ಸಿರಿಧಾನ್ಯ ಬಳಕೆಗಿದು ಸಕಾಲ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯೇ ಜಾಸ್ತಿಯಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಬೆಳೆಸುವ ಭರಾಟೆಯಲ್ಲಿ ಕ್ರಮೇಣ ಸಿರಿಧಾನ್ಯಗಳು ಮರೆತು ಹೋಗಿ ಹೊಸ ಪೀಳಿಗೆಯವರಿಗೆ ಸಿರಿಧಾನ್ಯವೆಂದರೆ ಏನೆಂದೇ ಗೊತ್ತಿಲ್ಲದಂತಾಗಿದೆ. ರಾಗಿ, ಸಜ್ಜೆ, ನವಣೆ, ಕೊರಲೆ, ಹಾರಕ, ಊದಲು, ಬರಗು, ಸಾಮೆ, ಜೋಳ ಈ ನವಧಾನ್ಯಗಳನ್ನು ‘ಸಿರಿಧಾನ್ಯಗಳು’ ಅಥವಾ ‘ಕಿರುಧಾನ್ಯ’ಗಳೆಂದು ಕರೆಯುತ್ತಾರೆ. ಇವುಗಳ ಪೈಕಿ ಆಧುನಿಕ ಬೇಸಾಯ ಕ್ರಮಗಳನ್ನು ಬಳಸಿ ಉತ್ಪಾದಿಸಲಾಗುತ್ತಿರುವ ಧಾನ್ಯಗಳ ಪೈಕಿ ಜೋಳ ಅಗ್ರಸ್ಥಾನದಲ್ಲಿದೆ. ಇದು ಬಿಟ್ಟರೆ ಅಲ್ಲಲ್ಲಿ ರಾಗಿಯನ್ನೂ ಬೆಳೆಯಲಾಗುತ್ತದೆ. ಉಳಿದಂತೆ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆ ಇತ್ತೀಚಿನ ದಿನಗಳಲ್ಲಷ್ಟೇ ಪುನಃ ಪರಿಚಯವಾಗುತ್ತಿದೆ. ಸಿರಿಧಾನ್ಯಗಳು ಕಡಿಮೆ ನೀರಿರುವ ಬರಗಾಲ ಪ್ರದೇಶಗಳಲ್ಲಿಯೂ ಬೆಳೆಯಬಲ್ಲವು. ಇವುಗಳಲ್ಲಿ ಪೌಷ್ಠಿಕಾಂಶಗಳು ಹೆಚ್ಚಿನ ಮಟ್ಟದಲ್ಲಿದ್ದು, ಜೊತೆಯಲ್ಲಿ ಸಾಕಷ್ಟು ನಾರಿನಂಶವೂ ಬೆರೆತಿರುವುದರಿಂದ ಸಿರಿಧಾನ್ಯಗಳ ಬಳಕೆಯಿಂದ ಪಚನಕ್ರಿಯೆಯು ಸರಾಗವಾಗುವುದಲ್ಲದೆ, ಅನೇಕ ರೋಗಗಳಿಗೆ ಔಷಧಿಯಾಗಿಯೂ ಕೆಲಸ ಮಾಡುತ್ತವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಆಧುನಿಕ ಸಮಸ್ಯೆಗಳಾದ ಬಿ.ಪಿ., ಶುಗರ್, ಮಂಡಿ ನೋವು, ಆ್ಯಸಿಡಿಟಿ, ಬೊಜ್ಜು ಮತ್ತು ಋತುಚಕ್ರದ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲು ನಮ್ಮ ಊಟದ ಬಟ್ಟಲಿನಲ್ಲಿ ಸಿರಿಧಾನ್ಯದ ಪ್ರಮಾಣ ಹೆಚ್ಚಬೇಕಾಗಿದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೂಜ್ಯರು ಮತ್ತು ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ಒಂದು ದಶಕದಿಂದ ಸಿರಿಧಾನ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಕೃಷಿ ಮೇಲ್ವಿಚಾರಕರ ಮೂಲಕ ಸಿರಿಧಾನ್ಯಗಳ ಬೇಸಾಯ ಪದ್ಧತಿಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವುದು, ರಾಜ್ಯದ ವಿವಿಧೆಡೆಗಳ ಸಿರಿಧಾನ್ಯಗಳ ಮಾಹಿತಿ ಸಂಗ್ರಹಣೆ ಮಾಡುವುದು, ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡುವುದು, ಸಿರಿ ಉತ್ಪನ್ನಗಳ ಮಾರಾಟ ಇವೇ ಮುಂತಾದ ಕೆಲಸಗಳಲ್ಲಿ ಸಾಕಷ್ಟು ಬಂಡವಾಳವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಇಂದು ಚಿಕ್ಕನಾಯಕನಹಳ್ಳಿ, ದಾವಣಗೆರೆ ಮತ್ತು ಕೊಪ್ಪಳಗಳಲ್ಲಿ ಸಿರಿಧಾನ್ಯ ಬೆಳೆಗಾರರ ಕಂಪನಿಗಳು ಕಾರ್ಯಾರಂಭಿಸಿವೆ ಮತ್ತು ಧಾರವಾಡದಲ್ಲಿ ಬೃಹತ್, ಮಾದರಿ ಸಿರಿಧಾನ್ಯ ಸಂಸ್ಕರಣಾ ಕೇಂದ್ರ ಮತ್ತು ಮೌಲ್ಯವರ್ಧನಾ ವಿಭಾಗವನ್ನು ಆರಂಭಿಸಲಾಗಿದೆ. ಸಿರಿಧಾನ್ಯಗಳ ಅನ್ನ ತಯಾರಿಸಲು ಸಂಸ್ಕರಿತ ಧಾನ್ಯಗಳು, ರೊಟ್ಟಿ, ಚಪಾತಿಗಳನ್ನು ತಯಾರಿಸಲು ಸಂಸ್ಕರಿತ ಹಿಟ್ಟು, ಇನ್‌ಸ್ಟಾö್ಯಂಟ್ ಇಡ್ಲಿ, ಉಪ್ಪಿಟ್ಟು, ಶ್ಯಾವಿಗೆ ಮಿಕ್ಸ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧನೆಯ ಭಾಗವಾಗಿ ಬ್ರೆಡ್, ಬನ್, ಕುಕ್ಕೀಸ್, ಬಿಸ್ಕತ್ ಮುಂತಾದವುಗಳನ್ನು ಮಾರಾಟ ಮಾಡಲಾಗುತ್ತಿದೆ.
ಸಿರಿಧಾನ್ಯಗಳು ನಮ್ಮ ಆಹಾರದ ಪ್ರಮುಖ ಭಾಗವಾಗಿ ಅಡುಗೆ ಮನೆಯನ್ನು ಸೇರಿದರೆ ಕೇಳದೇ ಬರುವ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಸಿರಿಧಾನ್ಯ ಬೆಳೆಗಾರರಿಗೆ ಮತ್ತು ಉತ್ಪಾದನಾ ಘಟಕಗಳಿಗೆ ಗ್ರಾಹಕರ ಸಹಕಾರ ಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಯೋಜನೆಯು ಸಿರಿ ಸಂಸ್ಥೆಯ ಜೊತೆ ಸೇರಿ ರಾಜ್ಯಾದ್ಯಂತ ಸಿರಿಧಾನ್ಯ ಮಾರಾಟ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ನೀವುಗಳು ನಿಮ್ಮ ನಿಮ್ಮ ಅಂಗಡಿಯಲ್ಲಿ ಸಿರಿ ಸಂಸ್ಥೆಯ ಸಿರಿಧಾನ್ಯವನ್ನು ಕೇಳಿ ಪಡೆಯಿರಿ. ನಿಮ್ಮಲ್ಲಿ ಆರೋಗ್ಯ ಸಮಸ್ಯೆಯಿದ್ದಲ್ಲಿ ಅದನ್ನು ನಿವಾರಿಸಬಲ್ಲ ಸಿರಿಧಾನ್ಯದ ಬಳಕೆಯನ್ನು ಹೆಚ್ಚು ಮಾಡಿರಿ. (ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ವಿಳಾಸ ದಿನೇಶ್, ನಿರ್ದೇಶಕರು, ಸಿರಿಧಾನ್ಯ ವಿಭಾಗ, ಧಾರವಾಡ – 9448548678)

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates