ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ರೂ. 620 ಕೋಟಿ ಲಾಭಾಂಶವನ್ನು ಹಂಚಿಕೊಳ್ಳುತ್ತಿವೆ. ಕೆಲವು ಸದಸ್ಯರಿಗೆ ತಮ್ಮ ಉಳಿತಾಯಕ್ಕಿಂತ ದ್ವಿಗುಣ ಲಾಭಾಂಶವು ದೊರೆತಿದೆ. ಹಾಗಾದರೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವಾಗಿದೆ, ಪಡೆದ ಲಾಭಾಂಶವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ನಮ್ಮಲ್ಲೂ ಇತ್ತು. ಅವರುಗಳಿಗೆ ಕರೆ ಮಾಡಿ ಮಾತನಾಡಿ ಅವರ ಮಾತುಗಳಿಗೆ ಅಕ್ಷರದ ರೂಪ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಉಳಿತಾಯಕ್ಕಿಂತ ಹೆಚ್ಚು ಲಾಭಾಂಶ ಕೈಸೇರಿತು
ಕಳೆದ 9 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ಗೌರಿ ಗಣೇಶ’ ಸ್ವಸಹಾಯ ಸಂಘದ ಸದಸ್ಯನಾಗಿದ್ದೇನೆ. ಯೋಜನೆಯ ಮೂಲಕ ಬ್ಯಾಂಕಿನಿಂದ ಸಾಲ ಪಡೆದು ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸೋಲಾರ್ ದೀಪ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಿದ್ದೇನೆ. ನನ್ನ ಉಳಿತಾಯ ರೂ. 4,540 ಆಗಿರುತ್ತದೆ. ಆದರೆ ಇದೀಗ ರೂ. 15,120 ಲಾಭಾಂಶ ನನ್ನ ಕೈಸೇರಿದೆ. ಉಳಿತಾಯಕ್ಕಿಂತ ಹೆಚ್ಚು ಲಾಭಾಂಶ ಕೈಸೇರಿರುವುದು ಖುಷಿ ನೀಡಿದೆ. ಲಾಭಾಂಶದ ಹಣವನ್ನು ಕೃಷಿ ಚಟುವಟಿಕೆಗೆ ತೊಡಗಿಸಬೇಕೆಂದಿದ್ದೇನೆ.

ನಂದನವನವಾಯಿತು ಬದುಕು
‘ಕೃಷಿಯಿಂದ ನಳನಳಿಸುವ ಹಸಿರು, ಕೊಟ್ಟಿಗೆ ತುಂಬಾ ಹಸುಗಳ ಅಂಬಾ, ಮನೆಯಲ್ಲೆ ಕಿರು ಕೈಗಾರಿಕೆ..’ ಹಳ್ಳಿಯ ನಾರಿಯರು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಗೊಳ್ಳಬೇಕೆಂಬ ಮಾತೃಶ್ರೀಯವರ ಆಶಯ ಫಲಿಸಿದ್ದಕ್ಕೆ ನಾನೇ ಉತ್ತಮ ಉದಾಹರಣೆ. ಕಳೆದ 13 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ಶ್ರೀಲಕ್ಷ್ಮೀ’ ಸ್ವಸಹಾಯ ಸಂಘದ ಸದಸ್ಯಳಾಗಿದ್ದೇನೆ. ಕೃಷಿ ಅಭಿವೃದ್ಧಿ ಮಾಡಬೇಕು ಅದಕ್ಕೆ ಪೂರಕವಾಗಿ ಹಸುಗಳನ್ನು ಸಾಕಿ ಹೈನುಗಾರಿಕೆಯನ್ನು ಮಾಡಿ ಬದುಕು ನಂದನವನ್ನಾಗಿ ಮಾಡಬೇಕೆಂದೇ ಯೋಜನೆ ಸೇರಿದ್ದೆ. ಈವರೆಗೆ ಸುಮಾರು ೫ ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದೇನೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸನ್ನು ಪಡೆದಿದ್ದೇನೆ. ಇದೀಗ ರೂ. 4,339 ಲಾಭಾಂಶ ನನ್ನ ಕೈಸೇರಿದೆ. ಇದರಿಂದ ಬಹಳ ಸಂತೋಷವಾಗಿದೆ. ಈ ಹಣವನ್ನು ತೊಡಗಿಸಿ ಇನ್ನೊಂದು ಹಸು ಖರೀದಿಸುವ ಯೋಚನೆ ಇದೆ.

ಇಷ್ಟೊಂದು ಲಾಭಾಂಶ ಸಿಗುತ್ತೆ ಅಂತ ಅಂದ್ಕೊಕೊಂಡಿರಲಿಲ್ಲ
ಹನ್ನೊಂದು ವರ್ಷಗಳಿಂದ ಅಣ್ಣಪ್ಪ ಸ್ವಸಹಾಯ ಸಂಘದ ಸದಸ್ಯಳಾಗಿದ್ದೇನೆ. ಯೋಜನೆಯ ಮೂಲಕ ಬ್ಯಾಂಕಿನಿಂದ ಸಾಲ ಪಡೆದು ರೋಟಿ, ಬೇಕರಿ ತಿಂಡಿ ತಯಾರಿ, ಕ್ಯಾಟರಿಂಗ್ ಮುಂತಾದ ಸ್ವಉದ್ಯೋಗವನ್ನು ಆರಂಭಿಸಿ ಇದೀಗ ಇತರ ಆರು ಮಂದಿಗೆ ಉದ್ಯೋಗವನ್ನು ನೀಡುತ್ತಿದ್ದೇನೆ. ಯೋಜನೆ ಇಲ್ಲದಿದ್ದರೆ ನಾನು ಇಂದಿಗೂ ಮನೆಯಲ್ಲೇ ಅಡುಗೆ ಕೆಲಸ ಮಾಡುತ್ತಾ ಇರಬೇಕಿತ್ತು. ಸಂಘದಲ್ಲಿ ರೂ. 13,000 ಉಳಿತಾಯ ಆಗಿದೆ. ಈಗ ರೂ. 16,639 ಲಾಭಾಂಶ ಸಿಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಲಾಭಾಂಶ ಸಿಗುತ್ತೆ ಅಂತ ನಾನು ಊಹಿಸಿರಲಿಲ್ಲ. ಈ ಮೊತ್ತವನ್ನು ಕ್ಯಾಟರಿಂಗ್ ಕೆಲಸಕ್ಕೆ ಬೇಕಾದ ಪಾತ್ರೆ ಖರೀದಿಗೆ ಉಪಯೋಗಿಸುತ್ತಿದ್ದೇನೆ. ಗ್ರಾಮಾಭಿವೃದ್ಧಿ ಯೋಜನೆ ಸೇರುವ ಮುಂಚೆ ನಾಲ್ಕು ಜನರ ಎದುರು ನಿಂತು ಮಾತನಾಡುವ ಧೈರ್ಯ ನನ್ನಲ್ಲಿರಲಿಲ್ಲ. ಇದೀಗ ಎಷ್ಟೇ ಜನರಿದ್ದರೂ ಗಂಟೆಗಟ್ಟಲೆ ಸರಾಗವಾಗಿ ಮಾತನಾಡುವ ಕಲೆ ನನ್ನಲ್ಲಿದೆ. ನಾನು ಸ್ವಉದ್ಯೋಗಿಯಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಲಾಭ ಗಳಿಸುತ್ತಾ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದೇನೆ.

ಹೋಟೆಲ್‌ಗೆ ನೆರವಾದ ಗ್ರಾಮಾಭಿವೃದ್ಧಿ ಯೋಜನೆ
9 ವರ್ಷಗಳ ಹಿಂದೆ ಸಣ್ಣದಾದ ಕ್ಯಾಂಟೀನ್ ನಡೆಸುತ್ತಿದ್ದ ನಾನು ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿ ಅವರ ಮಾರ್ಗದರ್ಶನ, ಆರ್ಥಿಕ ನೆರವು ಪಡೆದು ಹೋಟೆಲ್ ಆರಂಭಿಸಿದೆ. ಇದೀಗ ನನಗೆ ರೂ. 9,260 ಲಾಭಾಂಶ ದೊರೆತಿದೆ. ಹಣವನ್ನು ಹೋಟೆಲ್‌ಗೆ ಅಗತ್ಯ ಪಾತ್ರೆಗಳನ್ನು ಖರೀದಿಸಲು ಉಪಯೋಗಿಸಬೇಕೆಂದಿದ್ದೇನೆ. ಹಣಕಾಸಿನ ಅಗತ್ಯ ಇರುವ ಈ ದಿನಗಳಲ್ಲಿ ಲಾಭಾಂಶ ನೀಡಿದ ಗ್ರಾಮಾಭಿವೃದ್ಧಿ ಯೋಜನೆಗೆ ಧನ್ಯವಾದ.

ಸಾಲದ ಸದ್ಬಳಕೆ ಕಲಿಸಿದ ಗ್ರಾಮಾಭಿವೃದ್ಧಿ ಯೋಜನೆ
ಕಳೆದ ಒಂಭತ್ತು ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ನೇಚರ್’ ಸ್ವಸಹಾಯ ಸಂಘದ ಸದಸ್ಯೆ. ಯೋಜನೆಯ ಮೂಲಕ ಬ್ಯಾಂಕಿನಿಂದ ಪಡೆದ ಹಣಕಾಸಿನ ನೆರವಿನ ಸದ್ವಿನಿಯೋಗ ಮಾಡಿಕೊಳ್ಳುವುದನ್ನು ನನಗೆ ಕಲಿಸಿದ್ದು ಗ್ರಾಮಾಭಿವೃದ್ಧಿ ಯೋಜನೆ. ಹೀಗಾಗಿ ಸಾಲವನ್ನು ಗೃಹೋಪಯೋಗಿ ವಸ್ತುಗಳ ಖರೀದಿಗೆ, ಕೃಷಿ ಚಟುವಟಿಕೆಗಳಿಗೆ ಸದ್ಬಳಕೆ ಮಾಡಿಕೊಂಡೆ. ನಾನು ತೊಡಗಿಸಿದ ಒಂದೊಂದು ರೂಪಾಯಿ ನನಗೆ ಇಂದು ಪ್ರತಿಫಲವನ್ನು ನೀಡಿದೆ. ನಾನು ಮಾಡಿದ ಉಳಿತಾಯ ರೂ. 7,750 ಆಗಿದ್ದು ಇದೀಗ ರೂ. 10,413 ಲಾಭಾಂಶ ಪಡೆಯಲಿದ್ದೇನೆ.

ಉಳಿತಾಯವನ್ನು ಮೀರಿಸಿತು ಲಾಭಾಂಶ
ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿ ಒಂಭತ್ತು ವರ್ಷಗಳಾಗಿದೆ. ಈವರೆಗೆ ಯೋಜನೆಯ ಮೂಲಕ ಬ್ಯಾಂಕಿನಿಂದ ಸುಮಾರು ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದೇನೆ. ಪಡೆದ ಸಾಲವನ್ನು ಹೈನುಗಾರಿಕೆ, ಮಕ್ಕಳಿಗೆ ಶಿಕ್ಷಣ ನೀಡಲು, ಮದುವೆಗೆ, ಮನೆ ರಿಪೇರಿ, ಕೃಷಿ ಚಟುವಟಿಕೆಗಳಿಗೆ ತೊಡಗಿಸಿಕೊಂಡ ಕಾರಣ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದೇನೆ. ಪ್ರತಿ ವಾರ ಮಾಡಿದ ಉಳಿತಾಯ ರೂ. 9,000 ಆಗಿದೆ. ಆದರೆ ನನಗೀಗ ರೂ. 12,562 ಲಾಭಾಂಶ ದೊರೆಯುತ್ತಿದೆ. ಲಾಭಾಂಶ ಹಣದಿಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬೇಕೆಂದಿದ್ದೇನೆ.

‘ಭಾಗ್ಯ’ದ ಬಾಗಿಲು ತೆರೆದ ಯೋಜನೆ
ನನ್ನೂರು ಭದ್ರಾವತಿ ತಾಲೂಕಿನ ನಿಂಬೆಗೊಂದಿಯ ಲಿಂಗಾಪುರ. ಸಾಂಪ್ರದಾಯಿಕವಾಗಿ ಕೃಷಿಯನ್ನೇ ನಂಬಿಕೊಂಡು ಬಂದಿರುವವರು ನಾವು. ಹತ್ತಾರು ಬೆಳೆಗಳನ್ನು ಬೆಳೆಯುವ ಕನಸಿದ್ದರೂ ಬಿತ್ತನೆ ಬೀಜ ಖರೀದಿ, ಗೊಬ್ಬರ, ಕಟಾವು, ಕೂಲಿ ಹೀಗೆ ವ್ಯವಸಾಯದಲ್ಲಿ ತೊಡಗಲು ಬಂಡವಾಳದ ಕೊರತೆ ಇತ್ತು. ಹತ್ತು ವರ್ಷಗಳ ಹಿಂದೆ ಮನೆ ಸಮೀಪದ ಮಹಿಳೆಯೊಬ್ಬರ ಮಾತಿನಂತೆ ಗ್ರಾಮಾಭಿವೃದ್ಧಿ ಯೋಜನೆಯ ‘ಹಜ್’ ಸ್ವಸಹಾಯ ಸಂಘದ ಸದಸ್ಯಳಾಗಿ ಸೇರಿದೆ. ನನ್ನೆಲ್ಲ ಪ್ರಯತ್ನಗಳನ್ನು ಹುರಿದುಂಬಿಸುತ್ತಿದ್ದ ಯೋಜನೆಯ ಕಾರ್ಯಕರ್ತರು ಕೃಷಿ ಚಟುವಟಿಕೆಗೆ ಬೆಂಬಲವಾಗಿ ನಿಂತರು. ಯೋಜನೆಯ ಸಹಕಾರದಿಂದ ಹಂತ ಹಂತವಾಗಿ ಸಾಲ ಪಡೆದೆ. ಪರಿಣಾಮ ಇದೀಗ ನನ್ನ ತೋಟದಲ್ಲಿ ಹಸಿರು ನಳನಳಿಸಿದೆ, ಯಾವುದೇ ತಾಪತ್ರಯಗಳಿಲ್ಲದೆ ಬದುಕು ನಡೆಸುತ್ತಿದ್ದೇನೆ. ಈ ಬಾರಿ ನನಗೆ ಯೋಜನೆಯಿಂದ ರೂ. 10,417 ಲಾಭಾಂಶ ಕೈಸೇರಿದೆ. ಈ ಮೊತ್ತವನ್ನು ಚಿನ್ನ ಖರೀದಿಗೆ ಉಪಯೋಗಿಸಬೇಕೆಂದಿದ್ದೇನೆ.
