ವಯಸ್ಸಾದವರು, ದಿವ್ಯಾಂಗರಿಗೆ ಮನೆಯಿಂದಲೇ ಮತದಾನದ ಅವಕಾಶ
ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪ್ರಯೋಗ
ರಾಜೀವ ಹೆಗಡೆ
ಕೊರೊನಾ ಕಾಲಘಟ್ಟದ ಬಳಿಕ ಜಗತ್ತಿನಾದ್ಯಂತ ‘ವರ್ಕ್ ಫ್ರಮ್ ಹೋಮ್’ ಎಂದರೆ ಮನೆಯಿಂದಲೇ ಕೆಲಸ ಎನ್ನುವ ಪರಂಪರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಆರಂಭವಾಯಿತು. ಕೋವಿಡ್-19 ಮಹಾಮಾರಿಯು ಜಗತ್ತಿನಲ್ಲಿ ಜನರಿಗೆ ಉಸಿರು ಕಟ್ಟುವಂತೆ ಮಾಡಿತು. ಆದರೆ ಅದರಿಂದ ಒಂದಿಷ್ಟು ಒಳಿತುಗಳು ಕೂಡ ಆದವು.
ಕೋಟ್ಯಂತರ ಉದ್ಯೋಗಿಗಳಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿತು. ಸಾವಿರಾರು ಕಂಪೆನಿಗಳು ಕಚೇರಿಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನು ನಿಲ್ಲಿಸಿ, ಮನೆಯಿಂದಲೇ ಪರಿಣಾಮಕಾರಿ ಕೆಲಸ ತೆಗೆದುಕೊಳ್ಳುವ ಚಾಣಾಕ್ಷತೆಯನ್ನು ತೋರಿದವು. ಈಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೂಡ ಮತದಾನದಲ್ಲಿ ಇಂತಹದೊoದು ಪ್ರಯೋಗಕ್ಕೆ ಮುಂದಾಗಿದೆ.
ರಾಜ್ಯದಲ್ಲಿರುವ 12.15 ಲಕ್ಷ 80 ವರ್ಷ ದಾಟಿದ ಹಾಗೂ 5.55 ಲಕ್ಷ ದಿವ್ಯಾಂಗ ಮತದಾರರಿಗಾಗಿ ಮತದಾನಕ್ಕೆ ‘ವೋಟ್ ಫ್ರಮ್ ಹೋಮ್’ (ಮನೆಯಿಂದಲೇ ಮತದಾನ) ಎಂಬ ಹೆಸರಿನಲ್ಲಿ ಅವಕಾಶವೊಂದನ್ನು ಮಾಡಿಕೊಡಲಾಗುತ್ತಿದೆ. ಪ್ರಜಾಪ್ರಭುತ್ವದ ಚುನಾವಣೆಯೇ ದೊಡ್ಡ ಉತ್ಸವ. ಈ ಜಾತ್ರೆಯಲ್ಲಿ ವಯಸ್ಸು ಹಾಗೂ ದೈಹಿಕ ಕಾರಣದಿಂದ ಯಾರೊಬ್ಬರೂ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂಬ ಸದುದ್ದೇಶದಿಂದ ಚುನಾವಣಾ ಆಯೋಗ ಈ ಕೆಲಸಕ್ಕೆ ಮುಂದಾಗಿದೆ.
ಹಿರಿಯರು ಹಾಗೂ ದಿವ್ಯಾಂಗ ಮತದಾರರಿಗೆ ಅನುವು ಮಾಡಿಕೊಡಲು ರಾಜ್ಯದ ಪ್ರತಿಯೊಂದು ಮತಗಟ್ಟೆಯಲ್ಲೂ ವ್ಹೀಲ್ ಚೇರ್‌ನ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಹಿಂದೆಯೂ ಅದನ್ನು ಮಾಡಲಾಗುತ್ತಿತ್ತು. ಆದಾಗ್ಯೂ ಮತಗಟ್ಟೆಯವರೆಗೆ ಅವರನ್ನು ಕರೆ ತರುವುದು ಮನೆಯಲ್ಲಿನ ಸದಸ್ಯರಿಗೆ ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಮೊದಲ ಬಾರಿಗೆ ‘ಮನೆಯಿಂದಲೇ ಮತದಾನ’ ಅವಕಾಶ ಮಾಡಿಕೊಡಲಾಗುತ್ತಿದೆ.
ಈ ಹಿಂದೆ 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಯೋಗವನ್ನು ಮೊದಲ ಬಾರಿಗೆ ಮಾಡಲಾಗಿತ್ತು. ಅದಾದ ಬಳಿಕ ನಡೆದ ಎಲ್ಲ ವಿಧಾನಸಭೆ ಚುನಾವಣೆಯಲ್ಲೂ ಈ ಪ್ರಯೋಗ ಯಶಸ್ಸು ಕಂಡಿದೆ.
ಮನೆಯಿoದ ಮತದಾನ ಹೇಗೆ?
80 ವರ್ಷ ದಾಟಿದವರು ಹಾಗೂ ದಿವ್ಯಾಂಗ ಮತದಾರರಿಗೆ ಮಾತ್ರ ಮನೆಯಿಂದ ಮತದಾನ ಮಾಡಲು ಅವಕಾಶ ಒದಗಿಸಿಕೊಡಲಾಗುತ್ತಿದೆ. ಮತಗಟ್ಟೆಯಲ್ಲಿ ಮಾಡಲಾಗುವ ಎಲ್ಲ ಗೌಪ್ಯತೆ ಹಾಗೂ ಪ್ರಕ್ರಿಯೆಗಳನ್ನು ಇಲ್ಲಿಯೂ ಪಾಲಿಸಲಾಗುತ್ತದೆ. ಅದರರ್ಥ ಚುನಾವಣೆ ಆಯೋಗದ ವ್ಯವಸ್ಥೆಯು ಹಿರಿಯರ ಮನೆಗೆ ಬಂದು ಅವರನ್ನು ಗೌರವಿಸುವ ಕೆಲಸ ಮಾಡುತ್ತದೆ. ಹಾಗೆಯೇ ದಿವ್ಯಾಂಗರನ್ನು ಸಂತೈಸುವ ಕಾಯಕ ಮಾಡುತ್ತದೆ.
ಈ ಮೂಲಕ ಈ ದೇಶದಲ್ಲಿನ ಪ್ರತಿಯೊಬ್ಬ ನಾಗರಿಕನ ಮತ ಎಷ್ಟು ಮುಖ್ಯ ಎನ್ನುವ ಸಂದೇಶವನ್ನು ಸಾರಲಾಗುತ್ತದೆ.
ಆಯೋಗದ ಉದ್ದೇಶ ಏನು?
ಮನೆಯಿಂದಲೇ ಮತದಾನ ಎನ್ನುವುದನ್ನು ಪ್ರಚಾರಕ್ಕಾಗಿ ಚುನಾವಣೆ ಆಯೋಗ ಆರಂಭಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತಕ್ಕೂ ಬೆಲೆ ಇರುತ್ತದೆ. ಕಡ್ಡಾಯ ಮತದಾನ ಕಾನೂನಿನ ಅಲಭ್ಯತೆಯ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಿಯೇ ಮತದಾನ ಮಾಡಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಯಾವುದೇ ಅಸಹಾಯಕತೆಯಿಂದ ಮತದಾರರು ಪ್ರಜಾಪ್ರಭುತ್ವದ ಉತ್ಸವದಿಂದ ಹಿಂದೆ ಉಳಿಯಬಾರದು ಎನ್ನುವ ಕಾಳಜಿಯಿಂದ ಮತದಾರರ ಮನೆಗೆ ಚುನಾವಣೆ ಆಯೋಗ ಹೆಜ್ಜೆ ಇರಿಸುತ್ತಿದೆ. ಈ ಕ್ರಮವು ಉಳಿದ ಮತದಾರರಿಗೆ ಮತದಾನ ಮಾಡಲು ಪ್ರೇರಣೆ ಆಗಬೇಕು ಎನ್ನುವುದು ಉದ್ದೇಶವಾಗಿದೆ.
ಈ ವ್ಯವಸ್ಥೆ ಕಡ್ಡಾಯವಲ್ಲ!
೮೦ ವರ್ಷ ದಾಟಿದ ಹಾಗೂ ದಿವ್ಯಾಂಗರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಕಡ್ಡಾಯವಲ್ಲ. ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎನ್ನುವ ಅತಿ ಉತ್ಸಾಹ ಹೊಂದಿದವರು ಖಂಡಿತ ಆ ಕೆಲಸ ಮಾಡಬಹುದು. ಅದಕ್ಕೆ ಪೂರಕವಾದ
ಎಲ್ಲ ವ್ಯವಸ್ಥೆಯನ್ನು ಕೂಡ ಪ್ರತಿ ಮತಗಟ್ಟೆಯಲ್ಲಿ ಚುನಾವಣೆ ಆಯೋಗ ಮಾಡಿರುತ್ತದೆ. ಆದರೆ ಮತಗಟ್ಟೆಗೆ ಹೋಗಲು ಅಸಾಧ್ಯ ಎಂದುಕೊoಡವರು ಚುನಾವಣಾ ಆಯೋಗ ಕಲ್ಪಿಸಿದ ವೋಟ್ ಫ್ರಮ್ ಹೋಮ್ ಎಂಬ ಸೌಲಭ್ಯವನ್ನು ಪಡೆಯಬಹುದಾಗಿದೆ.
ಮತದಾನ ಪ್ರಕ್ರಿಯೆ ಹೇಗೆ?
*ಚುನಾವಣೆ ಆಯೋಗದ ವೆಬ್‌ಸೈಟ್, ವೋಟರ್ ಹೆಲ್ಪ್ಲೈನ್ ಅಥವಾ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
*ಸ್ಥಳೀಯ ಮತಗಟ್ಟೆ ಮಟ್ಟದ ಚುನಾವಣಾಧಿಕಾರಿಗಳ ಕಚೇರಿಗಳಲ್ಲೂ ನೋಂದಣಿ ಮಾಡಿಸಲು ಅವಕಾಶವಿದೆ.
* ನೋಂದಣಿ ಮಾಡಿಸಿಕೊಂಡ ಮತದಾರರ ಮನೆಗೆ ಚುನಾವಣೆ ಆಯೋಗದ ಅಧಿಕಾರಿಗಳು ಸೂಕ್ತ ಪೊಲೀಸ್ ಭದ್ರತೆಯಲ್ಲಿ ಅಂಚೆ ಮತಚೀಟಿ ರವಾನೆ ಮಾಡುತ್ತಾರೆ.
*ಮನೆಯಲ್ಲೆ ಗೌಪ್ಯ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.
*ಮತದಾನ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
*ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಾಗಿ ರಾಜಕೀಯ ಪಕ್ಷಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ.
* ಹೀಗಾಗಿ ಮತದಾನದ ಸಂದರ್ಭದಲ್ಲಿ ಅಧಿಕಾರಿಗಳ ಜೊತೆಗೆ ಎಲ್ಲ ಪಕ್ಷಗಳ ಏಜೆಂಟ್‌ಗಳು ಕೂಡ ಇರುತ್ತಾರೆ.