ತಾವರೆ ಮತ್ತು ಕೆಸರು

ಕೆಸರಿನ ಮೇಲಿರುವ ತಾವರೆ ಯಾವಾಗಲೂ ಕೆಸರನ್ನು ಮೆತ್ತಿಕೊಳ್ಳದೆ ತನ್ನ ಶುಭ್ರತೆ ಮತ್ತು ಸೌಂದರ್ಯವನ್ನು ಉಳಿಸಿಕೊಂಡಿರುತ್ತದೆ. ಅದು ಅರಳಿನಿಂತ ಜಾಗದ ತಳವನ್ನೊಮ್ಮೆ ಅವಲೋಕಿಸಿದರೆ ಬರೀ ಕೆಸರು. ಕೆಸರನ್ನೇ ಇಷ್ಟಪಡುವ ಸೊಳ್ಳೆ ಮತ್ತಿತರ ಕೀಟಗಳು ಮಾತ್ರವಲ್ಲ ಸದಾ ವಟಗುಟ್ಟುತ್ತಾ ಎಲ್ಲರಿಗೂ ಕಿರಿಕಿರಿಯನ್ನುಂಟು ಮಾಡುವ ಕಪ್ಪೆಗಳಿಂದ ಕೂಡಿದ ಜಾಗ. ಆದರೆ ತಾವರೆಯ ಈ ನಿರ್ಲಿಪ್ತತೆ ವ್ಯರ್ಥವಾಗುವುದಿಲ್ಲ. ಯಾಕೆಂದರೆ ಮೇಲುಗಡೆ ಮಧುವನ್ನರಸಿ ಬರುವ ದುಂಬಿಗಳು, ಬಣ್ಣ ಬಣ್ಣದ ಚಿಟ್ಟೆಗಳೂ ಕಾಣಸಿಗುತ್ತವೆ. ಇಲ್ಲಿ ಒಂದು ಕತ್ತಲೆಯ ಕೆಳಗಿನ ವ್ಯವಹಾರವಾದರೆ, ಒಂದು ಜಗತ್ತು ಕಣ್ತುಂಬಿಕೊಳ್ಳಬಹುದಾದ ಬೆಳಕಿನಲ್ಲಿ ನಡೆಯುವ ಮೇಲಿನ ವ್ಯವಹಾರ.
ಈ ರೀತಿಯ ದ್ವಂದ್ವ ಎಲ್ಲೆಡೆ ಕಂಡು ಬರುತ್ತದೆ. ನಿಸ್ವಾರ್ಥ ಸೇವೆಗೈಯುವ ಬಹಳಷ್ಟು ಮಂದಿ ಈ ಸಮಾಜದಲ್ಲಿದ್ದಾರೆ. ಗಹನವಾದ ಆಧ್ಯಾತ್ಮಿಕ ಸತ್ಯವನ್ನು ಜಗತ್ತಿಗೆ ಸಾರುವ ತಾವರೆಯಂತೆ ತಮ್ಮ ಪ್ರವಚನ, ಸತ್ಸಂಗಗಳ ಮೂಲಕ ಜನರ ಮನಸ್ಸಿನಲ್ಲಿ ಆಧ್ಯಾತ್ಮದ ಅರಿವನ್ನು ತುಂಬುವ ಗುರುಗಳೂ ನಮ್ಮೊಂದಿಗಿದ್ದಾರೆ.
ಅದರ ಜೊತೆಗೆ ತಾವೇನು ಸಾಧನೆ ಮಾಡದೇ ಇದ್ದರೂ, ಸಾಧಿಸುವವರನ್ನು, ಕಷ್ಟಪಟ್ಟು ಏಳಿಗೆಯ ಏಣಿ ಏರುವವರನ್ನು ಕಾಣಲಾಗದೆ ವಟಗುಟ್ಟುವವರೂ ಇದ್ದಾರೆ. ಸಮಾಜ ಅಂದ ಬಳಿಕ ಕೆಳಗಿನ ಕೊಳಕೂ ಇರುತ್ತದೆ. ಮೇಲಿನ ಸುಗಂಧ, ಜೇನು ಕೂಡಾ ಇರುತ್ತದೆ. ಕೆಲವೊಮ್ಮೆ ಈ ಕೊಳಕು ಇರುವುದರಿಂದಲೇ ಅದನ್ನು ಸ್ವಚ್ಛ ಮಾಡುವವರು, ಸುಧಾರಕರು ಹುಟ್ಟಿಕೊಳ್ಳುತ್ತಾರೆ.
ಒಂದು ಕಾಲದಲ್ಲಿ ಗಂಡ ಸತ್ತ ಬಳಿಕ ಆತನ ಪತ್ನಿ ಸಹಗಮನ ಮಾಡಬೇಕಿತ್ತು ಅಥವಾ ತಲೆ ಬೋಳಿಸಿ ಕತ್ತಲಕೋಣೆಯಲ್ಲಿ ತನ್ನ ಉಳಿದ ಬದುಕನ್ನು ಸವೆಸಬೇಕಿತ್ತು. ಶಿಕ್ಷಣ, ವ್ಯವಹಾರ ಜ್ಞಾನವಂತೂ ಹೆಣ್ಣುಮಕ್ಕಳ ಪಾಲಿಗೆ ಮರಿಚಿಕೆಯಾಗಿತ್ತು. ಇಂಥಾ ಸಂದರ್ಭದಲ್ಲಿ ಮೌಢ್ಯಗಳ ಬಗ್ಗೆ ಧ್ವನಿ ಎತ್ತಿದ ಹಲವು ಮಹನೀಯರಲ್ಲಿ ರಾಜಾರಾಮ್ ಮೋಹನ್‌ರಾಯ್‌ರವರು ಒಬ್ಬರು. ಇಂತಹ ಮಹನೀಯರ ಸುಧಾರಣೆಗಳಿಂದಾಗಿ ಮುಂದೆ ಅನೇಕ ಮಹಿಳೆಯರು ಬೆಳಕಿಗೆ ಬಂದು ತಮ್ಮಲ್ಲಿರುವ ಪ್ರತಿಭೆ, ಜಾಣ್ಮೆಗಳಿಂದ ಹೆಸರುವಾಸಿಯಾದರು.
ಈ ಸುಧಾರಣೆ ಆಗದಿರುತ್ತಿದ್ದರೆ ಕತ್ತಲ ಕೂಪದಿಂದ ಮೇಲೆ ಬಂದು ತಮ್ಮ ಸಾಧನೆಯಿಂದ ಜಗದ್ವಿಖ್ಯಾತರಾದ ಅನೇಕ ಮಹಿಳೆಯರ ಹೆಸರುಗಳನ್ನು ನಮಗಿಂದು ಕೇಳುವ ಅವಕಾಶವಾಗುತ್ತಿರಲಿಲ್ಲ. ಒಂದು ದಶಕದ ಹಿಂದೆಯೇ ಸಸ್ಯಶಾಸ್ತçದ ಬಗೆಗೆ ಬಹಳಷ್ಟು ಹೆಸರು ಮಾಡಿದ ಜಾನಕಿ ಅಮ್ಮಾಳ್ ಇರಬಹುದು, ಭಾರತದ ಪ್ರಪ್ರಥಮ ಸಮಾಜ ಶಾಸ್ತçಜ್ಞೆ ಮತ್ತು ಮಾನವ ಶಾಸ್ತçಜ್ಞೆಯೂ ಆಗಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡ ಇರಾವತಿ ಕರ್ವೆ ಅವರ ಸಾಹಸ ಕಥನ ಇರಬಹುದು. 1887ರಲ್ಲಿ ಜೀವನದ ಅತ್ಯಂತ ಕಷ್ಟಕರ ಸನ್ನಿವೇಶಗಳ ನಡುವೆಯೂ ದೂರದ ಅಮೇರಿಕಕ್ಕೆ ಹೋಗಿ ವೈದ್ಯಕೀಯ ಪದವಿ ಪಡೆದು ಬಂದ ಆನಂದಿ ಬಾಯಿ ಮುಂತಾದವರ ಸಾಧನೆಗಳನ್ನು ನೋಡುವ ಅವಕಾಶ ನಮಗೆ ದೊರೆಯುತ್ತಿರಲಿಲ್ಲ. ಆನಂದಿ ಬಾಯಿ ಅವರ ಜೀವನದ ಬಗೆಗೆ ಒಂದು ಕಾದಂಬರಿಯೇ ಪ್ರಕಟಗೊಂಡಿದೆ. ಸಾವಿತ್ರಿ ಬಾಯಿ ಜ್ಯೋತಿಬಾ ಫುಲೆ ಅವರು ೧೮೪೮ರಲ್ಲೆ ಬಾಲಕಿಯರಿಗಾಗಿ ದೇಶದಲ್ಲೆ ಪ್ರಥಮ ಶಾಲೆಯನ್ನು ಆರಂಭಿಸುವ ಮೂಲಕ ಮಹಿಳಾ ವಿದ್ಯಾಭ್ಯಾಸಕ್ಕೆ ಚಾಲನೆ ನೀಡಿದರು.
ವೈದ್ಯಕೀಯ ಕ್ಷೇತ್ರ, ಸಾಹಿತ್ಯ, ವಿಜ್ಞಾನ, ಭೌತಶಾಸ್ತç ಸಂಶೋಧನೆ, ಇಂಜಿನಿಯರಿoಗ್, ಪುರಾತತ್ವ ಇಲಾಖೆ, ರಾಸಾಯನಿಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ಶತಕದ ಹಿಂದೆಯೇ ಸಾಧನೆ ಮಾಡಿ ಹೆಸರುವಾಸಿಯೂ ಆದ ಅನೇಕ ಮಹಿಳೆಯರಿದ್ದಾರೆ. ಕೆಸರಿನಿಂದ ಮೇಲೆದ್ದ ತಾವರೆಗಳಂತೆ ಸಾಧನೆ ಮಾಡಿ ಶೋಭಿಸುತ್ತಿರುವ ಇಂಥಾ ಮಹಿಳೆಯರ ಪ್ರೇರಣೆಯಿಂದ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಇಂದು ಮಹಿಳೆ ಕಾಲಿಡದ ಕ್ಷೇತ್ರಗಳಿಲ್ಲ. ಎಲ್ಲದರಲ್ಲೂ ಪುರುಷರಂತೆ ತಾನು ಮಿಂಚುತ್ತಿದ್ದಾಳೆ. ಸಾಧಕರ, ಕಲಿಕೆಯ ಪಟ್ಟಿಯಲ್ಲಿ ಮಹಿಳೆಯರದ್ದೇ ಸಿಂಹಪಾಲಿದೆ. ಸಮಾಜಕ್ಕೆ ಮಾದರಿಯಾಗಿರುವ ಮಹಿಳೆಯರು ಸಾಕಷ್ಟಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಹೆಚ್ಚಿನ ಮಹಿಳೆಯರು ಸಬಲೀಕರಣಗೊಂಡಿದ್ದಾರೆ. ಐತಿಹಾಸಿಕ ಸಾಧನೆ ಚಂದ್ರಯಾನ-೩ ಇದರಲ್ಲಿ ಸುಮಾರು ೫೩ಕ್ಕೂ ಮಿಕ್ಕಿದ ಮಹಿಳೆಯರ ಪಾಲು ಇತ್ತು ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ಎಲ್ಲಾ ರೀತಿಯ ಕಷ್ಟ-ನಷ್ಟ, ಬಡತನ, ಜಾತಿಯತೆ ಅಸಮಾನತೆಗಳ ಮಧ್ಯೆಯೂ ಮೇಲೆದ್ದು ಬಂದು ಉನ್ನತ ಹುದ್ದೆಗೇರಿದವರ ಕಥೆ ನಮ್ಮ ಮುಂದಿದೆ. ಇವರೆಲ್ಲರ ಸಾಧನೆ ಕೆಸರಿನಿಂದ ಮೇಲೆದ್ದ ಕಮಲದಂತೆ ಉತ್ಕೃಷ್ಟವಾದದ್ದು. ಯಾವ ಸಾಧಕ ಮಹಿಳೆಗೂ ಕಷ್ಟಪಡದೆ ಯಶಸ್ಸು ದೊರೆತಿಲ್ಲ. ಪ್ರತಿಯೊಬ್ಬರ ಸಾಧನೆಯ ಹಿಂದೆ ತ್ಯಾಗ, ಪ್ರಯತ್ನ, ಸಾಕಷ್ಟು ಶ್ರಮವಿದೆ. ಅಂತಹ ಯಶಸ್ವಿ ಮಹಿಳೆಯರ ಆದರ್ಶಗಳು ಇಂದಿನ ಯುವ ಜನತೆಯ ಪಾಲಿಗೆ ದಾರಿದೀಪವಾಗಬೇಕಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates