ಎಸ್.ಕೆ. 21 ಡಿಜಿಟಲೀಕರಣ – ಬೇಕಾಗಿದೆ ನಿಮ್ಮ ಸಹಕಾರ

ಡಾ| ಎಲ್. ಎಚ್. ಮಂಜುನಾಥ್

ಬಂಧುಗಳೇ, ಇದೀಗ ನಮ್ಮ ಯೋಜನೆಯಲ್ಲಿ 50 ಲಕ್ಷಕ್ಕೂ ಮಿಕ್ಕಿದ ಸದಸ್ಯರುಗಳಿದ್ದು, ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಪೈಕಿ ಬ್ಯಾಂಕಿನಿoದ ದೊರೆಯುವ ಪ್ರಗತಿನಿಧಿ ಸಾಲ ಪ್ರಮುಖವಾದುದು. ಈಗಂತೂ ದೊಡ್ಡ ಮೊತ್ತದ ಪ್ರಗತಿನಿಧಿ ಸೌಲಭ್ಯಗಳು ಸದಸ್ಯರಿಗೆ ಲಭ್ಯವಿದೆ. ಯಾವುದೇ ಒಬ್ಬ ಸದಸ್ಯರು ಪ್ರಗತಿನಿಧಿ ಪಡೆಯಬೇಕೆಂದರೆ ಅದಕ್ಕೆ ಸಂಘವೇ ಜವಾಬ್ದಾರಿಯಾಗಿ ನಿಲ್ಲಬೇಕಾಗುತ್ತದೆ. ತಾನು ಪಡೆಯುತ್ತಿರುವ ಪ್ರಗತಿನಿಧಿ ವಿವರಗಳನ್ನು ಸದಸ್ಯರು ತಮ್ಮ ಸಂಘದ ಸದಸ್ಯರಿಗೆ ತಿಳಿಸಬೇಕಾಗುತ್ತದೆ. ಪ್ರತಿ ವಾರ ತಾವು ಪಡಕೊಂಡ ಸಾಲಕ್ಕೆ ಕಟ್ಟಬಹುದಾದ ಮರುಪಾವತಿ ಮೊತ್ತವನ್ನು ಸಂಘಕ್ಕೆ ತಿಳಿಸಿ ಅದರಂತೆ ಮರುಪಾವತಿಯನ್ನು ನಿಗದಿಮಾಡಿಸಿಕೊಳ್ಳಬೇಕಾಗುತ್ತದೆ. ಸದಸ್ಯರ ಈ ಬೇಡಿಕೆಯನ್ನು ಸಂಘದವರು ಪರಿಶೀಲಿಸಿ ಒಪ್ಪಿಗೆ ಕೊಟ್ಟ ನಂತರ ಬ್ಯಾಂಕಿನವರು ಸದಸ್ಯರ ಖಾತೆಗೆ ಹಾಕುತ್ತಾರೆ. ಈ ಒಟ್ಟು ವ್ಯವಹಾರವು ಪಾರದರ್ಶಕವಾಗಿದ್ದಷ್ಟೂ ತಪಾವತುಗಳು ಆಗುವ ಸಾಧ್ಯತೆ ಕಡಿಮೆ. ನಾವು ಕಂಡoತೆ ಪಾರದರ್ಶಕತೆಯ ಕೊರತೆಯಿಂದಾಗಿ ಹಲವಾರು ಬಾರಿ ಯಾರಿಗೋ ನೀಡಬೇಕಾದ ಹಣ ಇನ್ಯಾರ ಕೈಗೋ ಸೇರಿ ಅವ್ಯವಹಾರವಾಗುತ್ತದೆ. ಇಂತಹ ಪ್ರಸಂಗಗಳನ್ನು ತಪ್ಪಿಸಲು ಯೋಜನೆಯು ಇತ್ತೀಚೆಗೆ ಪ್ರಾರಂಭಿಸಿರುವ “ಡಿಜಿಟೈಸ್ಡ್ ಎಸ್.ಕೆ 21 ಕಾರ್ಯಕ್ರಮ” ಸಹಕಾರ ನೀಡುತ್ತದೆ.
ಎಲ್ಲರಿಗೂ ಗೊತ್ತಿರುವಂತೆ ಪ್ರಗತಿನಿಧಿ ಅರ್ಜಿ ನಮೂನೆ ಎಸ್.ಕೆ. 21 ನ್ನು ಸೇವಾಪ್ರತಿನಿಧಿಯು ತುಂಬಿಸುತ್ತಾರೆ ಮತ್ತು ಮೇಲ್ವಿಚಾರಕರು ಟ್ಯಾಬಿನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದರ ಆಧಾರದಲ್ಲಿ ಸದಸ್ಯರಿಗೆ ಪ್ರಗತಿನಿಧಿ ಮಂಜೂರಾತಿಯಾಗುತ್ತದೆ. ಇದೀಗ ಈ ಕಾರ್ಯಕ್ರಮವನ್ನು ಸರಳೀಕರಣಗೊಳಿಸಲಾಗುವುದು. ಪ್ರಗತಿನಿಧಿ ಬೇಡಿಕೆಯಿರುವ ಸಂಘದ ಸದಸ್ಯರು ತಮ್ಮ ವಾರದ ಸಭೆಯಲ್ಲಿ ತಮಗೆ ಬೇಕಾಗಿರುವ ಪ್ರಗತಿನಿಧಿ ವಿವರವನ್ನು ನಿರ್ಣಯ ಪುಸ್ತಕದಲ್ಲಿ ನಮೂದಿಸಿ ನಂತರ ಪ್ರತೀ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ತಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರ (ಸಾಮಾನ್ಯ ಸೇವಾ ಕೇಂದ್ರ)ಕ್ಕೆ ಭೇಟಿ ನೀಡಬೇಕು. ಈ ಸಂದರ್ಭ ನಿರ್ಣಯ ಪುಸ್ತಕ ಮತ್ತು ಪ್ರಗತಿನಿಧಿ ಬೇಕಾದ ಸದಸ್ಯರ ಆಧಾರ್‌ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ಕನ್ನು ತೆಗೆದುಕೊಂಡು ಹೋಗಬೇಕು.
ಕೇಂದ್ರದಲ್ಲಿ ಸೇವಾಪ್ರತಿನಿಧಿಯ ಉಪಸ್ಥಿತಿಯಲ್ಲಿ ಸದಸ್ಯರು ನಿರ್ಣಯ ಪುಸ್ತಕವನ್ನು ಕೇಂದ್ರದ ಕಾರ್ಯಕರ್ತನಿಗೆ ನೀಡಿದಲ್ಲಿ ಅವರ ಸಂಘದ ವಿವರಗಳನ್ನು ಕಂಪ್ಯೂಟರಿನಿAದ ಹೊರತೆಗೆದು ಸಾಲ ಬೇಕಾದ ಸದಸ್ಯರ ವಿವರಗಳನ್ನು ನಮೂದಿಸಿ, ಅವರ ಆಧಾರ್‌ಕಾರ್ಡ್ ಮತ್ತು ಪಾಸ್‌ಬುಕ್ಕನ್ನು ಪರಿಶೀಲನೆ ಮಾಡಿ ಎಸ್.ಕೆ.21 ನ್ನು ತಯಾರಿಸಿ ಅದರ ಮುದ್ರಿತ ಕಾಪಿಯನ್ನು ನೀಡುತ್ತಾರೆ. ಇದಲ್ಲದೆ ಸದಸ್ಯರಿಗೆ ಸ್ಫುಟವಾಗಿ ಕಂಪ್ಯೂಟರಿನಿoದ ಎಸ್.ಕೆ. 21 ರಲ್ಲಿ ನಮೂದಿಸಿದ ಸಾಲದ ವಿವರಗಳನ್ನು ಓದಿ ಹೇಳಲಾಗುತ್ತದೆ. ಇದಾದ ನಂತರ ಸದಸ್ಯರ ಒಪ್ಪುಗೆಯ ಮೇರೆಗೆ ಅವರ ದಸ್ಕತ್ತು ಪಡೆದುಕೊಂಡು ಎಸ್.ಕೆ. 21 ನ್ನು ಮಂಜೂರಾತಿಗೆ ಕಳುಹಿಸಲಾಗುವುದು. ಅಲ್ಲಿಗೆ ಸೇವಾಪ್ರತಿನಿಧಿ ಮತ್ತು ಸದಸ್ಯರ ಜವಾಬ್ದಾರಿ ಮುಗಿಯುತ್ತದೆ. ನಂತರ ಒಂದು ವಾರದೊಳಗೆ ಸಂಬAಧಿಸಿದ ಅಧಿಕಾರಿಯು ಸಾಲ ಪರಿಶೀಲನೆ ಮಾಡಿ ಹಣವು ಸದಸ್ಯರ ಖಾತೆಗೆ ತಲುಪುವಂತೆ ವ್ಯವಸ್ಥೆ ಮಾಡುವರು.
ಈ ಬದಲಾವಣೆಯಲ್ಲಿ ಎಸ್.ಕೆ.21 ಅಪ್‌ಲೋಡ್ ಆಗಲು ಸಂಘದ ಕನಿಷ್ಠ 70 ಶೇಕಡಾ ಸದಸ್ಯರ ಒಪ್ಪಿಗೆ ಅಗತ್ಯವಾಗಿರುತ್ತದೆ. ಇದರಿಂದಾಗಿ ಸಾಲ ಮಂಜೂರಾತಿ ವೇಗವು ಹೆಚ್ಚುವುದಲ್ಲದೆ, ಅವ್ಯವಹಾರಗಳನ್ನು ತಡೆಗಟ್ಟಬಹುದು. ಇದರಿಂದಾಗಿ ಮೇಲ್ವಿಚಾರಕರಿಗೂ, ಸೇವಾಪ್ರತಿನಿಧಿಗಳಿಗೂ ಹೊರೆಯು ಕಡಿಮೆಯಾಗುತ್ತದೆ ಮತ್ತು ಕಾರ್ಯಕ್ರಮವು ಪಾರದರ್ಶಕವಾಗುತ್ತದೆ.
ಸ್ವಸಹಾಯ ಸಂಘ ಚಳುವಳಿಯಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯೆಂದು ನಾನು ಭಾವಿಸುತ್ತೇನೆ.
ನಿಮ್ಮ ಸಹಕಾರವನ್ನು ಕೋರುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *