ಮಕ್ಕಳ ಜ್ವರ – ಮೈಮರೆಯದಿರಿ

ಮಕ್ಕಳಿಗೆ ಜ್ವರ ಇದೆ ಎಂದು ತಿಳಿಯುವುದು ಹೇಗೆ? ಮುಟ್ಟಿ ನೋಡಿದರೆ ಜ್ವರದ ಬಗ್ಗೆ ಒಂದು ಅಂದಾಜು ಮಾಡಬಹುದಷ್ಟೇ. ಆದರೆ ಅದು ಸಾಕಷ್ಟು ಬಾರಿ ತಪ್ಪಾಗಬಹುದು. ಅದಕ್ಕೇ ಜ್ವರದ ಮಾಪಕವಾದ ಡಿಜಿಟಲ್ ಥರ್ಮೋಮೀಟರ್ ಉಪಯೋಗಿಸುವುದು ಉತ್ತಮ. ಅದರಿಂದ ಜ್ವರದ ತೀವ್ರತೆ ಎಷ್ಟಿದೆ ಎಂದು ತಿಳಿಯುತ್ತದೆ. ಕಂಕುಳಲ್ಲಿ ಇಟ್ಟು ಪರೀಕ್ಷಿಸಿದಾಗ 99.4 ಡಿಗ್ರಿ ಪ್ಯಾರಾಮಿಟ್‍ಗಿಂತ ಹೆಚ್ಚು ದೇಹದ ಉಷ್ಣತೆ ಇದ್ದರೆ ಜ್ವರ ಎಂದು ಭಾವಿಸಬೇಕಾಗುತ್ತದೆ. ಸೆಲ್ಸಿಯಸ್‍ನಲ್ಲಾದರೆ 36.5 ಡಿಗ್ರಿ ಸೆಲ್ಸಿಯಸ್‍ನಿಂದ 37.5 ಡಿಗ್ರಿ ಸೆಲ್ಸಿಯಸ್‍ವರೆಗೆ ದೇಹದ ಉಷ್ಣತೆ ಇರುತ್ತದೆ. ಹೆಚ್ಚಿದ್ದರೆ ಜ್ವರ ಎಂದು ಅರ್ಥ.
ಸಾಮಾನ್ಯವಾಗಿ ಇನ್‍ಫ್ರಾ ರೆಡ್ ಉಷ್ಣತಾ ಮಾಪನವು ಬಳಸುವುದನ್ನು ಸಾಧಾರಣವಾಗಿ ಕಾಣುತ್ತೇವೆ. ಆದರೆ ಅದನ್ನು ವೈಯಕ್ತಿಕ ಪರೀಕ್ಷೆಗೆ ಬಳಸುವುದು ಸೂಕ್ತವಲ್ಲ. ಏಕೆಂದರೆ ಅದರ ಕ್ಷಮತೆ ಬಹಳ ಕಡಿಮೆ. ಡಿಜಿಟಲ್ ಉಷ್ಣತಾ ಮಾಪಕ ಇತ್ತೀಚೆಗೆ ಎಲ್ಲೆಡೆ ಸಿಗುತ್ತಿದೆ ಮತ್ತು ಅದರ ಬೆಲೆ ಕೂಡಾ ಕಡಿಮೆಯಾಗಿದೆ. ಅದನ್ನು ಬಾಯಿಯಲ್ಲಿಟ್ಟು ಅಥವಾ ಕಂಕುಳಲ್ಲಿಟ್ಟು ಬಳಸಬಹುದು. ಮಕ್ಕಳಲ್ಲಿ ಕಂಕುಳಿನಲ್ಲಿಟ್ಟು ಬಳಸುವುದೇ ವಾಡಿಕೆ. ವಯಸ್ಕರಲ್ಲಿ ಬಾಯಿಯಲ್ಲಿಟ್ಟು ಪರೀಕ್ಷಿಸುವುದು ವಾಡಿಕೆ. ದೈಹಿಕ ಚಟುವಟಿಕೆ ಹೆಚ್ಚು ಮಾಡಿದಾಗ ದೇಹ ಬಿಸಿಯಾಗುವುದು ಸಹಜ. ಅದನ್ನು ಜ್ವರ ಎನ್ನಲಾಗದು!
ಮಕ್ಕಳಿಗೆ ಜ್ವರ ಯಾಕೆ ಬರುತ್ತದೆ?
ಜ್ವರವೇ ಒಂದು ರೋಗವಲ್ಲ. ಅದೊಂದು ರೋಗದ ಲಕ್ಷಣ ಅಷ್ಟೆ. ‘ದೇಹದಲ್ಲಿ ಎಲ್ಲವೂ ಸರಿ ಇಲ್ಲ’ ಎಂಬುದನ್ನು ಅದು ತೋರಿಸುತ್ತದೆ ಅಷ್ಟೇ. ಜ್ವರಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಕೀಟಾಣುಗಳಿಂದ ಉಂಟಾಗುವ ಸೋಂಕು ಸರ್ವೇಸಾಮಾನ್ಯವಾದದ್ದು.
ಎಲ್ಲ ಜ್ವರಕ್ಕೆ ಆ್ಯಂಟಿ-ಬಯಾಟಿಕ್ ಮದ್ದು ಬೇಕೆ?
ಇಲ್ಲ! ಹಲವು ಬಾರಿ ಜ್ವರ ವೈರಸ್‍ನ ಕಾರಣದಿಂದ ಉಂಟಾಗುತ್ತದೆ. ಆಗ ಆ್ಯಂಟಿ-ಬಯಾಟಿಕ್ ಮದ್ದಿನ ಅವಶ್ಯಕತೆ ಇರದು. ಆದರೆ ಕೆಲವೊಮ್ಮೆ ಜ್ವರ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುತ್ತದೆ. ಉದಾಹರಣೆಗೆ ಟೈಫಾಯ್ಡ್ ಜ್ವರ. ಆಗ ಆ್ಯಂಟಿ-ಬಯಾಟಿಕ್ ಬೇಕಾಗುತ್ತದೆ. ವೈದ್ಯರು ತಪಾಸಣೆ ಮಾಡಿ ಅದನ್ನು ನಿರ್ಧರಿಸುತ್ತಾರೆ.
ನನ್ನ ಮಗುವಿಗೆ ಜ್ವರದ ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗದು ಏನು ಮಾಡಬೇಕು?
ಜ್ವರದ ಔಷಧಿಯಾದ ಪ್ಯಾರಾಸಿಟಮಾಲ್ ಅತ್ಯಂತ ಸುರಕ್ಷಿತ ಮದ್ದು. ಆದರೆ ಅದನ್ನು ಅವಶ್ಯಕತೆ ಇದ್ದಷ್ಟು ಪ್ರಮಾಣದಲ್ಲಿ ಮಾತ್ರ ನೀಡಬೇಕು. ಒಮ್ಮೆ ಮದ್ದು ಕೊಟ್ಟ 4 ರಿಂದ 6 ಗಂಟೆಗಳ ನಂತರವೇ ಕೊಡಬಹುದು. ಅದಕ್ಕೂ ಹೆಚ್ಚು ಕೊಡಬಾರದು. ಜ್ವರ ಇಳಿಯದಿದ್ದರೆ ವೈದ್ಯರನ್ನು ಕಾಣಬೇಕು.
ಜ್ವರ ಬಂದರೆ ಏನು ಮಾಡಬೇಕು?
• ದಪ್ಪದ ಬಟ್ಟೆ ತೊಡಿಸಬೇಡಿ. ಸರಳವಾದ, ಸಡಿಲವಾದ ಹತ್ತಿ ಬಟ್ಟೆ ಉಡಿಸಿ. ಬೆವರು ಹೀರದ ನೈಲಾನ್ ಬಟ್ಟೆ ಬೇಡ.
• ಸಾಕಷ್ಟು ಪ್ರಮಾಣದಲ್ಲಿ ಕಾದಾರಿದ ನೀರನ್ನು ಮಗು ಕುಡಿಯಲಿ. ಜ್ವರದ ಸಮಯದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗಬಹುದು. ಆಗಾಗ ನೀರು ಕುಡಿಯುವುದು ಉತ್ತಮ.
• ವೈದ್ಯರ ಸಲಹೆ ಪಡೆದು ಸರಿಯಾದ ಪ್ರಮಾಣದಲ್ಲಿ ಮದ್ದು ಕೊಡಬೇಕು.
• ಜ್ವರಕ್ಕೆ ತಣ್ಣೀರು ಬಟ್ಟೆಯನ್ನು ಹಣೆಗೆ ಇಡುವಾಗ ಐಸ್ ನೀರನ್ನು ಬಳಸಬೇಡಿ. ಶುದ್ಧವಾದ ನಲ್ಲಿಯ ನೀರನ್ನು ಬಳಸಿದರೆ ಸಾಕು.
• ದೇಹವನ್ನು ತಣ್ಣೀರು ಬಟ್ಟೆಯಿಂದ ಅರ್ಧ ಗಂಟೆಗೂ ಹೆಚ್ಚು ಒರೆಸಬೇಡಿ.
• ಜ್ವರ ಇದ್ದಾಗ ತಲೆ ಸ್ನಾನ ಸಲ್ಲದು. ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿಸಬಹುದು.
• ಜ್ವರ ಬಂದಾಗ ಮಕ್ಕಳು ಊಟ ಮಾಡಲು ಹಿಂಜರಿಯುತ್ತಾರೆ. ಮಕ್ಕಳು ಬೇಡವೆಂದರೂ ಮೂರೂ ಹೊತ್ತು ಊಟ ನೀಡಿ.
• ಹಾಲು, ಐಸ್‍ಕ್ರೀಮ್, ಫ್ರಿಡ್ಜ್‍ನಲ್ಲಿಟ್ಟ ವಸ್ತುಗಳಿಂದ ದೂರ ಇರುವುದು ಉತ್ತಮ.
• ಮನೆಯ ಹೊರಗಡೆ ಹೆಚ್ಚು ಆಟವಾಡಲು ಬಿಡಬೇಡಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates