ಹೃದಯ ಜೋಪಾನ

ಮಾನವ ದೇಹದ ಎಲ್ಲಾ ಭಾಗಗಳಿಗಿಂತ ಬಲಿಷ್ಠವಾದ ಸ್ನಾಯುಗಳನ್ನು ಹೊಂದಿರುವುದು ‘ಹೃದಯ’ ಎನ್ನುತ್ತಾರೆ. ನಿರಂತರವಾಗಿ ದುಡಿಯಲು ಬೇಕಾದ ಕ್ಷಮತೆ ಸ್ನಾಯುಗಳಿಂದ ನಮಗೆ ದೊರೆಯುತ್ತದೆ. ಮನುಷ್ಯನಲ್ಲಿರುವ ಶಕ್ತಿ ಅವನ ಹೃದಯದ ಸ್ನಾಯುಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ. ಮಾನಸಿಕ ಖಿನ್ನತೆ, ಒತ್ತಡ, ಹೀಗೆ ಎಷ್ಟೇ ಚಿಂತೆಗಳು ಇದ್ದರೂ ಅವೆಲ್ಲವನ್ನೂ ಸಹಿಸಿಕೊಂಡು ದೈನಂದಿನ ಕೆಲಸದಲ್ಲಿ ಯಾವುದೇ ವ್ಯತ್ಯಯವಾಗದಂತೆ ಕಾರ್ಯನಿರ್ವಹಿಸುವ ಒಂದು ಅಂಗ ಇದ್ದರೆ ಅದು ಹೃದಯ. ‘ಹೃದಯ’ ನಮ್ಮನ್ನು ನಿರಂತರವಾಗಿ ಸಲಹುತ್ತಿದೆ ಎಂದಾದರೆ ಅಂಥಾ ಹೃದಯವನ್ನು ಸಲಹುವ, ಜಾಗೃತೆಯಿಂದ ಕಾಪಾಡುವ ಕೆಲಸ ನಮ್ಮದಾಗಿದೆ. ಒಂದು ನಿಮಿಷ ಹೃದಯ ತನ್ನ ಕೆಲಸವನ್ನು ನಿಲ್ಲಿಸಿದರೆ ಮತ್ಯಾವ ಅಂಗಗಳೂ ಕೆಲಸ ಮಾಡಲಾರವು.
ಹೃದಯದ ಹೊರೆಯನ್ನು ಕಡಿಮೆ ಮಾಡಬೇಕೆಂದರೆ ಮೊದಲಿಗೆ ನಮ್ಮ ಬೇಡಿಕೆ, ನಿರೀಕ್ಷೆಗಳ ಹೊರೆ ಕಡಿಮೆಯಾಗಬೇಕು. ಹಿಂದಿನವರು ‘ಹಾಸಿಗೆ ಇದ್ದಷ್ಟು ಕಾಲುಚಾಚು’ ಎಂದು ಸರಳ ಮಂತ್ರ ಒಂದನ್ನು ಕಲಿಸಿ ಕೊಟ್ಟಿದ್ದಾರೆ. ಕುಟುಂಬದ ಆದಾಯವನ್ನು ಅರಿತುಕೊಂಡು, ಕುಟುಂಬದ ಖರ್ಚು-ವೆಚ್ಚ, ಉಳಿತಾಯದ ಜೊತೆಗೆ ಭವಿಷ್ಯದ ಬಗ್ಗೆ ಚಿಂತಿಸಿ ಅದೆಲ್ಲವನ್ನೂ ನಿಭಾಯಿಸಲು ಸಾಧ್ಯವಾದಾಗ ಮಾತ್ರ ನಾವು ಹೆಚ್ಚಿನದೇನನ್ನಾದರೂ ಆಶೀಸಬಹುದು. ಈ ವಿಚಾರದಲ್ಲಿ ಗಂಡ-ಹೆoಡಿರ, ಕುಟುಂಬದ ಸದಸ್ಯರ ಮಧ್ಯೆ ಮಾತುಕತೆ ನಡೆದು ಹೊಂದಾಣಿಕೆ ಇದ್ದಾಗ ಮಾತ್ರ ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ.
ಒಂದು ವಸ್ತು ತನಗೆ ಬೇಕೆಂಬ ಇಚ್ಛೆ ಆರಂಭವಾದಾಗಲೇ ಇಚ್ಛಿಸಿದ ವ್ಯಕ್ತಿಯ ಮನಸ್ಸಿನಲ್ಲಿ ಒತ್ತಡ ಆರಂಭವಾಗುತ್ತದೆ. ಆ ಒತ್ತಡವನ್ನು ಬೇರೊಬ್ಬರ ಮೇಲೆ ಹೇರಿದಾಗ ಆತನಿಗೂ ಒತ್ತಡದ ಅನುಭವವಾಗುತ್ತದೆ. ಹೆಂಡತಿ ತನ್ನ ಸ್ನೇಹಿತೆಯ ಕೊರಳಲ್ಲಿ ನೋಡಿದ ಹಾರ ತನಗೆ ಬೇಕೆಂದು ಆಸೆಪಟ್ಟಾಗ ಆ ಆಸೆ ಅವಳನ್ನು ಸುಡಲಾರಂಭಿಸುತ್ತದೆ ಮತ್ತು ಈ ವಿಚಾರವನ್ನು ಗಂಡನ ಕಿವಿಗೆ ಹಾಕಿ ಹೇಗಾದರೂ ಅಂಥದೊoದು ಸರ ತನಗೆ ಬೇಕೆಂದು ಬೇಡಿಕೆ ಇಟ್ಟಾಗ ತನ್ನ ಕೈಯಲ್ಲಿ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲವೆಂದು ಅರಿತ ಗಂಡ ತನ್ನ ಅಸಾಮರ್ಥ್ಯಕ್ಕಾಗಿ ನೊಂದುಕೊoಡು ಬೇಸರಪಡುತ್ತಾನೆ. ಪತ್ನಿಯ ಒತ್ತಡ, ಕಿರುಕುಳ ಜಾಸ್ತಿಗೊಂಡಾಗ ತಾನು ಚಿಂತೆಗೊಳಗಾಗುತ್ತಾನೆ. ಹೀಗೆ ತಮ್ಮಿಂದ ಅಸಾಧ್ಯವಾದ ವಿಷಯಕ್ಕೆ ಆಸೆಪಟ್ಟು ತಮ್ಮ ಮನಸ್ಸಿಗೆ ನೋವುಂಟುಮಾಡುವ ವಿಚಾರಗಳು ಹೃದಯಕ್ಕೂ ಹಾನಿಕಾರಕವಾಗಿ ಪರಿಣಮಿಸುತ್ತದೆ.
ಕೆಟ್ಟ ಚಟಗಳಿಂದಲೂ ನಮ್ಮ ಮನಸ್ಸಿಗೆ ಆಘಾತವಾಗುವುದಿದೆ. ಬೀಡಿ-ಸಿಗರೇಟು, ಮದ್ಯಪಾನ, ಅಫೀಮ್ ಒಂದು ಕ್ಷಣ ಮೈಮರೆಸಿ ಸುಖದ ಅನುಭವ ನೀಡುವ ವಸ್ತುಗಳಾಗಿವೆ. ಆದರೆ ಇವು ಹೃದಯಕ್ಕೆ ಶಾಶ್ವತ ಹಾನಿಯನ್ನುಂಟುಮಾಡುತ್ತವೆ. ಕರಿದ ತಿಂಡಿ, ಸಿಹಿ ಪದಾರ್ಥಗಳನ್ನು ನಿತ್ಯ ಸೇವಿಸುವುದರಿಂದಲೂ ಹೃದಯದೊಳಗಿನ ರಕ್ತನಾಳಗಳಲ್ಲಿ ಬೊಜ್ಜು ಸೇರಿದಂತಾಗಿ ರಕ್ತನಾಳಗಳು ಸಣ್ಣದಾಗಿ ರಕ್ತದ ಹರಿವಿಗೆ ತೊಡಕಾಗುತ್ತದೆ ಮತ್ತು ಹೃದಯ ಕೆಲಸವನ್ನು ಮಾಡಲು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ವ್ಯಾಯಾಮವಿಲ್ಲದೆ ಕುಳಿತಲ್ಲೆ ಮಾಡುವ ಕೆಲಸದಿಂದಾಗಿ ಹೃದಯಕ್ಕೆ ರಕ್ತ ಸಂಚಾರ ಕಡಿಮೆ ಆಗುತ್ತದೆ. ನಿತ್ಯ ವ್ಯಾಯಾಮವನ್ನು ಜೀವನ ಪದ್ಧತಿಯಾಗಿ ಬೆಳೆಸಿಕೊಳ್ಳಬೇಕಾದದ್ದು ಎಲ್ಲಾ ವಯಸ್ಸಿನವರಿಗೂ ಅವಶ್ಯಕ.
ನಮ್ಮ ಮನಸ್ಸು ಮತ್ತು ಬುದ್ಧಿ ಒಂದು ತೋಟದಂತಿರುತ್ತದೆ. ತೋಟಕ್ಕೆ ದಿನಾಲೂ ಆರೈಕೆ, ಪೋಷಣೆ ಬೇಕಾಗುತ್ತದೆ. ಒಂದು ಗಿಡ ಸರಿಯಾಗಿ ಬೆಳೆಯಲು ಅದರ ಸುತ್ತಮುತ್ತಲಿರುವ ಕಳೆಯನ್ನೂ ಆಗಾಗ ಕಿತ್ತೆಸೆಯಬೇಕಾಗುತ್ತದೆ. ದಿನಾ ಬೆಳಗ್ಗೆ ಎದ್ದು ಓದುವ ಪತ್ರಿಕೆಗಳಲ್ಲಿ, ಕಚೇರಿಗಳಲ್ಲಿ, ನೆರೆಕರೆಯವರಲ್ಲಿ ನಕಾರಾತ್ಮಕ ವಿಚಾರಗಳನ್ನು ಗ್ರಹಿಸುವುದರಿಂದ ರಾತ್ರಿ ಹೊತ್ತಿಗೆ ಮನಸ್ಸಿನ ತುಂಬಾ ಕೆಡುಕಿನ ವಿಷಯಗಳೇ ತುಂಬಿಕೊoಡು ಸರಿಯಾಗಿ ನಿದ್ದೆ ಬರುವುದಿಲ್ಲ. ದಣಿವಾಗುವುದು, ಹಸಿವಿಲ್ಲದಿರುವುದು, ಎದೆಯಲ್ಲಿ ಉರಿ, ನೋವು, ಸಣ್ಣಪುಟ್ಟ ವಿಚಾರಕ್ಕೆ ಕೋಪಗೊಳ್ಳುವುದು ಇವೆಲ್ಲವನ್ನೂ ಅನುಭವಿಸಬೇಕಾಗುತ್ತದೆ. ಈ ಮನಸ್ಸು ನಮಗೆ ಮಿತ್ರನೂ ಆಗಬಹುದು, ಶತ್ರುವೂ ಆಗಬಹುದು ಎನ್ನುವುದು ಸತ್ಯ. ಅದಕ್ಕಾಗಿ ಮನಸ್ಸು ಕಳೆಯಿಂದ ತುಂಬದoತೆ ಆಗಾಗ ಮನಸ್ಸಿಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕು. ಯಾವುದೇ ಸಂದರ್ಭದಲ್ಲಿ ಎದೆಗುಂದದoತಹ ಮನಸ್ಥೆöÊರ್ಯವನ್ನು ಬೆಳೆಸಿಕೊಳ್ಳಬೇಕು. ನಮ್ಮ ಮನಸ್ಸಿನ ಧೋರಣೆಯನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲೆ ಇದೆ. ಅದಕ್ಕೆ ‘ಬಿತ್ತಿದಂತೆ ಬೆಳೆ’ ಎನ್ನುತ್ತಾರೆ. ಜೀವನದಲ್ಲಿ ನೆಮ್ಮದಿಗಾಗಿ ಪರಿತಪಿಸಿದ ವ್ಯಕ್ತಿಯೊಬ್ಬ ನಾನಾ ಪ್ರಯೋಗಗಳನ್ನು ಮಾಡುತ್ತಾನೆ. ಮಾತ್ರವಲ್ಲ ಅನೇಕ ಗುರುಗಳನ್ನು ಭೇಟಿಯಾಗುತ್ತಾನೆ. ಪ್ರತಿದಿನ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಜಪ, ಧ್ಯಾನ, ಭಜನೆಗಳಲ್ಲಿ ಭಾಗವಹಿಸುತ್ತಾನೆ. ಕೊನೆಗೆ ಒಂದು ದಿನ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ತನ್ನ ಅಶಾಂತಿಯ ಬಗ್ಗೆ ಹೇಳಿಕೊಂಡಾಗ ಅವರು ‘ಮೊದಲು ನೀನು ಮುಚ್ಚಿದ ಬಾಗಿಲು ಮತ್ತು ಮುಚ್ಚಿದ ಕಣ್ಣುಗಳನ್ನು ತೆರೆದು ಸುತ್ತಲೂ ನೋಡು. ಎಷ್ಟೊಂದು ಜನರು ಅನಾರೋಗ್ಯ, ಹಸಿವು, ಸಂಕಷ್ಟಗಳಿoದ ಕಷ್ಟಪಡುತ್ತಿದ್ದಾರೆ ಎನ್ನುವುದನ್ನು ಗಮನಿಸು. ಅವರ ಸೇವೆ ಮಾಡು’ ಎನ್ನುತ್ತಾರೆ. ಅವನು ಅವರ ಮಾತನ್ನು ಪಾಲಿಸಿದ ಕೆಲವೇ ದಿನಗಳಲ್ಲಿ ಅವನಿಗೆ ಸಂತೃಪ್ತಿ, ಆನಂದ ಸಿಕ್ಕಿತು. ಮನಸ್ಸಿಗೆ ನೆಮ್ಮದಿ ದೊರೆತಂತಾಯಿತು. ಹೀಗೆ ಸೇವೆ ಮಾಡುವಾಗ ನಮ್ಮ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳು ಸುಳಿಯಲು ಸಾಧ್ಯವಿಲ್ಲ. ಮನಸ್ಸು ಸಹಾನುಭೂತಿ, ಕಾರುಣ್ಯ, ದಯೆಗಳಿಂದ ತುಂಬಿಕೊಳ್ಳುತ್ತದೆ. ‘ನಾನೇ ಸುಖಿ, ನನಗಿಂತಲೂ ಹೆಚ್ಚು ಕಷ್ಟಪಡುವ ಎಷ್ಟೊಂದು ಜನರು ನನ್ನ ಸುತ್ತಮುತ್ತ ಇದ್ದಾರೆ’ ಎಂಬ ಭಾವನೆ ಬರುತ್ತದೆ. ಕಣ್ಣೀರು ಸುರಿಸುವುದು ಬಹಳ ಕೆಟ್ಟ ವಿಚಾರ. ಅಂಥವರನ್ನು ಮೃಗ ಜಾತಿಗೆ ಸೇರಿದವರು, ಕ್ರೂರಿಗಳು ಎಂದು ಭಾವಿಸಿದರೆ, ಕಣ್ಣೀರು ಒರೆಸುವ ಕೆಲಸದಲ್ಲಿ ಮನುಷ್ಯತ್ವ ಇದೆ, ಮಾನವೀಯತೆ ಇದೆ ಅನ್ನಬಹುದು. ಇಂಥಾ ಮಾನವೀಯತೆಯ ಕೆಲಸಗಳಿಂದ ಅವರ ಬದುಕು ಮಾತ್ರವಲ್ಲ ನಮ್ಮ ಬದುಕು ಹಗುರಾಗುತ್ತದೆ. ಸಣ್ಣಪುಟ್ಟ ಸಹಾಯ ಮಾಡಿದಾಗ ಅದರಿಂದ ಸಿಗುವ ಸಂತೋಷವೇ ಬೇರೆ. ಆದ್ದರಿಂದ ಅಂತಹ ಅವಕಾಶಗಳನ್ನೆಂದೂ ಕಳೆದುಕೊಳ್ಳಬಾರದು.
ಮೋಡ ನೀರಿನಿಂದ ಭಾರವಾದಾಗ ಅದು ಮಳೆಗೆರೆಯಲೇಬೇಕು. ಇಲ್ಲಿ ಕಷ್ಟ ಮೋಡಕ್ಕಲ್ಲದೆ ಮಳೆ ನೀರಿಗಲ್ಲ. ಹಾಗೇ ನಮ್ಮ ಮನಸ್ಸು ಆನಂದವಾಗಿದ್ದಾಗ ಅದನ್ನು ಬೇರೆ ಬೇರೆ ರೀತಿಯಿಂದ ಹಂಚಿದಾಗ ಮನಸ್ಸು ಹಗುರವಾಗುತ್ತದೆ. ಇದು ಆನಂದಿತ ಮನಸ್ಸಿಗೆ ಅನಿವಾರ್ಯ. ಸಂತರು ತಾವು ಸದಾ ಸಂತೃಪ್ತಿ, ಶಾಂತಿಯಿoದ ಇದ್ದರೂ ಅದನ್ನು ಹತ್ತು ಜನರಿಗೆ ಹಂಚಬೇಕೆoಬ ಸಂಕಲ್ಪ ಉಳ್ಳವರಾಗಿರುತ್ತಾರೆ. ಇಲ್ಲಿ ನೊಂದ ಜೀವಿಗಳಿಗೆ ಉಪದೇಶ ಮಾಡುವುದು ಅವರಿಗೆ ಅನಿವಾರ್ಯ. ಯಾಕೆಂದರೆ ಅವರಿಗೆ ಸಮಾಜದ ಅಶಾಂತಿ, ದ್ವೇಷ, ಮತ್ಸರಗಳನ್ನು ನೋಡಲಾಗುವುದಿಲ್ಲ.
‘ತಲೆಯೊಳಗೊಂದು ಹೊಟ್ಟೆಯಿದೆ. ಹೊಟ್ಟೆಯೊಳಗೊಂದು ತಲೆ ಇದೆ’ ಎಂಬ ಮಾತು ವೈಜ್ಞಾನಿಕವಾಗಿ ಸತ್ಯ. ಯಾವಾಗ ನಮ್ಮ ತಲೆಯೊಳಗೆ ಚಿಂತೆ, ಗಾಬರಿ ಉಂಟಾಗುತ್ತದೆ ಆಗ ನಮ್ಮಲ್ಲಿ ಅನೇಕರಿಗೆ ಬೇಧಿ ಉಂಟಾಗುತ್ತದೆ. ಮಾತ್ರವಲ್ಲ ಹೊಟ್ಟೆ ಉರಿಯಂತಹ ಕಾಯಿಲೆಗಳು ಕಂಡು ಬರುತ್ತವೆ. ಆಗ ಹೊಟ್ಟೆಯ ಚಿಂತೆಯಾಗುತ್ತದೆ. ಹೀಗೆ ಮನುಷ್ಯ ಅಂದಾಗ ಬರೀ ಹೊಟ್ಟೆ, ತಲೆ, ಹೃದಯ ಮಾತ್ರವಲ್ಲ ಎಲ್ಲವೂ ಸೇರಿದಾಗ ಮನುಷ್ಯನಾಗುತ್ತಾನೆ ಮತ್ತು ಇವೆಲ್ಲವೂ ಸುಸ್ಥಿತಿಯಲ್ಲಿದ್ದಾಗ ಆತ ನೆಮ್ಮದಿಯಾಗಿರಬಲ್ಲ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates