ಗಿನಿಪಿಗ್‌ ನೋಡಿದಿರಾ!

ಮುಂಗುಸಿಯoತಹ ಮೂತಿ, ಮೊಲದಂತೆ ಚುರುಕು, ಇಲಿಯ ಮೈಕಟ್ಟು ಹೊಂದಿರುವ ಇಲಿಯೂ ಅಲ್ಲದ ಹಂದಿಯೂ ಅಲ್ಲದ ಈ ಪ್ರಾಣಿಯ ಹೆಸರು ಗಿನಿಪಿಗ್. ರಾಜ್ಯದಲ್ಲಿ ಬೆರಳಣಿಕೆಯಷ್ಟು ಮಂದಿ ಗಿನಿಪಿಗ್ ಸಾಕಿ ಅವುಗಳಿಂದ ಕೈತುಂಬಾ ಅದಾಯವನ್ನು ಗಳಿಸುತ್ತಿದ್ದಾರೆ.
ದೀಪಕ್ ಹಾಸನ ಜಿಲ್ಲೆಯ ಅರಸೀಕೆರೆಯವರು. ಐ.ಟಿ.ಐ. ಶಿಕ್ಷಣವನ್ನು ಮುಗಿಸಿದ ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ದುಡಿದರು. ಮುಂದಿನ ದಿನಗಳಲ್ಲಿ ಕೃಷಿಯೊಂದಿಗಿನ ಒಲವು ದೀಪಕ್‌ರವರನ್ನು ಮತ್ತೆ ಊರಿಗೆ ಕರೆಯಿತು. ತನ್ನ ಮೂರುವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ಕೃಷಿಗೆ ಪೂರಕವಾಗಿ ಯಾವುದಾದರೂ ಸಾಕಣೆಯನ್ನು ಮಾಡಬೇಕೆಂದುಕೊoಡಾಗ ಮಿತ್ರರೊಬ್ಬರು ಗಿನಿಪಿಗ್ ಸಾಕುವ ಉಪಾಯವನ್ನು ನೀಡಿದರು. ಮರಿಯೊಂದಕ್ಕೆ ರೂ. 500 ರಂತೆ 20 ಮರಿಗಳನ್ನು ತಂದರು. ಸಾಕಣೆ, ಮಾರುಕಟ್ಟೆಯ ಬಗ್ಗೆ ಬೇರೆ ಬೇರೆ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು. ಇದೀಗ ಇವರ ಬಳಿ 300 ಗಿನಿಪಿಗ್‌ಗಳಿವೆ. ಖಾಯಂ ಗಿರಾಕಿಗಳನ್ನು ಹುಡುಕಿಕೊಂಡ ಪರಿಣಾಮ ಇವರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ.
ಸಾಕುವುದು ಹೇಗೆ? : ಗಿನಿಪಿಗ್‌ಗಳು ಹಂದಿಗಳoತೆ ದೇಹ ರಚನೆಯನ್ನು ಹೊಂದಿದ್ದು ದೊಡ್ಡ ತಲೆ, ದಪ್ಪ ಕುತ್ತಿಗೆಗಳನ್ನು ಹೊಂದಿವೆ. ಹಂದಿಯoತೆ ಸದ್ದು ಮಾಡುತ್ತವೆ. ಸಾಕು ಹಂದಿಗಳoತೆ ಸಣ್ಣ ಜಾಗದಲ್ಲಿ ಸುಲಭವಾಗಿ ಬದುಕಬಲ್ಲವು. ಇವು 20 ರಿಂದ 25 ಸೆ.ಮೀ. ನಷ್ಟು ಉದ್ದವಿರುತ್ತದೆ. ಗಂಡು ಮತ್ತು ಹೆಣ್ಣು ಗಿನಿಪಿಗ್‌ಗಳಲ್ಲಿ ಗಾತ್ರದ ಹೊರತಾಗಿ ರೂಪದಲ್ಲಿ ವ್ಯತ್ಯಾಸವಿಲ್ಲ. ಮರಿಗಳು ಸಾಕುವವರ ಬಳಿ ಲಭ್ಯ. ಮರಿಗಳಿಗಾಗಿಯೇ ಗಿನಿಪಿಗ್‌ಗಳನ್ನು ಸಾಕಲಾಗುತ್ತದೆ. ಚೆನ್ನಾಗಿ ಆರೈಕೆ ಮಾಡಿದರೆ ತಾಯಿ ನಾಲ್ಕು ವರ್ಷಗಳವರೆಗೆ ಬದುಕುತ್ತವೆ. ಇವು ಹೆಚ್ಚೆಂದರೆ ಐನೂರರಿಂದ ಆರುನೂರು ಗ್ರಾಂ. ತೂಗುತ್ತವೆ. ಒಂದು ಗಿನಿಪಿಗ್ ವರ್ಷದಲ್ಲಿ ನಾಲ್ಕು ಬಾರಿ ಮರಿಗಳನ್ನು ಇಡುತ್ತದೆ. ಒಂದು ಬಾರಿಗೆ ಒಂದರಿoದ ಐದು ಮರಿಗಳನ್ನು ಇಡುತ್ತವೆೆ. ಸಾಕಲು ಉತ್ತಮವಾದ ಗಾಳಿ ಲಭ್ಯವಾಗುವ, ನೆರಳಿನಿಂದ ಕೂಡಿದ ಪ್ರದೇಶ ಸೂಕ್ತ. ದೀಪಕ್ ಆರಂಭದಲ್ಲಿ ಗೂಡಿನಲ್ಲಿ ಸಾಕುತ್ತಿದ್ದರು. ಇದೀಗ ತೋಟದ ಮಧ್ಯೆ ಶೆಡ್‌ವೊಂದನ್ನು ಮಾಡಿಕೊಂಡು ಅದರೊಳಗೆ ನೆಲದ ಮೇಲೆ ಬಿಟ್ಟು ಸಾಕುತ್ತಿದ್ದಾರೆ. ಸಾಮಾನ್ಯ ನೆಲವೇ ಸೂಕ್ತ ಎನ್ನುತ್ತಾರೆ ಇವರು.
ಆಹಾರ : ಕುದುರೆ ಮೆಂತೆ, ಮೆಕ್ಕೆಜೋಳ, ರಾಗಿಹುಲ್ಲುಗಳನ್ನು ಕತ್ತರಿಸಿ ನೀಡುತ್ತಾರೆ. ಸಂಜೆಯ ಹೊತ್ತು ಗೋಧಿಹಿಟ್ಟು, ಕÀಡಲೆ ಹಿಟ್ಟಿನೊಂದಿಗೆ ಹಸಿಹುಲ್ಲನ್ನು ಕೊಡುತ್ತಾರೆ. ಮಧ್ಯಾಹ್ನ ಯಾವುದೇ ರೀತಿಯ ಆಹಾರವನ್ನು ಇವುಗಳಿಗೆ ನೀಡುವುದಿಲ್ಲ. ಹಸಿಹುಲ್ಲು ಇವುಗಳ ಪ್ರಮುಖ ಆಹಾರವಾಗಿರುವುದರಿಂದ ಇವುಗಳಿಗೆ ಪ್ರತ್ಯೇಕ ನೀರನ್ನು ನೀಡುವ ಅಗತ್ಯವು ಇಲ್ಲ.
ಮರಿಗಳ ಆರೈಕೆ : ಗಂಡು – ಹೆಣ್ಣು ಗಿನಿಪಿಗ್‌ಗಳನ್ನು ಜೊತೆಯಾಗಿ ಸಾಕಲಾಗುತ್ತದೆ. ಜೋಡಿಯಾದ ಮೇಲೆ ಮರಿ ಹಾಕಲು 72 ದಿನ ಬೇಕಾಗುತ್ತದೆ. ಹೆಣ್ಣು ಗಿನಿಪಿಗ್‌ಗಳು ಗಬ್ಬಕ್ಕೆ ಬಂದಾಗ ಅವುಗಳನ್ನು ಪ್ರತ್ಯೇಕಿಸಿ ಬೇರೆಡೆ ಇಡುತ್ತಾರೆ. ಮರಿ ಹಾಕಿದ ನಂತರ ತಾಯಿ ಮತ್ತು ಮರಿಯನ್ನು ಪ್ರತ್ಯೇಕವಾಗಿ ಗೂಡಿನಲ್ಲಿ ಸಾಕುತ್ತಾರೆ. ಹೀಗೆ ಮಾಡುವುದರಿಂದ ಮರಿಗಳ ಬೆಳವಣಿಗೆ ಬೇಗ ಆಗುತ್ತದೆ. ಮರಿ 170 ಗ್ರಾಂ. ಆದ ನಂತರ ತಾಯಿಯನ್ನು ಮತ್ತೆ ಜೋಡಿಗೆ ಬಿಡುತ್ತಾರೆ.
ಮಾರುಕಟ್ಟೆ : ಗಿನಿಪಿಗ್‌ನ ಮರಿಗಳಿಗೆ ಬಹುಬೇಡಿಕೆಯಿದೆ. ಎರಡು ತಿಂಗಳಲ್ಲಿ ಮರಿ250 ಗ್ರಾಂ. ತೂಗುತ್ತದೆ. 250ಗ್ರಾಂ. ತೂಕದ ಆರೋಗ್ಯಯುತ ಮರಿಗೆ ರೂ. 300ರಿಂದ ರೂ. 700 ರವರೆಗೆ ಬೆಲೆಯಿದೆ. ಬೆಂಗಳೂರಿನ ಲ್ಯಾಬ್‌ನವರೇ ಬಂದು ಪರೀಕ್ಷಿಸಿ ಮರಿಗಳನ್ನು ಕೊಂಡೋಗುತ್ತಾರೆ. ದೀಪಕ್‌ರವರ ಬಳಿ ಈಗ ಒಟ್ಟು 300 ಗಿನಿಪಿಗ್‌ಗಳಿವೆ. ಇವುಗಳಿಂದ ಪ್ರತಿ ತಿಂಗಳು 200 ಮರಿಗಳನ್ನು ಮಾರಾಟ ಮಾಡುತ್ತಾರೆ. ಗಿನಿಪಿಗ್‌ಗಳಲ್ಲಿ ಕಪ್ಪು, ಕೆಂಪು, ಬಿಳಿ ಹೀಗೆ ಮೂರು ಬಣ್ಣಗಳಿವೆ. ಬಿಳಿ ಗಿನಿಪಿಗ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಲ್ಯಾಬ್‌ನವರು ಆರೋಗ್ಯಯುತವಾಗಿ ಬೆಳೆದ ಮರಿಯನ್ನು ಮಾತ್ರ ಖರೀದಿಸುತ್ತಾರೆ. ಮರಿಗಳ ಮೈಯ ಕೂದಲು ಉದುರಿದರೆ, ಕಣ್ಣುಗಳು ಮಂಕಾಗಿದ್ದರೆ, ಕತ್ತಿನಲ್ಲಿ ಗಂಟುಗಳಿದ್ದರೆ, ಕೈಕಾಲುಗಳಲ್ಲಿ ಗಾಯಗಳಿದ್ದರೆ ಅಂತಹ ಮರಿಗಳನ್ನು ಲ್ಯಾಬ್‌ನವರು ಖರೀದಿಸುವುದಿಲ್ಲ.
ಗಿನಿಪಿಗ್‌ನ ಪ್ರಯೋಜನ : ಮರಿಗಳನ್ನು ಯಾವುದಕ್ಕೆ ಬಳಸುತ್ತಾರೆ ಎಂಬ ಕುತೂಹಲ ನಿಮ್ಮಲ್ಲೂ ಇರಬಹುದಲ್ವಾ! ಮನುಷ್ಯರಿಗೆ ನೀಡುವ ಬೇರೆ ಬೇರೆ ಚುಚ್ಚುಮದ್ದು, ಔಷಧಗಳ ಪ್ರಥಮ ಪ್ರಯೋಗಗಳು ನಡೆಯುವುದು ಇವುಗಳ ಮೇಲೆಯೇ. ಇವುಗಳಲ್ಲಿ ಅತ್ಯಧಿಕ ‘ಸಿ’ ವಿಟಮಿನ್ ಇದೆ ಎಂಬ ಕಾರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ಮಾಂಸಹಾರಿಗಳು ತಿನ್ನುತ್ತಾರೆ.
ಮುಂಜಾಗರೂಕತೆ : ಹಾವುಗಳು ಒಳಹೋಗದಂತೆ ಶೆಡ್‌ಗಳನ್ನು ನಿರ್ಮಿಸಿಕೊಳ್ಳಬೇಕು. ಗಿನಿಪಿಗ್‌ಗಳು ಕಚ್ಚುವುದಿಲ್ಲ. ಇವು ಮನುಷ್ಯನ ಪ್ರೀತಿಯನ್ನು ಬಯಸುತ್ತವೆ. ರಸ್ತೆ ಬದಿ ಗೂಡು ನಿರ್ಮಿಸುವುದು ಸೂಕ್ತವಲ್ಲ. ನಾಲ್ಕು ದಿನಕ್ಕೊಮ್ಮೆ ಶೆಡ್‌ನೊಳಗಡೆ ನೆಲವನ್ನು ಬದಲಿಸುವುದು ಉತ್ತಮ. ಕೆಲವೊಂದು ಮರಿಗಳು ಸೋಂಕು ತಗಲಿ ಕಣ್ಣನ್ನು ಮುಚ್ಚಿಕೊಂಡಿರುತ್ತವೆ. ತಕ್ಷಣ ಅವುಗಳಿಗೆ ಔಷಧವನ್ನು ನೀಡಬೇಕು. ರೋಗ ಲಕ್ಷಣ ಕಾಣಿಸಿಕೊಂಡರೆ ಅದನ್ನು ಗುಂಪಿನಿ0ದ ಬೇರ್ಪಡಿಸಬೇಕು. ಇಲ್ಲವಾದರೆ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ.
ಪಟ ಪಟ ನೆಗೆಯುತ್ತಾ, ಇಲಿಯಂತೆ ಗೀಳಿಡುತ್ತಾ ಓಡಾಡುವ ಗಿನಿಪಿಗ್‌ಗಳು ನೋಡಲು ಮುದ್ದಾಗಿವೆ. ವಿದೇಶಗಳಲ್ಲಿ ಬೆಕ್ಕಿನಂತೆ ಇವುಗಳನ್ನು ಸಾಕುತ್ತಾರೆ. ಮಾರಾಟದ ಉದ್ದೇಶದಿಂದ ಸಾಕುವವರು ಸಾಕುವ ಮೊದಲು ಮಾರುಕಟ್ಟೆಯನ್ನು ಹುಡುಕಿಕೊಳ್ಳುವುದು ಅತೀ ಅಗತ್ಯ.
ಎಲ್ಲಿಂದ ಬಂದುವು ಈ ಗಿನಿಪಿಗ್‌ಗಳು
ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯವಾಗಿ ಇದನ್ನು ‘ಗಿನಿಪಿಗ್’ ಎಂದು ಕರೆಯುತ್ತಾರೆ ಆದರೆ ಹಂದಿಗಳ ಕುಟುಂಬಕ್ಕೆ ಸೇರಿದ ಪ್ರಾಣಿ ಇದಲ್ಲ. ಜೊತೆಗೆ ಗಿನಿ ದೇಶದ ಮೂಲದ ಪ್ರಾಣಿಯೂ ಇದಲ್ಲ. ಇವುಗಳ ಉಗಮ ಆಂಡಿಸ್ ಪರ್ವತ ವಲಯ. ಇವು ಅರಣ್ಯದಲ್ಲಿ ಕಾಣಸಿಗಲಾರವು. 16ನೇಯ ಶತಮಾನದಲ್ಲಿ ಯುರೋಪಿಯನ್ ವ್ಯಾಪಾರಿಗಳು ಗಿನಿಪಿಗ್‌ಗಳನ್ನು ಪರಿಚಯಿಸಿದರು. ಅವರು ಇವುಗಳನ್ನು ‘ಗಿನಿಯಿಲಿ’ ಎಂದೇ ಕರೆಯುತ್ತಾರೆ. 17 ನೇಯ ಶತಮಾನದಿಂದ ವೈಜ್ಞಾನಿಕ ಪ್ರಯೋಗಕ್ಕೆ ಹೆಚ್ಚಾಗಿ ಇವುಗಳ ಬಳಕೆಯಾಗತೊಡಗಿತು. ಕಿರಿಯ ವಯಸ್ಸಿನವರಿಗೆ ಕಾಡುವ ಮಧುಮೇಹ, ಕ್ಷಯ, ರಕ್ತಪಿತ್ತವ್ಯಾಧಿಗಳಿಗೆ ಸಂಬoಧಪಟ್ಟ ಅಧ್ಯಯನಕ್ಕೆ ಇವುಗಳ ಬಳಕೆ ಹೆಚ್ಚಾಗಿ ಆಗುತ್ತದೆ. 19ನೇಯ ಶತಮಾನದಲ್ಲಿ ವಿಜ್ಞಾನಿ ಲೂಯಿ ಫ್ಯಾಶ್ಚರ್ ಗಿನಿಪಿಗ್‌ಗಳನ್ನು ಬಳಸಿ ನಡೆಸಿದ ಶಾಖ ಉತ್ಪನ್ನದ ಪ್ರಯೋಗ ಯಶಸ್ವಿಯಾದ ನಂತರ ವೈದ್ಯಕೀಯ ಪ್ರಯೋಗಗಳಲ್ಲಿ ಇವುಗಳ ಬಳಕೆ ಹೆಚ್ಚಾಯಿತು. ಹಲವಾರು ಬಾರಿ ಗಿನಿಪಿಗ್‌ಗಳನ್ನು ಬಾಹ್ಯಾಕಾಶ ಉಡ್ಡಯನಗಳಲ್ಲಿ ಕಳುಹಿಸಿಕೊಡಲಾಗಿದೆ. 1990ರಲ್ಲಿ ಗಿನಿಪಿಗ್‌ಗಳುಳ್ಳ ಜೈವಿಕ ಉಪಗ್ರಹವನ್ನು ಉಡ್ಡಯನ ಮಾಡಲಾಯಿತು. ಅವುಗಳನ್ನು ಯಶಸ್ವಿಯಾಗಿ ಭೂಮಿಗೆ ಹಿಂದುರಿಗಿಸಿದ ಕೀರ್ತಿಯೂ ಈ ಗಿನಿಪಿಗ್‌ಗಳಿಗೆ ಸಂದಿವೆ. ಗಿನಿಪಿಗ್‌ಗಳಲ್ಲಿ ಕೂದಲು ರಹಿತ ತಳಿಗಳು ಕೂಡಾ ಇವೆ. ಇವುಗಳನ್ನು ಚರ್ಮ ಸಂಬoಧಿತ ಖಾಯಿಲೆಗಳ ಅಧ್ಯಯನಕ್ಕಾಗಿ ಬಳಸಲಾಗುತ್ತದೆ. ಚುಚ್ಚುಮದ್ದುಗಳು ಮತ್ತು ವೈರಸ್ ರೋಧಕಗಳನ್ನು ಪ್ರಮಾಣಿತಗೊಳಿಸಲು ಇವುಗಳನ್ನು ಇಂದಿಗೂ ಬಳಸಲಾಗುತ್ತಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *