ತಾಂತ್ರಿಕತೆಯೆಂಬ ಮಂತ್ರ ದಂಡ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಹಿಂದೆ ನಾವೆಲ್ಲ ಮಕ್ಕಳಾಗಿದ್ದಾಗ ಬಂಧು-ಮಿತ್ರರ ಸಂದೇಶ ಹೊತ್ತ ಪತ್ರಕ್ಕಾಗಿ ವಾರಗಟ್ಟಲೆ ಕಾಯುತ್ತಿದ್ದೆವು. ಪತ್ರ ಬರೆದು ಮರುತ್ತರಕ್ಕೆ ಕಾಯುತ್ತಿದ್ದ ಕ್ಷಣಗಳು ಮರೆಯಲಾರದಂಥವು. ಯಾರ ಜೊತೆಗಾದರೂ ತುರ್ತಾಗಿ ಮಾತನಾಡಬೇಕಿದ್ದರೆ, ಸಂದೇಶ ನೀಡಬೇಕಿದ್ದರೆ ಟ್ರಂಕ್ ಕಾಲ್ ಬುಕ್ ಮಾಡಿ ದಿನಗಟ್ಟಲೆ ಕಾಯಬೇಕಾದ ಸಂದರ್ಭಗಳಿದ್ದವು. ಆ ದಿನಗಳಲ್ಲಿ ಇಂದಿನಷ್ಟು ಸರಕಾರಿ ಸೇವೆಗಳು ಇರಲಿಲ್ಲ. ಇದ್ದರೂ ಸೇವೆಗಳನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕು, ಒಂದು ಸಾರಿ ಹೋದರೆ ಸಾಲದು, ನಾಲ್ಕೈದು ಬಾರಿ ಹೋಗಬೇಕು, ಒಮ್ಮೆ ಹೋಗಿ ಬರಲು ಸಾಕಷ್ಟು ದುಡ್ಡು ಬೇಕಾಗುತ್ತದೆ ಹೀಗೆ ಸಾಕಷ್ಟು ಕಾರಣಗಳಿಗಾಗಿ ಅನೇಕರು ಸರಕಾರದ ಸೌಲಭ್ಯವನ್ನು ಪಡೆಯಲು ಮುಂದಾಗುತ್ತಿರಲಿಲ್ಲ. ಹಾಗಾಗಿ ಸರಕಾರದ ಸೌಲಭ್ಯಗಳು ಜನರಿಗೆ ತಲುಪದೆ, ತಲುಪಿದರೂ ಸೂಕ್ತ ಮಾಹಿತಿ, ಮಾರ್ಗದರ್ಶನಗಳಿಲ್ಲದೆ ಅವೆಲ್ಲ ಜಾರಿಯಾಗುತ್ತಿರಲಿಲ್ಲ.
ಈಗ ಕಾಲ ಬದಲಾಗಿದೆ. ಸರಕಾರ ತಂತ್ರಜ್ಞಾನದ ಮೂಲಕ ಸಾಕಷ್ಟು ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಈ ಬದಲಾವಣೆಗಳಿಗೆ ನಾವು ಒಗ್ಗಿಕೊಳ್ಳಬೇಕಾಗಿದೆ. ಇದು ಡಿಜಿಟಲ್ ಯುಗ. ಕ್ಷಣ ಮಾತ್ರದಲ್ಲಿ ವಿದೇಶದಲ್ಲಿರುವವರೊಡನೆ ಮಾತನಾಡಬಹುದು, ಅಷ್ಟೇ ಅಲ್ಲದೆ ವೀಡಿಯೋ ಕರೆಗಳ ಮೂಲಕ ಕಣ್ಣಾರೆ ಕಂಡು ಸಂಭಾಷಿಸಬಹುದು. ಕುಳಿತಲ್ಲಿಯೇ ಬ್ಯಾಂಕ್, ವಿಮೆ ಕಚೇರಿ ಹೀಗೆ ಹಲವಾರು ವ್ಯವಹಾರಗಳನ್ನು ಮಾಡಬಹುದಾಗಿದೆ. ಸರಳವಾಗಿ ಹೇಳಬಹುದೆಂದರೆ ತಾಂತ್ರಿಕತೆಯೆ0ಬುದು ಮಂತ್ರದ0ಡವೇ ಸರಿ. ಬೇಕಾಗಿರುವುದೆಲ್ಲವೂ ಕ್ಷಣ ಮಾತ್ರದಲ್ಲಿ ನಮ್ಮ ಬೆರಳ ತುದಿಯಲ್ಲಿಯೇ ಲಭ್ಯ.
ಈ ಡಿಜಿಟಲ್ ಯುಗದಲ್ಲಿ ಏನಿದೆ? ಏನಿಲ್ಲ? ಎಂಬುದನ್ನು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ತಂತ್ರಜ್ಞಾನಗಳು ತಲುಪದ ಕ್ಷೇತ್ರವಿಲ್ಲ. ಕೃಷಿ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲೆಡೆಯೂ ತಂತ್ರಜ್ಞಾನಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇವನ್ನು ನಮ್ಮ ಶ್ರೇಯೋಭಿವೃದ್ಧಿಗಾಗಿ ಬಳಸಿಕೊಳ್ಳುವ ಜಾಣ್ಮೆ, ಚಾಕಚಕ್ಯತೆ ಹಾಗೂ ಉತ್ಸುಕತೆ ಅಗತ್ಯವಾಗಿ ಇರಬೇಕಿದೆ.
ನಮ್ಮ ಧರ್ಮಸ್ಥಳ ಕ್ಷೇತ್ರದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರಕಾರದ ಯೋಜನೆಗಳನ್ನು ಹಳ್ಳಿಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಲೇ ಇದೆ. ಸರಕಾರದ ಯೋಜನೆಗಳನ್ನು ಹಳ್ಳಿಗರಿಗೆ ತಲುಪಿಸುವ ಸಲುವಾಗಿ ‘ಸಿ.ಎಸ್.ಸಿ. – ಕಾಮನ್ ಸರ್ವಿಸ್ ಸೆಂಟರ್’ಗಳನ್ನು ಯೋಜನೆಯ ವತಿಯಿಂದ ಆರಂಭಿಸಲಾಗಿದೆ. ಈಗಾಗಲೆ ರಾಜ್ಯದಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯ 6,205 ಸಿ.ಎಸ್.ಸಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಿ.ಎಸ್.ಸಿ. ಕಾರ್ಯಕ್ರಮದಡಿ ಒಟ್ಟು 250ಕ್ಕೂ ಅಧಿಕ ಸೇವೆಗಳು ಲಭ್ಯವಿದೆ. ಇವುಗಳಲ್ಲಿ ಇ-ಶ್ರಮ್ ಕಾರ್ಡ್ ನೋಂದಣಿ, ಪ್ರಧಾನ್‌ಮಂತ್ರಿ ಫಸಲ್ ಭಿಮಾ ಯೋಜನೆ, ಪಾನ್‌ಕಾರ್ಡ್, ವಿಮಾ ಪಾಲಿಸಿ, ಪಿಂಚಣಿ ಯೋಜನೆ ಮುಂತಾದ ಸೇವೆಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಒದಗಿಸಲಾಗುತ್ತಿದೆ. ಈಗಾಗಲೆ ರಾಜ್ಯದ ಸುಮಾರು 30 ಲಕ್ಷ ಮಂದಿಗೆ ಇ-ಶ್ರಮ್ ಕಾರ್ಡ್ ಅನ್ನು ಮಾಡಿಸಿರುವುದು ಒಂದು ದಾಖಲೆಯೇ ಸರಿ. ಸಿ.ಎಸ್.ಸಿ. ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆಯನ್ನು ಮೆಚ್ಚಿ ಕೇಂದ್ರ ಸರಕಾರದಿಂದ ಸಿ.ಎಸ್.ಸಿ. ಕಾರ್ಯಕ್ರಮದ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಶ್ರೀಕ್ಷೇತ್ರಕ್ಕೆ ಬಂದರು. ಸಿ.ಎಸ್.ಸಿ. ಜಿಲ್ಲಾ ಕೋ-ಆರ್ಡಿನೇಟರ್‌ಗಳನ್ನು ಕರೆಯಿಸಿ ಅವರೊಂದಿಗೆ ಸಂವಹನ ನಡೆಸಿದರು. ಸಿ.ಎಸ್.ಸಿ. ಎಂಬುದು ಸಕಲ ಸೇವೆಗಳನ್ನೊಳಗೊಂಡ ಸೇವಾ ಬ್ರಹ್ಮಾಂಡ. ಗ್ರಾಮೀಣ ಮಹಿಳೆಯರಿಗೂ ಬೇಕಾದ ಕಾನೂನು ಮಾಹಿತಿ, ಶಿಕ್ಷಣ, ಟೆಲಿಕೌನ್ಸೆಲಿಂಗ್, ಸಾಮಾಜಿಕ ಸಮಸ್ಯೆಗೆ ಪರಿಹಾರ ಹೀಗೆ ಎಲ್ಲವೂ ಈ ಯೋಜನೆಯಲ್ಲಿದೆ. ಇದಲ್ಲದೆ ಮಹಿಳೆಗೆ ತನಗಿದ್ದ ಸಮಸ್ಯೆಗಳನ್ನು ಟೆಲಿಮೆಡಿಸಿನ್ ಮೂಲಕ ಸಿ.ಎಸ್.ಸಿ. ಆಧಾರಿತ ವ್ಯವಸ್ಥೆಯ ಸಹಾಯದಿಂದ ನೇರವಾಗಿ ಯಾವುದೋ ಪ್ರದೇಶದಲ್ಲಿರುವ ಪರಿಣಿತ ವೈದ್ಯರ ಜೊತೆಗೆ ಹಳ್ಳಿಯಲ್ಲಿದ್ದುಕೊಂಡೇ ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡು ಸಾಮಾನ್ಯ ಪರಿಹಾರಗಳನ್ನು ಕಂಡುಕೊಳ್ಳಬಹುದು. ಹಾಗೆಯೇ
‘ಟೆಲಿ ಲಾ’ ಎಂಬ ವ್ಯವಸ್ಥೆಯಿದ್ದು ಇದರಲ್ಲಿ ಅನೇಕ ಕಾನೂನಿನ ಸಮಸ್ಯೆಗಳಿಗೆ ಕಾನೂನು ತಜ್ಞರಿಂದ ಪರಿಹಾರ ಸಲಹೆಗಳನ್ನು ಪಡೆದುಕೊಳ್ಳಬಹುದಾಗಿದೆ.
ತಂತ್ರಜ್ಞಾನವನ್ನು ಗ್ರಾಮೀಣ ಮಟ್ಟದಲ್ಲಿ ಬಳಸುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ‘ಪ್ರಧಾನಮಂತ್ರಿ ಡಿಜಿಟಲ್ ಸಾಕ್ಷರತಾ ಯೋಜನೆ’ ಮಾಡಿದೆ. ಗ್ರಾಮೀಣ ಭಾಗದ ಜನರು ತಾಂತ್ರಿಕತೆಯನ್ನು ಬಳಸಿಕೊಂಡು ಹೇಗೆ ಸೇವೆಯನ್ನು ಪಡೆಯಬಹುದು ಎಂಬ ತಾಂತ್ರಿಕತೆಯ ಅರಿವನ್ನು ಮೂಡಿಸುವ, ಸರಕಾರ ಜಾರಿಗೊಳಿಸಿದ ಸೌಲಭ್ಯಗಳನ್ನು ಹಳ್ಳಿಗಳಿಗೆ ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡಲಾಗುತ್ತಿದೆ.
ಸರಕಾರದ ಯೋಜನೆ, ಸೌಲಭ್ಯಗಳನ್ನು ಫಲಾನುಭವಿಗೆ ನೇರವಾಗಿ ತಲುಪಿಸುವುದು ಮಾತ್ರವಲ್ಲದೆ ಸೇವೆಗಳನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಹಳ್ಳಿಯ ಜನರ ಬಲವರ್ಧನೆ ಮಾಡಲಾಗುತ್ತಿದೆ. ಇದೀಗ ಸಿ.ಎಸ್.ಸಿ. ಕೇಂದ್ರಗಳಲ್ಲಿ ವಿವಿಧ ಸೇವೆ ಸೌಲಭ್ಯಗಳನ್ನು ಒದಗಿಸಲಾಗಿದ್ದು ಅವುಗಳ ಸದುಪಯೋಗ ನಾಡಿನ ಎಲ್ಲರಿಗೂ ದೊರೆಯಲಿ, ಆ ಮೂಲಕ ನಮ್ಮ ಸಮಾಜ ಅಭಿವೃದ್ಧಿಯಾಗಲಿ ಎಂಬುದೇ ನಮ್ಮ ಆಶಯ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates