಂಖ್ಯೆ ಹೆಚ್ಚುತ್ತಿದೆ.
ತೀರಾ ಇತ್ತೀಚೆಗೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಡೆದ ಮದ್ಯವರ್ಜನ ಶಿಬಿರವನ್ನೇ ತೆಗೆದುಕೊಳ್ಳಿ. ಈ ಕಾರ್ಯಕ್ರಮಕ್ಕೆ ಯೋಜನೆಯ ಫಲಾನುಭವಿ ಕುಟುಂಬಗಳು ತಮ್ಮಲ್ಲಿ ಇರುವ ಅನೇಕ ವಸ್ತುಗಳನ್ನು ನೀಡಿದ್ದಾರೆ. ಪ್ರತಿನಿತ್ಯ ಎಂಬAತೆ ಅಕ್ಕಿ, ತರಕಾರಿ, ತೆಂಗಿನಕಾಯಿಗಳ ಮಹಾಪೂರ ಶಿಬಿರಕ್ಕೆ ಹರಿದುಬಂದಿದೆ. ಮಾತ್ರವಲ್ಲ ಗ್ರಾಮದ ಮಹಿಳಾಪಡೆ ಮತ್ತು ಯುವಪಡೆ ಶಿಬಿರದ ಎಲ್ಲ ಜವಾಬ್ದಾರಿಗಳನ್ನು ವಹಿಸಿಕೊಂಡಿತ್ತು. ಅಡುಗೆ ಪಾತ್ರೆಯನ್ನು ತೊಳೆಯುವುದರಿಂದ ಹಿಡಿದು, ಸ್ವಚ್ಛತೆಯವರೆಗೆ ಎಲ್ಲ ಕೆಲಸಗಳನ್ನು ನಮ್ಮ ಸ್ವಸಹಾಯ ಸಂಘದ ಸದಸ್ಯರೇ ಮಾಡಿದ್ದಾರೆ. ಇಂತಹ ಸೇವಾ ಕಾರ್ಯಕ್ರಮಗಳು ಬಹುಶಃ ಎಲ್ಲ ಮದ್ಯವರ್ಜನ ಶಿಬಿರಗಳಲ್ಲಿಯೂ ಸಾಮಾನ್ಯವಾಗಿ ನಡೆಯುತ್ತಿವೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರ ದೇಣಿಗೆಯಿಂದ ಮಾತ್ರ ನಡೆಯುತ್ತಿದ್ದ ಇಂತಹ ಕಾರ್ಯಕ್ರಮಗಳು ಇಂದು ಊರಿನ ಸರ್ವಸಾಮಾನ್ಯರ ದೇಣಿಗೆಯಿಂದ ಯಶಸ್ವಿಯಾಗಿ ನಡೆಯುತ್ತಿವೆ. ಇದನ್ನು ಗಮನಿಸದೇ ಇದ್ದಲ್ಲಿ ದೇಶದಲ್ಲಿ ಉಂಟಾಗಿರುವ ಬದಲಾವಣೆ ನಮಗೆ ಅರ್ಥವಾಗುವುದಿಲ್ಲ. ಸೇವೆ ಮಾಡಬೇಕೆಂಬ ಮನೋಭಾವ ಮತ್ತು ಸಮಾಜ ಕಟ್ಟಬೇಕೆಂಬ ತವಕ, ಎಲ್ಲರಲ್ಲಿಯೂ ಇರುವುದು ಇಂತಹ ಕಾರ್ಯಕ್ರಮಗಳಿಂದ ವೇದ್ಯವಾಗುತ್ತದೆ.
ಅದೇ ರೀತಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕೊನೆಯ ದೀಪೋತ್ಸವದಂದು ಧರ್ಮಸ್ಥಳಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ ೨೦ಕ್ಕೂ ಹೆಚ್ಚಿನ ತಂಡಗಳು ಸಂಜೆಯ ಊಟದ ವ್ಯವಸ್ಥೆಯನ್ನು ಮಾಡುತ್ತಿರುವುದೂ ಒಂದು ವಿಶೇಷವೆ. ಕ್ಷೇತ್ರಕ್ಕೆ ಬಂದ ಭಕ್ತರಿಗೆ ರುಚಿರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿ ದಾಸೋಹ ನೀಡಿ ಸಂತಸಪಡುವ ಇವರ ಉದಾರತೆಗೆ ಏನನ್ನೋಣ. ಈ ಸೇವೆ ನೀಡುವ ತಂಡಗಳಲ್ಲಿಯೂ ಹೆಚ್ಚಿನವರು ಸಾಮಾನ್ಯರೇ ಎಂಬುದು ಉಲ್ಲೇಖಾರ್ಹ ವಿಷಯ.
ಇಂದು ನಾಡಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ‘ಶೌರ್ಯ ವಿಪತ್ತು ನಿರ್ವಹಣಾ ಪಡೆ’ಯೂ ಸಾಮಾನ್ಯರಿಂದ ನಿರ್ವಹಿಸಲ್ಪಡುತ್ತಿದೆ. ಹೀಗೆ ಸರ್ವ ಸಾಮಾನ್ಯರೆಲ್ಲರೂ ತಮ್ಮ ಸುತ್ತಮುತ್ತಲಿನವರಿಗೆ ಅಗತ್ಯ ಬಿದ್ದಾಗ ಸಹಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಹೋದಲ್ಲಿ ಜೀವನ ಸಾರ್ಥಕವಾಗುತ್ತಾ ಹೋಗುತ್ತದೆ. ಹಣತೆಯಿಂದ ಹಣತೆ ಹಚ್ಚುವಂತೆ ನಮ್ಮಿಂದ ಇನ್ನೊಬ್ಬರಿಗೆ ಒಂದಷ್ಟು ಸಹಾಯ ದೊರೆಯಲಿ ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳೋಣ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *