‘ರಾತ್ರಿ ಏನು ಮಾಡಿದರೂ ನಿದ್ದೆ ಬರಲ್ಲ. ಹಗಲಿನಲ್ಲಿ ದಿನವಿಡೀ ಬರುವ ಆಕಳಿಕೆ ತಡೆಯಲಾಗುವುದಿಲ್ಲ. ಉತ್ಸಾಹ, ಏಕಾಗ್ರತೆಯಿಲ್ಲದೆ ಒಂದು ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ಹೇಳಿ?…’ ನಗರ, ಹಳ್ಳಿ ಎನ್ನದೆ ಹೆಚ್ಚಿನ ಜನರು ನಿದ್ರಾಹೀನತೆಯ ಸಮಸ್ಯೆಯ ಬಗ್ಗೆ ಗೊಣಗುವುದನ್ನು ಕೇಳಿರಬಹುದು. ನಿದ್ದೆ ಬರಲು ಪರಿಹಾರ ಸೂಚಿಸಿ ಎಂದು ವೈದ್ಯರ ಮೊರೆ ಹೋಗುವುದೂ ಇದೆ. ಮತ್ತೆ ಕೆಲವರು ತಾವೇ ವೈದ್ಯರು ಎಂಬಂತೆ ಮೆಡಿಕಲ್‍ಗಳಲ್ಲಿ ಸಿಗುವ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ಳುವುದೂ ಇದೆ. ನಮ್ಮ ಜೀವನಶೈಲಿ, ಆಹಾರ ಸೇವನೆ ನಿದ್ದೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ರಾತ್ರಿ ಎಷ್ಟು ಉತ್ತಮವಾಗಿ ನಿದ್ದೆ ಮಾಡಿದ್ದೀರಿ ಎಂಬುದರ ಮೇಲೆ ಮರುದಿನದ ನಿಮ್ಮ ಚಟುವಟಿಕೆಗಳು ಅವಲಂಬಿಸಿರುತ್ತವೆ. ವೈದ್ಯರ ಅಭಿಪ್ರಾಯದಂತೆ ಆರೋಗ್ಯಪೂರ್ಣ ಬದುಕಿಗೆ ಕನಿಷ್ಠ 6ರಿಂದ 7 ಗಂಟೆಗಳ ನಿದ್ದೆ ಅಗತ್ಯ.
ನಿದ್ರಾಹೀನತೆಗೆ ಕಾರಣವೇನು?
ಸಾಮಾನ್ಯವಾಗಿ ನಿದ್ದೆಯ ಸಮಸ್ಯೆಗಳು ಪ್ರಾಕೃತಿಕ ಮತ್ತು ದೈಹಿಕ ಹಿನ್ನೆಲೆಯಿಂದ ಬರುತ್ತವೆ. ಅತಿಯಾದ ತೂಕ, ಬೊಜ್ಜು, ಆತಂಕ, ಒತ್ತಡದ ಜೀವನ, ರಾತ್ರಿ ಪಾಳಿಯ ಕೆಲಸ, ವಿಶ್ರಾಂತಿ ರಹಿತ ಕೆಲಸ, ಅಧಿಕ ಔಷಧಗಳ ಸೇವನೆ, ರಾತ್ರಿ ತಡವಾಗಿ ಮಲಗುವುದು, ಹೆಚ್ಚು ಹೊತ್ತು ಟಿ.ವಿ., ಮೊಬೈಲ್ ವೀಕ್ಷಣೆ, ಚಿಂತೆಗಳಿಂದ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಅನುವಂಶೀಯತೆಯಿಂದಲೂ ಈ ಸಮಸ್ಯೆ ಕಂಡು ಬರಬಹುದು.
ನಿದ್ದೆ ಇಲ್ಲದಿದ್ದರೆ ಏನಾಗುತ್ತದೆ?
ಸರಿಯಾಗಿ ನಿದ್ದೆ ಬರದಿದ್ದರೆ ಆರೋಗ್ಯ ಹದಗೆಡುವುದು. ಹಗಲು ಹೊತ್ತಿನಲ್ಲಿ ತೂಕಡಿಸುವುದು, ಕೆಲಸಗಳಲ್ಲಿ ನಿರುತ್ಸಾಹ, ಆಲಸ್ಯತನ, ನಿರಾಸಕ್ತಿ, ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳುತ್ತಲೇ ಆಯಾಸ, ವಿಪರೀತ ಸುಸ್ತು, ದಣಿವಾಗುವುದು. ತಲೆ, ಕಣ್ಣು, ಹುಬ್ಬುಗಳಲ್ಲಿ ನೋವು, ಬಾಯಿರುಚಿ ಕೆಡುವುದು, ನೆನಪಿನ ಶಕ್ತಿಯ ಸಮಸ್ಯೆ, ಕೈಕಾಲುಗಳ ಸೆಳೆತ, ನೋವು, ವಿಪರೀತ ಗೊರಕೆ, ನಿದ್ದೆಯಲ್ಲಿ ಮಾತನಾಡುವುದು ಇನ್ನು ನಿದ್ರಾಹೀನತೆ ನಿತ್ಯದ ಸಮಸ್ಯೆಯಾದರೆ ಉಸಿರಾಟದ ತೊಂದರೆ, ರಕ್ತದ ಒತ್ತಡ, ಅಸಮರ್ಪಕ ಹೃದಯ ಬಡಿತ, ಬೊಜ್ಜು, ಪಾಶ್ರ್ವವಾಯು, ನರದೌರ್ಬಲ್ಯ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಹುದು. ಅಂದಹಾಗೆ ಜಾಸ್ತಿ ನಿದ್ದೆ ಮಾಡುವುದೂ ಆರೋಗ್ಯಕ್ಕೆ ಹಾನಿಕಾರ ಎನ್ನುವುದು ವೈದ್ಯರ ಅಭಿಮತ.
ನಿದ್ದೆಯ ಲಾಭವೇನು?
ಆಯಾಸ ಪರಿಹಾರ, ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಗ್ರಹಿಕೆ, ಯೋಚನಾ ಸಾಮಥ್ರ್ಯ, ಸೃಜನಶೀಲತೆ ವೃದ್ಧಿಯಾಗುತ್ತದೆ. ಮುಖ್ಯವಾಗಿ ಆರೋಗ್ಯ ಚೆನ್ನಾಗಿರುತ್ತದೆ.
ಚೆನ್ನಾಗಿ ನಿದ್ದೆ ಮಾಡಲು ಹೀಗೆ ಮಾಡಿ
• ಹಗಲು ಹೊತ್ತಿನಲ್ಲಿ ದೀರ್ಘ ನಿದ್ದೆಯ ಅಭ್ಯಾಸ ಒಳ್ಳೆಯದಲ್ಲ.
• ನಿಯಮಿತವಾಗಿ ಹಿತಮಿತ ವ್ಯಾಯಾಮ, ದೈಹಿಕ ಶ್ರಮ ಉತ್ತಮ ನಿದ್ದೆಗೆ ಪೂರಕ.
• ರಾತ್ರಿ ವೇಳೆ ಹೊಟ್ಟೆ ಬಿರಿಯುವಷ್ಟು ಊಟ ಮಾಡಬೇಡಿ.
• ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ.
• ರಾತ್ರಿ ಊಟದ ಕನಿಷ್ಟ ಎರಡು ಗಂಟೆಗಳ ನಂತರ ನಿದ್ದೆ ಮಾಡಿ.
• ಮಲಗುವ ಕೋಣೆಯನ್ನು ಪದೇ ಪದೇ ಬದಲಾಯಿಸಬೇಡಿ.
• ಮಲಗುವ ಕೊಠಡಿಯಲ್ಲಿ ರಾತ್ರಿ ವೇಳೆ ಬೆಳಕು ಬೀಳದಂತಿರಲಿ.
• ಮಲಗಲು ಸರಿಯಾದ ಹಾಸಿಗೆ, ದಿಂಬುಗಳನ್ನು ಉಪಯೋಗಿಸಿ.
• ನಿದ್ದೆಯಲ್ಲಿ ಮಿದುಳು ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಮೊಬೈಲ್, ಲ್ಯಾಪ್‍ಟಾಪ್, ಟಿ.ವಿ. ಮೊದಲಾದ ಇಲೆಕ್ಟ್ರಾನಿಕ್ ವಸ್ತುಗಳು ಹಾಸಿಗೆಯಿಂದ ದೂರವಿರಲಿ.
• ರಾತ್ರಿ ವೇಳೆ ಕಾಫಿ, ಟೀ, ತಂಪುಪಾನೀಯ, ಮದ್ಯಸೇವನೆಯಿಂದ ದೂರವಿರಿ.
• ಮಲಗುವ ಮುನ್ನ ಸ್ವಲ್ಪ ಹೊತ್ತು ಧ್ಯಾನ ಮಾಡಿ ಇದರಿಂದ ನಿದ್ದೆಯ ಗುಣಮಟ್ಟ ಹೆಚ್ಚಿ ಸೊಂಪಾದ ನಿದ್ದೆ ಬರುತ್ತದೆ.