ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಅನೇಕ ದೇಗುಲಗಳಲ್ಲಿ ದೊಡ್ಡ ನಾಮಫಲಕಗಳಲ್ಲಿ ದಾನಿಗಳ ಹೆಸರು ಬರೆದಿರುವುದನ್ನು ನಾವು ನೋಡುತ್ತೇವೆ. ಹತ್ತು, ಐದು ಲಕ್ಷ ರೂಪಾಯಿ ದಾನ ಮಾಡಿದವರ ಹೆಸರು ಮೇಲಿನ ಸಾಲಿನಲ್ಲಿರುತ್ತದೆ. ತಿಂಗಳಿಗೆ ಹತ್ತು ಲಕ್ಷ ರೂಪಾಯಿ ಆದಾಯ ಇರುವವನು ಒಂದು ಲಕ್ಷ ರೂಪಾಯಿ ದಾನ ಮಾಡಿರುತ್ತಾನೆ. ಅಂದರೆ ಅದು ಅವನ ಆದಾಯದ ಹತ್ತನೇ ಒಂದು ಅಂಶ. ಅದೇ ರೀತಿ ಕೆಳಗಿನ ಸಾಲಿನಲ್ಲಿರುವ ವ್ಯಕ್ತಿಯೊಬ್ಬ ಒಂದು ಸಾವಿರ ರೂಪಾಯಿ ದಾನ ಮಾಡಿರುತ್ತಾನೆ. ಅಂದರೆ ಆತನ ಸಂಪಾದನೆ 10 ಸಾವಿರವಾದರೆ ಆತನ ಸಂಪಾದನೆಯ ಹತ್ತನೇ ಒಂದು ಅಂಶವನ್ನು ದಾನ ಮಾಡಿರುತ್ತಾನೆ. ಆತನೂ ಉದಾರವಾಗಿ ದಾನ ಮಾಡಿದ್ದಾನೆ ಅನ್ನುವುದಂತೂ ಸತ್ಯ. ಇದು ದೇವರ ಮನಸ್ಸಿಗೂ ವೇದ್ಯವಾಗುವ ಸಂಗತಿ.
ಈ ತರ್ಕಕ್ಕೆ ಸಂಬ0ಧಿಸಿದ0ತೆ ಒಂದು ಕಥೆಯನ್ನು ಇತ್ತೀಚೆಗೆ ನಾನು ಓದಿದೆ. ಒಂದು ಊರಿನ ದೇವಸ್ಥಾನದ ಕಟ್ಟೆಯಲ್ಲಿ ಕುಳಿತು ಅದೇ ಊರಿನವರಿಬ್ಬರೂ ಹರಟೆ ಹೊಡೆಯುತ್ತಿದ್ದಾಗ ಮೂರನೆ ವ್ಯಕ್ತಿ ಬಂದು ಅವರ ಜೊತೆ ಸೇರಿಕೊಂಡು ಮಾತನಾಡುವುದಕ್ಕೆ ಆರಂಭಿಸಿದ. ಸ್ವಲ್ಪ ಹೊತ್ತು ಕಳೆದ ಬಳಿಕ ಬಂದ ವ್ಯಕ್ತಿ ನನಗೆ ಬಹಳ ಹಸಿವಾಗುತ್ತದೆ ಎಂದ. ಅಷ್ಟರಲ್ಲಿ ಜೋರಾದ ಮಳೆ ಬೇರೆ ಆರಂಭವಾಯಿತು. ಊರಿನವರು ಚಿಂತೆ ಇಲ್ಲ ನಮ್ಮಿಬ್ಬರಲ್ಲಿ ತಲಾ ಮೂರು ಮತ್ತು ಐದು ರೊಟ್ಟಿ ಇದೆ ಅದನ್ನು ಹಂಚಿ ತಿನ್ನೋಣ ಅನ್ನುತ್ತಾರೆ. ಆದರೆ ಎಂಟು ರೊಟ್ಟಿಯನ್ನು ಮೂರು ಜನರಲ್ಲಿ ಹಂಚುವುದಕ್ಕಾಗುವುದಿಲ್ಲವೆ0ದು ಎಲ್ಲಾ ರೊಟ್ಟಿಗಳನ್ನು ಮೂರು ತುಂಡು ಮಾಡಿದಾಗ ಆದ ಒಟ್ಟು ಇಪ್ಪತ್ತಾö್ನಲ್ಕು ತುಂಡುಗಳನ್ನು ಪ್ರತಿಯೊಬ್ಬರೂ ಎಂಟು ತುಂಡುಗಳ0ತೆ ತಿಂದು ಹಸಿವೆ ನೀಗಿಸಿಕೊಳ್ಳುತ್ತಾರೆ. ಆದರೆ ಸಮಸ್ಯೆ ಆರಂಭವಾಗುವುದು ಆ ಆಗಂತುಕ ಎಂಟು ಚಿನ್ನದ ನಾಣ್ಯಗಳನ್ನು ಕೊಟ್ಟು ಅವರಿಗೆ ಕೃತಜ್ಞತೆ ಸಲ್ಲಿಸಿ ಹೊರಟ ಬಳಿಕ.
ಆತ ಅತ್ತ ಹೊರಟ ಬಳಿಕ ಮೊದಲಿನವನು ಹೇಳುತ್ತಾನೆ. `ಸರಿ ನಾವಿಬ್ಬರೂ ಈ ಚಿನ್ನದ ನಾಣ್ಯಗಳನ್ನು ಸಮಾನವಾಗಿ ಹಂಚಿಕೊಳ್ಳೋಣ.’ ಅದಕ್ಕೆ ಎರಡನೇ ವ್ಯಕ್ತಿ `ಅದು ಹೇಗೆ ಸಾಧ್ಯ? ನಿನ್ನಲ್ಲಿದ್ದದ್ದು ಮೂರು ರೊಟ್ಟಿ, ನನ್ನದು ಐದು ರೊಟ್ಟಿ. ಐದು ನಾಣ್ಯ ನನಗೆ ಮೂರು ನಾಣ್ಯ ನಿನಗೆ ಅನ್ನುತ್ತಾನೆ’. ಇಲ್ಲ ನನಗೆ ನಾಲ್ಕು ಸಿಗಲೇಬೇಕು ಎಂದು ಮೊದಲನೆಯವನ ಹಠ. ಕೊನೆಗೆ ಗ್ರಾಮದ ಮುಖ್ಯಸ್ಥನಲ್ಲಿಗೆ ಹೋಗಿ ಈ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.
ಮುಖ್ಯಸ್ಥನಿಗೆ ೨.೫ ರ ಸೂತ್ರವೇ ಸರಿ ಅನ್ನಿಸಿದರೂ ನಾಳೆ ಬರುವಂತೆ ಹೇಳಿ ರಾತ್ರಿ ಹೋಗಿ ಸಮಸ್ಯೆಗೆ ಪರಿಹಾರ ಹೇಗೆ ಎಂದು ಚಿಂತಿಸುತ್ತಾ ನಿದ್ರಿಸುತ್ತಾನೆ. ರಾತ್ರಿ ಕನಸಿನಲ್ಲಿ ಗ್ರಾಮ ದೇವತೆ ‘ನಿನ್ನ ಹಂಚಿಕೆ ಸೂತ್ರ ನ್ಯಾಯ ಸಮ್ಮತವಲ್ಲ. ನನ್ನ ಪ್ರಕಾರ ಮೊದಲಿನವನಿಗೆ ಒಂದು ನಾಣ್ಯ ಮಾತ್ರ ಸೇರಬೇಕು. ಹೇಗೆಂದರೆ ಆತನ ಮೂರು ರೊಟ್ಟಿಯನ್ನು ಮೂರು ತುಂಡು ಮಾಡಿದಾಗ ಒಂಭತ್ತು ತುಂಡು ಸಿಕ್ಕಿತ್ತು. ಅದರಲ್ಲಿ ಎಂಟು ತುಂಡುಗಳನ್ನು ಆತನೇ ತಿಂದು ಒಂದು ತುಂಡು ಮಾತ್ರ ಅತಿಥಿಗೆ ನೀಡಿದ್ದಾನೆ. ಇನ್ನೊಬ್ಬನ ಐದು ರೊಟ್ಟಿಯನ್ನು ಮೂರು ತುಂಡು ಮಾಡಿದಾಗ ಹದಿನೈದು ತುಂಡು ಸಿಕ್ಕಿದ್ದು ಆತನೂ ತನ್ನ ಪಾಲಿನ ಎಂಟು ತುಂಡುಗಳನ್ನು ತಿಂದು ಉಳಿದ ಏಳು ತುಂಡನ್ನು ಅತಿಥಿಗೆ ನೀಡಿದ್ದಾನೆ. ಹಾಗಾಗಿ ಏಳು ನಾಣ್ಯ ಆತನಿಗೆ ಸಿಗಬೇಕು. ಮೂರು ರೊಟ್ಟಿಯವನಿಗೆ ಒಂದು ನಾಣ್ಯ ಮಾತ್ರ ಸಿಗಬೇಕಾದದ್ದು ನ್ಯಾಯ’ ಅನ್ನುತ್ತದೆ. ಗ್ರಾಮ ಮುಖ್ಯಸ್ಥ ಇದೇ ತರ್ಕದಿಂದ ಮೊದಲಿನವನಿಗೆ ಒಂದು, ಎರಡನೆಯವನಿಗೆ ಏಳು ಚಿನ್ನದ ನಾಣ್ಯವನ್ನು ಕೊಡುತ್ತಾನೆ. ಮಾತ್ರವಲ್ಲ, ‘ನಮ್ಮಲ್ಲಿ ಇದ್ದದ್ದೆಷ್ಟು ಅನ್ನುವುದಕ್ಕಿಂತ ನಾವು ಕೊಟ್ಟದ್ದೆಷ್ಟು ಅನ್ನುವುದೇ ಮುಖ್ಯ’ ಎಂದು ಪ್ರತಿಪಾದಿಸುತ್ತಾನೆ. ಆತನ ಹೊಸ ರೀತಿಯ ತರ್ಕಕ್ಕೆ ಎಲ್ಲರೂ ಖುಷಿಪಡುತ್ತಾರೆ. ಹಾಗೆ ಪಾಪ – ಪುಣ್ಯಗಳ ತಕ್ಕಡಿಯ ತುಲನೆಯೂ ನಮ್ಮ ತರ್ಕವನ್ನು ಮೀರಿದ್ದಾಗಿರುತ್ತದೆ. ಪುಣ್ಯದ ಕ್ರಿಯೆಗಳನ್ನಷ್ಟೆ ಅಲ್ಲ, ಕ್ರಿಯೆಯ ಹಿಂದಿರುವ ಭಾವನೆಯನ್ನು ಲೆಕ್ಕ ಹಾಕಬೇಕಾಗುತ್ತದೆ. ಪುಣ್ಯ ಗಳಿಸುವುದಕ್ಕಾಗಿ ಮಾಡುವ ಕ್ರಿಯೆಗಳ ಹಿಂದೆಯೂ ಒಂದು ಸ್ವಾರ್ಥ, ಲಾಭ – ನಷ್ಟದ ಲೆಕ್ಕಾಚಾರವಿರುತ್ತದೆ. ಜೊತೆಗೆ ಹೆಸರು, ಕೀರ್ತಿಗಳ ಕಾಮನೆಯೂ ಸೇರಿರುತ್ತದೆ. ದೇವರೆದುರಿನ ಹುಂಡಿಯಲ್ಲಿ ಯಾರೂ, ಎಷ್ಟು ದುಡ್ಡು ಹಾಕಿದರೂ ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ದೇವಸ್ಥಾನದ ಹುಂಡಿ ತೆಗೆಯುವಾಗ ಅಲ್ಲಿ ಸಿಗುವುದು ಹೆಚ್ಚಾಗಿ ಪುಡಿಕಾಸುಗಳೇ. ಅದೇ ಆಮಂತ್ರಣ ಪತ್ರಿಕೆಯಲ್ಲಿ ದಾನ ಕೊಟ್ಟವರ ಹೆಸರು ಹಾಕಲಾಗುತ್ತದೆ ಎಂದಾಗ ಜಾಸ್ತಿ ಹಣ ಕೊಟ್ಟು ಎಲ್ಲರಿಗಿಂತ ಮೇಲಿನ ಸ್ಥಾನದಲ್ಲಿ ತನ್ನ ಹೆಸರು ಬರಬೇಕೆಂದು ಬಯಸುವವರು ಬಹಳ ಮಂದಿ. ನಿಜವಾದ ದಾನಿಗಳು ಹೆಸರು, ಗೌರವ ಬೇಕೆಂದು ಇಚ್ಛಿಸುವುದಿಲ್ಲ. ಆದರೆ ಎಷ್ಟೋ ಕಡೆಗಳಲ್ಲಿ ದಾನ ನೀಡಿದವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ – ಫಲಕಗಳಲ್ಲಿ ಸರಿಯಾಗಿ ಪ್ರಕಟವಾಗಿಲ್ಲ, ಹೆಸರನ್ನು ಕೆಳಗೆ ಹಾಕಿದ್ದಾರೆ ಇಂತಹ ಸಣ್ಣಪುಟ್ಟ ವಿಷಯಗಳಿಗೆ ದೊಡ್ಡ ಜಗಳಗಳಾಗುವುದನ್ನು ಕೇಳಿದ್ದೇವೆ. ಒಂದು ಮಾತಿದೆ, ‘ಬಲಗೈಯಲ್ಲಿ ದಾನ ಮಾಡಿದ್ದು ಎಡಗೈಗೂ ತಿಳಿಯಬಾರದು’ ಎಂದು. ಈ ರೀತಿ ದಾನ ಮಾಡುವ ಅನಾಮಧೇಯ ದಾನಿಗಳು ನಮ್ಮ ನಡುವೆ ಇದ್ದಾರೆ. ದಾನ ಮಾಡಿದ ನಂತರ ಆ ಕುರಿತು ನಾವು ಚಿಂತಿಸಬಾರದು. ಯಾವುದೇ ಆಸೆ, ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ದಾನ ಮಾಡಿದರೆ ಅಂಥವರು ಪುಣ್ಯಕ್ಕೆ ಪೂರ್ಣ ಹಕ್ಕುದಾರರಾಗುತ್ತಾರೆ.