ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಮನುಷ್ಯನಿಗೆ ಎಷ್ಟೇ ಸೌಕರ್ಯಗಳಿದ್ದರೂ ಒಂದಲ್ಲ ಒಂದು ಚಿಂತೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸಂಸಾರದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳು, ಅವಶ್ಯಕತೆಗಳು, ಪ್ರೀತಿ – ಪ್ರೇಮ ಮುಂತಾದ ಭಾವಗಳು ಚಿಂತೆಗೆ ಕಾರಣವಾಗುತ್ತವೆ. ಎಷ್ಟೋ ವೇಳೆ ದಾಂಪತ್ಯದಲ್ಲಿ, ತಂದೆ – ತಾಯಿ ಮತ್ತು ಮಕ್ಕಳ ಮಧ್ಯೆ, ವ್ಯವಹಾರದಲ್ಲಿ, ಆಪ್ತಸ್ನೇಹಿತರೊಂದಿಗೆ ಬರುವಂತಹ ಸಣ್ಣಪುಟ್ಟ ಮನಸ್ತಾಪಗಳು ಮತ್ತು ತಪ್ಪು ಗ್ರಹಿಕೆಗಳೂ ಚಿಂತೆಗೆ ಕಾರಣವಾಗುತ್ತವೆ ಮತ್ತು ದುಃಖಕ್ಕೂ ಇವೇ ಮೂಲವಾಗಬಹುದು. ಇದರಿಂದ ಜನರು ಕೊರಗಲು ಪ್ರಾರಂಭಿಸುತ್ತಾರೆ. ಹಾಗಾಗಿ ಚಿಂತೆಯನ್ನು ಸ್ವೀಕರಿಸುವುದು ಬಹುದೊಡ್ಡ ಸವಾಲಿನ ಕೆಲಸವಾಗಿದೆ.
ಕ್ಷೇತ್ರದ ಬೀಡಿಗೆ ಬಂದ ಕೆಲವರು ಸಾಂಸಾರಿಕವಾದ ವಿಷಯಗಳನ್ನು ನನ್ನಲ್ಲಿ ಹೇಳುತ್ತಾರೆ. ‘ನಾವು ಬಂಧುಗಳು ಜೊತೆಯಾಗಿ ಇದ್ದೇವೆ. ಆದರೆ ಯಾರೋ ಒಬ್ಬ ಮನೆಯಲ್ಲಿ ಸರಿಯಾಗಿ ವರ್ತಿಸುತ್ತಿಲ್ಲ. ಕೆಲಸಗಳಲ್ಲಿ ಕೈಜೋಡಿಸುವುದಿಲ್ಲ. ಅವನಲ್ಲಿ ಪ್ರೀತಿ, ಪ್ರೇಮ, ವಿಶ್ವಾಸಗಳೆಂಬ ಅಂಶವೇ ಇಲ್ಲ. ಹಾಗಾಗಿ ಮನೆಯಲ್ಲಿ ದಿನವೂ ನೋವನ್ನು ಉಣ್ಣುತ್ತಿದ್ದೇವೆ’ ಎಂದು ಹೇಳುತ್ತಾರೆ. ತಂದೆ – ತಾಯಿಗಳು ಮಕ್ಕಳಿಗೆ ಆಸ್ತಿಯಲ್ಲಿ ಪಾಲುಗಳನ್ನು ಮಾಡಿಕೊಡುವಾಗ ಸಣ್ಣಪುಟ್ಟ ಹಂತದ ವ್ಯತ್ಯಾಸಗಳು ಕೂಡಾ ಜೀವನದ ಹೋರಾಟಕ್ಕೆ ಕಾರಣವಾಗಬಹುದು. ಉದಾಹರಣೆಗೆ, ನಾಲ್ಕಾರು ಮಕ್ಕಳು ಹತ್ತು, ಹದಿನೈದು ಎಕರೆ ಭೂಮಿಯನ್ನು ಹಂಚಿಕೊoಡು ಅನುಭವಿಸುವಾಗ ಆ ಭೂಮಿಯನ್ನು ಕೇಕ್ ತುಂಡರಿಸಿದ ಹಾಗೆ ಸಮನಾಗಿ ತುಂಡರಿಸಲು ಸಾಧ್ಯವಾಗುವುದಿಲ್ಲ. ಸ್ವಾಭಾವಿಕವಾಗಿ ಭೂಮಿಯ ಫಲವತ್ತತೆಯನ್ನು ಆಧಾರವಾಗಿರಿಸಿಕೊಂಡು ವಿಭಾಗಿಸಿದಾಗ ಒಬ್ಬರಿಗೆ ಒಂದೆರಡು ಗುಂಟೆ ಜಾಗ ಹೆಚ್ಚಿಗೆ ಹೋಗಬಹುದು ಅಥವಾ ಕಡಿಮೆಯಾಗಬಹುದು. ಅಥವಾ ಭೂಮಿಯ ಆಕಾರದ ಕಾರಣವಾಗಿಯೂ ಹಂಚುವಾಗ ಸ್ವಲ್ಪ ವ್ಯತ್ಯಾಸ ಆಗಬಹುದು. ಆದರೆ ಇಂಥ ವಿಷಯವನ್ನೇ ಮೂಲ ಸಮಸ್ಯೆಯಾಗಿ ಹಿಡಿದುಕೊಂಡು ಅನೇಕ ಕಡೆ ಜಗಳವಾಗುತ್ತವೆ. ಕೆಲವು ಸಲ ಕೊಲೆಯಲ್ಲಿಯೂ ಅಂತ್ಯವಾಗುತ್ತದೆ. ಕೋರ್ಟ್, ಕಚೇರಿಗಳಿಗೆ ಅಲೆದಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ರೂಪಾಯಿಯ ಆಸ್ತಿಯನ್ನು ಉಳಿಸಿಕೊಂಡವರಿದ್ದಾರೆ. ಆಸ್ತಿಯ ತಾರತಮ್ಯಕ್ಕಿಂತ ನಮ್ಮ ಬಂಧುತ್ವ ದೊಡ್ಡದು ಎಂದು ಸ್ವಲ್ಪ ಹೃದಯ ವೈಶಾಲ್ಯವನ್ನು ಬೆಳೆಸಿಕೊಂಡಿದ್ದರೆ, ಆಸ್ತಿಗಿಂತಲೂ ಪ್ರಮುಖವಾದ ಬಾಂಧವ್ಯ ಉಳಿಯಬಹುದಿತ್ತು. ಮುಖ್ಯವಾಗಿ ಆರೋಗ್ಯವನ್ನು ಉಳಿಸಿಕೊಳ್ಳಬಹುದಾಗಿತ್ತು.
ಮಕ್ಕಳಿಗೆ ಮದುವೆಯಾಗಲಿಲ್ಲ ಎಂಬoಥ ದುಃಖ ಎಲ್ಲರಲ್ಲೂ ಕಂಡುಬರುವ ಸಹಜವಾದ ಸ್ವಭಾವ. ಆದರೆ ಆ ಪ್ರಯತ್ನಕ್ಕೆ ಎರಡೇ ದಾರಿ. ಒಂದು ಲೌಕಿಕ. ಇನ್ನೊಂದು ಪರಲೌಕಿಕ. ಗಂಡನ್ನು ಅಥವಾ ಹೆಣ್ಣನ್ನು ಹುಡುಕುವುದು ಒಂದು ಕಾರ್ಯವಾದರೆ, ದೇವತಾ ಪ್ರಾರ್ಥನೆ ಅದನ್ನು ಅನುಕೂಲವಾಗುವಂತೆ ಮಾಡಿಸಿಕೊಡುತ್ತದೆ. ಜಾತಕ ಮೊದಲಾದವುಗಳಲ್ಲಿ ದೋಷವಿದ್ದರೆ ಆ ದೋಷವನ್ನು ಪರಿಮಾರ್ಜನೆ ಮಾಡಿಕೊಂಡು, ಅವರಿಗೆ ಕಂಕಣಬಲ ಕೂಡಿ ಬರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಮಕ್ಕಳ ಮದುವೆಯ ಚಿಂತೆ ಹೆತ್ತವರಲ್ಲಿ ಆರೋಗ್ಯ ಹಾನಿಗೂ ಕಾರಣವಾಗುತ್ತದೆ. ಇದೇ ವಿಷಯದ ಬಗ್ಗೆ ದಿನವೂ ಪ್ರಾರ್ಥನೆ ಮಾಡಿ, ದೇವರ ಮೇಲೆ ಭಾರ ಹಾಕಿ, ನಮ್ಮ ಪ್ರಯತ್ನ ನಾವು ಮಾಡುತ್ತ ಹೋದರೆ ಅಥವಾ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂಬ ಭಾವನೆ ಸೃಷ್ಟಿಸಿಕೊಂಡರೆ ಆರೋಗ್ಯ ಉಳಿಯುತ್ತದೆ.
ಕ್ಷೇತ್ರಕ್ಕೆ ಬಂದ ಭಕ್ತರೊಬ್ಬರು ಹೇಳಿಕೊಂಡರು ; ‘ನಾನು ಒಂದು ಮನೆ ಖರೀದಿಗಾಗಿ ಒಬ್ಬರಿಗೆ ಮುಂಗಡ ಹಣ ಕೊಟ್ಟಿದ್ದೆ. ಅವರು ಪರಿಚಿತರು ಹಾಗೂ ಸ್ನೇಹಿತರು. ಈಗ ಅವರು ಒಪ್ಪಂದದoತೆ ಮನೆಯನ್ನು ಬಿಡುತ್ತಿಲ್ಲ. ಹಣವನ್ನೂ ಹಿಂತಿರುಗಿಸುತ್ತಿಲ್ಲ. ಕೋರ್ಟ್, ಕಚೇರಿ, ವಕೀಲರು ಹೀಗೆ ಅಲೆದು ನನ್ನಲ್ಲಿರುವ ಅಲ್ಪಸ್ವಲ್ಪ ಹಣವೂ ಖರ್ಚಾಗಿ ಹೋಗಿದೆ. ಇದಕ್ಕೆ ಏನಾದರೂ ಪರಿಹಾರ ದೊರಕಿಸಿಕೊಡಿ’ ಎಂದು ನಿವೇದಿಸಿಕೊಂಡರು.
ಇಲ್ಲಿ ವಿಶ್ವಾಸಾರ್ಹತೆಯ ಪ್ರಶ್ನೆ ಬರುತ್ತದೆ. ಇವರು ಯಾರನ್ನು ನಂಬಿ ಮುಂಗಡ ಹಣ ಕೊಟ್ಟಿದ್ದಾರೋ ಆತ ಮೋಸ ಮಾಡಿದ ಎಂದಾಗ ಹಣದ ಲೆಕ್ಕಾಚಾರದಲ್ಲಿಯೂ ಮೋಸವಾಗಿದೆ. ಅದಕ್ಕಿಂತ ಮುಖ್ಯವಾಗಿ ತಾನು ಅವಮಾನಿತನಾಗಿದ್ದೇನೆ, ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ನೊಂದುಕೊoಡಿದ್ದಾರೆ. ಅವರಿಗೆ ಆರ್ಥಿಕ ಸಮಸ್ಯೆಗಳಿಗಿಂತ, ಸಾಮಾಜಿಕವಾಗಿ ಅವರ ಸ್ಥಾನಮಾನಕ್ಕೆ ಕುಂದು ಬರುವ ಹಾಗೆ ವಿಶ್ವಾಸದ್ರೋಹ ಮಾಡಿದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಮನಸ್ಸಿಗೆ ಚಿಂತೆ ತರುವಂತಹ ವಿಷಯಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಮನಸ್ಸು ಸಮಸ್ಥಿತಿಯಲ್ಲಿದ್ದಾಗ ಎಂಥದ್ದೇ ಸಮಸ್ಯೆ, ಆಪತ್ತು, ದುಃಖವನ್ನೂ ಜಾಣ್ಮೆಯಿಂದ ದಾಟಬಹುದು. ಸಣ್ಣಪುಟ್ಟ ವಿಷಯಗಳನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಬೇರೆ ಕೆಲಸಗಳಲ್ಲಿ ನಮ್ಮನ್ನು ಹರಿಯಬಿಟ್ಟಾಗ ಖಂಡಿತವಾಗಿಯೂ ಮನಸ್ಸು ಇಂಥ ಸಣ್ಣಪುಟ್ಟ ಆಘಾತಗಳನ್ನು ತಡೆದುಕೊಳ್ಳಲು ಸಮರ್ಥವಾಗುತ್ತದೆ. ಸಮಸ್ಯೆಗಳು ಎಲ್ಲರಿಗೂ ಇರುತ್ತವೆ, ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಧರ್ಮವನ್ನು ಎಲ್ಲರೂ ರೂಢಿಸಿಕೊಳ್ಳಬೇಕು.