ಮುಂಗಾರು ಮಳೆಯ ಹನಿಗಳು ಮನುಷ್ಯರನ್ನು ಮಾತ್ರ ತಣಿಸಬಲ್ಲವು. ಆದರೆ ಆ ಹನಿಗಳ ‘ಲೀಲೆ’ಯಿಂದ ಪರಿಸರದಲ್ಲಿ ಜಾನುವಾರುಗಳ ಪ್ರಾಣಕ್ಕೂ ಸಂಚಕಾರ ತರಬಲ್ಲ ಸೂಕ್ಷö್ಮ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಹಲವಾರು ರೋಗಗಳು ಜಾನುವಾರುಗಳನ್ನು ಪೀಡಿಸುತ್ತಿವೆ. ಬಿತ್ತನೆ ತಯಾರಿಯ ಸಮಯದಲ್ಲಿ ಎತ್ತುಗಳಿಗೆ ಕಾಯಿಲೆ ಬಂದರೆ ರೈತನಿಗೆ ಭಾರೀ ಪೆಟ್ಟು ಬಿದ್ದಂತೆ. ಆದ್ದರಿಂದ ಮಳೆಗಾಲದಲ್ಲಿ ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು ಎಂಬ ಮಾಹಿತಿ ಇಲ್ಲಿ ಇದೆ.
ಮೂಗುಣ್ಣು / ಮೂಗೂರಿ (ಪೀನಾಸಿ ರೋಗ) : ವಿಶೇಷವಾಗಿ ಮೂಗುಣ್ಣು/ ಮೂಗುರಿ ಎಂಬ ಕಾಯಿಲೆ ದನಗಳಿಗೆ ತೀವ್ರ ತೊಂದರೆ ನೀಡುತ್ತದೆ. ಈ ಮೂಗುಣ್ಣು
‘ಸೀಸ್ಟೋಸೋಮ ನೇಸಲೆ’ ಎಂಬ ಪರೋಪಜೀವಿಯಿಂದ ಬರುತ್ತದೆ. ಇವು ಬಸವನ ಹುಳುಗಳನ್ನು ಆಶ್ರಯಿಸುತ್ತದೆ. ಜಾನುವಾರುಗಳು ಕೆರೆಕುಂಟೆಗಳಲ್ಲಿ ನಿಂತ ನೀರನ್ನು ಕುಡಿಯುತ್ತವೆ. ಇಲ್ಲಿಂದಲೇ ರೋಗ ಹರಡುವಿಕೆ ಆರಂಭ. ರೋಗ ಅಂಟಿಸಿಕೊAಡ ದನದ ಮೂಗಿನ ರಂಧ್ರಗಳಲ್ಲಿ ಹುತ್ತದ ಹಾಗೆ ಮಾಂಸ ಬೆಳೆದು ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದಕ್ಕೆ ತಕ್ಕ ಔಷಧಿಗಳು ಲಭ್ಯವಿರುವುದರಿಂದ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಬೇಕು. ರೋಗದಿಂದ ನರಳುವ ದನಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಇತರೆ ಜಾನುವಾರುಗಳಿಂದ ಬೇರ್ಪಡಿಸಬೇಕು. ರೋಗಾಣುಗಳ ಜೀವನಚಕ್ರ ಪೂರ್ತಿಗೊಳ್ಳಲು ಬಸವನ ಹುಳುಗಳು ಅವಶ್ಯವಿರುವುದರಿಂದ ಅವುಗಳ ನಾಶಕ್ಕೆ ಪಶುವೈದ್ಯರ ಸಲಹೆ ಪಡೆದು ಮೈಲುತುತ್ತು ಸಿಂಪಡಿಸಬೇಕು. ಕೆರೆಗಳಲ್ಲಿ ನೀರಾವರಿ ಕೆನಾಲ್‌ಗಳಲ್ಲಿ ಮೀನುಗಳನ್ನು ಬಿಡುವುದರಿಂದ ಕೂಡ ಈ ರೋಗ ಹರಡದಂತೆ ತಡೆಗಟ್ಟಬಹುದು.
ಫೇಸಿಯೋಲಿಯಾಸಿಸ್ : ಈ ರೋಗವು ಫೇಸಿಯೋಲಾ ಜಾತಿಯ ಪರೋಪಜೀವಿಯ ವಿವಿಧ ಪ್ರಭೇದಗಳಿಂದ ಹಸು, ಎಮ್ಮೆ, ಕುರಿ, ಹಂದಿಗಳಲ್ಲಿ ಬರುತ್ತದೆ. ಈ ರೋಗ ಪ್ರಸಾರದಲ್ಲಿ ಕೂಡ ಬಸವನ ಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಭೇದಿ, ಗಂಟಲಿನಲ್ಲಿ ನೀರು ತುಂಬಿದ ಬಾವು, ಹಾಲು/ ಮಾಂಸ ಉತ್ಪಾದನೆಯಲ್ಲಿ ಕುಂಠಿತವಾಗುತ್ತದೆ. ಸಣ್ಣ ಕರುಗಳು, ಕುರಿಗಳ ಸಾವು ಸಂಭವಿಸುವ ಸಾಧ್ಯತೆಗಳಿರುತ್ತದೆ. ಇದರ ನಿಯಂತ್ರಣಕ್ಕೆ ಕಾಲಕಾಲಕ್ಕೆ ಪಶುವೈದ್ಯರ ಸಲಹೆಯಂತೆ, ಜಂತುನಾಶಕ ನೀಡಬೇಕು. ಬಸವನಹುಳುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಕಾಲುಬಾಯಿ ಜ್ವರ, ಗಂಟಲು ಬೇನೆ, ಹಾಗೂ ಚಪ್ಪೆ ಬೇನೆ ಮುಂತಾದ ಸಾಂಕ್ರಾಮಿಕ ರೋಗಗಳು ಬಾರದಂತೆ ಲಸಿಕೆ ಹಾಕಿಸುವುದು ಉತ್ತಮ. ಮಳೆ ನೀರು ಸಂಗ್ರಹಗೊAಡಿರುವ ಹುಲ್ಲಿನ ಸೇವನೆಯಿಂದ ಅಥವಾ ನಸುಕಿನ ಇಬ್ಬನಿಯಲ್ಲಿ ಮೇಯಲು ಬಿಡುವುದರಿಂದ ಹಾಗೂ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಜಾನುವಾರುಗಳಿಗೆ ಭೇದಿ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಸ್ವಚ್ಛ, ಪೌಷ್ಠಿಕ ಆಹಾರ, ಶುದ್ಧವಾದ ನೀರು ನೀಡಬೇಕು. ಕಾಲಕಾಲಕ್ಕೆ ಪಶುವೈದ್ಯರ ಸಲಹೆಯಂತೆ ಜಂತುನಾಶಕ ನೀಡಬೇಕು.
ಸಿಡಿಲು, ಮಿಂಚುಗಳಿAದ ರಕ್ಷಣೆ : ಬಯಲು ಪ್ರದೇಶದಲ್ಲಿ ಸಿಡಿಲು ಹೆಚ್ಚಾಗಿ ಅಪ್ಪಳಿಸುವುದರಿಂದ ಜಾನುವಾರುಗಳನ್ನು ಹೊರಗೆ ಬಿಡುವುದು, ಹೊರಗೆ ಕಟ್ಟುವುದು ಅಪಾಯಕಾರಿ.
ಹಲಸು, ಗೇರುಹಣ್ಣು ಸೇವನೆ : ರಸ್ತೆ ಬದಿಗಳಲ್ಲಿರುವ ಮರಗಳಿಂದ ಬಿದ್ದ ಹಲಸಿನ ಹಣ್ಣುಗಳನ್ನು ಜಾನುವಾರುಗಳು ತಿನ್ನುತ್ತವೆ. ಹೀಗೆ ಒಂದೇ ಬಾರಿ ಹಲಸು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲತೆ ಹೆಚ್ಚುತ್ತದೆ. ಜೀರ್ಣತೆಗೆ ಸಹಕರಿಸುವ ಸೂಕ್ಷö್ಮಜೀವಿಗಳ ಸಂಖ್ಯೆ ಹೊಟ್ಟೆಯಲ್ಲಿ ಕಡಿಮೆಗೊಂಡು ಅಜೀರ್ಣತೆ, ಹೊಟ್ಟೆ ಉಬ್ಬರ ಕಂಡುಬರುತ್ತದೆ. ಈ ಲಕ್ಷಣಗಳು ಗೇರುಹಣ್ಣು ಅತಿಯಾಗಿ ಸೇವಿಸಿದಾಗಲೂ ಕಂಡುಬರುತ್ತದೆ. ಈ ತರಹದ ಲಕ್ಷಣಗಳು ಕಂಡುಬAದಾಗ ಹಸು ಎಮ್ಮೆಗಳಿಗೆ ೧೫ – ೩೦ ಗ್ರಾಂ.ನಷ್ಟು, ಕುರಿ/ಆಡುಗಳಿಗೆ ೨ – ೧೦ ಗ್ರಾಂ.ನಷ್ಟು ಅಡುಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಕುಡಿಸಬೇಕು.
ಮೇವು – ಹಿಂಡಿಗಳ ಶೇಖರಣೆ : ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಮೇವು, ಹಿಂಡಿಯ ಶೇಖರಣೆಯ ಬಗ್ಗೆ ವಿಶೇಷವಾದ ಗಮನಹರಿಸಬೇಕು. ಇಲ್ಲದಿದ್ದರೆ ಹಿಂಡಿ ಬೂಷ್ಟ್ ಹಿಡಿಯುವ ಸಾಧ್ಯತೆಯೇ ಹೆಚ್ಚು. ಮೇವಿಗಾಗಿ ಬಣವೆ ಕಟ್ಟುವಾಗ ಪ್ರತಿ ಪದರದ ಮೇಲೆ ಉಪ್ಪು ಹಾಕುವುದರಿಂದ ಸ್ವಲ್ಪ ಮಟ್ಟಿಗೆ ಬೂಷ್ಟು ಹಿಡಿಯುವುದನ್ನು ತಪ್ಪಿಸಬಹುದು. ಸಾಂದ್ರೀಕೃತ ಹಿಂಡಿಯ ಗೋಣಿಚೀಲಗಳನ್ನು ನೆಲದ ಮೇಲೆ
ಹಾಗೆಯೇ ಇಡುವ ಬದಲು, ಮರದ ಮಣೆಯ ಮೇಲೆ ಇಡುವುದು ಸೂಕ್ತ. ಛಾವಣಿ ಸೋರದ, ನೆಲದಿಂದ ನೀರಿನ ಪಸೆ ಬಾರದ ಕೋಣೆಯಲ್ಲಿ ಶೇಖರಿಸಿಡಬೇಕು, ಬೂಷ್ಟು ಹಿಡಿದ ಹಿಂಡಿಯ ಸೇವನೆಯಿಂದ ಅಜೀರ್ಣತೆ, ಭೇದಿ, ರಕ್ತಹೀನತೆ, ಸೆಗಣಿಯಲ್ಲಿ ರಕ್ತ ವಿಸರ್ಜನೆಯಾಗಬಹುದು.
• ಮಳೆಗಾಲದಲ್ಲಿ ಹಸು/ಎಮ್ಮೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಹಸಿರು ಹುಲ್ಲು ದೊರಕುವುದರಿಂದ ಅಥವಾ ನೀಡುವುದರಿಂದ ಹಾಲಿನಲ್ಲಿ ಜಿಡ್ಡಿನಂಶ ಕಡಿಮೆಯಾಗುವುದು. ಸ್ವಲ್ಪವಾದರೂ ಒಣಹುಲ್ಲು ನೀಡುವುದರಿಂದ ಜಿಡ್ಡಿನಂಶ ಹೆಚ್ಚಳದೊಂದಿಗೆ ಸ್ಥಿರತೆ ಕಾಣಬಹುದು.
• ಮಳೆಗಾಲದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಇರುವುದರಿಂದ ಎಮ್ಮೆಗಳು ಬೆದೆಗೆ ಬರುವ ಸಂಭವ ಹೆಚ್ಚಾಗಿರುತ್ತದೆ. ಅವುಗಳನ್ನು ಗಮನಿಸಿ ಗರ್ಭಧಾರಣೆಗೆ ಒಳಪಡಿಸುವುದು ಸೂಕ್ತ.
ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ