ರಾಜ್ಯದ 10 ಸಾವಿರಕ್ಕೂ ಅಧಿಕ ವಿಶೇಷಚೇತನರಿಗೆ ಆಸರೆಯಾದ ‘ಜನಮಂಗಲ’ ಉಚಿತ ಸಲಕರಣೆ

>ಡಾ| ಎಲ್.ಎಚ್.ಮಂಜುನಾಥ್,
ಕಾರ್ಯನಿರ್ವಾಹಕ ನಿರ್ದೇಶಕರು

ಅಂಗವೈಕಲ್ಯತೆ ಶಾಪವಲ್ಲ, ಅಂಗವಿಕಲರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಿ ಎಲ್ಲರಂತೆ ಸಂತೋಷದ ಬದುಕನ್ನು ಬಾಳಲು ಅವಕಾಶ ಕಲ್ಪಿಸುವುದು ಸರಕಾರ ಹಾಗೂ ಸಮಾಜದ ಜವಾಬ್ದಾರಿ. ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 10.41 ಲಕ್ಷ ಅಂಗವಿಕಲರಿದ್ದಾರೆ ಎಂಬ ಮಾಹಿತಿಯಿದೆ. ಕುಟುಂಬವೊಂದರಲ್ಲಿ ಒಬ್ಬ ಅಂಗವಿಕಲನಿದ್ದರೆ ಆ ಕುಟುಂಬ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿರುತ್ತದೆ. ಅಂಗವಿಕಲರನ್ನು ಪ್ರತಿನಿತ್ಯ ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕಿದೆ. ನಿತ್ಯ ದುಡಿದು ತಿನ್ನುವ ಕುಟುಂಬವಾದರೂ ಇವರ  ಯೋಗಕ್ಷೇಮ ನೋಡಿಕೊಳ್ಳಲು ಓರ್ವರು ಮನೆಯಲ್ಲಿಯೇ ಇರಬೇಕಾಗುತ್ತದೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ಬದುಕಂತೂ ದುರಂತಮಯವಾದುದು. ಇವರನ್ನು ನೋಡಿಕೊಳ್ಳುವುದು ಮನೆಯಲ್ಲಿ ಓರ್ವರಿಂದ ಸಾಧ್ಯವಾಗದು. ಊಟೋಪಚಾರ, ನಿತ್ಯಕರ್ಮಗಳನ್ನು ನೋಡಿಕೊಳ್ಳುವುದಕ್ಕಾಗಿ ಕನಿಷ್ಠ ಎರಡು ಮಂದಿ ಬೇಕಾಗುತ್ತದೆ.

ಬಹಳಷ್ಟು ಅಂಗವಿಕಲರು, ಅಂಗವಿಕಲರ ಪೋಷಕರು ತಮ್ಮೊಳಗೆ ತಾವೇ ಕೊರಗುತ್ತಾ ಖಿನ್ನತೆಗೊಳಗಾಗುತ್ತಾರೆ. ಇವರಲ್ಲಿ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಬದುಕುವ ಆತ್ಮವಿಶ್ವಾಸವನ್ನು  ತುಂಬುವ ಅಗತ್ಯತೆ ಇದೆ. ಇದಕ್ಕೆ ಸಮಾಜದ ಸಹಾಯಹಸ್ತದ ನೆರವಿನ ಅನಿವಾರ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಶ್ರೀ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು 2019ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸವಿನೆನಪಿಗಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಾರಂಭಿಸಿರುವ ಕಾರ್ಯಕ್ರಮ ‘ಜನಮಂಗಲ’. ಈ ಕಾರ್ಯಕ್ರಮದಡಿ ನಡೆಯಲು ಸಾಧ್ಯವಾಗದ, ಮಲಗಿದಲ್ಲೇ ಇರುವ ಅಶಕ್ತರ ಮನೆಬಾಗಿಲಿಗೆ ವಿವಿಧ ಸಲಕರಣೆಗಳನ್ನು ತಲುಪಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಇದುವರೆಗೆ ರಾಜ್ಯದಾದ್ಯಂತ ಸುಮಾರು 10,042 ವಿಶೇಷಚೇತನರಿಗೆ ವಿವಿಧ ರೀತಿಯ ಸಲಕರಣೆಗಳನ್ನು ಉಚಿತವಾಗಿ ಒದಗಿಸಲಾಗಿದೆ. ಇದಕ್ಕಾಗಿ ರೂ. 2.30 ಕೋಟಿ ಮೊತ್ತವನ್ನು ವಿನಿಯೋಗಿಸಲಾಗಿದೆ.

ಅಂಗವಿಕಲರಿಗೆ ನೀಡುವ ಇಂತಹ ಸಲಕರಣೆಗಳಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಕನಿಷ್ಠ ಸಹಾಯವಾದರೂ ಆದಲ್ಲಿ ಅವರ ಬದುಕಿನಲ್ಲಿಯೂ ಬದಲಾವಣೆಯನ್ನು ತರಲು ಸಾಧ್ಯವಾದೀತು ಎಂಬುದು ಶ್ರೀ ಹೆಗ್ಗಡೆ ದಂಪತಿಗಳ ಆಶಯ. ಈ ಕಾರ್ಯಕ್ರಮಕ್ಕಾಗಿ ಪ್ರಸ್ತುತ ವರ್ಷವೂ ರೂ. 1.50 ಕೋಟಿ ಮೊತ್ತವನ್ನು ಮೀಸಲಾಗಿಡಲಾಗಿದೆ.

 ಅರ್ಹ ವಿಶೇಷಚೇತನರು ಈ ಸೌಲಭ್ಯವನ್ನು ಪಡೆಯುವ ಕುರಿತು ತಮ್ಮ ಊರಿನಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಯಾರ್ಯಾರಿಗೆ ಏನೇನು ಸಲಕರಣೆ ಲಭ್ಯ?

ಹಾಸಿಗೆ ಹಿಡಿದು ಮಲಗಿದ್ದಲ್ಲಿಯೇ ಇರುವವರಿಗೆ ಹುಣ್ಣು ಆಗದಂತೆ ವಾಟರ್ ಬೆಡ್, ಅಂಗವಿಕಲರಾಗಿದ್ದು ನಡೆದಾಡಲು ಸಾಧ್ಯವಿಲ್ಲದವರಿಗೆ ಗಾಲಿಕುರ್ಚಿ, ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಕಮೋಡ್ ವೀಲ್ ಚೇರ್, ಅಪಘಾತಗಳಾಗಿ ವಿಕಲಾಂಗರಾಗಿ ಓಡಾಡುತ್ತಿರುವವರಿಗೆ ಕಂಕುಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಊರುಗೋಲು, ವಯಸ್ಕರಾಗಿದ್ದು ಸ್ಟ್ರೋಕ್, ಪ್ಯಾರಾಲಿಸಿಸ್ ಮುಂತಾದ ರೋಗಗಳಿಗೆ ತುತ್ತಾಗಿರುವವರಿಗೆ ನಡೆದಾಡಲು ಅನುಕೂಲವಾಗುವಂತೆ ಯು ಶೇಪ್ ವಾಕರ್, ವಯಸ್ಸಾಗಿದ್ದು ಯಾ ಅಪಘಾತವಾಗಿ ನಡೆದಾಡಲು ಕಷ್ಟವಾದವರಿಗೆ ನಡೆದಾಡಲು ಅನುಕೂಲವಾಗುವಂತೆ ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್ ಹಾಗೂ ತ್ರಿ ಲೆಗ್ ವಾಕಿಂಗ್ ಸ್ಟಿಕ್ ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.

Facebook
Twitter
WhatsApp
LinkedIn
Telegram

One Response

Leave a Reply

Your email address will not be published. Required fields are marked *

Latest Updates