ಪಿಎಂ ದಿಶಾ ಯೋಜನೆಯ ಪ್ರಯೋಜನ ಪಡೆಯಿರಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಸಂವಹನ ತಂತ್ರಜ್ಞಾನ (ಕಮ್ಯುನಿಕೇಶನ್ ಟೆಕ್ನಾಲಜಿ) ಮೊಬೈಲ್ ಆವಿಷ್ಕಾರದೊಂದಿಗೆ ನಾವು ಊಹಿಸುವುದಕ್ಕಿಂತ ವೇಗವಾಗಿ ಬೆಳೆದಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಮನೆಯಲ್ಲಿ ಟೆಲಿಫೋನ್ ಹಾಕಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಮತ್ತು ಟೆಲಿಫೋನ್ ಇದ್ದರೂ ದೂರದ ಊರುಗಳಿಗೆ ಕರೆ ಮಾಡಬೇಕೆಂದರೆ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ನಂತರ ಎಸ್.ಟಿ.ಡಿ. ಸೌಲಭ್ಯ ಬಂದರೂ ಎಲ್ಲ ಟೆಲಿಫೋನ್‌ಗಳಿಗೂ ಆ ಭಾಗ್ಯ ಇರಲಿಲ್ಲ. ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಇ-ಮೇಲ್, ಇಂಟರ್‌ನೆಟ್ ತಂತ್ರಜ್ಞಾನ ಜಗತ್ತಿನಲ್ಲಿ ಸಂವಹನ ಕ್ರಾಂತಿಯನ್ನು ಮಾಡಿಸಿತು. ಇದರಿಂದ ಒಬ್ಬರಿಗೊಬ್ಬರು ಪತ್ರ ಬರೆಯುವ ಕ್ರಮ ಪುರಾತನವಾಗಿ ಹೋಯಿತು. 2000 ಇಸವಿಯ ಹೊತ್ತಿಗೆ ಪ್ರಾರಂಭವಾದ ಮೊಬೈಲ್ ತಂತ್ರಜ್ಞಾನ ಪ್ರಪಂಚ ಕಂಡ ಅದ್ಭುತ ಬೆಳವಣಿಗೆ. ಮೊದಲಿಗೆ ಕರೆಗಳನ್ನು ಮಾಡಲಷ್ಟೆ ಬಳಕೆಯಾಗುತ್ತಿದ್ದ ಮೊಬೈಲ್‌ಗಳು ನಂತರದ ದಿನಗಳಲ್ಲಿ ಮನರಂಜನೆ, ವೀಡಿಯೋ ಕರೆ, ವ್ಯವಹಾರ, ಹಣ ವರ್ಗಾವಣೆ ಮುಂತಾದ ಕ್ಷೇತ್ರಗಳಿಗೆ ಅಳವಡಿಕೆಯಾಯಿತು.
ಇದೀಗ ಮೊಬೈಲ್ ಸಂಖ್ಯೆ ನಮ್ಮ ಗುರುತಿನ ಚೀಟಿಗೆ ಸಮಾನವಾಗಿದೆ. ನಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್, ಆರೋಗ್ಯ ಸೇತು, ಬ್ಯಾಂಕ್ ಖಾತೆ, ಆದಾಯ ತೆರಿಗೆ ಖಾತೆ, ಜಿ.ಎಸ್.ಟಿ. ಮುಂತಾದ ಎಲ್ಲ ಕೆಲಸಗಳಿಗೂ ಗುರುತಾಗಿ ಬಳಸಲಾಗುತ್ತದೆ. ನಮ್ಮ ಮೊಬೈಲ್‌ನಲ್ಲಿ ಬ್ಯಾಂಕ್ ಆ್ಯಪ್, ಮತ್ತಿತರರ ಹಣ ವರ್ಗಾವಣೆಯ ಆ್ಯಪ್‌ಗಳನ್ನು ಹಾಕಿಕೊಂಡು ಹಣ ಇದ್ದರೆ ವಹಿವಾಟು ನಿರ್ವಹಣೆ, ಹಣ ವರ್ಗಾವಣೆ ಮಾಡಬಹುದಾಗಿದೆ. ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಬ್ಯಾಂಕ್ ವ್ಯವಹಾರ ಮಾಡುವ ಸಲುವಾಗಿ ಬ್ಯಾಂಕ್ ಆ್ಯಪ್‌ಗಳು ಇದೀಗ ಲಭ್ಯವಾಗಿವೆ. ಜೊತೆಯಲ್ಲಿಯೇ ಹಣವನ್ನು ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡಲೆಂದೇ ಕೇಂದ್ರ ಸರಕಾರವು ಯು.ಪಿ.ಐ. (Unified Payments Interface) ತಂತ್ರಜ್ಞಾನವನ್ನು ಅಳವಡಿಸಿದೆ. ಈ ತಂತ್ರಜ್ಞಾನದಲ್ಲಿ ನಮ್ಮ ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಮತ್ತು ನಮ್ಮ ಗುರುತು, ಹೆಸರನ್ನು ಜೋಡಣೆ ಮಾಡಿದರೆ ನಮ್ಮ ಬ್ಯಾಂಕ್ ಖಾತೆಯಿಂದ ಯಾರಿಗೆ ಬೇಕಾದರೂ ಮೊಬೈಲ್‌ನಿಂದಲೇ ಹಣ ಕಳುಹಿಸಬಹುದಾಗಿದೆ. ಮತ್ತು ಹಣ ಪಡೆದುಕೊಳ್ಳಬಹುದಾಗಿದೆ. ಹೀಗೆ ಮೊಬೈಲ್ ಬ್ಯಾಂಕಿ0ಗ್ ಬಹಳ ಜನಪ್ರಿಯವಾಗಿದೆ.
ಈ ಮೊಬೈಲ್ ಬ್ಯಾಂಕಿ0ಗ್ ತಂತ್ರಜ್ಞಾನ ನಮಗಿಂದು ಅನಿವಾರ್ಯವಾಗಿದೆ. ಎಷ್ಟು ಬೇಗ ನಾವು ಇದರಲ್ಲಿ ಪ್ರಾವೀಣ್ಯ ಪಡೆಯುತ್ತೇವೆಯೋ ಅಷ್ಟು ಒಳ್ಳೆಯದು. ಇದರಿಂದ ಬ್ಯಾಂಕಿಗೆ ಹೋಗುವ ಸಮಯ, ಹಣ ಉಳಿತಾಯವಾಗುವುದಲ್ಲದೆ ನಾವು ನಡೆಸುವ ವ್ಯವಹಾರಗಳು ಅತ್ಯಂತ ಪಾರದರ್ಶಕವಾಗುತ್ತವೆ. ಎಷ್ಟೋ ಬಾರಿ ನಾವು ನಗದನ್ನು ಇನ್ನೊಬ್ಬರಿಗೆ ಕೊಟ್ಟು ಪಡೆದುಕೊಂಡವರು ಈ ವಿಷಯವನ್ನು ಮರೆಯುವ ಸಂದರ್ಭಗಳಿವೆ. ಮೊಬೈಲ್‌ನಲ್ಲಿ ವ್ಯವಹಾರ ಮಾಡಿದಾಗ ಎಲ್ಲದಕ್ಕೂ ದಾಖಲೆ ನಿರ್ಮಾಣವಾಗುತ್ತದೆ ಮತ್ತು ವ್ಯವಹಾರವನ್ನು ಅಲ್ಲಗಳೆಯುವಂತಿಲ್ಲ. ಮೊಬೈಲ್ ವ್ಯವಹಾರವನ್ನು ಖಾಸಗಿಯಾಗಿ ಇಟ್ಟುಕೊಳ್ಳುವ ಸಂಪೂರ್ಣ ವ್ಯವಸ್ಥೆಯೂ ಇದೆ.
ಈ ಹಿನ್ನೆಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೊಬೈಲ್ ಆಧಾರಿತ ಹಣ ವ್ಯವಹಾರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಸಾಮಾನ್ಯ ಮಹಿಳೆಯರಿಗೂ ಕಂಪ್ಯೂಟರ್ ಜ್ಞಾನ ಮತ್ತು ಮೊಬೈಲ್ ತಂತ್ರಜ್ಞಾನವನ್ನು ತಿಳಿಸಿಕೊಡುವ ಕಾರ್ಯಕ್ರಮವನ್ನು ತನ್ನ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಜಾರಿಗೆ ತರುತ್ತಿದೆ. ಕೇಂದ್ರ ಸರಕಾರದ ಸಹಯೋಗದೊಂದಿಗೆ ಮುನ್ನಡೆಯುವ ಈ ಕಾರ್ಯಕ್ರಮದ ಹೆಸರು
ಪಿಎಂ ದಿಶಾ (Pradhan Mantri Gramin Digital Saksharta Abhiyan ). ‘ಪಿಎಂ ದಿಶಾ’ ಅಭಿಯಾನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೇಂದ್ರ ಸರಕಾರದ ಪ್ರಮಾಣ ಪತ್ರ ಲಭ್ಯವಾಗಲಿದೆ. ಇದಕ್ಕಿಂತ ಹೆಚ್ಚಾಗಿ ಈ ಅಭಿಯಾನದ ಪ್ರಯೋಜನವನ್ನು ಪಡೆಯುವ ಎಲ್ಲರೂ ಮೊಬೈಲ್ ಬಳಕೆಯೊಂದಿಗೆ ಬ್ಯಾಂಕ್ ವ್ಯವಹಾರ ಮಾಡುವುದು ಸುಲಭ ಸಾಧ್ಯ. ಪಿಎಂ ದಿಶಾ ಅಭಿಯಾನದಲ್ಲಿ ಕಂಪ್ಯೂಟರ್ ಬಳಕೆ ಮಾಡುವುದು, ಮೊಬೈಲ್ ಮೂಲಕ ಹಣ ಬಳಕೆ ಮಾಡುವ ಸಂದರ್ಭ ಆಗುವ ಸಮಸ್ಯೆಗಳು ಮತ್ತು ಈ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.
ಆದುದರಿಂದ ನಾವೆಲ್ಲರೂ ‘ಪಿಎಂ ದಿಶಾ’ ತರಬೇತಿಯನ್ನು ಪಡೆದುಕೊಳ್ಳೋಣ. ಮೊಬೈಲ್ ಮೂಲಕ ಬ್ಯಾಂಕ್ ವ್ಯವಹಾರವನ್ನು ಪ್ರಾರಂಭಿಸೋಣ. ‘ಪಿಎಂ ದಿಶಾ’ ಅಭಿಯಾನದಲ್ಲಿ ಪಾಲ್ಗೊಳ್ಳಲು ನಿಮ್ಮ ಹತ್ತಿರದ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರನ್ನು ಸಂಪರ್ಕಿಸಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *