ದೊಡ್ಡ ಮೌಲ್ಯವುಳ್ಳ ಚಿಕ್ಕ ಕೆಲಸ

ಇಡೀ ಪ್ರಪಂಚಕ್ಕೆ ಏನಾದರೂ ಸಹಾಯ ಮಾಡಬೇಕು ಅಥವಾ ತನ್ನ ದೇಶದ ಜನರಿಗೆ, ಪ್ರಾಣಿ-ಪಕ್ಷಿಗಳಿಗೆಲ್ಲ ಪ್ರಯೋಜನವಾಗುವಂತಹ ಒಂದು ಒಳ್ಳೆಯ ಕೆಲಸ ಮಾಡಬೇಕು. ಆದರೆ ನಾನೇನು ಮಾಡಲಿ ನನ್ನಲ್ಲಿ ಹಣವಿಲ್ಲ, ಜನವಿಲ್ಲ, ಅಧಿಕಾರ ಬಲವಿಲ್ಲ ಎನ್ನುವ ಯೋಚನೆ ಇಲ್ಲದೆ ಮಾಡಬಹುದಾದ ಬಹಳ ಸರಳ ಮತ್ತು ಸುಲಭವಾದ ಕೆಲಸವೆಂದರೆ ಅದು ‘ಒಂದು ಗಿಡವನ್ನು ನೆಟ್ಟು ಬೆಳೆಸುವುದು.’ ಈ ಜಗತ್ತನ್ನು ಉಳಿಸಬಲ್ಲವರು ಯಾರಾದರೂ ಇದ್ದರೆ ಅದು ಮರವಲ್ಲದೆ ಮನುಷ್ಯರಲ್ಲ. ಮನುಷ್ಯ ಮಾಡುತ್ತಿರುವ ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಒಳ್ಳೆಯ ಮಳೆ – ಬೆಳೆ, ಫಲಗಳನ್ನಷ್ಟೆ ಅಲ್ಲ, ಭೂಮಿಯನ್ನೇ ಫಲವತ್ತಾಗಿಸುವ ಸಾಮರ್ಥ್ಯ ಮರಗಳಿಗಿದೆ. ಅವು ಬಿಡುವ ಉಸಿರೇ ನಾವು ತೆಗೆದುಕೊಳ್ಳುವ ಪ್ರಾಣವಾಯು. ಅವುಗಳ ಎಲೆಗಳ ಮೂಲಕ ಆವಿಯಾಗಿ ಆಕಾಶ ಸೇರುವ ನೀರೇ ಮತ್ತೆ ಇಳೆಗೆ ಸುರಿಯುವ ಮಳೆ. ಆದರೆ ಮರಗಳಿಂದಾಗುವ ಪರೋಕ್ಷ ಲಾಭವನ್ನು ಅರಿಯುವ ಜ್ಞಾನ ಇನ್ನೂ ನಮ್ಮವರಿಗೆ ಬಂದಿಲ್ಲ. ಇದರ ಬದಲು ಮರದಲ್ಲಿ ಒಂದಷ್ಟು ಹಣ ಸಿಗುತ್ತಿದ್ದರೆ ನಾವು ಬಹಳಷ್ಟು ಮರಗಳನ್ನು ನೆಡುತ್ತಿದ್ದೆವು. ಮಕ್ಕಳು ಆಗಾಗ ದುಡ್ಡು ಬೇಕು ಎಂದು ಪೀಡಿಸಿದರೆ, ‘ನಾನೇನು ದುಡ್ಡಿನ ಮರ ನೆಟ್ಟಿದ್ದೇನಾ? ದುಡ್ಡು ಮರದಲ್ಲಿ ಬೆಳೆಯುತ್ತಾ’ ಅಂತ ಬೈಯುವುದಿದೆ. ಈಗಲೇ ನನಗೆ ಮೂವತ್ತು ವರ್ಷವಾಯಿತು. ಇನ್ನು ಸಸಿ ನೆಟ್ಟು ಅದು ಮರವಾಗುವಾಗ ನಾನು ಇರುತ್ತೇನೋ, ಇಲ್ಲವೋ! ನನಗ್ಯಾಕೆ ಬೇಕು ಮರ ಬೆಳೆಸುವ ಕೆಲಸ! ಎಂದು ಸುಮ್ಮನಿರುವ ಬದಲಿಗೆ, ಕಳೆದು ಹೋದ ಸಮಯ ಕಳೆಯಿತು. ಇವತ್ತು ಮರ ನೆಡಲು ಸುದಿನ ಎಂದು ಭಾವಿಸಿ ಜಗತ್ತನ್ನು ಹಸಿರಾಗಿಸುವ, ತಂಪಾಗಿಸುವ ದೊಡ್ಡ ಕಾರ್ಯಕ್ಕಾಗಿ ಪರಿಸರ ಬೆಳೆಸುವ ಸಣ್ಣ ಕೆಲಸವನ್ನು ಇಂದೇ ಕೈಗೆತ್ತಿಕೊಳ್ಳೋಣ. ಬಾಲ್ಯದಿಂದ ಯೌವನದವರೆಗೆ ನಾನಾ ರೀತಿಯಲ್ಲಿ ಸಂಗಾತಿಯಾಗಿದ್ದ ಮರವನ್ನು ನಮ್ಮ ಲಾಭಕ್ಕಾಗಿ ಒಂದೇ ಕ್ಷಣದಲ್ಲಿ ಕಡಿದು ಹಾಕುತ್ತೇವೆ. ಇಷ್ಟೆಲ್ಲ ಮರದ ಬಗ್ಗೆ ಬರೆಯಬೇಕಾದರೂ ಈ ಪೇಪರ್ ಕೂಡಾ ಮರದ ಮೂಲದಿಂದಲೇ ಬಂದದ್ದಾಗಿದೆ ಎಂಬುದನ್ನು ಮರೆಯುವಂತಿಲ್ಲ. ಇಂದಿನ ಕಾಲದಲ್ಲಿ ಕರವಸ್ತç ಹಿಡಿದುಕೊಳ್ಳುವವರು ಕಡಿಮೆ. ಮನೆ, ಕಾರು, ಕಚೇರಿ, ಮೂಗು, ಕೈ ಒರೆಸಲು, ಏನಾದರೂ ಚೆಲ್ಲಿದಾಗ ಒರೆಸಲು ಹೀಗೆ ಎಲ್ಲೆಡೆಯೂ ಟಿಷ್ಯೂ ಪೇಪರ್‌ಗಳ ಬಳಕೆಯಾಗುತ್ತಿದೆ. ಟಿಷ್ಯು ಪೇಪರ್, ಮಕ್ಕಳ ಡೈಪರ್, ಟಾಯ್ಲೆಟ್‌ನಲ್ಲಿ ಬಳಸುವ ಪೇಪರ್ ರೋಲ್‌ಗಳ ಮೂಲ ಕೂಡಾ ಮರಗಳೇ ಆಗಿವೆ.
ಹಿಂದಿನವರು ಬಹಳಷ್ಟು ಗಿಡ – ಮರಗಳನ್ನು ಬೆಳೆಸುತ್ತಿದ್ದರು. ಕೆಲವೊಂದು ಮರಗಳನ್ನು ಪೂಜಿಸುತ್ತಿದ್ದರು. ಅಲ್ಲಲ್ಲಿ ನಾಗಬನ, ದೇವರಕಾಡು ಎಂಬ ಹೆಸರಿನಲ್ಲಿ ಮರಗಳ ರಕ್ಷಣೆ ಆಗುತ್ತಿತ್ತು. ಟಿಷ್ಯೂ ಪೇಪರ್, ಡೈಪರ್‌ನಂತಹ ಹೆಸರನ್ನು ಹಿಂದೆ ಅವರು ಕೇಳಿರಲಿಕ್ಕಿಲ್ಲ. ಇಂದು ಇವುಗಳನ್ನು ಬಳಸುವುದು ಅನಿವಾರ್ಯವಾದರೂ ಪ್ರತಿ ಬಾರಿ ಬಳಸುವಾಗಲೂ ಇದರ ಹಿಂದೆ ಒಂದು ಜೀವಂತ ಮರ ಇತ್ತು ಎಂಬ ಕಾಳಜಿ ನಮ್ಮಲ್ಲಿರಲಿ.
ತಮ್ಮ ಜಾಗದಲ್ಲೊಂದು ಮಾವಿನ ಮರವೋ, ಹಲಸಿನ ಮರವೋ ಇದ್ದು ಅದಕ್ಕೆ ಮಕ್ಕಳೇನಾದರೂ ಕಲ್ಲು ಹೊಡೆಯಲು ಬಂದರೆ, ಒಂದು ಹಲಸು ಮರದಿಂದ ಕಾಣೆ ಆದರೆ ಊರೆಲ್ಲಾ ಗುಲ್ಲೆಬ್ಬಿಸಿ ಆ ಮರದ ಮೇಲೆ ಹಕ್ಕು ಸ್ಥಾಪನೆ ಮಾಡುವ ನಾವು, ನಮ್ಮ ಕೈಯಾರೆ ಒಂದು ಮರ ನೆಟ್ಟವರಲ್ಲ. ಕೊನೆಗೆ ಧರ್ಮಕ್ಕೆ ಆ ಮರ ಪ್ರತಿ ವರ್ಷ ಕೊಡುವ ಹಣ್ಣನ್ನು ಒಂದಿಬ್ಬರಿಗಾದರೂ ಕರೆದುಕೊಡುವ ಔದಾರ್ಯವೂ ನಮ್ಮಲ್ಲಿಲ್ಲ. ಮರಗಳು ಮಣ್ಣು, ಗಾಳಿ, ನೀರು, ಸೂರ್ಯನ ಬೆಳಕನ್ನು ಹೀರಿ ಬೆಳೆಯುತ್ತವೆ. ಬೆಳೆಯುವ ಪ್ರಕ್ರಿಯೆ ಸ್ವಾಭಾವಿಕವಾದದ್ದು. ಪ್ರಕೃತಿ ಗಾಳಿ, ನೀರು, ಮಣ್ಣು, ಬೀಜ ಕೊಟ್ಟರೂ ಅಹಂಕಾರ ಪಡುವುದಿಲ್ಲ. ಇವೆಲ್ಲವನ್ನೂ ಉಚಿತವಾಗಿ ಬಳಸಿಕೊಂಡ ನಾವು ಬೆಳೆದು ನಿಂತ ಮರಗಳನ್ನು ಕಡಿಯುವಾಗ ಯಾರ ಅನುಮತಿಗಾಗಿಯೂ ಕಾಯುವುದಿಲ್ಲ. ಈ ರೀತಿ ಮರಗಳ ಬಗ್ಗೆ, ಹಸಿರಿನ ಬಗೆಗಿನ ಕುರುಡುತನ ಎಲ್ಲರನ್ನು ಆವರಿಸಿಕೊಂಡಿರುವುದರಿAದ ದಿನೇ ದಿನೇ ಭೂಮಿಯ ಬಿಸಿ ಏರುತ್ತಿದೆ. ಬಿಸಿಲಿನ ಆಘಾತಕ್ಕೆ ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಿಂದೆ ಎಂತಹ ಬಿಸಿಲೇ ಇದ್ದರೂ ದಾರಿಯುದ್ದಕ್ಕೂ ಮರಗಳಿದ್ದುದರಿಂದ ಮನೆ ಇಲ್ಲದವರಿಗೆ ಬಿಸಿಲು ಕಂತುವವರೆಗೆ ಮರದ ನೆರಳೇ ಆಶ್ರಯ ತಾಣವಾಗುತ್ತಿತ್ತು. ಆದರೆ ಈಗಿನ ನಗರ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಓಡಾಡುವುದೂ ಕಷ್ಟವಾಗಿದೆ. ಬಿಸಿಲಿಗೆ ಬಂದರೆ ಒಂದು ನಿಮಿಷ ವಿಶ್ರಮಿಸಲು ಮರಗಳಿಲ್ಲ. ವಿದೇಶಗಳಲ್ಲಿ ತ್ರಿಪಥ, ಚತುಷ್ಪದ ರಸ್ತೆಗಳಿರುವ ಪಟ್ಟಣಗಳಲ್ಲಿ ದಾರಿ ಹೋಕರಿಗೆ, ಸೈಕಲ್ ಸವಾರರಿಗೆ ಬೇರೆಯೇ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು ಅಲ್ಲಿ ಅವರು ಆರಾಮವಾಗಿ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಮತ್ತು ನೆರಳಿಗಾಗಿ ಮರಗಳನ್ನು ನೆಟ್ಟು ಬೆಳೆಸುತ್ತಾರೆ.
ಒಟ್ಟಿನಲ್ಲಿ ‘ಹಸಿರೇ ಉಸಿರು’ ಎಂಬ ವಿಚಾರ ಮಕ್ಕಳ ಪಾಠ ಪುಸ್ತಕಗಳಲ್ಲಿ ಬರಬೇಕು. ಆ ಮೂಲಕ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಈ ವಿಚಾರವನ್ನು ಬಿತ್ತುವ ಕೆಲಸವಾಗಬೇಕಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates