ಥರ್ಮಕೋಲ್ ಬಳಸಿ – ಭತ್ತದ ಸಸಿ ತಯಾರಿಸಿ

‘ದುಂಬು ಎನ್ಪ ಸೆನ್ಸ್ ಕಂಡಗ್ ಪದಿನೈನ್ ಜನ ಮೂಜಿ ದಿನೊಟ್ ನೇಜಿ ನಡ್ಪೆದ. ಇತ್ತೆ ಥರ್ಮಕೋಲ್‌ಡ್ ನೇಜಿ ಮಲ್ಪುನೆಡ್ದ್ ಆವಾರ ಎಣ್ಮ ಜನ ಒಂಜೆ ದಿನಟ್ ನಡ್ದ್ ಮುಗಿಪುಬ.’ (ಹಿಂದೆ ೮೦ ಸೆನ್ಸ್ ಗದ್ದೆಗೆೆ ನೇಜಿ ನಾಟಿ ಮಾಡಲು ಹದಿನೈದು ಮಂದಿ ಬೇಕಿತ್ತು. ಮೂರು ದಿನ ತಗಲುತ್ತಿತ್ತು. ಇದೀಗ ಥರ್ಮಕೋಲ್‌ನಲ್ಲಿ ನೇಜಿ ತಯಾರಿಸುವುದರಿಂದ ೮ ಮಂದಿ ಒಂದೇ ದಿನದಲ್ಲಿ ನೇಜಿ ನೆಟ್ಟು ಮುಗಿಸುತ್ತೇವೆ ಎನ್ನುತ್ತಾ ವಿಜಯ್ ಕುಂದರ್‌ರವರ ತಾಯಿ ಲೀಲಾವತಿ ಥರ್ಮಕೋಲ್‌ನಲ್ಲಿ ನೇಜಿ ತಯಾರಿಸುವುದರಿಂದ ರೈತರಿಗೆ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ವಿಜಯ್ ಕುಂದರ್ ಮಂಗಳೂರು ತಾಲೂಕಿನ ಉಳ್ಳಾಲ ಗ್ರಾಮದವರು. ವೆಲ್ಡಿಂಗ್‌ನಲ್ಲಿ ಡಿಪ್ಲೋಮಾ ಪದವೀಧರ. ಸುಮಾರು ಎಂಟು ವರ್ಷಗಳವರೆಗೆ ಇಸ್ರೆಲ್‌ನಲ್ಲಿದ್ದರು. ನಂತರ ತನ್ನ ಊರಿನಲ್ಲೇ ಕೃಷಿಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ತಾನೇನಾದರೂ ಪ್ರಯೋಗಗಳನ್ನು ಮಾಡಬೇಕೆಂದುಕೊAಡು ಮಂಗಳೂರಿಗೆ ಮರಳಿದರು. ತನ್ನ ಎರಡುವರೆ ಎಕರೆ ಜಮೀನಿನಲ್ಲಿ ಒಂದು ಎಕರೆಯನ್ನು ಗದ್ದೆಗೆ ಮೀಸಲಿರಿಸಿದರು. ಗದ್ದೆ ಕೆಲಸದಲ್ಲಿ ನೇಜಿ ತಯಾರಿ ಶ್ರಮವನ್ನು ಬಯಸುವ ಕೆಲಸ. ಗದ್ದೆ ತುಂಬಾ ಬೀಜ ಬಿತ್ತಿ ಅದರಲ್ಲಿ ಬರುವ ನೇಜಿಯನ್ನು ತೆಗೆದು ನೆಡುವ ಹಳೆಯ ಸಾಂಪ್ರದಾಯಿಕ ಪದ್ಧತಿಯಿಂದ ಲಾಭಕ್ಕಿಂತ ಖರ್ಚು ಅಧಿಕವಾಗತೊಡಗಿತು. ಬೀಜ ಕೂಡಾ ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥವಾಗುತ್ತಿತ್ತು. ಕೂಲಿಯಾಳು ಸಮಸ್ಯೆಯೂ ಎದುರಾಯಿತು. ಇದಕ್ಕೆ ಪರಿಹಾರವಾಗಿ ಇವರು ಆರಂಭಿಸಿದ ಪ್ರಯತ್ನವೇ ಥರ್ಮಕೋಲ್‌ನಲ್ಲಿ ನೇಜಿ ತಯಾರಿ.
ತಯಾರಿ ಹೇಗೆ?
ಸುಮಾರು ಐದು ಇಂಚು ದಪ್ಪದ ಥರ್ಮಕೋಲನ್ನು ಅಂಗಡಿಯಿAದ ಖರೀದಿಸಿ ತಂದರು. ಕಡಿಮೆಯಾದುದಕ್ಕೆ ಫ್ರಿಡ್ಜ್, ಟಿ.ವಿ. ಖರೀದಿಸುವಾಗ ದೊರೆಯುವ ಥರ್ಮಕೋಲ್ ಅನ್ನು ಗಮ್ ಬಳಸಿ ಅಂಟಿಸಿ ೫ ಇಂಚಿನ ಗಾತ್ರಕ್ಕೆ ಜೋಡಿಸಿದರು. ಸುಮಾರು ಮೂರು ಅಡಿ ಸುತ್ತಳತೆಯ ಥರ್ಮಕೋಲಿನ ತುಂಡುಗಳನ್ನು ಗದ್ದೆಯ ಒಂದು ಬದಿಯಲ್ಲಿ ನೀರಿನ ಮೇಲೆ ತೇಲುವಂತೆ ಜೋಡಿಸಿದರು. ಅದರ ಮೇಲೆ ಒಂದು ಇಂಚ್‌ನಷ್ಟು ಗದ್ದೆ ಮಣ್ಣನ್ನು ಹಾಕಿದರು. ಒಂದು ದಿನ ಬಿಟ್ಟು ನಂತರ ಅದರಲ್ಲಿ ಭತ್ತದ ಬೀಜಗಳನ್ನು ಬಿತ್ತಿದರು. ಕೇವಲ ಹತ್ತು ದಿನಗಳಲ್ಲಿ ನಾಟಿಗೆ ಬೇಕಾದ ನೇಜಿ ತಯಾರಾಯಿತು. ಥರ್ಮಕೋಲಿನ ತುಂಡುಗಳನ್ನು ಗದ್ದೆಯಲ್ಲಿ ನಾಟಿಯ ಜಾಗಕ್ಕೆ ಎಳೆದುಕೊಂಡು ಹೋಗಿ ನೇಜಿ ನಾಟಿ ಮಾಡಿದರು. ಒಂದು ಎಕರೆಯ ನಾಟಿ ಕೆಲಸವನ್ನು ಎಂಟು ಮಂದಿ ಒಂದೇ ದಿನದಲ್ಲಿ ಮುಗಿಸಿದರು.
ಪ್ರಯೋಜನ
ಶ್ರಮ, ಖರ್ಚು, ಸ್ಥಳ, ಸಮಯ ಎಲ್ಲದರಲ್ಲೂ ಉಳಿತಾಯವಾಗಿದೆ. ಇನ್ನು ಭತ್ತದ ಬೀಜ ಹಾಳಾಗುವ ಪ್ರಮೇಯವು ಇಲ್ಲಿಲ್ಲ. ಆಮೆ, ಹಕ್ಕಿಗಳ ಕಾಟದಿಂದಲೂ ಮುಕ್ತಿ ದೊರೆತಿದೆ. ಗದ್ದೆಯಲ್ಲಿ ತಯಾರಿಸುವ ಸಸಿಗಿಂತ ಈ ಸಸಿ ಬಲಿಷ್ಠವಾಗಿದೆ. ವರ್ಷದುದ್ದಕ್ಕೂ ಸಸಿ ತಯಾರಿಸಬಹುದಾಗಿದೆ. ಕಡಿಮೆ ಸಮಯದಲ್ಲಿ ನೇಜಿ ನಾಟಿಗೆ ದೊರೆಯುತ್ತದೆ. ಬೇರು ಹೆಚ್ಚು ಆಳಕ್ಕೆ ಹೋಗುವುದಿಲ್ಲ. ಗೊಬ್ಬರದ ಅಗತ್ಯವು ಇಲ್ಲಿಲ್ಲ. ಆಗಾಗ ಗದ್ದೆಗೆ ನೀರು ಕಟ್ಟುವ, ಪ್ರಾಣಿ, ಪಕ್ಷಿಗಳಿಂದ ನೇಜಿಯನ್ನು ಸಂರಕ್ಷಿಸುವ ಕೆಲಸ ಇಲ್ಲಿಲ್ಲ. ಬೇಕಾದಲ್ಲಿಗೆ ನೀರಿನ ಮೇಲೆ ತೇಲಿಸಿಕೊಂಡು ಹೋಗುವುದು ಸುಲಭ. ತಯಾರಿಗೆ ಅಲ್ಪ ಜಾಗ ಸಾಕಾಗುತ್ತದೆ. ಕಳೆಗಳು ಬರುವುದಿಲ್ಲ. ಗದ್ದೆಯ ಒಂದು ಬದಿಯಲ್ಲಿ ನೇಜಿ ಇರುವಾಗಲೇ ಗದ್ದೆಯನ್ನು ಉಳುಮೆ ಮಾಡಬಹುದಾಗಿದೆ. ಗದ್ದೆಯಲ್ಲಿ ನೀರು ಹೆಚ್ಚಿದ್ದರೂ ನೇಜಿ ಹಾಳಾಗುವುದಿಲ್ಲ. ನೇಜಿ ತಯಾರಿಯಿಂದ ಗದ್ದೆಯಲ್ಲಿ ಗುಂಡಿ ಬೀಳುವುದು ಸಾಮಾನ್ಯ. ಆದರೆ ಈ ವಿಧಾನದಲ್ಲಿ ಆ ಸಮಸ್ಯೆಗಳಿಲ್ಲ. ನೇಜಿ ಕೀಳುವುದು ತುಂಬಾ ಸರಳ. ಯಂತ್ರದಲ್ಲಿ ನಾಟಿ ಮಾಡುವುದಾದರೆ ಯಂತ್ರದ ಬಳಿಗೆ ಸಾಗಿಸುವುದು ಸುಲಭ. ಥರ್ಮಕೋಲಿನ ತುಂಡಿನ ಒಂದು ಭಾಗಕ್ಕೆ ಹಗ್ಗ ಕಟ್ಟಿ ಗದ್ದೆಯಿಂದ ಎಳೆದುಕೊಂಡು ಹೋಗಬಹುದು. ಥರ್ಮಕೋಲ್ ನೀರಿನ ಮೇಲೆ ತೇಲುವುದರಿಂದ ನೇಜಿ ಹಾಳಾಗಲ್ಲ. ಈ ವಿಧಾನದ ಮೂಲಕ ಕೆರೆಗಳಲ್ಲೂ ಬೇಕಾದ ಸಮಯದಲ್ಲಿ ನೇಜಿ ತಯಾರಿಸಬಹುದಾಗಿದೆ. ಸಣ್ಣ ರೈತರಿಗೆ ಇದು ವರದಾನವಾಗಿದೆ. ಥರ್ಮಕೋಲ್‌ನಲ್ಲಿ ತಯಾರಿಸಿದ ನೇಜಿ ನಾಟಿಯಿಂದ ಒಂದು ಎಕರೆಯಲ್ಲಿ ಸಾಂಪ್ರದಾಯಿಕ ವಿಧಾನಕ್ಕಿಂತ ಮೂರು ಕ್ವಿಂಟಾಲ್ ಅಧಿಕ ಇಳುವರಿ ದೊರೆಯುತ್ತದೆ.
ಮುಂಜಾಗರೂಕತೆಗಳು
ಸಾಮಾನ್ಯವಾಗಿ ಥರ್ಮಕೋಲು 5 ಇಂಚ್ ದಪ್ಪವಿರಬೇಕು. ದಪ್ಪ ಇಲ್ಲದಿದ್ದರೆ ನೇಜಿಯ ಭಾರವನ್ನು ತಡೆಯಲು ಅದರಿಂದ ಆಗುವುದಿಲ್ಲ. ಬೇಗ ನಾಟಿ ಮಾಡುವುದಾದರೆ ಥರ್ಮಕೋಲಿನ ಮೇಲೆ ಅರ್ಧ ಇಂಚ್‌ನಷ್ಟು ಮಣ್ಣು ಹಾಕಬೇಕು. ತಡವಾಗಿ ನಾಟಿ ಮಾಡುವುದಾದರೆ ಎರಡು ಇಂಚ್ ಮಣ್ಣು ಹಾಕಿರಿ. ಕೆಸರುಮಣ್ಣು ಉತ್ತಮ. ಮಳೆಗಾಲದಲ್ಲಿ ಬೀಜ ಬಿತ್ತಿದ ನಂತರ 3 ದಿನದೊಳಗೆ ಗೋಣಿಯಿಂದ ಮುಚ್ಚಬೇಕು. ಅರ್ಥ ಇಂಚ್‌ನಷ್ಟು ಮೊಳಕೆ ಬರುವಾಗ ಗೋಣಿಯನ್ನು ತೆಗೆಯಿರಿ. ಮಳೆಗಾಲದಲ್ಲಿ ಮೊಳಕೆ ಬರಿಸಿ ಬಿತ್ತಿದರೆ ಉತ್ತಮ.
ರಾಸಾಯನಿಕ ಬಳಸಲ್ಲ
ಇವರು ಈವರೆಗೆ ಯಾವುದೇ ಕೃಷಿಗೆ ರಾಸಾಯನಿಕವನ್ನು ಬಳಸಿಲ್ಲ. ಪೂಜ್ಯರ ‘ಭೂಮಿ ತಾಯಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ಇವರು ಸಾವಯವ ಬಳಸಿ ಯಶಸ್ವಿಯಾಗುವ ಬಗ್ಗೆ ಶಾಲಾ – ಕಾಲೇಜುಗಳ ಸರಿಸುಮಾರು 1,500 ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಅಗತ್ಯಬಿದ್ದಲ್ಲಿ ವಿದ್ಯಾರ್ಥಿಗಳ ತಂಡವನ್ನು ಕರೆದುಕೊಂಡು ಬಂದು ಗದ್ದೆಯಲ್ಲಿ ಪ್ರಾಯೋಗಿಕ ಪಾಠವನ್ನು ಮಾಡುತ್ತಾರೆ.
ಪ್ರಶಸ್ತಿಗಳು ಹುಡುಕಿಕೊಂಡು ಬಂದವು
ವಿಜಯಕರ್ನಾಟಕ ಸೂಪರ್‌ಸ್ಟಾರ್ ರೈತ ಪ್ರಶಸ್ತಿ, ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಇವರ ಸಾಧನೆಗೆ ದೊರೆತಿದೆ.
ಇವರ ಈ ವಿನೂತನ ಪ್ರಯೋಗದಿಂದಾಗಿ ಗದ್ದೆಗೆ ಭತ್ತದ ಬೀಜ ಬಿತ್ತಿ 40 ದಿನಗಳ ನಂತರ ನೇಜಿ ತೆಗೆಯುವ ವಿಧಾನ ದೂರವಾದಂತಾಗಿದೆ. ಈಗಾಗಲೇ ಸಾಕಷ್ಟು ಮಂದಿಗೆ ಉಚಿತವಾಗಿ ನೇಜಿ ತಯಾರಿಸಿ ನೀಡಿದ್ದಾರೆ. ಒಂದು ಎಕರೆಯಲ್ಲಿ ಒಬ್ಬನೇ ದುಡಿದು ಭತ್ತದ ಫಸಲು ತೆಗೆಯುವ ವಿಧಾನವನ್ನು ಪರಿಚಯಿಸುವ ಮೂಲಕ ಭತ್ತ ಬೆಳೆಯನ್ನು ಉಳಿಸುವುದು ಇವರ ಮುಂದಿರುವ ಯೋಜನೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾತ್ರಿ 7 ರಿಂದ 8 ಗಂಟೆಯ ಸಮಯದಲ್ಲಿ ನೀವು ವಿಜಯ್‌ರವರಿಗೆ ಕರೆ ಮಾಡಬಹುದು. ಅವರ ದೂರವಾಣಿ ಸಂಖ್ಯೆ : 9880683548.

‘ಹಿಂದೆ ನಾವು ಗದ್ದೆಯಲ್ಲಿ ನೇಜಿ ತಯಾರಿಸುತ್ತಿದ್ದೆವು. ಒಂದು ಎಕರೆ ಗದ್ದೆ ನಾಟಿಗೆ ನಾಲ್ಕು ಎಕರೆಗೆ ಬೇಕಾಗುವಷ್ಟು ಬೀಜ ಬಿತ್ತುತ್ತಿದ್ದೆವು. ಪ್ರಾಣಿ, ಪಕ್ಷಿಗಳು ತಿಂದು ಅದರಲ್ಲಿ ಉಳಿಯುತ್ತಿದ್ದುದು ಅಷ್ಟಕಷ್ಟೇ. ಬೇಸಿಗೆಗಾಲದಲ್ಲಿ ನೀರಿನ ಸಮಸ್ಯೆಯಿಂದ ನೇಜಿ ಮೊಳಕೆ ಬಾರದೆ ಕಷ್ಟ ಅನುಭವಿಸಿದ್ದು ಇದೆ. ಮಳೆಗಾಲದಲ್ಲಿ ಗದ್ದೆಯಲ್ಲಿ ಹೆಚ್ಚು ನೀರು ನಿಂತು ನೇಜಿ ಕೊಳೆತು ಹೋಗುತ್ತಿತ್ತು. ಎರಡು ವರ್ಷಗಳ ಕಾಲ ಬಿತ್ತನೆಗೆ ಬೀಜ ಇಲ್ಲದೆ ಭತ್ತ ಬೆಳೆಯಲು ಸಾಧ್ಯವಾಗಿಲ್ಲ. ನಂತರ ಥರ್ಮಕೋಲಿನ ಪ್ರಯೋಗ ವರದಾನವಾಯಿತು. ಇಲ್ಲಿ ಒಂದು ಬೀಜ ಕೂಡಾ ಹಾಳಾಗಲ್ಲ. ಇಂದು ನಾನು ಭತ್ತ ಬೆಳೆಯುತ್ತಿದ್ದರೆ ಅದಕ್ಕೆ ಕಾರಣ ಈ ವಿನೂತನ ಪ್ರಯೋಗ’. ಟಿ. ವಿಜಯ್ ಕುಂದರ್ ಉಳ್ಳಾಲ.

ಚಂದ್ರಹಾಸ ಚಾರ್ಮಾಡಿ

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *