ದೇವಾಲಯ ಎಂಬ ಪವಿತ್ರ ಕ್ಷೇತ್ರ

ಈ ಜಗತ್ತು ನಂಬಿಕೆ, ಆತ್ಮವಿಶ್ವಾಸ, ಸತ್ಯ, ಧರ್ಮಗಳ ಆಧಾರದಲ್ಲೆ ನಿಂತಿದೆ. ಪ್ರತಿಯೊಂದು ಧರ್ಮದವರಿಗೂ ಅವರದ್ದೇ ಆದ ಧಾರ್ಮಿಕ ಶ್ರದ್ಧಾಕೇಂದ್ರಗಳಿವೆ. ಈ ಶ್ರದ್ಧಾಕೇಂದ್ರಗಳು ಮಾನವೀಯ ಮೌಲ್ಯಗಳನ್ನು ಕಲಿಸುವ, ಬೆಳೆಸುವ, ಉಳಿಸುವ ಕೆಲಸದ ಜೊತೆಗೆ ಸಮಾಜವನ್ನು ಸಮಾನತೆ, ನಂಬಿಕೆಯ ಕೊಂಡಿಯಲ್ಲಿ ಕಟ್ಟುವ ಪ್ರಯತ್ನವನ್ನು ಮಾಡುತ್ತಿವೆ. ದೇವರಿದ್ದಾನೆ ಎಂದು ನಂಬುವವರಿಗೆ ಕಷ್ಟಗಳು ಎದುರಾದಾಗ, ಸುಖಗಳು ಬಂದಾಗ ಶ್ರದ್ಧಾಕೇಂದ್ರಗಳ ಮೊರೆ ಹೋಗುತ್ತಾರೆ. ಅಲ್ಲಿ ಸಿಗುವ ನೆಮ್ಮದಿ, ಧನಾತ್ಮಕ ಅಂಶಗಳು ಬೇರೆಲ್ಲೂ ಸಿಗಲಾರದು. ಆದ್ದರಿಂದಲೇ ವರ್ಷದುದ್ದಕ್ಕೂ ಧಾರ್ಮಿಕ ಕ್ಷೇತ್ರಗಳು ಜನರಿಂದ ಗಿಜಿಗುಡುತ್ತಿರುತ್ತವೆ.
ನಂಬಿಕೆ ಎನ್ನುವುದು ರಾಜ್ಯ, ಜಿಲ್ಲೆಗಳ ವ್ಯಾಪ್ತಿಯನ್ನು ಮೀರಿದುದು. ಇದರಿಂದಾಗಿಯೇ ಪ್ರತಿನಿತ್ಯ ಧರ್ಮಸ್ಥಳಕ್ಕೆ ದೇಶದ ಬೇರೆ ಬೇರೆ ಭಾಗಗಳಿಂದ, ಜಿಲ್ಲೆಗಳಿಂದ ಭಕ್ತ ಸಾಗರ ಹರಿದು ಬರುತ್ತದೆ. ಯಾವುದೇ ಶ್ರದ್ಧಾಕೇಂದ್ರಕ್ಕೆ ಹೋದಾಗ ಭಕ್ತರಾಗಿ ನಾವು ಎಲ್ಲಿ ಹೇಗೆ ವ್ಯವಹರಿಸುತ್ತೇವೆ? ವ್ಯವಹರಿಸಬೇಕು ಎಂಬುವುದು ಮುಖ್ಯವಾಗುತ್ತದೆ. ಧರ್ಮಸ್ಥಳದ ದೇವರ ದರ್ಶನಕ್ಕೆ ಸರತಿಸಾಲಿನಲ್ಲಿ ಬರುವವರಿಗೆ ಕಾಣುವಂತೆ ಒಂದು ಬರಹವಿದೆ.
ಪಾದೌ ಪಾದಾಂತರೇ ಕೃತ್ವಾ, ಕರೌ ಚಲನವರ್ಜಿತೌ|
ವಾಚಾ ಸ್ತೋತ್ರಂ, ಹೃದಿ ಧ್ಯಾನಂ ಚತುರಂಗ ಪ್ರದಕ್ಷಿಣಮ್||
ಇದರ ಅರ್ಥ ಪ್ರದಕ್ಷಿಣೆಯನ್ನು ನಾಲ್ಕು ಅಂಗಗಳಿoದ ಕೂಡಿ ಮಾಡಬೇಕು. ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತ, ಕೈಗಳನ್ನು ಜೋಡಿಸಿಕೊಂಡು ಕೈಮುಗಿಯುತ್ತ, ಬಾಯಿಯಲ್ಲಿ ಸ್ತೊತ್ರ ಪಠಣ ಮಾಡುತ್ತ, ಹೃದಯದಲ್ಲಿ ಧ್ಯಾನ ಮಾಡುತ್ತ ನಮಸ್ಕರಿಸುವುದು ಸಂಪ್ರದಾಯ. ಇಲ್ಲಿ ಸರ್ವ ಸಮರ್ಪಣಾ ಭಾವ ವ್ಯಕ್ತವಾಗುವುದು. ಇದು ದೇವರಿಗೆ ನಮಸ್ಕಾರ ಮಾಡುವ ಕ್ರಮ. ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು, ಪಾದಗಳು, ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನಮಸ್ಕರಿಸುವುದು ಉದ್ದಂಡ ನಮಸ್ಕಾರ. ಸ್ತಿçÃಯರು ಸಾಷ್ಟಾಂಗ ನಮಸ್ಕಾರ ಮಾಡುವುದು ಸೂಕ್ತವಲ್ಲ.
ದೇವಸ್ಥಾನಕ್ಕೆ ಬರುವ ಭಕ್ತರು ದೇವಾಲಯದ ವಿಧಿ ನಿಷೇಧಗಳನ್ನು ಅರಿತು ಪಾಲಿಸಿ ದೇವರನ್ನು ಪ್ರಾರ್ಥಿಸಿದರೆ ಪುಣ್ಯವನ್ನು ಪಡೆಯುತ್ತಾರೆ. ವಿಧಿ ನಿಷೇಧಗಳನ್ನು ನಿರ್ಲಕ್ಷಿಸಿ ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ ಪುಣ್ಯದ ಬದಲು ಮತ್ತಷ್ಟು ಪಾಪವನ್ನೇ ಪಡೆಯುತ್ತಾರೆ ಎನ್ನುತ್ತದೆ ಆಗಮಶಾಸ್ತç.
ಸಾಮಾನ್ಯವಾಗಿ ಯಾವುದೇ ದೇವಸ್ಥಾನದ ಹೊರಗೆ ಎಷ್ಟು ಶಾಂತವಿರುತ್ತದೆಯೋ ಒಳಗಡೆ ಅಷ್ಟೇ ಗದ್ದಲವಿರುತ್ತದೆ. ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತವರು ಪರಸ್ಪರ ಗಟ್ಟಿ ಧ್ವನಿಯಲ್ಲಿ ಮಾತನಾಡಿಕೊಳ್ಳುವುದು, ಸ್ನೇಹಿತರು ಅಥವಾ ಯುವಕ ಯುವತಿಯರು ಏನೇನೋ ವಿಷಯಗಳ ಬಗ್ಗೆ ಪರಸ್ಪರ ಹಾಸ್ಯ ಮಾಡಿಕೊಳ್ಳುತ್ತ ಇರುತ್ತಾರೆ.
ನಾನು ಒಮ್ಮೆ ದೇವಸ್ಥಾನದ ಒಳಗೆ ಇರುವಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಸಿಬ್ಬಂದಿ, ಆ ಭಕ್ತರ ಹತ್ತಿರ ಹೋಗಿ ‘ಯಾಕೆ ಗಟ್ಟಿಯಾಗಿ ಮಾತನಾಡುತ್ತಿದ್ದೀರಿ? ಸಣ್ಣ ಸ್ವರದಲ್ಲಿ ಮಾತನಾಡಿ’ ಎಂದ. ಅವರು ಮತ್ತೂ ಗಟ್ಟಿಯಾಗಿ ಹಾಸ್ಯ ಮಾಡತೊಡಗಿದರು. ಅಲ್ಲಿಯೇ ಇದ್ದ ನಾನು ‘ನೋಡಿ, ನಿಮ್ಮ ಊರಿನಿಂದ ಧರ್ಮಸ್ಥಳಕ್ಕೆ ಬರಲಿಕ್ಕೆ ಐದಾರು ಗಂಟೆ ತಗುಲಿರಬಹುದು. ಇಲ್ಲಿಂದ ಹಿಂದೆ ಹೋಗಲು ಕೂಡಾ ಅಷ್ಟೇ ಸಮಯ ಬೇಕು. ಅಂದರೆ ಹತ್ತರಿಂದ ಹನ್ನೆರಡು ತಾಸು ಮನರಂಜನೆಗೆ, ಹಾಸ್ಯಕ್ಕೆ, ಪರಸ್ಪರ ಸುಖ ದುಃಖಗಳನ್ನು ಮಾತನಾಡಿಕೊಳ್ಳುವುದಕ್ಕೆ, ಸ್ನೇಹದ ಸಮಯವನ್ನು ಕಳೆಯುವುದಕ್ಕೆ ಅವಕಾಶವಿದೆ. ದೇವಸ್ಥಾನದ ಒಳಗಡೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಸಂಚರಿಸುವಾಗ ಕೆಲವು ಕಾಲ ದೇವರ ಆವರಣದಲ್ಲಿ ಸಮಯ ಸಿಗುತ್ತದೆ. ಈ ಸಮಯವನ್ನಾದರೂ ನೀವು ಮೌನವಾಗಿದ್ದು, ಗೌರವದಿಂದ ಕಳೆಯಬೇಕು. ಇನ್ನು ಭಗವಂತನ ದರ್ಶನ ಮಾಡುತ್ತಿದ್ದೇವೆ ಎಂಬoಥ ಭಕ್ತಿ, ಗೌರವ ನಿಮ್ಮಲ್ಲಿರಬೇಕು. ನಿಮ್ಮಲ್ಲಿ ಇಬ್ಬರು ಕೂದಲನ್ನು ಕೊಟ್ಟವರು ಅಂದರೆ ವ್ರತಧಾರಿಗಳಾದವರು ಕೂಡಾ ಇದ್ದೀರಿ. ಅಷ್ಟು ದೂರದಿಂದ ಬಂದು, ಇಷ್ಟೆಲ್ಲ ಕಾದು, ಭಗವಂತನ ಸಾನಿಧ್ಯ ಬರುವವರೆಗಾದರೂ ಮೌನವಾಗಿರಬೇಕಾದ ಪ್ರಜ್ಞೆ ಇಲ್ಲ ಅಂದರೆ ಹೇಗಪ್ಪ?’ ಎಂದು ಹೇಳಿದೆ. ಸ್ವಲ್ಪ ನಿಶ್ಯಬ್ದವಾಯಿತು.
ಗದ್ದಲ ನಿಯಂತ್ರಿಸುವುದಕ್ಕಾಗಿ ನಮ್ಮ ದೇವಸ್ಥಾನದಲ್ಲಿ ಎರಡು ನಾಮಫಲಕವನ್ನು ಹಾಕಿದ್ದೇವೆ. ಮೊದಲನೆಯದಾಗಿ ‘ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಹೋಗಿ’ ಎಂದು. ಇದರಿಂದ ಕೊನೆಯಪಕ್ಷ ಮನೆಯವರು, ಕುಟುಂಬದವರು ದೇವಸ್ಥಾನದ ಒಳಗಡೆ ಹೋಗಿ ಹೊರಗೆ ಬರುವವರೆಗೆ ಜೊತೆಯಾಗಿದ್ದರೆ ಅವರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇನ್ನೊಂದು ನಮಗೆ ಗೊತ್ತಿರುವ ಹಾಗೆ ಜೊತೆಯಾಗಿ ಬಂದವರು ತಮ್ಮ ಸಮಸ್ಯೆಗಳನ್ನು ಸರತಿ ಸಾಲಿನಲ್ಲಿ ನಿಂತಾಗ ಮಾತನಾಡುತ್ತಾರೆ. ಹಳ್ಳಿಯ ಜನ ಬಂದರೆ ಅವರು ಮಾತನಾಡುವುದು ಸಹಜವಾಗಿದ್ದರೂ, ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಆ ಮಾತುಕತೆ ಇತರ ಭಕ್ತರ ಏಕಾಗ್ರತೆಗೆ ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ದೇವಾಲಯದ ಪಾವಿತ್ರö್ಯತೆಗೆ ಧಕ್ಕೆ ಆಗದ ಹಾಗೆ ದೇವರ ದರ್ಶನ ಮಾಡುವ ತಾಳ್ಮೆಯನ್ನು ನಾವು ಬೆಳೆಸಿಕೊಳ್ಳಬೇಕಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates