ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು
ಯೋಜನೆಯ ವತಿಯಿಂದ ಆರ್ಥಿಕ ಜಾಗೃತಿ ಮಾಸಾಚರಣೆಯನ್ನಾಗಿ ಆಚರಿಸಲಾಯಿತು. ಸಂಘಗಳಲ್ಲಿ ಹಣದ ವ್ಯವಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಹಣ ವರ್ಗಾವಣೆ ಸಂದರ್ಭದಲ್ಲಿ ನಿಯಮ ಪಾಲನೆ ಮಾಡುವುದು, ಹಣದ ಅವ್ಯವಹಾರಗಳನ್ನು ತಪ್ಪಿಸಿ ಸ್ವಸಹಾಯ ಸಂಘ ಚಳುವಳಿಯನ್ನು ಪಾರದರ್ಶಕವನ್ನಾಗಿ ಮಾಡುವುದೇ ಈ ಮಾಸಾಚರಣೆಯ ಉದ್ದೇಶ.
ಲಕ್ಷ್ಮೀ ಚಂಚಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಣ ಕೈಯಿಂದ ಕೈಗೆ ವರ್ಗಾವಣೆ ಆಗುವಾಗ ಅದು ಯಾರ ಹಣ ಎಂದು ಕಂಡು ಹಿಡಿಯಲು ಸಾಧ್ಯವಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಜಮೀನಿಗೆ ಬೇಲಿ ಹಾಕಿಕೊಳ್ಳಬಹುದು, ದನಗಳನ್ನು ಹಟ್ಟಿಯಲ್ಲಿ ಕಟ್ಟಬಹುದು, ಅಂಗಡಿಗೆ ಬೀಗ ಹಾಕಬಹುದು ಆದರೆ ಹಣಕ್ಕೆ ಈ ಯಾವ ನಿಬಂಧನೆಗಳೂ ಇಲ್ಲ. ಯಾರ ಜೇಬಿನಲ್ಲಿದೆಯೋ ಅದು ಅವರ ಹಣವಾಗುತ್ತದೆ. ಆದುದರಿಂದಲೇ ಹಣದ ಬಗ್ಗೆ ನಾವೆಲ್ಲರೂ ಬಹಳಷ್ಟು ಜಾಗ್ರತೆ ಮಾಡಿಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಬ್ಯಾಂಕ್‌ಗಳಿಂದ ಅಧಿಕ ಮೊತ್ತದ ಆರ್ಥಿಕ ನೆರವು ಲಭಿಸುತ್ತಿದೆ. ಸದಸ್ಯರಿಗೆ ಸಂಘದಿAದ ಸುಲಭವಾಗಿ ಸಾಲ ದೊರೆಯುತ್ತದೆ ಎಂದು ಗೊತ್ತಾದಾಗ ಅವರಿಂದ ಕೈಗಡ ಕೇಳುವ ಜನರು ಬೇಕಾದಷ್ಟಿದ್ದಾರೆ. ಯಾವುದೇ ಕಾರಣಕ್ಕೂ ನೀವು ನಿಮ್ಮ ಸಂಘದಿAದ ಸಾಲವನ್ನು ಪಡೆದುಕೊಂಡು ಅದನ್ನು ಬೇರೆಯವರ ಕೈಗೆ ನೀಡಬೇಡಿ. ಒಂದು ವಾರಕ್ಕೆಂದು ಪಡೆದುಕೊಂಡ ಸಾಲವನ್ನು ವರ್ಷವಾದರೂ ಹಿಂದಿರುಗಿಸುವುದಿಲ್ಲ. ಯೋಜನೆಯ ಕಾರ್ಯಕರ್ತರಿಗೂ ಸಹ ಯಾವುದೇ ಕಾರಣಕ್ಕೂ ಹಣ ನೀಡಬೇಡಿ. ಯಾರಾದರೂ ಯೋಜನೆಯ ಕಾರ್ಯಕರ್ತರೆಂದು ಹೇಳಿಕೊಂಡು ಹಣ ಕೇಳಿದರೆ ನೇರವಾಗಿ ಕಾರ್ಯನಿರ್ವಾಹಕ ನಿರ್ದೇಶಕರಿಗೆ (೯೪೪೮೪೬೯೦೦೯) ಕರೆ ಮಾಡಿ ದೂರು ನೀಡಿ. ಅದೇ ರೀತಿ ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ನಿಮ್ಮ ಸಂಘದ ಸಭೆಯಲ್ಲಿ ಸಂಘದ ಖಾತೆಗೇ ಜಮೆ ಮಾಡಬೇಕಲ್ಲದೆ ಬೇರೆಯವರ ಕೈಗೆ ನೀಡಬೇಡಿ. ಕಾರ್ಯಕರ್ತರಿಗೂ ನೀಡಬೇಡಿ. ಸಾಲವಾಗಿ ನಿಮಗೆ ದೊರೆತ ಹಣವನ್ನು ದುಶ್ಚಟಗಳಿಗೆ ಬಳಸಬೇಡಿ. ನಿಮ್ಮ ಮನೆಯವರಿಗೂ ಬಳಸಲು ಬಿಡಬೇಡಿ. ಸಾಲದ ಉದ್ದೇಶ ಸ್ಪಷ್ಟವಾಗಿರಲಿ. ಬಳಕೆ ಸಮರ್ಪಕವಾಗಿರಲಿ. ಮರುಪಾವತಿ ಪ್ರಾಮಾಣಿಕವಾಗಿರಲಿ ಮತ್ತು ಸಂಘದ ಖಾತೆಗೇ ಹೋಗಲಿ.
ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೀಡಲಾಗುವ ಸಾಲಗಳನ್ನು ನೇರವಾಗಿ ಸಾಲ ಪಡೆದುಕೊಳ್ಳುವ ಸಂಘದ ಸದಸ್ಯರ ಖಾತೆಗೆ ಜಮೆ ಮಾಡಲಾಗುವುದು. ಹೀಗಾಗಿ ಹಣವನ್ನು ನಿಮ್ಮ ಬ್ಯಾಂಕಿನ ಖಾತೆಯಿಂದಲೇ ಪಡೆದುಕೊಳ್ಳುವ ದಿನಗಳು ದೂರವಿಲ್ಲ. ಇಂತಹ ಸಂದರ್ಭದಲ್ಲಿ ನಿಮಗೆ ಬ್ಯಾಂಕಿನಿAದ ಹಣ ಪಡೆದುಕೊಳ್ಳಲು ಅನುಕೂಲಕರವಾದ ಅನೇಕ ಸಾಧನಗಳಿವೆ.
1. ಬ್ಯಾಂಕಿಗೆ ಹೋಗಿ ಚೆಕ್ ನೀಡಿ ಹಣ ಪಡೆದುಕೊಳ್ಳುವುದು.
2. ಹಣ ಯಾರಿಗೆ ಬೇಕೋ ಅವರಿಗೆ ತಮ್ಮ ಬ್ಯಾಂಕಿನ ಖಾತೆಯಿಂದ ಅವರ ಖಾತೆಗೆ ವರ್ಗಾಯಿಸುವುದು. (ಮನಿ ಟ್ರಾನ್ಸ್ಫರ್)
3. ಬ್ಯಾಂಕಿನ ಮೊಬೈಲ್ ಆ್ಯಪ್‌ಗಳ ಮೂಲಕ ಹಣ ಪಾವತಿ, ವರ್ಗಾವಣೆ ಮಾಡುವುದು.
4. ಯುಪಿಐ ಆ್ಯಪ್‌ಗಳಾದ ಗೂಗಲ್ ಪೇ, ಫೋನ್ ಪೇ, ಜಿಯೋ ಪೇ ಮುಂತಾದವುಗಳ ಮುಖಾಂತರ ಹಣವನ್ನು ಪಾವತಿ ಮತ್ತು ವರ್ಗಾವಣೆ ಮಾಡುವುದು.
5. ಡೆಬಿಟ್ ಕಾರ್ಡ್ ಮೂಲಕ ಎಟಿಎಂನಿ0ದ ಹಣ ಪಡೆದುಕೊಳ್ಳುವುದು.
ಮೇಲಿನ ಮಾದರಿಗಳು ಬಹಳಷ್ಟು ಸರಳವಾಗಿದ್ದರೂ ಇವುಗಳಿಂದಲೂ ಅವ್ಯವಹಾರ ಆಗುವ ಸಾಧ್ಯತೆಗಳು ಇರುತ್ತವೆ. ಮುಖ್ಯವಾಗಿ ಮೊಬೈಲ್‌ಗೆ ಬರುವ ಎಸ್ಸೆಮ್ಮೆಸ್, ಕರೆಗಳು ನಿಮಗೆ ಮೋಸ ಮಾಡುವ ಸಾಧ್ಯತೆಗಳಿವೆ. ಇವುಗಳ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಹಣವನ್ನು ಬ್ಯಾಂಕಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿರಿ.
ಸಂಘಗಳಲ್ಲಿ ಸದಸ್ಯರಿಗೆ ಸಾಲ ನೀಡುವ ನಿರ್ಣಯವನ್ನು ಮಾಡುವಾಗ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಿರಿ. ಇಲ್ಲದಿದ್ದರೆ ನಿಮ್ಮ ಸದಸ್ಯರ ಸಾಲದ ಹೊರೆ ನಿಮ್ಮ ತಲೆಯ ಮೇಲೆ ಬಂದೀತು. ಎಲ್ಲಾ ಸಾಲಗಳಿಗೂ ಸಾಲ ಪಡೆದುಕೊಂಡ ಸದಸ್ಯರ ಹೆಸರಿನಲ್ಲಿ ಮತ್ತು ವಿನಿಯೋಗದಾರರ ಹೆಸರಿನಲ್ಲಿ ವಿಮೆ (ಪ್ರಗತಿ ರಕ್ಷಾ ಕವಚ) ಮಾಡಿಸಿರಿ.
ಆರ್ಥಿಕ ಜಾಗೃತಿ ಎಂದರೆ ವ್ಯವಹಾರದಲ್ಲಿ ಪಾರದರ್ಶಕತೆ. ಅವ್ಯವಹಾರ ಮಾಡಲು ಅವಕಾಶ ನೀಡದಿರುವುದು. ಇದನ್ನು ನಿರಂತರವಾಗಿ ಪಾಲಿಸೋಣ.