ಕೀಲಿ ಕೈ ಎಂಬ ಕಾವಲುಗಾರ

ಕೀಲಿ ಕೈ ಎಂಬುದು ನಮಗೆಲ್ಲರಿಗೂ ಚಿರಪರಿಚಿತವಾದದ್ದು. ತಿಜೋರಿ, ಪೆಟ್ಟಿಗೆ, ಕೋಟೆ – ಕೊತ್ತಲಗಳಿಗೆ ಹೀಗೆ ಹಾಕಿದ ಬೀಗವನ್ನು ತೆರೆಯಲು ‘ಕೀಲಿ ಕೈ’ ಬೇಕೇ ಬೇಕು. ಅದರಲ್ಲೂ ಆಯಾ ಬೀಗಗಳ ಕೀಲಿ ಕೈ ಬೇಕೇ ಹೊರತು ಬೇರೆ ಯಾವುದೇ ಕೀಲಿ ಕೈಯಿಂದ ಸಾಧ್ಯವಿಲ್ಲ. ಬೆರಳಿನಷ್ಟು ಚಿಕ್ಕ ಗಾತ್ರದಿಂದ ಹಿಡಿದು ಬೃಹತ್ ಗಾತ್ರದವರೆಗಿನ ನಾನಾ ವಿನ್ಯಾಸದ ಬೀಗಗಳು ಹಾಗೂ ಅದರ ಕೀಲಿ ಕೈಗಳನ್ನು ನಾವು ಕಾಣಬಹುದು.
ಹಿಂದಿನ ಕಾಲದಲ್ಲಿ ಎಲ್ಲಾ ಬೀಗ ಮತ್ತು ಕೀಗಳನ್ನು ಕೈಯಿಂದಲೇ ತಯಾರಿಸಲಾಗುತ್ತಿತ್ತು. ಪ್ರತಿಯೊಂದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿತ್ತು. ಕೆಲವೊಂದನ್ನು ಕೀ ಹಾಕಿ ತಿರುವಿದರೆ ಮಾತ್ರ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಬೀಗದಲ್ಲಿರುವ ನಿರ್ದಿಷ್ಟ ಗುಂಡಿ, ಗುರುತು ಅಥವಾ ಚಿಹ್ನೆಯನ್ನು ಒತ್ತಿ ಬೀಗದ ಕೀಯನ್ನು ತಿರುಗಿಸಬೇಕಿತ್ತು. ಕೆಲವೊಂದು ಬೀಗಗಳ ವಿನ್ಯಾಸಗಳು ಅತ್ಯಂತ ಸೂಕ್ಷ್ಮವಾಗಿತ್ತು. ಕೀಲಿ ಎಲ್ಲಿ ಹಾಕುವುದೆಂದೇ ಗೊತ್ತಾಗುತ್ತಿರಲಿಲ್ಲ. ಅಂತಹ ಬೀಗಗಳನ್ನು ವಿನ್ಯಾಸ ಮಾಡುವ ಗ್ರಾಮೀಣ ಪ್ರತಿಭೆಗಳು ನಮ್ಮಲ್ಲಿ ಸಾಕಷ್ಟಿದ್ದವು. ಆದರೆ ಕಂಪನಿಗಳು ಇತ್ತೀಚೆಗೆ ಬೃಹತ್ ಮಟ್ಟದಲ್ಲಿ ಬೀಗ ತಯಾರು ಮಾಡಲು ಆರಂಭಿಸಿದ ಬಳಿಕ ಸಾಂಪ್ರದಾಯಿಕವಾಗಿ ತಯಾರಾಗುವ ಬೀಗಗಳಿಗೆ ಮನ್ನಣೆ ಕಡಿಮೆಯಾಗಿ ಕಂಪನಿ ಬೀಗಗಳೇ ಪ್ರಖ್ಯಾತಿಯನ್ನು ಪಡೆದುಕೊಂಡವು. ಕ್ಷೇತ್ರದ ‘ಮಂಜೂಷಾ ವಸ್ತುಸಂಗ್ರಹಾಲಯ’ದಲ್ಲಿ ವಿವಿಧ ತರಹದ ಬೀಗಗಳನ್ನು ನೋಡಬಹುದಾಗಿದೆ.
ಪ್ರಾಚೀನ ಅಸ್ಸೀರಿಯಾದ ರಾಜಧಾನಿ ನಿನುವಾದಲ್ಲಿ ಬೀಗ ಮತ್ತು ಕೀಗಳು ಪತ್ತೆಯಾಗಿವೆ. ಕ್ರಿ.ಪೂ. 4000ರಲ್ಲಿ ಬೀಗದ ಕೀಗಳು ಈಜಿಪ್ಟ್‍ನಲ್ಲಿ ಬಳಕೆಯಲ್ಲಿದ್ದವು. ಬೀಗ ಮತ್ತು ಕೀಯನ್ನು ಮರದಿಂದ ಮಾಡಲಾಗಿತ್ತು. ಕ್ರಿ.ಪೂ. 1000ರಲ್ಲಿ ಗ್ರೀಸ್ ಮತ್ತು ರೋಮ್‍ನಲ್ಲಿ ಸುಧಾರಿತ ಬೀಗದ ಕೀಗಳು ರೂಪುಗೊಂಡಿದ್ದವು ಎಂಬ ದಾಖಲೆ ಸಿಗುತ್ತದೆ.
ಬೀಗ ಮತ್ತು ಕೀಯದ್ದು ಅವಿನಾಭಾವ ಸಂಬಂಧವಾಗಿದೆ. ಬೀಗ ಅಥವಾ ಕೀಯಲ್ಲಿ ಯಾವುದಾದರೂ ಒಂದೂ ಇಲ್ಲದಿದ್ದರೂ ಇನ್ನೊಂದು ಪ್ರಯೋಜನಕ್ಕೆ ಬಾರದು. ಪ್ರಪಂಚದ ಯಾವುದೇ ಮೂಲೆಗೂ ಹೋದರೂ ವಿವಿಧ ರೀತಿಯ ಬೀಗ ಹಾಗೂ ಅದರ ಕೀಲಿ ಕೈಯನ್ನು ಕಾಣಬಹುದು. ಆದರೆ ಅಪವಾದ ಎಂಬಂತೆ ಪುಣೆಯ ಶನಿಸಿಂಗಣಾಪುರದಲ್ಲಿ ಯಾವುದೇ ಮನೆಗೂ ಬಾಗಿಲುಗಳೇ ಇಲ್ಲ. ಬಾಗಿಲುಗಳು ಇದ್ದರೆ ತಾನೇ ಬೀಗ ಹಾಕುವುದು. ಹಾಗಾಗಿ ಅಲ್ಲಿ ಮನೆ ಮಾತ್ರವಲ್ಲದೆ ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಪೊಲೀಸ್ ಠಾಣೆಗಳಲ್ಲೂ ಬಾಗಿಲು, ಬೀಗಗಳ ಬಳಕೆ ಇಲ್ಲವಾಗಿದೆ. ಎಲ್ಲರೂ ತಮ್ಮ ಹಣ, ಬಂಗಾರ, ಅಮೂಲ್ಯ ವಸ್ತುಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್‍ನಲ್ಲಿಡುತ್ತಾರೆ. ಆದರೆ ಜಗತ್ತಿನಲ್ಲಿ ಬೀಗ ಹಾಕದೇ ಇರುವ ಬ್ಯಾಂಕ್ ಅನ್ನು ಶನಿಸಿಂಗಣಾಪುರದಲ್ಲಿ ಮಾತ್ರ ಕಾಣಬಹುದು.
ಬಹುಶಃ ಬೀಗ ಬಳಕೆಯು ಆರಂಭದಲ್ಲಿ ಸಂಪತ್ತುಗಳನ್ನು ಸಂರಕ್ಷಿಸಲು ಬಳಕೆಗೆ ಬಂದಿರಬಹುದು. ಈಗ ಸಂಪತ್ತುಗಳ ರಕ್ಷಣೆ ಮಾತ್ರವಲ್ಲದೆ ಭದ್ರತೆ, ಮಾಹಿತಿ – ಗೌಪ್ಯತೆ ಕಾಪಾಡುವಿಕೆ ಹೀಗೆ ವಿವಿಧ ಕಾರಣಗಳಿಗಾಗಿ ವಿವಿಧ ರೀತಿಯ ಬೀಗಗಳು ಬಳಕೆಯಲ್ಲಿವೆ. ಪ್ರಾರಂಭದಲ್ಲಿ ಮರದಿಂದ ಬೀಗವನ್ನು ತಯಾರು ಮಾಡಲಾಗಿತ್ತಂತೆ. ಅಂದಿನಿಂದ ಇಂದಿನವರೆಗೂ ಬೀಗ ಮತ್ತು ಕೀಲಿ ಕೈಗಳ ಆಕಾರ ಮತ್ತು ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗೊಂಡಿವೆ. ಒಂದೆರಡು ದಶಕಗಳ ಹಿಂದೆ ಮನೆ ಬಾಗಿಲಿನ ಚಿಲಕಕ್ಕೆ ಬೀಗ ಹಾಕಿ ಹೋಗುತ್ತಿದ್ದರು. ಈಗಲೂ ಅಂತಹ ವ್ಯವಸ್ಥೆ ಇದೆ. ಆದರೆ ಈಗ ತಂತ್ರಜ್ಞಾನ ಬಳಕೆ ಹೆಚ್ಚಿರುವ ಸಂದರ್ಭದಲ್ಲಿ ಬಾಗಿಲಿಗೆ ಬೀಗವೂ ಬೇಡ, ಕೀಯೂ ಬೇಡ. ಬಾಗಿಲು ಹಾಕಿ ಮೊದಲೇ ಅಳವಡಿಸಲಾಗಿರುವ ಲಾಕ್‍ಸಿಸ್ಟಂಗೆ ಪಾಸ್‍ವರ್ಡ್ ಹಾಕಿದರೆ ಮುಗಿಯಿತು. ಮತ್ತೆ ತೆರೆಯಬೇಕೆಂದರೆ ಪಾಸ್‍ವರ್ಡ್ ಅನ್ನು ಹಾಕಬೇಕಾಗುತ್ತದೆ. ಒಂದು ವೇಳೆ ಕಳ್ಳರೇನಾದರೂ ಬಾಗಿಲು ಒಡೆಯಲು ಯತ್ನಿಸಿದರೂ ತಕ್ಷಣ ಮನೆ ಮಾಲಿಕನ ಮೊಬೈಲ್‍ಗೆ ಸಂದೇಶ ಹೋಗುವಂಥ ವ್ಯವಸ್ಥೆಯೂ ಇದೆ.
ಹಿಂದೆಲ್ಲ ಶಾನುಭೋಗರು, ಪಟೇಲರು, ಜಮೀನುದಾರರು ಊರಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಅವರ ಮನೆಯಲ್ಲಿ ಆಳು – ಕಾಳು, ಸಂಪತ್ತುಗಳು ಇದ್ದೇ ಇರುತ್ತಿತ್ತು. ಮನೆಯ ಯಜಮಾನರು ಊರ ವ್ಯವಹಾರಗಳನ್ನು ನೋಡಿಕೊಂಡರೆ ಮನೆಯ ಒಡತಿ ಮನೆಯ ಜವಾಬ್ದಾರಿಯನ್ನೆಲ್ಲ ಹೊತ್ತು ಎಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಮನೆಯಲ್ಲಿ ಇರುವ ಹಣ, ಬಂಗಾರ, ಆಸ್ತಿಪತ್ರ ಹೀಗೆ ಬೆಲೆಬಾಳುವ ವಸ್ತುಗಳನ್ನೆಲ್ಲ ಯಜಮಾನನು ಮಲಗುವ ಮಂಚದಲ್ಲಿ ಪೆಟ್ಟಿಗೆಯಂತಹ ತಿಜೋರಿಯಲ್ಲಿ ಇಡುತ್ತಿದ್ದರು. ಆ ತಿಜೋರಿ ಹೇಗಿರುತ್ತಿತ್ತು ಎಂದರೆ ಅದನ್ನು ತೆರೆದಾಗ ಮೇಲ್ನೋಟಕ್ಕೆ ಒಂದು ಕೋಣೆಯ ಸಣ್ಣ ಪೆಟ್ಟಿಗೆ ಎಂದು ಗೋಚರಿಸುತ್ತಿತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಪೆಟ್ಟಿಗೆಯೊಳಗೆ ಮರೆಮಾಚಲ್ಪಟ್ಟ ಹಲವಾರು ಕೋಣೆಗಳಿದ್ದು ಅವುಗಳನ್ನು ತೆರೆಯಲು ಸಣ್ಣ ಸಣ್ಣ ಕೀಲಿಗಳಿರುತ್ತಿದ್ದವು. ಮನೆಯಲ್ಲಿ ಇರುವ ಅಷ್ಟೊಂದು ಮಹಿಳೆಯರಲ್ಲಿ ಮನೆಯ ಒಡತಿಯನ್ನು ಯಾರೆಂದು ಬಹು ಸುಲಭವಾಗಿ ಕಂಡು ಹಿಡಿಯಬಹುದಾಗಿತ್ತು. ಯಾಕೆಂದರೆ ಅವರ ಸೊಂಟದಲ್ಲಿ ಬೀಗದ ಕೀಲಿ ಕೈಗಳ ಗೊಂಚಲೊಂದು ಸದಾ ನೇತಾಡುತ್ತಿತ್ತು. ಮನೆಯ ಮುಖ್ಯ ದ್ವಾರದಿಂದ ಹಿಡಿದು ತಿಜೋರಿಯವರೆಗಿನ ಕೀಲಿ ಕೈಗಳು ಅದರಲ್ಲಿರುತ್ತಿದ್ದವು. ಆ ಕೀಗೊಂಚಲನ್ನು ಅಪ್ಪಿ ತಪ್ಪಿಯೂ ಬೇರೆ ಕಡೆ ಇಡುತ್ತಿರಲಿಲ್ಲ. ಆಗಾಗ ಕೀ ಹುಡುಕಾಡುವುದು ಬೇಡ ಅಥವಾ ಬೇರೆ ಕಡೆ ಇಟ್ಟರೆ ಯಾರಾದರೂ ಅದನ್ನು ಒಯ್ಯಬಹುದು, ದುರ್ಬಳಕೆ ಮಾಡಬಹುದು ಎಂಬ ದೃಷ್ಟಿಯಿಂದ ಸದಾ ಸೊಂಟದಲ್ಲಿ ಸಿಕ್ಕಿಸುವ ಪರಿಪಾಠ ಬೆಳೆದಿರಬಹುದು. ಮನೆ ಉಸ್ತುವಾರಿ ನೋಡಿಕೊಳ್ಳಲು ತನಗೆ ಇನ್ನು ಆಗುವುದಿಲ್ಲ ಎಂದಾಗ ಮನೆಯ ಹಿರಿಯ ಸೊಸೆಗೋ ಅಥವಾ ಜವಾಬ್ದಾರಿಯುತ ಸೊಸೆಗೋ ಬೀಗದ ಕೀ ಗೊಂಚಲನ್ನು ನೀಡಿ ಜವಾಬ್ದಾರಿ ಹಸ್ತಾಂತರ ಮಾಡುತ್ತಿದ್ದರು. ನನ್ನ ತಾಯಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಬಳಿಯೂ ಸಣ್ಣ ಕೀಗೊಂಚಲಿತ್ತು. ಅದನ್ನವರು ಸದಾ ತಮ್ಮ ಸೊಂಟದಲ್ಲೇ ಸಿಕ್ಕಿಸಿಕೊಂಡಿರುತ್ತಿದ್ದರು. ಅದರಲ್ಲಿ ಮನೆಯ ಬೀರು, ಕೋಣೆ ಮುಂತಾದವುಗಳು ಕೀಲಿ ಕೈಗಳಿರುತ್ತಿದ್ದವು.
ಆಧುನಿಕ ಕಾಲಘಟ್ಟದಲ್ಲಿ ಬೀಗದ ಚಿತ್ರಣ ಮತ್ತು ಬಳಕೆಯೂ ಸಾಕಷ್ಟು ಬದಲಾಗಿದೆ. ಹಿಂದೆಲ್ಲ ಮನೆ, ಕಚೇರಿ, ಅಂಗಡಿಗಳಲ್ಲಿ ಮಾತ್ರವೇ ಬಳಕೆಯಲ್ಲಿದ್ದ ಬೀಗಗಳು ಇದೀಗ ಬಹುತೇಕ ದಿನ ಬಳಕೆ ವಸ್ತುಗಳಲ್ಲೂ ಅಳವಡಿಸಿಕೊಂಡಿದ್ದೇವೆ. ಇದೀಗ ಎಲ್ಲರ ಕೈಯಲ್ಲೂ ಮೊಬೈಲ್‍ಗಳಿರುವುದು ಸಾಮಾನ್ಯ ಸಂಗತಿ. ಅವುಗಳಲ್ಲಿ ಬಹುತೇಕರ ಮೊಬೈಲ್‍ಗಳಿಗೆ ಲಾಕ್ ಹಾಕಲಾಗಿರುತ್ತದೆ. ಮೊಬೈಲ್‍ನಲ್ಲಿರುವ ವಿಷಯ, ಕಡತ ಇತ್ಯಾದಿಗಳ ಸಂರಕ್ಷಣೆಗೆ ಲಾಕ್ ವ್ಯವಸ್ಥೆ ಅಗತ್ಯವೂ ಆಗಿದೆ. ಕಚೇರಿಗಳೂ ಸಾಕಷ್ಟು ಸುಧಾರಿತಗೊಂಡಿದ್ದು, ಪ್ರತಿಯೊಬ್ಬ ಸಿಬ್ಬಂದಿಗೂ ‘ಐಡಿ ಕಾರ್ಡ್’ ನೀಡಲಾಗುತ್ತದೆ. ಅದನ್ನು ಹೊಂದಿದ್ದರೆ ಮಾತ್ರ ಕಚೇರಿಯನ್ನು ಪ್ರವೇಶಿಸಲು ಸಾಧ್ಯ. ಇಲ್ಲದಿದ್ದರೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿ ಹೋಗಬೇಕಾಗುತ್ತದೆ. ಕಾರ್, ಬೈಕ್ ಮುಂತಾದ ವಾಹನಗಳಿಗೆ ಕೀಗಳಿವೆ. ಕೆಲವೊಂದು ವಿದ್ಯುತ್ ಯಂತ್ರಗಳಿಗೂ ಅವಘಡ ಸಂಭವಿಸಬಾರದೆಂದು ಲಾಕ್‍ಗಳನ್ನು ಜೋಡಿಸಲಾಗುತ್ತದೆ. ಅತ್ಯಾಧುನಿಕ ಕಾರ್‍ಗಳಲ್ಲಂತೂ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಲಾಕ್ ವ್ಯವಸ್ಥೆ ಮಾಡಲಾಗಿದೆ. ಸೀಟ್ ಬೆಲ್ಟ್ ಧರಿಸಿದರೆ ಮಾತ್ರ ವಾಹನ ಚಾಲೂ ಆಗುವುದು, ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಚೈಲ್ಡ್ ಲಾಕ್ ಸಿಸ್ಟಮ್ ಇವೆ. ಈಗೀಗ ಕೀಲಿ ಕೈ ಇದ್ದರೆ ಸಾಕು ಅದನ್ನು ಹಾಕಬೇಕೆಂದೇನೂ ಇಲ್ಲ. ಬ್ಲೂಟೂತ್ ಮೂಲಕ ಕಾರಿನ ಬಾಗಿಲು ತೆರೆಯುವ ತಂತ್ರಜ್ಞಾನ ಬೆಳೆದಿದೆ. ಕೀಲಿ ಕೈ ಹತ್ತಿರಕ್ಕೆ ಕೊಂಡೊಯ್ದರೆ ಸಾಕು ತನ್ನಿಂತಾನೇ ಬಾಗಿಲು ತೆರೆಯುವ ವ್ಯವಸ್ಥೆ, ಹಾಗೆಯೇ ರಿಮೋಟ್ ಮೂಲಕ ಆನ್ – ಆಫ್ ಮಾಡುವ ವ್ಯವಸ್ಥೆಗಳೂ ಇವೆ. ಟಿ.ವಿ.ಗಳಲ್ಲಿ ಪೇರೆಂಟ್ ಲಾಕ್ ಸಿಸ್ಟಮ್ ಎಂಬುದು ಇದೆ. ಅಂದರೆ ಅದರಲ್ಲಿ ಮಕ್ಕಳಿಗೆ ಬೇಡವಾದ, ಅತಿರೇಕ ಎನ್ನಿಸುವ ಚಾನೆಲ್‍ಗಳನ್ನು ಲಾಕ್ ಮಾಡಿ ಇಡಬಹುದಾಗಿದೆ.
‘ಒಬ್ಬರು ಚಾಪೆಯಡಿ ತೂರಿದರೆ ಇನ್ನೊಬ್ಬರು ರಂಗೋಲಿಯಡಿ ತೂರಿಕೊಳ್ಳುವವರು’ ಎಂಬಂತೆ ಮನೆಗೆ ಬೀಗ ಹಾಕಿದರೂ ಅದನ್ನು ಕೀ ಇಲ್ಲದೆಯೇ ತೆರೆದು ಅಥವಾ ಒಡೆದು ಕನ್ನ ಹಾಕುವ ಚಾಣಕ್ಷ ಕಳ್ಳರಿದ್ದಾರೆ. ಎಷ್ಟೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡರೂ ತಮ್ಮ ಚಾಣಾಕ್ಷ ಬುದ್ಧಿಯಿಂದ ದರೋಡೆ, ಮೋಸ, ವಂಚನೆ ಮಾಡುವವರು ಇದ್ದಾರೆ. ನಿತ್ಯವೂ ರಕ್ಷಣೆ, ಭದ್ರತೆ ದೃಷ್ಟಿಯಿಂದ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಅಭಿವೃದ್ಧಿಯಾಗುತ್ತಲೇ ಇದೆ. ಇಂದು ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿರುವುದು ಹೆಮ್ಮೆಯ ವಿಚಾರ. ಆದರೆ ತಂತ್ರಜ್ಞಾನಗಳಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯವೂ ಇದೆ ಎಂಬುದನ್ನು ಮರೆಯಬಾರದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates