ಪ್ರಗತಿನಿಧಿ (ಸಾಲದ) ಬೇಡಿಕೆ ಸದಸ್ಯರಿಂದ – ನಿರ್ಣಯ ಸಂಘದಿಂದ

ಸಂಘದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಾರದ ಸಭೆಯ ಮಹತ್ವ ಹಾಗೂ ಅವುಗಳ ಪ್ರಯೋಜನವನ್ನು ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ವಾರದ ಸಭೆಯಲ್ಲಿ ಪ್ರಗತಿನಿಧಿ (ಸಾಲದ) ಬೇಡಿಕೆಯ ನಿರ್ಣಯವನ್ನು ಕೈಗೊಳ್ಳುವುದು ಅತ್ಯಂತ ಪ್ರಮುಖ ವಿಷಯವಾಗಿದೆ. ತಂತ್ರಜ್ಞಾನಕ್ಕೆ ಎಂದಿನಿoದಲೂ ಪ್ರಾಮುಖ್ಯತೆಯನ್ನು ನೀಡುತ್ತಿರುವ ಯೋಜನೆಯ ಪ್ರಗತಿನಿಧಿ ನಿರ್ವಹಣೆಯನ್ನು ಸಂಪೂರ್ಣವಾಗಿ ತಂತ್ರಜ್ಞಾನದ ಮೂಲಕ ನಿರ್ವಹಿಸಲಾಗುತ್ತದೆ. ಸಂಘದ ಸದಸ್ಯರು ತಮ್ಮ ಮೊಬೈಲ್‌ನಲ್ಲಿ ಯೋಜನೆಯ ಸದಸ್ಯರ ಲೀಡ್ ಆ್ಯಪ್ ಎನ್ನುವ ಒಂದು ಸರಳ ಆ್ಯಪ್ ಅನ್ನು ಅಳವಡಿಸಿಕೊಂಡಿದ್ದಾರೆ. ಈ ಆ್ಯಪ್‌ನಲ್ಲಿ ಒಂದು ಸಂಘದ ವಿವರಗಳು ಆ ಸಂಘದ ಸದಸ್ಯರಿಗೆ ಮಾತ್ರ ಲಭ್ಯವಾಗುತ್ತವೆ ಹಾಗೂ ಆ ಸಂಘಕ್ಕೆ ಸೇರಿದ ಸದಸ್ಯರು ಮಾತ್ರ ಪ್ರಗತಿನಿಧಿ ಬೇಡಿಕೆಯನ್ನು ಆ್ಯಪ್‌ನ ಮೂಲಕ ಅತ್ಯಂತ ಸುಲಭವಾಗಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಯಾವುದಾದರೂ ಸದಸ್ಯರಲ್ಲಿ ಸ್ಮಾರ್ಟ್ ಫೋನ್ ಇಲ್ಲದಿದ್ದಲ್ಲಿ, ತನ್ನ ಸಂಘದ ಪದಾಧಿಕಾರಿ ಸದಸ್ಯರ ಮೂಲಕ ಅಥವಾ ತನ್ನ ಸಂಘದ ಇತರ ಸದಸ್ಯರ ಮೊಬೈಲ್‌ನಲ್ಲಿರುವ ಆ್ಯಪ್‌ನ ಮೂಲಕ ಪ್ರಗತಿನಿಧಿ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಆಯಾ ಸಂಘದ ಸದಸ್ಯರ ಬೇಡಿಕೆಯನ್ನು ಸಲ್ಲಿಸಲು ಮಾತ್ರ ಅವಕಾಶವಿದೆ. ಸಂಘದ ಸದಸ್ಯರು ಸ್ವಇಚ್ಛೆಯಿಂದ ಮುಕ್ತವಾಗಿ ತಮಗೆ ಎಷ್ಟು ಸಾಲದ ಅಗತ್ಯತೆ ಇದೆಯೋ ಅಷ್ಟು ಮೊತ್ತಕ್ಕೆ ತಾವೇ ಬೇಡಿಕೆ ಸಲ್ಲಿಸುವ ವ್ಯವಸ್ಥೆಯನ್ನು ಯೋಜನೆಯಲ್ಲಿ ಕಲ್ಪಿಸಲಾಗಿದೆ. ಈ ವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ಇತರ ವಿಧಾನಗಳು ಇಲ್ಲ.
ಒಮ್ಮೆ ಸದಸ್ಯರು ಆ್ಯಪ್‌ನ ಮೂಲಕ ಸಲ್ಲಿಸಿರುವ ಬೇಡಿಕೆಯು ತಂತ್ರಜ್ಞಾನದ ಮೂಲಕ ಮೇಲ್ವಿಚಾರಕರ ಟ್ಯಾಬ್‌ಗೆ ರವಾನೆಯಾಗುತ್ತದೆ. ಮೇಲ್ವಿಚಾರಕರು ಸಂಘದ ಮುಂದಿನ ವಾರದ ಸಭೆಗೆ ಭೇಟಿ ನೀಡಿ, ಸದಸ್ಯರು ಸಲ್ಲಿಸಿರುವ ಸಾಲದ ಬೇಡಿಕೆಯ ಸಂಘದ ನಿರ್ಣಯವನ್ನು ಪರಿಶೀಲಿಸುತ್ತಾರೆ. ಸದಸ್ಯರು ಸಲ್ಲಿಸಿದ ಪ್ರಗತಿನಿಧಿ ಬೇಡಿಕೆಯ ಮಂಜೂರಾತಿಯ ಅಧಿಕಾರವು ಸಂಘದ ಸರ್ವಸದಸ್ಯರದ್ದಾಗಿರುತ್ತದೆ. ವಾರದ ಸಭೆಯಲ್ಲಿ ಬೇಡಿಕೆ ಸಲ್ಲಿಸಿದ ಸದಸ್ಯರಿಗೆ ಸಾಲವನ್ನು ನೀಡಬಹುದೇ? ಎಂದು ಸಂಘದ ಎಲ್ಲಾ ಸದಸ್ಯರು ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಸಂಘದ ಸದಸ್ಯರ ನಿರ್ಣಯಗಳು ವಿವೇಚನಾತ್ಮಕವಾಗಿರುವಂತೆ ಯೋಜನೆಯ ಮೇಲ್ವಿಚಾರಕರು ನೋಡಿಕೊಳ್ಳುತ್ತಾರೆ. ಈ ಸಲುವಾಗಿ ಸಾಮಾನ್ಯವಾಗಿ ಬ್ಯಾಂಕ್‌ಗಳು ಲೆಕ್ಕಾಚಾರ ಹಾಕುವಂತೆಯೇ ಸಾಲದ ಉದ್ದೇಶ, ಸಮರ್ಪಕತೆ, ಆದಾಯ ಸಾಮರ್ಥ್ಯ ಮುಂತಾದ ವಿಷಯಗಳನ್ನು ಸರಿಯಾಗಿ ವಿಚಕ್ಷಣೆ ಮಾಡಲು ಟ್ಯಾಬ್‌ನಲ್ಲಿ ಒಂದು ಸಾಫ್ಟ್ವೇರ್‌ನ್ನು ಬಳಕೆ ಮಾಡಲಾಗುತ್ತದೆ. ಹೀಗೆ ಟ್ಯಾಬ್‌ನ ಮೂಲಕ ಸಂಘಕ್ಕೆ ಬ್ಯಾಂಕ್‌ನಿoದ ಅರ್ಹತೆ ಇರುವ ಸಾಲದ ಮೊತ್ತ, ಬೇಡಿಕೆ ಇಟ್ಟ ಸದಸ್ಯರು ಅರ್ಹರೇ? ಮುಂತಾದ ಸಾಮಾನ್ಯ ಅರ್ಹತೆಗಳ ಬಗ್ಗೆ ಸ್ಪಷ್ಟವಾಗಿ ತಿಳಿಯುವುದಲ್ಲದೇ ಸದಸ್ಯರು ಬೇಡಿಕೆ ಇಟ್ಟಿರುವ ಸಾಲದ ಉದ್ದೇಶಗಳು ಸಮರ್ಪಕವಾಗಿದೆಯೇ? ಸದಸ್ಯರಿಗೆ ಇರುವ ಆದಾಯಗಳೆಷ್ಟು? ಖರ್ಚುಗಳೆಷ್ಟು? ಇತರ ಕೈಸಾಲಗಳು ಇತ್ಯಾದಿ ಅನೇಕ ಅಂಶಗಳನ್ನು ಟ್ಯಾಬ್‌ನಲ್ಲಿ ಲೆಕ್ಕಾಚಾರ ಹಾಕಿ ಅಂತಿಮವಾಗಿ ಆ ಸದಸ್ಯರಿಗೆ ಬೇಡಿಕೆ ಇಟ್ಟಿರುವ ಸಾಲವನ್ನು ಪಡೆದುಕೊಳ್ಳಲು ಅರ್ಹತೆ ಇದೆಯೇ? ಇಲ್ಲವೇ? ಎಂದು ತಿಳಿಯಲ್ಪಡುತ್ತದೆ. ಬೇಡಿಕೆ ಇಟ್ಟ ಸದಸ್ಯರ ಸಾಲದ ಉದ್ದೇಶವನ್ನು ಕೈಗೊಳ್ಳುವ ಎಲ್ಲ ಅರ್ಹತೆಗಳು ಸದಸ್ಯರಿಗೆ ಇದೆಯೇ ಎಂದು ಸಂಘದಲ್ಲಿ ಚರ್ಚಿಸಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಸಾಲದ ಅರ್ಹತೆ ಇಲ್ಲದಾಗ, ಸಾಲ ರಿಜೆಕ್ಟ್ ಆಗುತ್ತದೆ ಅಥವಾ ಅರ್ಹತಾನುಸಾರವಾಗಿ ಸಾಲದ ಮೊತ್ತವನ್ನು ಕಡಿಮೆ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ನಡೆಯುವುದು ಸಂಘದ ಸದಸ್ಯರ ನಿರ್ಣಯದ ಮೇಲೆ ಆಗಿರುತ್ತದೆ. ಈ ನಿರ್ಣಯಗಳು ನಿರ್ಣಯ ಪುಸ್ತಕದಲ್ಲಿ ಕೈಗೊಳ್ಳಲಾಗುತ್ತದೆ. ಆ ವಾರದ ಸಭೆಯಲ್ಲಿ ಸದಸ್ಯರು ಹಾಜರಿರುವುದನ್ನು ವಿಶೇಷವಾಗಿ ದಾಖಲೀಕರಿಸಲು ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಮ್ (ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ) ಅಳವಡಿಸಲಾಗಿದೆ. ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳಲ್ಲಿ ದಿನನಿತ್ಯ ಕೆಲಸಕ್ಕೆ ಹಾಜರಾಗುವಾಗ ಬಯೋಮೆಟ್ರಿಕ್ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯ ಆಧಾರದಲ್ಲಿಯೇ ಈ ವಾರದ ಸಭೆಯಲ್ಲಿ ಸದಸ್ಯರ ಹಾಜರಾತಿ ವ್ಯವಸ್ಥೆಯು ನಡೆಯುತ್ತದೆ. ಪ್ರಗತಿನಿಧಿ ವಿತರಣಾ ವಾರದ ಸಭೆಯಲ್ಲಿ ಕನಿಷ್ಠ ಶೇ.೭೦ರಷ್ಟು ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಗತಿನಿಧಿಯನ್ನು ಪಡೆದುಕೊಳ್ಳಲು ಎಲ್ಲಾ ಅರ್ಹತೆಗಳನ್ನು ಹೊಂದಿ, ಸಂಘಗಳು ಅಂತಿಮ ನಿರ್ಣಯವನ್ನು ಕೈಗೊಂಡಲ್ಲಿ ಮಾತ್ರ ಆ ಸದಸ್ಯರಿಗೆ ಪ್ರಗತಿನಿಧಿಯು ಮಂಜೂರಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ಯೋಜನೆಯ ಯಾವುದೇ ಸಾಲದ ಬೇಡಿಕೆಯು ಸದಸ್ಯರೇ ಸ್ವಯಂಪ್ರೇರಿತರಾಗಿ ಸಲ್ಲಿಸುವುದಾಗಿರುತ್ತದೆ ಹಾಗೂ ಮಂಜೂರಾತಿಯ ಅಧಿಕಾರವು ಸಂಘದ ಸರ್ವ ಸದಸ್ಯರದ್ದಾಗಿರುತ್ತದೆ. ಮುಂದೆ ತಂತ್ರಜ್ಞಾನದ ಮೂಲಕವೇ ಸಾಲ ಬಿಡುಗಡೆಗೊಳ್ಳಲು ಬ್ಯಾಂಕ್ ವ್ಯವಹಾರಗಳು ನಿರ್ವಹಣೆಯಾಗುತ್ತವೆ. Host to Host  ಎನ್ನುವ ಅತ್ಯಂತ ಸುರಕ್ಷಿತ ತಂತ್ರಜ್ಞಾನದೊoದಿಗೆ ಬ್ಯಾಂಕಿನಲ್ಲಿ ಸಂಘದ ಸಿ.ಸಿ. ಖಾತೆಯಿಂದ ಸಾಲದ ಮೊತ್ತ ಡೆಬಿಟ್ ಆಗಿ ನೇರವಾಗಿ ಸಾಲದ ಬೇಡಿಕೆ ನೀಡಿದ ಸದಸ್ಯರ ಉಳಿತಾಯ ಖಾತೆಗೆ ಜಮೆಯಾಗುತ್ತದೆ. ನಂತರ ಸದಸ್ಯರು ಬ್ಯಾಂಕಿಗೆ ತೆರಳಿ ವಿತ್‌ಡ್ರಾ (ನಗದೀಕರಣ) ಮಾಡಿ, ಸಾಲದ ಉದ್ದೇಶಕ್ಕೆ ಆ ಮೊತ್ತವನ್ನು ವಿನಿಯೋಗಿಸುತ್ತಾರೆ. ಇಲ್ಲಿ ಯಾವುದೇ ಒತ್ತಡ ಇರುವುದಿಲ್ಲ, ಎಲ್ಲವೂ ಸ್ವಯಂಪ್ರೇರಿತವಾಗಿರುತ್ತದೆ ಹಾಗೂ ಸರ್ವರ ಅನುಮೋದನೆಯಿಂದ ಕೂಡಿರುತ್ತದೆ.
ಇನ್ನಷ್ಟು ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *