ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಶ್ರೀಕ್ಷೇತ್ರದ ವತಿಯಿಂದ ನಾಲ್ಕು ರೀತಿಯ ದಾನಗಳು ನಡೆಯಬೇಕೆಂದು ಧರ್ಮದೇವತೆಗಳು ಅಪ್ಪಣೆ ಮಾಡಿದ್ದಾರೆ. ಮೊದಲನೆಯದು ಅನ್ನದಾನ. ನಿಮಗೆ ತಿಳಿದಿರುವಂತೆ ಧರ್ಮಸ್ಥಳಕ್ಕೆ ಬಂದಾಗ ಎಲ್ಲರಿಗೂ ಪ್ರಸಾದ ವಿತರಣೆ, ದಾಸೋಹ ನಡೆಯುತ್ತದೆ. ಎರಡನೆಯದಾಗಿ ಔಷಧದಾನ. ಯಾರಿಗಾದರೂ ಅನಾರೋಗ್ಯವಾದರೆ ಅವರಿಗೆ ಬೇಕಾದ ಚಿಕಿತ್ಸೆಗೆ ಸಹಕಾರ ಮಾಡುವುದು. ಮೂರನೆಯದು ವಿದ್ಯಾದಾನ. ವಿದ್ಯೆ ಕಲಿಯುವವರಿಗೆ ಸಹಾಯಹಸ್ತ ಚಾಚುವುದು. ನಾಲ್ಕನೆಯದು ಅಭಯದಾನ. ಅಂದರೆ ಯಾರು ಯಾವುದನ್ನೇ ಕೇಳಲಿ ಅವರಿಗೆ ನೀಡುವುದು ಮತ್ತು ಭಯಪಡಬೇಡಿ ಎಂದು ಧೈರ್ಯ ತುಂಬುವುದು. ಕ್ಷೇತ್ರಕ್ಕೆ ಸಾವಿರಾರು ಮಂದಿ ಅನೇಕ ರೀತಿಯ ಸಮಸ್ಯೆಗಳನ್ನು ಹೊತ್ತುಕೊಂಡು ಬರುತ್ತಾರೆ. ವೈಯಕ್ತಿಕ, ದೈಹಿಕ, ಮಾನಸಿಕವಾದ ಸಮಸ್ಯೆ ಹೀಗೆ ಎಲ್ಲವೂ ಇರುತ್ತದೆ. ಅವರೆಲ್ಲರಿಗೂ ‘ಹೆದರಬೇಡಿ’ ಎಂಬ ಅಭಯವನ್ನು ಶ್ರೀಕ್ಷೇತ್ರದಲ್ಲಿ ನೀಡಲಾಗುತ್ತದೆ. ಧೈರ್ಯದಿಂದ ನಿಮ್ಮ ಕಷ್ಟಗಳು, ಸವಾಲುಗಳನ್ನು ಎದುರಿಸಿ ಎಂದು ಹೇಳುವುದೇ ನಮ್ಮ ಕರ್ತವ್ಯ.
ಮನುಷ್ಯನಿಗೆ ಕಾಯಾ, ವಾಚಾ, ಮನಸಾ ಹೀಗೆ ಮೂರು ರೀತಿಯ ರಕ್ಷಣೆ ಬೇಕಾಗಿದೆ. ಕಾಯ ಎಂದರೆ ದೇಹ. ವಾಚಾ ಎಂದರೆ ಮಾತಿನಿಂದ ನಮಗೆ ಒಳ್ಳೆಯ ಭವಿಷ್ಯ, ಸಂಸ್ಕಾರ ಸಿಗಬೇಕಾಗಿದೆ. ಮನಸಾ ಎಂದರೆ ಮನಸ್ಸಿನಲ್ಲಿ ಉತ್ಸಾಹವನ್ನು ತಳೆಯಬೇಕು. ಭಯಪಡಬಾರದು. ಬಡತನಕ್ಕೆ ಹೆದರಿ ಓಡಬಾರದು. ಬಹಳ ಜನ ಬಡತನಕ್ಕೆ ಹೆದರುತ್ತಾರೆ, ಬಡತನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಅನೇಕ ರೀತಿಯ ಆಪತ್ತುಗಳನ್ನು ಎದುರಿಸುತ್ತಾರೆ. ಆದರೆ ಇಂದು ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಧರ್ಮಸ್ಥಳದಂತಹ ಸಂಸ್ಥೆಗಳ ಸೌಲಭ್ಯಗಳು ಎಷ್ಟು ಲಭ್ಯವಿದೆಯೆಂದರೆ ಯಾರಿಗಾದರೂ ಜೀವನೋತ್ಸಾಹ, ತಾಳ್ಮೆ, ಸಾಧಿಸುತ್ತೇನೆ ಎಂಬ ಛಲವಿದ್ದರೆ ಅಂಥವರಿಗೆ ಖಂಡಿತವಾಗಿಯೂ ಬಡತನ ಹತ್ತಿರವೂ ಸುಳಿಯುವುದಿಲ್ಲ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸುಮಾರು ೫೦ ಲಕ್ಷ ಮಂದಿ ಸದಸ್ಯರಿದ್ದಾರೆ. ಅವರ ಜೀವನದ ಅವಶ್ಯಕತೆಗೆ ಬೇಕಾಗುವ ಸಹಕಾರವನ್ನು ಮಾಡಿದ್ದೇವೆ.
ಕ್ಷೇತ್ರಕ್ಕೆ ಬಂದಾಗ ಪ್ರತಿಯೊಬ್ಬರು ದೇವರ ದರ್ಶನವನ್ನು ಮಾಡುತ್ತೀರಿ. ದೇವರ ದರ್ಶನವನ್ನು ಮಾಡುವಾಗ ಭಗವಂತನಲ್ಲಿ ಏನು ಕೇಳುತ್ತೀರಿ? ಒಬ್ಬ ಕುರುಡ ದೇವರ ದರ್ಶನಕ್ಕೆ ಹೋದಾಗ ಅವನ ಪಕ್ಕದಲ್ಲಿದ್ದವನು ಕೇಳಿದನಂತೆ. ‘ನೀನು ಕುರುಡ. ನಿನಗೆ ಕಣ್ಣು ಕಾಣಿಸುವುದಿಲ್ಲ, ದೇವಸ್ಥಾನದೊಳಗೆ ಹೋದರೂ ಕೂಡಾ ದೇವರು ಕಾಣಿಸುವುದಿಲ್ಲ. ಮತ್ತೆ ಯಾಕೆ ನೀನು ದೇವಸ್ಥಾನಕ್ಕೆ ಹೋಗುತ್ತಿದ್ದೀ?’ ಅದಕ್ಕೆ ಆತ ಹೇಳುತ್ತಾನೆ, ‘ನನಗೆ ದೇವರು ಕಾಣಿಸುವುದು ಮುಖ್ಯವಲ್ಲ. ಆದರೆ ದೇವರಿಗೆ ನಾನು ಕಾಣಿಸುವುದು ಬಹಳ ಮುಖ್ಯ’ ಎಂದು.
ಬಡತನ, ಕಷ್ಟ, ನಷ್ಟ, ನಿಷ್ಠುರಗಳು ದೂರವಾಗಬೇಕಾದರೆ ನಮಗೆ ಭಗವಂತ ಕಾಣುವುದಕ್ಕಿಂತ ಹೆಚ್ಚು ಭಗವಂತನ ದೃಷ್ಟಿಗೆ ನಾವು ಬೀಳಬೇಕು. ಅದರಿಂದಾಗಿ ನಮ್ಮ ಪ್ರಯತ್ನ ಏನಿರುತ್ತದೆ ಎಂದರೆ ಭಗವಂತನ ದೃಷ್ಟಿ ನಮ್ಮ ಮೇಲೆ ಬೀಳಲಿ ಎಂಬುದೇ ಆಗಿರುತ್ತದೆ. ಸಾಧನೆಯ ಪಥದಲ್ಲಿ ಭಗವಂತನ ದೃಷ್ಟಿ ನಮ್ಮ ಮೇಲೆ ಬೀಳಬೇಕು ಎಂದರೆ ನಿತ್ಯವೂ ಸತ್ಯದಲ್ಲಿರಬೇಕು. ಭಕ್ತಿಯಿಂದಿರಬೇಕು. ವೇದಾಧ್ಯಯನ ಗೊತ್ತಿರುವ ಶಿಷ್ಯನೊಬ್ಬನಿಗೆ ಅವರ ಗುರುಗಳತ್ತ ಹೋದಾಗ ಆಶ್ಚರ್ಯವಾಗುತ್ತದೆ. ಗುರುಗಳು ವಿದ್ಯಾವಂತರನ್ನು, ವೇದಾಧ್ಯಯನ ಮಾಡಿದವರನ್ನು ಬಿಟ್ಟು ಒಬ್ಬ ಸಾಮಾನ್ಯ ಕುರುಬ ವ್ಯಕ್ತಿಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಿರುತ್ತಾರೆ. ಒಬ್ಬ ಸಾಮಾನ್ಯ ಕುರುಬ ವ್ಯಕ್ತಿಯನ್ನು ಗುರುಗಳು ಯಾಕೆ ಇಷ್ಟು ಪ್ರೀತಿ ಮಾಡುತ್ತಾರೆ ಎಂದು ಅಸೂಯೆ ಪಡುತ್ತಾನೆ. ಅದಕ್ಕೆ ಗುರುಗಳು ಉತ್ತರಿಸುತ್ತಾರೆ ‘ಆ ಕುರುಬನಿಗೆ ವೇದಾಧ್ಯಯನ, ಸಂಸ್ಕೃತ ಅಧ್ಯಯನ ಗೊತ್ತಿಲ್ಲ. ಆದರೆ ಭಕ್ತಿಯ ಶುದ್ಧತೆ, ಪ್ರಾಶಸ್ತö್ಯ ಗೊತ್ತಿದೆ’ ಎಂದು. ಗುರುಗಳು ನಾನೊಂದು ನಿಮಗೆ ಪರೀಕ್ಷೆ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ನೀವೆಲ್ಲರೂ ಪಾಸಾಗಿ ಯಾರು ಶ್ರೇಷ್ಠರು ಎಂದು ತೀರ್ಮಾನಿಸಿಕೊಳ್ಳಿ ಎನ್ನುತ್ತಾರೆ. ಗುರುಗಳು ಎಲ್ಲರಿಗೂ ಒಂದೊ0ದು ಬಾಳೆಹಣ್ಣನ್ನು ಕೊಟ್ಟು ‘ಯಾರ ಕಣ್ಣಿಗೂ ಬೀಳದಂತಹ ಸ್ಥಳವನ್ನು ಹುಡುಕಿ, ಯಾರಿಗೂ ಕಾಣದಂತೆ ತಿನ್ನಬೇಕು ಎಂದು ಹೇಳುತ್ತಾರೆ. ಸರಿ, ಅದೇನು ದೊಡ್ಡ ಕೆಲಸ ಗುರುಗಳೇ ಎಂದು ಒಬ್ಬ ಶಿಷ್ಯ ಹೋಗಿ ಕೊಠಡಿಯ ಬಾಗಿಲು ಹಾಕಿ ಬಾಳೆಹಣ್ಣು ತಿಂದ. ಇನ್ನೊಬ್ಬ ಕಾಡಿಗೆ ಹೋಗಿ ಸುತ್ತಮುತ್ತ ಎಲ್ಲ ನೋಡಿ ಯಾರೂ ಇಲ್ಲ ಎಂದು ಖಾತ್ರಿಪಡಿಸಿ ಬಾಳೆಹಣ್ಣು ತಿಂದ. ಇನ್ನೊಬ್ಬ ಬಚ್ಚಿಟ್ಟುಕೊಂಡು ತಿಂದ. ಹೀಗೆ ಏನೇನೋ ಮಾಡಿ ಬಾಳೆಹಣ್ಣು ತಿಂದು ಮುಗಿಸಿದರು. ಮರುದಿನ ಗುರುಗಳು ಹೇಳಿದ ಸಮಯಕ್ಕೆ ಬಂದಾಗ ಗುರುಗಳು ಏನ್ರಪ್ಪಾ ನೀವೆಲ್ಲರೂ ಬಾಳೆಹಣ್ಣು ತಿಂದಿರಾ? ‘ಹೌದು ಗುರುಗಳೇ ಬಾಳೆಹಣ್ಣು ತಿಂದ್ವಿ.’ ಎಲ್ಲಿ ತಿಂದಿರಿ? ಎಂದಾಗ, ‘ನಾವು ಯಾರ ಕಣ್ಣಿಗೂ ಬೀಳಲಿಲ್ಲ, ಒಬ್ಬರೇ ತಿಂದ್ವಿ’ ಎಂದರು. ಕನಕದಾಸ ಮಾತ್ರ ಬಾಳೆಹಣ್ಣನ್ನು ತಂದು ಗುರುಗಳ ಮುಂದೆ ಇಟ್ಟು ನಮಸ್ಕಾರ ಮಾಡಿ, ‘ಗುರುಗಳೇ ನಾನು ಸೋತೆ, ಯಾರೂ ಇಲ್ಲದ ಜಾಗ ನನಗೆ ಸಿಗಲಿಲ್ಲ.’ ಎನ್ನುತ್ತಾನೆ. ಆಗ ಗುರುಗಳು ಕೇಳುತ್ತಾರೆ, ‘ಏನು ಹೇಳುತ್ತಿದ್ದೀ ನೀನು’ ಎಂದು. ಅದಕ್ಕೆ ಆತ ‘ಹೌದು ಸ್ವಾಮಿ, ಮನುಷ್ಯರಿಲ್ಲದ ಜಾಗವಿದೆ. ಅವರ ಕಣ್ಣಿನಿಂದ ತಪ್ಪಿಸಬಹುದು ಆದರೆ ದೇವರ ಕಣ್ಣಿನಿಂದ ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಬಾಳೆಹಣ್ಣು ತಿನ್ನುವುದನ್ನು ಯಾರೂ ನೋಡದೆ ಇರಬಹುದು. ಆದರೆ ಭಗವಂತ ನೋಡದೆ ಇರೋಕೆ ಹೇಗೆ ಸಾಧ್ಯ ಸ್ವಾಮಿ!’ ಎಂದರAತೆ.
ಒಬ್ಬ, ರಾಜರ ಹತ್ತಿರ ಮೂರು ವಿಗ್ರಹಗಳನ್ನು ತರುತ್ತಾನಂತೆ. ಮೊದಲನೆಯದಕ್ಕೆ ೫೦ ಸಾವಿರ, ಎರಡನೆಯದಕ್ಕೆ ೫ ಸಾವಿರ, ಮೂರನೆಯದಕ್ಕೆ ೫೦೦ ರೂಪಾಯಿ. ಎಲ್ಲ ಮೂರ್ತಿಗಳು ಒಂದೇ ರೀತಿಯಲ್ಲಿವೆ. ಅದಕ್ಕೆ ರಾಜ ಕೇಳುತ್ತಾನೆ. ಏನು ಹೇಳುತ್ತಿದ್ದೀಯಾ? ಎಲ್ಲ ನೋಡಲು ಒಂದೇ ರೀತಿಯಲ್ಲಿವೆ. ಇದರಲ್ಲಿ ಏನು ವ್ಯತ್ಯಾಸ ಇದೆ? ಮೂರಕ್ಕೂ ಒಂದೇ ರೀತಿಯ ದರ ನಿಗದಿ ಮಾಡಬೇಕಲ್ವಾ ನೀನು ಎಂದು. ಸ್ವಾಮಿ ಒಂದು ನಿಮಿಷ ಇರಿ ಎಂದ. ಒಂದು ಸರಿಗೆ ಕಡ್ಡಿ ತೆಗೆದುಕೊಂಡು ಒಂದು ಕಿವಿಗೆ ಹಾಕುತ್ತಾನೆ. ಅದು ಒಂದು ಕಿವಿಯಿಂದ ಹೋಗಿ ಇನ್ನೊಂದು ಕಿವಿಗೆ ಬರುತ್ತದೆ. ಇದಕ್ಕೆ ಐನೂರು ರೂಪಾಯಿ. ಯಾಕೆಂದರೆ ಅದರಲ್ಲಿ ಯಾವ ವಿಷಯವೂ ತಲೆಯಲ್ಲಿ ಉಳಿಯುವುದಿಲ್ಲ. ನೀವು ಒಳ್ಳೆಯದೇ ಹೇಳಿ, ಒಳ್ಳೆಯದೇ ಮಾತನಾಡಿ ಅದು ಈಚೆ ಕಿವಿಯಿಂದ ಇನ್ನೊಂದು ಕಿವಿಗೆ ಹೋಗುತ್ತದೆ. ಹಾಗಾಗಿ ಇಂತಹ ಮನುಷ್ಯರಿಗೆ ಬೆಲೆ ಇಲ್ಲ. ಹಾಗಾಗಿ ಐನೂರು ರೂಪಾಯಿ. ಹೌದೇ? ಹಾಗಾದರೆ ೫,೦೦೦ ರೂಪಾಯಿ ಅಂದರೆ. ಅದರಲ್ಲಿ ಒಂದು ಕಡ್ಡಿಯನ್ನು ಕಿವಿಯಿಂದ ಹಾಕಿದಾಗ ಬಾಯಿಯಿಂದ ಹೊರಗೆ ಬಂತAತೆ. ಇದು ಕ್ಷಣಿಕವಾದದ್ದು. ಇನ್ನು ೫೦ ಸಾವಿರ ರೂಪಾಯಿಯದ್ದು? ಅದು ಕಿವಿಗೆ ಹಾಕಿದ ಕಡ್ಡಿ ಎದೆಗೆ ಹೋಗಿಬಿಡುತ್ತದೆಯಂತೆ. ಹೀಗೆ ನಮಗೆ ಸುವಿಚಾರಗಳು, ಧರ್ಮದ ವಿಚಾರಗಳು, ನಾವು ಮಾಡುವಂತಹ ಕರ್ತವ್ಯಗಳಲ್ಲಿ ಭಗವಂತನ ಸಾನ್ನಿಧ್ಯ ಇರಬೇಕಾದರೆ ಅದು ಹೃದಯಕ್ಕೆ ತಟ್ಟಬೇಕು, ಕಿವಿಗೆ ತಟ್ಟುವುದಲ್ಲ, ನಾಲಗೆಗೆ ತಟ್ಟುವುದಲ್ಲ. ಇದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಬದುಕಿನಲ್ಲಿ ಏಳಿಗೆ ಸಾಧಿಸಬೇಕಾದರೆ ನಾವು ಸಾಧಿಸಬೇಕು. ಭಗವಂತ ನಮ್ಮನ್ನು ನೋಡುತ್ತಾನೆ ಎಂದು ನಾವು ಸಾಧಿಸಬೇಕಲ್ಲದೆ ನಮ್ಮ ಜವಾಬ್ದಾರಿಯೆಲ್ಲ ದೇವರಿಗೆ ಹೋಗಲಿ ಎಂದಲ್ಲ.
ನಮಗೆ ಸ್ವರ್ಗ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಎಲ್ಲಿ, ಯಾವಾಗ ಎಂದರೆ ಸತ್ತಮೇಲೆ. ಸತ್ತ ಮೇಲೆ ಸ್ವರ್ಗ ಬೇಡ. ಬದುಕಿನಲ್ಲಿಯೇ ಸ್ವರ್ಗವನ್ನು ಸಾಧಿಸಬೇಕು. ಇದು ನಿಜವಾದ ಗುರಿ. ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಎಲ್ಲರೂ ಅವುಗಳ ಪ್ರಯೋಜನವನ್ನು ಪಡೆಯಬೇಕು. ಅವುಗಳನ್ನು ಬಿಟ್ಟುಬಿಡು ಎಂದರೆ ಅದರ ಪ್ರಯೋಜನವಾಗುವುದಿಲ್ಲ. ಅದೇ ರೀತಿ ಧರ್ಮಸ್ಥಳ ಕ್ಷೇತ್ರದಿಂದ ನಾವು ಅನೇಕ ಸೇವೆಗಳನ್ನು ಮಾಡುತ್ತೇವೆ. ಇದನ್ನು ಸದ್ಬಳಕೆ ಮಾಡಬೇಕು. ಉದಾಸೀನ ಮಾಡಬಾರದು. ಉದಾಸೀನ ಮಾಡಿದರೆ ಅದರ ಪ್ರಯೋಜನ ಸಿಗುವುದಿಲ್ಲ.
ಒಂದು ಊರಲ್ಲಿ ಬಡವನೊಬ್ಬನಿದ್ದ. ನದಿ ತೀರದ ಜಾಗದಲ್ಲಿ ಮನೆ ಕಟ್ಟಿ ಕೃಷಿ ಮಾಡಿಕೊಂಡಿದ್ದ. ಒಮ್ಮೆ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ನದಿಯಲ್ಲಿ ಪ್ರವಾಹ ಬಂತು. ಪ್ರವಾಹ ಬಂದಾಗ ಕೆಲವರು ಬಂದು ಹೇಳಿದರಂತೆ. ‘ನೋಡಪ್ಪಾ ಇನ್ನು ಕೆಲವೇ ಕ್ಷಣಗಳಲ್ಲಿ ನೀರು ಮೇಲೇರಿ ನಿನ್ನ ಭೂಮಿಯೆಲ್ಲ ಕೊಚ್ಚಿ ಹೋಗುತ್ತದೆ.’ ಅದಕ್ಕೆ ಅವನು ‘ನಾನು ದೇವರನ್ನು ನಂಬಿದ್ದೇನೆ. ನಾನು ತಿರುಪತಿಯ ಭಕ್ತ, ಧರ್ಮಸ್ಥಳದ ಭಕ್ತ, ಮೇಲುಕೋಟೆಯ ಭಕ್ತ. ನನ್ನನ್ನು ದೇವರು ರಕ್ಷಣೆ ಮಾಡುತ್ತಾನೆ.’ ಎನ್ನುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ನೀರು ಬಂದು ಅವನ ಜಮೀನು ಕೊಚ್ಚಿ ಹೋಯ್ತು. ಮನೆ ಮಾತ್ರ ಉಳಿಯಿತು. ಆಗಲೂ ಯಾರೋ ಹೇಳಿದರಂತೆ. ಮೇಲೆ ಬಾ ಎಂದು. ನಾನು ಬರಲ್ಲ. ನನ್ನನ್ನು ದೇವರು ರಕ್ಷಣೆ ಮಾಡುತ್ತಾರೆ ಎಂದನAತೆ. ಇನ್ನೂ ಸ್ವಲ್ಪ ನೀರು ಹೆಚ್ಚಾದಾಗ ಅವನು ಮನೆಯ ಮೇಲೆ ಹೋಗಿ ಕುಳಿತ. ಮನೆ ಮೇಲೆ ಕೂತಾಗ ಯಾರೋ ಹೇಳಿದ್ರಂತೆ. ಯಾರೋ ಒಬ್ಬ ಸತ್ತು ಹೋಗ್ತಾ ಇದ್ದಾನೆ, ನೀರಲ್ಲಿ ಕೊಚ್ಚಿ ಹೋಗ್ತಾನೆ, ಹಗ್ಗ ಎಸೀರೋ ಅಂತ ಹಗ್ಗ ಎಸೆದರಂತೆ. ಹಗ್ಗ ಹತ್ತಿರ ಬಂತು. ಇವನು ಹೇಳುತ್ತಾನೆ ಬೇಡ ನಾನು ಬರೋದಿಲ್ಲ. ನನಗೆ ದೇವರೇ ರಕ್ಷಣೆ ಮಾಡುತ್ತಾರೆ. ನೀವೇನು ರಕ್ಷಣೆ ಮಾಡೋದು ಬೇಡ ಎಂದನAತೆ. ಆಮೇಲೆ ಇನ್ನೂ ನೀರು ಏರಿತು. ಯಾರೋ ದೋಣಿ ಕಳಿಸಿದರಂತೆ. ಆಗಲೂ ಅದನ್ನು ಅವನು ತಿರಸ್ಕರಿಸಿದನಂತೆ. ನಂತರ ಹೆಲಿಕಾಪ್ಟರ್ ತರಿಸಿ ಏಣಿ ಇಳಿಸಿದರಂತೆ. ಆಗ ಅವನು ಹೇಳಿದನಂತೆ. ನಾನು ಬರೋದಿಲ್ಲ. ನನ್ನನ್ನು ದೇವರು ಕಾಪಾಡುತ್ತಾನೆ ಎಂದು. ಸ್ವಲ್ಪ ಹೊತ್ತಿನಲ್ಲಿ ಆತ ಕೊಚ್ಚಿಕೊಂಡು ಹೋಗಿ ಸತ್ತೇ ಹೋದ. ಸತ್ತ ನಂತರ ದೇವರ ಹತ್ತಿರ ಹೋದ. ದೇವರನ್ನು ಕಂಡು ಬಹಳ ಸಿಟ್ಟಿನಿಂದ ಏನು ಮೋಸಗಾರ ಈ ದೇವರು. ಇಡೀ ಪ್ರಪಂಚದ ಜನರು ಇವನಿಗೆ ಹರಕೆ ಹೇಳ್ತಾರೆ, ಕಾಣಿಕೆ ಹಾಕ್ತಾರೆ, ಪೂಜೆ ಮಾಡ್ತಾರೆ. ನನ್ನನ್ನು ಮಾತ್ರ ರಕ್ಷಣೆ ಮಾಡಿಲ್ಲ. ಯಾವ ದೇವರು ರೀ ನೀವು! ಎಂದು ಬೈದನಂತೆ. ಇದನ್ನು ಕೇಳಿ ದೇವರು ನಿನಗೆ ಮೊದಲೇ ಎಚ್ಚರಿಕೆ ಕೊಟ್ಟೆ ನಾನು. ಮಳೆ ಬಂದರೆ ಮನೆ ಕೊಚ್ಚಿ ಹೋಗುತ್ತೆ ಎಂದು. ಇದನ್ನು ಜನರ ಮೂಲಕ ಹೇಳಿಸಿದೆ. ಆಮೇಲೆ ರಕ್ಷಣೆಗಾಗಿ ಹಗ್ಗ ಬಿಸಾಡಿದರು, ದೋಣಿ ಕಳಿಸಿದರು, ಹೆಲಿಕಾಪ್ಟರ್ ಕಳಿಸಿದರು. ಇದನ್ನೆಲ್ಲ ನಾನೇ ಕಳಿಸಿದ್ದೆ. ನಾನೇ ಸ್ವತಃ ಬಂದು ನೀಡಲಾಗುತ್ತದೆಯೇ? ನಿನಗೆ ಎಚ್ಚರಿಕೆ ಕೊಟ್ಟೆ, ಮಾಹಿತಿ ಕೊಟ್ಟೆ, ಜ್ಞಾನ ಕೊಟ್ಟೆ, ಅವಕಾಶ ಕೊಟ್ಟೆ, ಪರಿಹಾರವಾಗಿ ಕೆಲವು ಸೌಲಭ್ಯಗಳನ್ನು ಕೊಟ್ಟೆ, ಇಷ್ಟೆಲ್ಲಾ ಮಾಡಿದ್ದು ನಾನೇ. ಎಲ್ಲವನ್ನೂ ನೀನು ಹಿಂದೆ ಕಳಿಸಿದೆ. ನಾನೇನು ಮಾಡಲಪ್ಪಾ ಎಂದನAತೆ. ಆಗ ಆತನಿಗೆ ಜ್ಞಾನೋದಯವಾಯಿತಂತೆ.
ದೇವರು ಸಾಕ್ಷಾತ್ ಪ್ರತ್ಯಕ್ಷವಾಗಿ ಬಂದು ಹಳ್ಳ ತೋಡೋದು, ಗಿಡ ನೆಡುವುದು, ಗಿಡಕ್ಕೆ ಗೊಬ್ಬರ ಹಾಕುವುದು ಸಾಧ್ಯವಿಲ್ಲ. ಆದರೆ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಅದನ್ನು ಮಾಡಿಸುತ್ತಾರೆ. ಅದೇ ರೀತಿ ರಾಜ್ಯ ಸರಕಾರ, ಕೇಂದ್ರ ಸರಕಾರದ ಯೋಜನೆ ಇದ್ದರೆ ಆ ಮೂಲಕ ಮಾಡಿಸುತ್ತಾರೆ. ಈ ಎಲ್ಲ ಯೋಜನೆ ಬಂದಾಗ ಅದನ್ನು ತಿರಸ್ಕರಿಸಿದರೆ?! ಕೊನೆಗೆ ಕಾಯಿಲೆ ಬಿದ್ದಾಗ ಔಷಧಿಗೂ ದುಡ್ಡಿಲ್ಲ, ಮಕ್ಕಳಿಗೆ ಶಿಕ್ಷಣಕ್ಕೆ ಕೊಡಲು ದುಡ್ಡಿಲ್ಲ, ಮನೆ ರಿಪೇರಿಗೆ ದುಡ್ಡಿಲ್ಲ, ಆದಾಯ ಏನೂ ಇಲ್ಲ. ಇಂತಹ ಸಂದರ್ಭ ಬಂದಾಗ ದೇವರು ಏನೂ ಮಾಡಿಲ್ಲ, ದೇವರು ಕಣ್ಣೇ ಬಿಡಲಿಲ್ಲ ಎಂದು ದೇವರಿಗೆ ಬೈದರೆ ಏನಾಗುತ್ತದೆ? ಆದ್ದರಿಂದ ಅವಕಾಶಗಳು ಬಂದಾಗ ಅವುಗಳನ್ನು ಬಾಚಿಕೊಂಡು ಬದುಕನ್ನು ಸ್ವರ್ಗವಾಗಿಸಿಕೊಂಡು ಧೈರ್ಯ, ದಿಟ್ಟತನದಿಂದ ಬದುಕುವುದನ್ನು ಪ್ರತಿಯೊಬ್ಬರು ಕಲಿಯಬೇಕಿದೆ.