ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಒಂದರ್ಧ ತಾಸು ಭಾಷಣವನ್ನು ಕೇಳಿ ಮನೆ ತಲುಪಿದ ನಂತರ ನಮ್ಮ ನೆನಪಿನ ಪಟಲದಲ್ಲಿ ಉಳಿಯುವುದು ಭಾಷಣದಲ್ಲಿ ಹೇಳಿದ ಒಂದೆರಡು ಕತೆಗಳು ಮಾತ್ರ. ಎಲ್ಲೋ ಕೇಳಿದ, ಓದಿದ ನೀತಿ ಕಥೆಗಳನ್ನು ಬರೆದಿಟ್ಟುಕೊಳ್ಳುವವರು ನಮ್ಮಲ್ಲಿದ್ದಾರೆ. ನೀತಿಯನ್ನು ಬೋಧಿಸುವ ನೀತಿಕಥೆಗಳನ್ನು ಪ್ರತಿಯೊಬ್ಬರು ಓದಿದಲ್ಲಿ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಬದಲಾಗುವುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ನೀತಿ ಕಥೆಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಇವುಗಳೊಳಗಿನ ಸಾರ ನಮಗೆಲ್ಲರಿಗೂ ದಾರಿದೀಪವಾಗಲಿ.
ಸನ್ಯಾಸಿಯೊಬ್ಬ ಒಂದು ಮನೆ ಜಗಲಿಯಲ್ಲಿ ರಾತ್ರಿ ಹೊತ್ತು ಮಲಗಿದ್ದ. ಮಧ್ಯರಾತ್ರಿ ಒಳಗಿನಿಂದ ಗುಸುಗುಸು ಅಳುವ ಸದ್ದು ಕೇಳಿ ಬರುತ್ತಿತ್ತು. ಸನ್ಯಾಸಿ ಕಿವಿಕೊಟ್ಟು ಕೇಳುತ್ತಿದ್ದರೆ ಮನೆಯೊಳಗಿನಿಂದ ಅಜ್ಜಿಯೊಬ್ಬಳು ಮೊಮ್ಮಗನನ್ನು ಎಬ್ಬಿಸುತ್ತಾ, ‘ರಾಮಣ್ಣ ತೀರಿಕೊಂಡ ಮಗ. ನೀನೊಮ್ಮೆ ಅವನ ಮನೆಯ ಬಳಿ ಹೋಗಿ ಅವನು ಸ್ವರ್ಗಕ್ಕೆ ಹೋಗಿದ್ದಾನೋ? ನರಕಕ್ಕೆ ಹೋಗಿದ್ದಾನೋ? ಎಂದು ನೋಡಿ ಬಾ’ ಎಂದರoತೆ. ಸನ್ಯಾಸಿಗೆ ಆಶ್ಚರ್ಯವಾಗುತ್ತದೆ. ನಾನು ಇಷ್ಟು ವರ್ಷ ತಪಸ್ಸು ಮಾಡಿದ್ದೇನೆ. ಆದರೂ ನನಗೆ ಯಾರು ಸ್ವರ್ಗಕ್ಕೆ ಹೋಗುತ್ತಾರೆ? ಯಾರು ನರಕಕ್ಕೆ ಹೋಗುತ್ತಾರೆ? ಎಂದು ಗೊತ್ತಾಗುತ್ತಿಲ್ಲ. ಇವರು ಹೇಗೆ ಇದನ್ನು ಕಂಡುಹಿಡಿಯುತ್ತಾರೆ ಎಂದು. ಮೊಮ್ಮಗ ಹೊರಗೆ ಹೋಗಿ ಹಿಂದಿರುಗಿ ಬಂದು ‘ಅಜ್ಜಿ, ರಾಮಣ್ಣ ಸ್ವರ್ಗಕ್ಕೆ ಹೋಗಿದ್ದಾರೆ’ ಎಂದು ಹೇಳುತ್ತಾನೆ. ಸನ್ಯಾಸಿಗೆ ಮತ್ತೂ ಆಶ್ಚರ್ಯವಾಗುತ್ತದೆ. ಸನ್ಯಾಸಿ ಒಳಗೆ ಹೋಗಿ ‘ಅಜ್ಜಿ ಅವರು ಸ್ವರ್ಗಕ್ಕೆ ಹೋಗಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತು?’ ಎಂದು ಕೇಳಿಯೇ ಬಿಡುತ್ತಾನೆ. ಆಗ ಅಜ್ಜಿ ‘ಅವನ ಮನೆ ಮುಂದೆ ಅಷ್ಟು ಜನ ಸೇರಿದ್ದಾರೆ, ಅವರೆಲ್ಲ ಅಳುತ್ತಿದ್ದಾರೆ ಅಂದರೆ ಅವನ್ಯಾಕೆ ನರಕಕ್ಕೆ ಹೋಗುತ್ತಾನೆ. ಅವನು ಸ್ವರ್ಗಕ್ಕೆ ಹೋಗಿರುತ್ತಾನೆ’ ಎಂದು ಹೇಳುತ್ತಾರೆ.
ಓರ್ವ ಪ್ರಾಯದ ವ್ಯಕ್ತಿ ದೇವರ ಹತ್ತಿರ ಕೇಳುತ್ತಾನೆ. ನಾನು ಸಾಯುವ ಕಾಲಕ್ಕೆ ಅಳಲು ಎರಡು ಜನರನ್ನಾದರೂ ಕರುಣಿಸು ಎಂದು. ಆಗ ದೇವರು ಹೇಳುತ್ತಾರೆ ‘ಅದೊಂದನ್ನು ನೀನೇ ಸಂಪಾದನೆ ಮಾಡಿಕೊಳ್ಳಬೇಕು. ನಿನಗೆ ಜನ ಕೊಡಲು ನನ್ನಿಂದ ಆಗುವುದಿಲ್ಲ’. ಹಾಗಾಗಿ ಜನ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಬೇಕಾದರೆ, ಅಳಬೇಕಾದರೆ ಗುಣಗಾನ ಮಾಡಬೇಕಾದರೆ ಅದು ನಿಜವಾಗಿಯೂ ನಮ್ಮ ಜೀವನದಲ್ಲಿ ಮಾಡಿದ ಪರೋಪಕಾರ, ಸ್ನೇಹ, ಒಳ್ಳೆಯ ಕೆಲಸ, ಒಳ್ಳೆಯ ಮಾತು, ಒಂದು ನಗು ಇವೆಲ್ಲಾ ಕಾರಣಗಳಿರಬೇಕು. ಆಗ ಮಾತ್ರ ಓರ್ವ ವ್ಯಕ್ತಿ ಸತ್ತೂ ಬದುಕುತ್ತಾನೆ.
ಒಬ್ಬ ಮುದುಕ ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಹಾಕಿಸ್ತಾ ಇರುವಾಗ ಬಹಳ ಅವಸರ ಮಾಡುತ್ತಾ ಇದ್ದನಂತೆ. ಡಾಕ್ಟರ್ ಕಾರಣ ಕೇಳಿದಾಗ ನನ್ನ ಹೆಂಡತಿಗೆ ಊಟದ ಸಮಯವಾಯ್ತು ಎಂದನoತೆ. ಡಾಕ್ಟರ್ ಗೆ ಆಶ್ಚರ್ಯ ಆಯ್ತು. ಇಷ್ಟು ಪ್ರಾಯ ಆಗಿದೆ, ಇನ್ನೂ ಹೆಂಡತಿಗೆ ಹೆದರುತ್ತಾನಾ? ಅಥವಾ ಹೆಂಡತಿಯ ಜೊತೆಗೆ ಊಟ ಮಾಡಬೇಕೆಂಬ ಆಸೆಯೇ. ಡಾಕ್ಟರ್ ಕೇಳಿದರಂತೆ; ಯಾಕೆ ಭಯನಾ? ಹೆಂಡತಿ ಬೈತಾರಾ? ‘ಇಲ್ಲ, ಅವಳು ಮಾತನಾಡದೆ ಐದಾರು ವರ್ಷಗಳೇ ಆಯ್ತು. ಅವಳಿಗೆ ಮರೆವಿನ ರೋಗ. ಹಾಗಾಗಿ ನಾನು ಬಂದದ್ದು, ನಾವು ಒಟ್ಟಿಗೆ ಊಟ ಮಾಡುವುದು ಅವಳಿಗೆ ಗೊತ್ತೇ ಆಗುವುದಿಲ್ಲ.’ ‘ಮತ್ಯಾಕೆ ಹೆದರುತ್ತೀ?’ ಅಂದಾಗ ‘ಅವಳಿಗೆ ಗೊತ್ತಾಗುವುದಿಲ್ಲ. ಆದರೆ ನನಗೆ ಗೊತ್ತಾಗುತ್ತದೆಯಲ್ಲವೇ!’ ಅಂದರoತೆ. ಅಂದರೆ ಈ ರೀತಿಯ ದಾಂಪತ್ಯ ಕೂಡಾ ಇರುತ್ತದೆ. ಅಪ್ಪ ಅಮ್ಮನನ್ನು ಕೂಡಾ ಪ್ರಾಯ ಆದ ಬಳಿಕ ಮರೆವು ಬಂದಾಗ ಈ ರೀತಿ ನೋಡಿಕೊಳ್ಳುವವರು ಇರುತ್ತಾರೆ.
ಸ್ವಾಮಿ ವಿವೇಕಾನಂದರ ಬಳಿ ಒಬ್ಬರು ಕೇಳಿದರಂತೆ, ಅಪ್ಪ-ಅಮ್ಮನನ್ನು ಆಶ್ರಮಕ್ಕೆ ಕಳುಹಿಸಿ, ಅವರು ಅಲ್ಲಿ ಸತ್ತರೆ ಮಕ್ಕಳಿಗೆ ಎಷ್ಟು ದಿನ ಸೂತಕ ಎಂದು. ಆಗ ಅವರು ಅಂಥ ಮಕ್ಕಳಿಗೆ ಜೀವಮಾನವಿಡೀ ಸೂತಕವೇ. ಮತ್ತೆ ಅವರು ಯಾವುದೇ ದೇವಸ್ಥಾನಗಳಿಗೆ ಹೋಗಬಾರದು. ಯಾಕೆಂದರೆ, ಅವರಿಗೆ ಜೀವಮಾನವಿಡೀ ಸೂತಕ ಆವರಿಸಿರುತ್ತದೆ ಎಂದರoತೆ. ಆದ್ದರಿಂದ ಹೆತ್ತವರನ್ನು ದೇವರಂತೆ ಕಾಣುವ ಪರಿಪಾಠ ಎಲ್ಲೆಡೆ ಬೆಳೆಯಬೇಕು. ಇಲ್ಲವಾದಲ್ಲಿ ನಾವು ಮುದುಕರಾಗುವಾಗ ನಮ್ಮ ಮಕ್ಕಳಿಂದ ನಾವೂ ಆ ಶಿಕ್ಷೆಯನ್ನು ಅನುಭವಿಸಬೇಕಾದೀತು.
ಮತ್ತೂ ಒಂದು ಸ್ವಾರಸ್ಯಕರ ಘಟನೆ. ಒಂದು ಕಡೆ ಒಬ್ಬರು ಗುಂಡಿ ತೆಗೆಯುವುದು, ಇನ್ನೊಬ್ಬರು ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದ್ದರಂತೆ. ಎಲ್ಲರಿಗೂ ಆಶ್ಚರ್ಯ. ಇವರು ಏನು ಮಾಡುತ್ತಿದ್ದಾರೆ ಎಂದು. ನೋಡಿದವರು ನೀವೇನು ಮಾಡುತ್ತಿದ್ದೀರಿ ಅಂದದ್ದಕ್ಕೆ ಅವರು ‘ನಾನು ಗುಂಡಿ ತೆಗೆದ ನಂತರ ಅವನು ಬೀಜ ಹಾಕಬೇಕಿತ್ತು. ಮತ್ತೆ ಗುಂಡಿ ಮುಚ್ಚಬೇಕಾಗಿತ್ತು. ಇಂದು ಬೀಜ ಹಾಕುವವ ಬಂದಿಲ್ಲ. ಆದರೆ ನಮ್ಮ ಕರ್ತವ್ಯವನ್ನು ನಾವು ಮಾಡಬೇಕಲ್ವ ಅಂದನoತೆ’. ಹೀಗೆ ಒಂದು ಕೆಲಸದ ನಡುವೆ ಇರುವ ಉದಾತ್ತವಾದ ಅರ್ಥ, ಉದ್ದೇಶ, ಅದರ ಸತ್ವವನ್ನು ಅರಿತುಕೊಳ್ಳದೇ ಇದ್ದರೆ ಅದನ್ನು ಮಾಡಿಯೂ ಪ್ರಯೋಜನವಿಲ್ಲ. ನಾವು ಪ್ರೀತಿಯಿಂದ ಮಾಡುವ ಕೆಲಸ ಎಷ್ಟೋ ಜನರಿಗೆ ಉಪಯೋಗ ಆಗಬೇಕು. ಆದ್ದರಿಂದ ನಾವು ಮಾಡುವ ಕೆಲಸಗಳ ಮೇಲೆ ನಮಗೆ ಪ್ರೀತಿ, ಗೌರವ ಇರಬೇಕಾದುದು ಅತ್ಯಗತ್ಯ.