ಪ್ರಕೃತಿ ಚಿಕಿತ್ಸೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

‘ಪ್ರಕೃತಿ ಚಿಕಿತ್ಸಾ ಕೇಂದ್ರ’ವನ್ನು ಆರಂಭಿಸಿದಾಗ ಅದಕ್ಕೆ ಇಷ್ಟೊಂದು ಪ್ರೋತ್ಸಾಹ ದೊರೆಯುತ್ತದೆ ಎಂಬುದರ ಕಲ್ಪನೆ ಸ್ವಾಭಾವಿಕವಾಗಿ ನನಗೆ ಇರಲಿಲ್ಲ. ಪ್ರಕೃತಿ ಚಿಕಿತ್ಸೆ ಎಂದರೆ ಶ್ರೀಮಂತರಿಗೆ ಮಾತ್ರ ಎನ್ನುವ ತಪ್ಪು ಅಭಿಪ್ರಾಯವೂ ಅನೇಕರಲ್ಲಿತ್ತು.
ನಾವು ಬಡ – ಮಧ್ಯಮ ವರ್ಗದವರನ್ನೇ ಗಮನದಲ್ಲಿರಿಸಿ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಬಳಿಕ ಅನೇಕ ಬೇಡಿಕೆಗಳೂ ಬಂದವು. ಸ್ವಾಭಾವಿಕವಾಗಿ ಕೆಲವರ ಜೀವನಮಟ್ಟ ಉತ್ತಮ ಇರುತ್ತದೆ. ಅವರಿಗೆ ಸ್ವಚ್ಛತೆಗೆ ಗಮನ ಕೊಡುವುದರ ಜೊತೆಗೆ ಸ್ವಲ್ಪ ಅನುಕೂಲತೆಗಳನ್ನು ಕೊಡಬೇಕಾಗುತ್ತದೆ. ಹಾಗಾಗಿ ವ್ಯವಸ್ಥೆಗಳನ್ನು ಸುಧಾರಿಸಿ ವಿಶೇಷ ಅನುಕೂಲತೆವುಳ್ಳ ವಿಲ್ಲಾಗಳ ವ್ಯವಸ್ಥೆಗಳನ್ನೂ ಬೇಕಾದವರಿಗೆ ಮಾಡಿದ್ದೇವೆ. ಇವತ್ತು ಧರ್ಮಸ್ಥಳದ ಶಾಂತಿವನ ಹಾಗೂ ಮಣಿಪಾಲದ ಸಮೀಪವಿರುವ ಪರೀಕಾ ಹಾಗೂ ಬೆಂಗಳೂರಿನ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆÉ. ನಾವು ಆಸ್ಪತ್ರೆ ಎನ್ನುವ ಶಬ್ದವನ್ನೇ ಉಪಯೋಗಿಸುವುದಿಲ್ಲ. ಬದಲಾಗಿ ಇದನ್ನು ‘ಸಾಧಕ ಕೇಂದ್ರ’ ಎಂದು ಕರೆಯುತ್ತೇವೆ. ಯಾಕೆಂದರೆ ಇಲ್ಲಿಗೆ ಬರುವವರು ರೋಗಿಗಳಲ್ಲ, ಸಾಧಕರು.
ಭಾರತೀಯ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜುಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕಾದ ಕಾಲವಿದು. ನಮ್ಮ ಎಲ್ಲ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜುಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದೇವೆ. ಉಡುಪಿ, ಬೆಂಗಳೂರು, ಹಾಸನ ಆಯುರ್ವೇದ ಕಾಲೇಜುಗಳಲ್ಲಿ ವಿದೇಶಿಯರಿಗಾಗಿ ವಿಶೇಷ ಬ್ಲಾಕ್‍ಗಳು ಇವೆ. ವಿದೇಶಿಯರು ಬಂದು ಆಯುರ್ವೇದ ಕಾಲೇಜುಗಳನ್ನು ವೀಕ್ಷಿಸಿದಾಗ ಇಲ್ಲಿನ ಗುಣಮಟ್ಟ, ವ್ಯವಸ್ಥೆಗಳನ್ನು ನೋಡಿ ಉನ್ನತ ಮಟ್ಟದ ಚಿಕಿತ್ಸಾ ಪದ್ಧತಿ ಇದು ಎಂಬ ಭಾವನೆ ಅವರಲ್ಲಿ ಮೂಡುವಂತೆ ಮಾಡಲಾಗಿದೆ.
‘ನಾವು’, ‘ನಮ್ಮದು’ ಎನ್ನುವ ಭಾವನೆ ಇದ್ದರೆ ಎಲ್ಲವು ಸಾಧ್ಯ. ನಮ್ಮ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಲು ಪ್ರೀತಿ ಸಹಕಾರಿಯಾಗುತ್ತದೆ. ಭಾರತೀಯ ವೈದ್ಯಕೀಯ ವ್ಯವಸ್ಥೆ ಮೇಲೆ ನಮಗೆ ಆ ಪ್ರೀತಿ ಬೆಳೆಯಬೇಕು. ಯೋಗ ಆಯುರ್ವೇದದ ಮೇಲೆ ಒಲವು ಮೂಡಬೇಕು. ಕೃಷಿಯಲ್ಲಿ ಆಸಕ್ತಿ ಇದ್ದವರಿಗೆ ಎಷ್ಟೇ ಕೃಷಿ ಮಾಡಿದರೂ ಸುಸ್ತಾಗುವುದಿಲ್ಲ, ಬದಲಾಗಿ ನವನವೀನ ವೈವಿಧ್ಯತೆಯನ್ನು ಬಯಸುತ್ತಾರೆ ಪ್ರಯೋಗಗಳನ್ನು ಮಾಡುತ್ತಾರೆ. ಚಾಲಕ ಆತನ ಕೆಲಸವನ್ನು ಪ್ರೀತಿಸಿದರೆ ದಿನನಿತ್ಯ ಹದಿನೆಂಟು ಗಂಟೆಗಳ ಕಾಲ ವಾಹನ ಚಲಾಯಿಸಿದರೂ ಆತನಿಗೆ ಸುಸ್ತಾಗುವುದಿಲ್ಲ. ಇದಕ್ಕೆ ಜೀವನೋತ್ಸಾಹ ಎನ್ನುತ್ತೇವೆ. ಜೀವನೋತ್ಸಾಹ ಎಂದರೆ ಮಾಡುವ ಕೆಲಸವನ್ನು ಸಂತೋಷದಿಂದ ಮಾಡಬೇಕು ಮತ್ತು ಅದರಿಂದ ಧನ್ಯತೆ ದೊರೆಯಬೇಕು.
ನಾನೊಮ್ಮೆ ಆಯುರ್ವೇದ ಕಾಲೇಜಿನ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬರು ಭಾಷಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ‘ಅವರು ಕ್ಯಾನ್ಸರ್ ಪೀಡಿತರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರಂತೆ. ಅಲ್ಲಿ ವೈದ್ಯರು ಎಲ್ಲ ರೀತಿಯ ತಪಾಸಣೆಗಳನ್ನು ಮಾಡಿ ಇದನ್ನು ಗುಣಪಡಿಸಲು ಕಷ್ಟ ಸಾಧ್ಯ. ನೀವು ಇನ್ನು ಹೆಚ್ಚು ದಿನಗಳ ಕಾಲ ಬದುಕಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದರಂತೆ. ಆಗ ಬಹಳಷ್ಟು ದುಃಖಿತರಾಗಿದ್ದ ಅವರಿಗೆ ಯಾರೋ ಒಬ್ಬರು ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದರಂತೆ. ಅದರಂತೆ ಆರು ವರ್ಷಗಳ ಹಿಂದೆ ಚಿಕಿತ್ಸಾಲಯಕ್ಕೆ ಹೋಗಿ ಚಿಕಿತ್ಸೆ ಪಡೆದು ಆರೋಗ್ಯವಾಗಿ ನಿಮ್ಮ ಮುಂದೆ ಇದ್ದೇನೆ’ ಎಂದರು. ಹೀಗೆ ಕೆಲವೊಮ್ಮೆ ಅಲೋಪತಿಯಲ್ಲಿ ವಾಸಿಯಾಗದ ನೋವು, ಕಾಯಿಲೆ ಆಯುರ್ವೇದದಲ್ಲಿ ವಾಸಿಯಾಗಬಹುದು, ಆಯುರ್ವೇದದಲ್ಲಿ ಆಗದಿರುವ ರೋಗವು ಅಲೋಪತಿ, ನ್ಯಾಚುರೋಪತಿಯಲ್ಲಿ ಗುಣವಾಗಬಹುದು. ಹೀಗೆ ಯಾವುದೂ ಕೂಡ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ತಮ್ಮದೇ ನೆಲೆಯಲ್ಲಿ ಎಲ್ಲವೂ ಮಹತ್ವವುಳ್ಳದ್ದೇ ಆಗಿವೆ. ಅಲೋಪತಿಯಲ್ಲಿ ನಾನು ದುಡ್ಡು ಕೊಡುತ್ತೇನೆ, ಎಷ್ಟು ಖರ್ಚಾದರೂ ಪರವಾಗಿಲ್ಲ ರೋಗ ವಾಸಿ ಮಾಡಿ ಎಂದೆನ್ನಬಹುದು. ಆದರೆ ಪ್ರಕೃತಿ ಚಿಕಿತ್ಸೆಯಲ್ಲಿ ಚಿಕಿತ್ಸೆಯಷ್ಟೇ ರೋಗಿಯ ಸಹಕಾರ ಕೂಡ ಅಗತ್ಯ. ಚಿಕಿತ್ಸೆ ಪಡೆಯುವ ಸಾಧಕ ಎಲ್ಲ ರೀತಿಯಿಂದಲೂ ಸಹಕರಿಸಿದರೆ ಮಾತ್ರ ಚಿಕಿತ್ಸೆ ಫಲಿಸುತ್ತದೆ.
ಹೋಲಿಸ್ಟಿಕ್ ಅಪ್ರೋಚ್ ಅಂದರೆ ಅಲೋಪತಿ, ಆಯುರ್ವೇದ, ಯುನಾನಿ ಹೀಗೆ ಯಾವುದೂ ಇರಬಹುದು, ಚಿಕಿತ್ಸೆಗಾಗಿ ರೋಗಿಯಲ್ಲ, ರೋಗಿಗಾಗಿ ಚಿಕಿತ್ಸೆ ಎಂಬ ತತ್ವ ಇಲ್ಲಿಯದು. ಪಾಶ್ರ್ವವಾಯುವಿಗೆ ತುತ್ತಾದ ರೋಗಿ ಬಂದಾಗ ಆತನಿಗೆ ಅಲೋಪತಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಆಯುರ್ವೇದದಲ್ಲಿ ರೋಗಮುಕ್ತಗೊಳಿಸಿ, ಮುಂದೆ ರೋಗ ಬಾರದಂತೆ ಹಾಗೂ ಕೆಲಸ-ಕಾರ್ಯಗಳನ್ನು ಮಾಡಲು ಅನುವಾಗುವಂತೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮೂಲಕ ರೋಗಿಗೆ ಸಹಕರಿಸುವುದಾಗಿದೆ.
ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸಾ ಪದ್ಧತಿಗಳತ್ತ ಗಮನಹರಿಸಿ ನಮ್ಮ ದೇಶೀಯ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬೆಳೆಸಿ ಪ್ರೋತ್ಸಾಹಿಸೋಣ.

Facebook
Twitter
WhatsApp
LinkedIn
Telegram

One Response

  1. ನಾನು ಚಿಕಿತ್ಸೆಗಾಗಿ ಅಡ್ಮಿಟ್ ಆಗಬೇಕು

Leave a Reply

Your email address will not be published. Required fields are marked *