ಗುರುಪ್ರಸಾದ್ ಟಿ. ಎನ್.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐ.ಎ.ಎಸ್. (ಭಾರತೀಯ ಆಡಳಿತಾತ್ಮಕ ಸೇವೆಗಳು) ಅಧಿಕಾರಿಯಾಗಬೇಕೆಂಬ ಬಯಕೆಯೇನೋ ಹಲವರಿಗಿರುತ್ತದೆ. ಆದರೆ ಇವರಲ್ಲಿ ಗುರಿ ತಲುಪುವವರು ಕೆಲವರಷ್ಟೇ. ಉಳಿದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಅಸಾಧ್ಯ ಎಂದು ತಮ್ಮ ಮಹದಾಸೆಯನ್ನು ಕೈಯಾರೆ ಚಿವುಟಿಬಿಡುತ್ತಾರೆ. ಹಾಗಾದರೆ ಐ.ಎ.ಎಸ್. ಪರೀಕ್ಷೆ ಅಷ್ಟೊಂದು ಕಷ್ಟವೇ? ಇದಕ್ಕೆ ಏಕೆ ಇಷ್ಟೊಂದು ಮಹತ್ವ? ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಮಾಡಬೇಕಿರುವುದೇನು? ವಯೋಮಿತಿ, ವಿದ್ಯಾರ್ಹತೆ ಮೊದಲಾದ ಸಂಗತಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ.) ವರ್ಷಕ್ಕೆ ಒಂದು ಬಾರಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯೇ ಐ.ಎ.ಎಸ್. ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುವ ಅಭ್ಯರ್ಥಿಗಳು ಐ.ಎ.ಎಸ್., ಐ.ಪಿ.ಎಸ್., ಐ.ಆರ್.ಎಸ್. ಮತ್ತು ಐ.ಎಫ್.ಎಸ್. ಅಧಿಕಾರಿಗಳಾಗಿ ನಾಗರಿಕ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ.
ವಿದ್ಯಾರ್ಹತೆ : ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ.) ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯ ಅಥವಾ ಸಂಯೋಜನೆಯಲ್ಲಿ ಪದವಿ ಪಡೆದಿರಬೇಕು. ಐ.ಎ.ಎಸ್. ಅಧಿಕಾರಿಯಾಗಲು ಆಯೋಗ ಪ್ರತಿ ವರ್ಷ ನಡೆಸುವ ನಾಗರಿಕ ಸೇವಾ ಪರೀಕ್ಷೆ (ಸಿ.ಎಸ್.ಇ.)ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.
ವಯಸ್ಸಿನ ಮಿತಿ : ಐ.ಎ.ಎಸ್. ಪರೀಕ್ಷೆಗೆ ಹಾಜರಾಗಬಯಸುವ ಅಭ್ಯರ್ಥಿ ಕನಿಷ್ಠ ೨೧ ವರ್ಷಗಳ ವಯೋಮಿತಿ ಮೀರಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಠ 32 ವರ್ಷ ವಯಸ್ಸಿನವರೆಗೆ 6 ಬಾರಿ ಈ ಪರೀಕ್ಷೆಯನ್ನು ಬರೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗರಿಷ್ಟ 37ವರ್ಷದೊಳಗಿನ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಬಹುದು. ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಒ.ಬಿ.ಸಿ. ಅಭ್ಯರ್ಥಿಗಳು 9 ಬಾರಿ ಈ ಪರೀಕ್ಷೆಗೆ ಹಾಜರಾಗಬಹುದು. ಗರಿಷ್ಟ 42 ವರ್ಷ ವಯೋಮಿತಿಯೊಳಗಿನ ದಿವ್ಯಾಂಗ ಅಭ್ಯರ್ಥಿಗಳು ಐ.ಎ.ಎಸ್. ಪರೀಕ್ಷೆ ಬರೆಯಬಹುದು.
ವಿಷಯದ ಆಯ್ಕೆ : ಐ.ಎ.ಎಸ್. ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳಿಗೆ ಒಟ್ಟು 25 ವಿಷಯಗಳಿವೆ. ತಮ್ಮಿಷ್ಟದ 23 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ವಿಷಯವನ್ನು ಆಯ್ಕೆಮಾಡಿಕೊಳ್ಳುವಾಗ ನಮಗೆ ಅಧ್ಯಯನ ಮಾಡಲು ಸುಲಭವಾದ ಮತ್ತು ಇಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ನಮ್ಮಿಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಪರೀಕ್ಷಾ ಸಿದ್ಧತೆಗೂ ಅನುಕೂಲವಾಗುತ್ತದೆ.
ಪರೀಕ್ಷಾ ತಯಾರಿ ಹೇಗೆ? : ಐ.ಎ.ಎಸ್. ಪರೀಕ್ಷೆಗೆ ತಯಾರಿ ನಡೆಸುವಾಗ ಸಮಯದ ನಿರ್ವಹಣೆ ಬಹಳ ಮುಖ್ಯ. ನಮ್ಮ ದಿನಚರಿಯನ್ನು ರಚಿಸಿ ಮತ್ತು ಅದಕ್ಕೆ ಅನುಗುಣವಾಗಿ ತಯಾರಿ ಮಾಡಬೇಕಾಗುತ್ತದೆ. ರಾಜ್ಯ- ರಾಷ್ಟç ಮಟ್ಟದ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಓದುವುದರಿಂದ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಓದಿನ ವೇಳೆ, ವಿಷಯಾನುಸಾರ ಟಿಪ್ಪಣಿ ಮಾಡಿಕೊಳ್ಳುವುದು ಅತ್ಯಗತ್ಯ. ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಸಹಾಯವನ್ನೂ ಪಡೆದುಕೊಳ್ಳಬಹುದು.
ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್‌ನೊoದಿಗೆ ತೇರ್ಗಡೆಯಾದವರ ಯಶೋಗಾಥೆಯನ್ನು ಕೇಳುವುದು, ಓದುವುದು ಕೂಡ ಸಹಕಾರಿ. ಇಲ್ಲಿ ಓದು ಅತೀ ಮುಖ್ಯ. ಐ.ಎ.ಎಸ್. ಪರೀಕ್ಷೆ ಬರೆದು ಯಶಸ್ಸು ಕಂಡಿರುವವರು ಶಿಫಾರಸು ಮಾಡುವ ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ.
ಅಣಕು ಪರೀಕ್ಷೆಗಳು (Mock test) : ಪರೀಕ್ಷೆಗೆ ತಯಾರಾಗಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅಣಕು ಪರೀಕ್ಷೆಗಳನ್ನು ಬರೆಯುವುದು ಸಹಕಾರಿ. ಪ್ರಸ್ತುತ ಐ.ಎ.ಎಸ್. ಪರೀಕ್ಷೆಯಲ್ಲಿ ಯಶಸ್ಸು ಕಾಣುವ ಹೆಚ್ಚಿನ ಅಭ್ಯರ್ಥಿಗಳು ಅಣಕು ಪರೀಕ್ಷೆಯನ್ನು ಎದುರಿಸಿರುತ್ತಾರೆ ಎಂಬ ಅಂಶ ಇದರ ಪ್ರಾಮುಖ್ಯತೆಯನ್ನು ಸಾಬೀತುಪಡಿಸುತ್ತದೆ. ಅಣಕು ಪರೀಕ್ಷೆಗಳು ನಮ್ಮ ಜ್ಞಾನವನ್ನು ವೃದ್ಧಿಸುತ್ತವೆ. ಮುಖಾಮುಖಿಯಾಗಿ ಅಥವಾ ಆನ್‌ಲೈನ್ ಮೂಲಕವೂ ಅಣಕು ಪರೀಕ್ಷೆಗಳನ್ನು ಎದುರಿಸಬಹುದು.
ಬರವಣಿಗೆ ಅಭ್ಯಾಸ : ಐ.ಎ.ಎಸ್. ಪರೀಕ್ಷೆಯ ನಿರ್ಣಾಯಕ ಘಟ್ಟವೆಂದರೆ ಮುಖ್ಯ ಪರೀಕ್ಷೆ ಪಾಸಾಗುವುದು. ವೇಗವಾಗಿ ಮತ್ತು ಸ್ಪಷ್ಟವಾಗಿ ಬರೆಯುವುದರ ಜೊತೆಗೆ ಪ್ರಬಂಧಗಳನ್ನು ಬರೆಯುವ ಅಭ್ಯಾಸ ರೂಢಿಸಿಕೊಳ್ಳುವುದೂ ಮುಖ್ಯ. ಕಾಲೇಜುಗಳಲ್ಲಿ ಬಿಡುವಿನ ವೇಳೆಯಲ್ಲಿ ಪೇಪರ್ 1 ಮತ್ತು 2 ಪತ್ರಿಕೆಗೆ ಅಗತ್ಯ ವಿಷಯಗಳನ್ನು ಓದಿ ಮುಗಿಸಿದರೆ, ಪದವಿ ಮುಗಿದಾಗ ಸಾಮಾನ್ಯ ಆಧ್ಯಯನವನ್ನು ಓದಲು ಸಮಯ ಸಿಗುತ್ತದೆ.
ಪರೀಕ್ಷೆಯ ಹಂತಗಳು : ಐ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಗಳು 3 ಹಂತಗಳನ್ನು ದಾಟಬೇಕಾಗುತ್ತದೆ. ಅಭ್ಯರ್ಥಿಗಳು ಮೊದಲು ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್), ನಂತರ ಮುಖ್ಯ ಪರೀಕ್ಷೆಗೆ (ಮೇನ್ಸ್) ಮತ್ತು ತದನಂತರ ಸಂದರ್ಶನ ಸುತ್ತಿಗೆ ಹಾಜರಾಗಬೇಕಿರುತ್ತದೆ.
ಪೂರ್ವಭಾವಿ ಪರೀಕ್ಷೆ (ಐ.ಎ.ಎಸ್. ಪ್ರಿಲಿಮ್ಸ್) : ಪೂರ್ವಭಾವಿ ಪರೀಕ್ಷೆಯು ತಲಾ ಎರಡು ಗಂಟೆಗಳ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಎರಡನೇ ಪತ್ರಿಕೆಯು ಸಿವಿಲ್ ಸರ್ವಿಸ್ ಆಪ್ಟಿಟ್ಯುಡ್ ಟೆಸ್ಟ್ (CSAT) ಅರ್ಹತೆಯನ್ನು ಒಳಗೊಂಡಿರುತ್ತದೆ ಮತ್ತು ಉತ್ತೀರ್ಣರಾಗಲು 33 ಪ್ರತಿಶತ ಅಂಕಗಳ ಅಗತ್ಯವಿದೆ. ಮತ್ತೊಂದೆಡೆ ಮೊದಲ ಪತ್ರಿಕೆಯ ಆಧಾರದ ಮೇಲೆ ಕಟ್‌ಆಫ್ ಅಂಕಗಳನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅದರ ಪ್ರಕಾರ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ಮುಖ್ಯ ಪರೀಕ್ಷೆ (ಮೇನ್ಸ್) : ಮುಖ್ಯ ಪರೀಕ್ಷೆಯು ಎರಡು ಭಾಷೆಯ ಪತ್ರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ಉತ್ತೀರ್ಣರಾಗಲು 33 ಪ್ರತಿಶತ ಅಂಕಗಳ ಅಗತ್ಯವಿದೆ. ಎರಡೂ ಪತ್ರಿಕೆಗಳು ತಲಾ ಮೂರು ಗಂಟೆಗಳ ಅವಧಿಯದ್ದಾಗಿವೆ. ಒಂದು ಪತ್ರಿಕೆಯು ಪ್ರಬಂಧಗಳನ್ನು ಒಳಗೊಂಡಿರುತ್ತದೆ. 3 ಗಂಟೆಗಳಲ್ಲಿ ನಿಮ್ಮ ಆಯ್ಕೆಯ ವಿಷಯಗಳ ಮೇಲೆ ಎರಡು ಪ್ರಬಂಧಗಳನ್ನು ಬರೆಯಬೇಕು. ಹೆಚ್ಚುವರಿಯಾಗಿ ಸಾಮಾನ್ಯ ಅಧ್ಯಯನಗಳು ನಾಲ್ಕು ಪತ್ರಿಕೆಗಳನ್ನು ಹೊಂದಿರುತ್ತವೆ. ಪ್ರತಿಯೊಂದು ಪತ್ರಿಕೆಗೂ ಮೂರು ಗಂಟೆಗಳನ್ನು ನೀಡಲಾಗಿರುತ್ತದೆ. ಅಂತಿಮವಾಗಿ ಐಚ್ಛಿಕ ಪತ್ರಿಕೆ ಇರಲಿದೆ, ಇಲ್ಲಿ ಎರಡು ಪರೀಕ್ಷೆಗಳಿರುತ್ತವೆ ಮತ್ತು ವಿಷಯವನ್ನು ಅಭ್ಯರ್ಥಿಗಳೇ ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್ ಅಥವಾ ಭಾರತೀಯ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾದ ಯಾವುದೇ ಭಾಷೆಯಲ್ಲಿ ಬರೆಯಬಹುದು.
ಸಂದರ್ಶನ : ಐ.ಎ.ಎಸ್. ಪರೀಕ್ಷೆಯಲ್ಲಿ (ಮೇನ್ಸ್) ನಿಗದಿತ ಕಟ್-ಆಫ್ ಅಂಕಗಳಿಗಿoತ ಹೆಚ್ಚಿನ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ (ಐ.ಎ.ಎಸ್. ಪರೀಕ್ಷೆಯ ಕೊನೆಯ ಹಂತ) ಕರೆ ಪಡೆಯುತ್ತಾರೆ. ಅಭ್ಯರ್ಥಿಯು ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ವಿವರವಾದ ಅರ್ಜಿಯನ್ನು (ಡಿ.ಎ.ಎಫ್.) ಭರ್ತಿ ಮಾಡಿ ಸಲ್ಲಿಸಬೇಕು. ಫಾರ್ಮ್ನಲ್ಲಿ ತುಂಬಿದ ಮಾಹಿತಿಯ ಆಧಾರದ ಮೇಲೆ ಸಂದರ್ಶನದ ಸಮಯದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಸೇರಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅಭ್ಯರ್ಥಿಗಳ ಅಂತಿಮ ಶ್ರೇಯಾಂಕವು ಐ.ಎ.ಎಸ್. ಪರೀಕ್ಷೆಯ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಸುತ್ತಿನಲ್ಲಿ ಅವರು ಪಡೆದ ಅಂಕಗಳ ಆಧಾರದ ಮೇಲೆ ನಿರ್ಧರಿತವಾಗುತ್ತದೆ.
ಶ್ರೇಯಾಂಕ ಆಧರಿತ ಹುದ್ದೆಗಳು : ವಿವಿಧ ವರ್ಗಗಳ (ಸಾಮಾನ್ಯ, ಎಸ್ಸಿ, ಎಸ್ಟಿ, ಒ.ಬಿ.ಸಿ., ಇಡಬ್ಲ್ಯೂಎಸ್) ಶ್ರೇಯಾಂಕಗಳನ್ನು ತಯಾರಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಐ.ಎ.ಎಸ್., ಐ.ಪಿ.ಎಸ್. ಅಥವಾ ಐ.ಎಫ್.ಎಸ್. ಶ್ರೇಣಿಗಳನ್ನು ನೀಡಲಾಗುತ್ತದೆ. ಉನ್ನತ ಶ್ರೇಣಿಯವರಿಗೆ ಐ.ಎ.ಎಸ್. ಸಿಗುತ್ತದೆ, ಆದರೆ ಕೆಲವೊಮ್ಮೆ ಉನ್ನತ ಶ್ರೇಣಿಯವರ ಆದ್ಯತೆ ಐ.ಪಿ.ಎಸ್. ಅಥವಾ ಐ.ಆರ್.ಎಸ್. ಆಗಿದ್ದರೆ, ಕಡಿಮೆ ಶ್ರೇಣಿಯವರೂ ಐ.ಎ.ಎಸ್. ಹುದ್ದೆಗಳನ್ನು ಪಡೆಯಬಹುದು. ಮುಂದಿನ ಸ್ಥಾನ ಪಡೆದವರು ಐ.ಪಿ.ಎಸ್. ಮತ್ತು ಐ.ಎಫ್.ಎಸ್. ಹುದ್ದೆಗಳನ್ನು ಪಡೆಯುತ್ತಾರೆ.
ಕೆಲಸ ಏನು? : ತೇರ್ಗಡೆಯಾಗುವ ಅಭ್ಯರ್ಥಿಗಳು ಐ.ಎ.ಎಸ್. ಮೂಲಕ ದೇಶದ ಅಧಿಕಾರಶಾಹಿ ರಚನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಆದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅದಕ್ಕೂ ಮುನ್ನ ತರಬೇತಿ ನೀಡಲಾಗುತ್ತದೆ. ಐ.ಎ.ಎಸ್. ಅಧಿಕಾರಿಗಳನ್ನು ವಿವಿಧ ಸಚಿವಾಲಯಗಳು ಮತ್ತು ಆಡಳಿತ ಇಲಾಖೆಗಳಿಗೆ ನೇಮಕ ಮಾಡಲಾಗುತ್ತದೆ.
ಪ್ರತಿವರ್ಷ ಸುಮಾರು 2 ಲಕ್ಷ ಅಭ್ಯರ್ಥಿಗಳಲ್ಲಿ 850 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆದರೆ, ಶ್ರೇಯಾಂಕ ಗಳಿಸಿದವರು (50 ಅಥವಾ 100 ಅತ್ಯುತ್ತಮ ಅಭ್ಯರ್ಥಿಗಳು) ಮಾತ್ರ ಐ.ಎ.ಎಸ್. ಅಥವಾ ಐ.ಎಫ್.ಎಸ್. ಆಯ್ಕೆಗಾಗಿ ಅರ್ಹತೆ ಪಡೆಯುವರು. ಇದು ವಿಶ್ವದಲ್ಲೇ ಅತಿ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಎನಿಸಿಕೊಂಡಿದೆ. ಏಳನೇ ವೇತನ ಆಯೋಗದ ಅನುಸಾರ ಐ.ಎ.ಎಸ್. ಅಧಿಕಾರಿಯೊಬ್ಬರ ಆರಂಭಿಕ ವೇತನ ಸುಮಾರು ರೂ. 56,100 ಆಗಿರುತ್ತದೆ.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಂತೆ ಇದೂ ಸುಲಭವೂ ಅಲ್ಲ, ಶ್ರಮಪಟ್ಟರೆ ಕಷ್ಟವೂ ಅಲ್ಲ. ಸಮಗ್ರ ಮಾಹಿತಿ ಸಂಗ್ರಹ, ಸಿದ್ಧತೆ- ಬದ್ಧತೆಗಳಿಂದ ಯಶಸ್ಸು ಖಂಡಿತಾ ಸಾಧ್ಯ.