ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು
ಸಾಮಾನ್ಯವಾಗಿ ಜನವರಿ 1ನೇ ತಾರೀಕನ್ನು ಹೊಸ ವರ್ಷದ ದಿನ ಎಂದು ಹೆಚ್ಚಿನವರು ಆಚರಿಸುತ್ತಾರೆ. ಪ್ರಪಂಚದ ನಾನಾ ದೇಶಗಳು ಅನೇಕ ಹಿನ್ನೆಲೆಗಳ ಕಾರಣಗಳಿಂದ ತಮ್ಮದೇ ಆದ ಪ್ರತ್ಯೇಕ ಸಂವತ್ಸರಗಳನ್ನು (ಕ್ಯಾಲೆಂಡರ್) ಹೊಂದಿದ್ದಾರೆ. ಪ್ರಪಂಚಾದ್ಯಂತ ವ್ಯವಹಾರಿಕ ಹಾಗೂ ಇತರ ಏಕರೂಪದ ಅಗತ್ಯಗಳ ಕಾರಣಗಳಿಂದ ಇಂಗ್ಲಿಷ್ ಕ್ಯಾಲೆಂಡರನ್ನು ಅಧಿಕೃತವಾಗಿ ಪರಿಗಣಿಸಿ ಎಲ್ಲಾ ದೇಶಗಳು ಪಾಲಿಸುತ್ತಿರುವುದು ಒಂದು ಉತ್ತಮ ವ್ಯವಸ್ಥೆಯಾಗಿದೆ. ಆದುದರಿಂದ ಆ ಕ್ಯಾಲೆಂಡರ್‍ನಂತೆ ಜನವರಿ 1ನೇ ತಾರೀಕನ್ನು ಹೊಸ ವರ್ಷವಾಗಿ ಸಂಭ್ರಮಿಸುತ್ತಿರುವುದು ವಿಶ್ವದಾದ್ಯಂತ ಒಂದು ಆಚರಣೆಯಾಗಿದೆ. ಆ ಆಚರಣೆಯ ದಿನ ಎಷ್ಟೋ ಜನರು ಕೆಲವು ಸಂಕಲ್ಪಗಳನ್ನು ಕೈಗೆತ್ತಿಕೊಂಡು ಪಾಲಿಸುತ್ತಾರೆ. ಕೆಲವರು ಒಂದಿಷ್ಟು ಸಾಧನೆ ಮಾಡುವ ಪಣ ತೊಡುತ್ತಾರೆ, ನಂತರ ಸಾಧಿಸುತ್ತಾರೆ. ಇವುಗಳೆಲ್ಲವೂ ಹೊಸ ವರ್ಷದ ಉತ್ತಮ ಆಚರಣೆಗಳು. ಈ ಉತ್ತಮ ಆಚರಣೆಗಳು ಸಾಮಾನ್ಯವಾಗಿ ಜನವರಿ 1ನೇ ತಾರೀಕು ಪ್ರಾತಃಕಾಲದ ನಂತರ ನಡೆಯುವುದಾದರೆ, ಇನ್ನೊಂದಿಷ್ಟು ಆಚರಣೆಗಳು ಡಿಸೆಂಬರ್ 31ನೇ ತಾರೀಕು ರಾತ್ರಿಯಿಂದಲೇ ಪ್ರಾರಂಭವಾಗುತ್ತವೆ. ಆ ರೀತಿಯ ಆಚರಣೆಯ ಅಗತ್ಯತೆ, ಸಾಧಕ-ಬಾಧಕಗಳ ಬಗ್ಗೆ ಪ್ರಜ್ಞಾವಂತರಾದ ನಾವು ಚಿಂತನೆ ನಡೆಸಬೇಕಾಗಿದೆ. ಡಿಸೆಂಬರ್ 31ನೇ ತಾರೀಕು ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಸ್ಟ್ರೀಟ್‍ಗಳಲ್ಲಿ ಸ್ವೇಚ್ಛಾಚಾರದ ಮಾದಕ ದ್ರವ್ಯಗಳನ್ನು, ಮದ್ಯಪಾನಗಳನ್ನು ಸೇವಿಸಿ ವಿಚಿತ್ರವಾಗಿ ಬೊಬ್ಬೆ ಇಡುತ್ತಾ ಕುಣಿದು ಕುಪ್ಪಳಿಸುವ ಆಚರಣೆಗಳಿಂದ ಸಾಧಿಸುವುದಾದರೂ ಏನು? ಎಂಬ ಪ್ರಶ್ನೆಯು ಸಜ್ಜನರಲ್ಲಿ ಕಾಡುತ್ತಿದೆ. ಮುಖ್ಯವಾಗಿ ಯುವಜನತೆ ಇಂತಹ ಸಂಭ್ರಮಾಚರಣೆಯಿಂದ ಕಲಿಯುವುದಾದರೂ ಏನು? ಅವರ ಬದುಕಿಗೆ ಅದು ಹೇಗೆ ಸಹಕಾರಿಯಾಗಬಲ್ಲುದು? ಇದರಿಂದ ಎಂತಹ ಮೌಲ್ಯಗಳನ್ನು ಅವರು ಅಳವಡಿಸಿಕೊಳ್ಳಬಹುದು, ಭಾರತದ ಮುಂದಿನ ಭವಿಷ್ಯದ ಬೆಳಕಾದ ಯುವಜನತೆ ಇಂತಹ ಆಚರಣೆಗಳಿಂದ ಯಾವ ರೀತಿ ಪ್ರೇರಣೆ ಅಥವಾ ಪ್ರಚೋದನೆಗೊಳಪಡುತ್ತದೆ. ಇವೆಲ್ಲವನ್ನು ಚಿಂತಿಸಬೇಕಾಗಿದೆ. ಪ್ರತೀ ಹೊಸ ವರ್ಷದ ದಿನ ಅತ್ಯಂತ ಎಳೆವಯಸ್ಸಿನ ಮಕ್ಕಳು ‘ನ್ಯೂ ಇಯರ್ ಪಾರ್ಟಿ’ ಸಂಭ್ರಮಾಚರಣೆಗೆ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಮದ್ಯಪಾನ ಜೀವನಕ್ಕೆ ಎಂಟ್ರಿ ಇಡುತ್ತಾರೆ. ಇದು ಒಂದು ದುರಂತವೇ ಸರಿ. ಆ ವರ್ಷದ ಕ್ಯಾಲೆಂಡರ್ ಮುಗಿದರೂ ಅವರ ಜೀವನದ ಕ್ಯಾಲೆಂಡರ್‍ನಲ್ಲಿ ಆ ಮದ್ಯಪಾನದ ದುರಾಭ್ಯಾಸ ಮುಂದುವರಿಯುತ್ತಲೇ ಹೋಗುತ್ತದೆ. ಡಿಸೆಂಬರ್ 31ನೇ ತಾರೀಕು ರಾತ್ರಿ ಪೊಲೀಸ್ ಇಲಾಖೆ ತನ್ನ ಹೆಚ್ಚಿನ ಸಿಬ್ಬಂದಿಗಳನ್ನು ರಾತ್ರಿ ಪಾಳಿಗೆ (ನೈಟ್ ಡ್ಯೂಟಿ) ಹಾಕುತ್ತಾರೆ. ಹೆಚ್ಚು ಸಿ.ಸಿ. ಟಿ.ವಿ.ಗಳನ್ನು ಕೆಲವು ನಿಗಾವಹಿಸಬೇಕಾದ ಪ್ರದೇಶಗಳಲ್ಲಿ ಅಳವಡಿಸುತ್ತಾರೆ. ಏಕೆಂದರೆ, ಆ ರಾತ್ರಿ ಅಷ್ಟೊಂದು ಪ್ರಮಾಣದ ಅಹಿತಕರ ಘಟನೆಗಳು ನಡೆಯುತ್ತವೆ. ಕುಡಿದ ಅಮಲಿನಲ್ಲಿ ಬಡಿದಾಡಿಕೊಳ್ಳುವ ನೂರಾರು ಪ್ರಕರಣಗಳು ಒಂದು ಕಡೆಯಾದರೆ, ಅಶ್ಲೀಲವಾಗಿ ವರ್ತಿಸುವ ಹಲವು ಪ್ರಕರಣಗಳೂ ನಡೆಯುತ್ತವೆ. ಇವೆಲ್ಲ ನಡೆಯುವುದು ಮದ್ಯದ ಹಾಗೂ ಮಾದಕ ದ್ರವ್ಯದ ಅಮಲಿನಲ್ಲಿ. ಡಿಸೆಂಬರ್ 31ರ ರಾತ್ರಿಯ ಪಾರ್ಟಿಗಳಿಗೆ ಭಾಗವಹಿಸುವ ಮಹಿಳೆಯರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಇನ್ನೊಂದು ಆತಂಕದ ಪ್ರಶ್ನೆಯಾಗಿದೆ.
ಹೊಸ ವರ್ಷ ಆಚರಣೆ ಮಾಡುವುದು ಖಂಡಿತ ತಪ್ಪಲ್ಲ. ಅದು ಒಂದು ಒಳ್ಳೆಯ ಪದ್ಧತಿ. ತಪ್ಪು ಎಲ್ಲಿದೆ ಅಂದರೆ, ನಾವು ಆಚರಣೆ ಮಾಡುವ ರೀತಿ ರಿವಾಜುಗಳಲ್ಲಿ. ಹೊಸ ವರ್ಷದ ಸಂಭ್ರಮಾಚರಣೆಗಳು ಒಬ್ಬ ವ್ಯಕ್ತಿ, ಕುಟುಂಬ, ಸಮಾಜಕ್ಕೆ ಮೌಲ್ಯವನ್ನು ತುಂಬುವಂತಿರಬೇಕೇ ಹೊರತು ಕೆಡುಕನ್ನು ತರುವಂತದ್ದಲ್ಲ. ಜನವರಿ 1ನೇ ತಾರೀಕು ಅನೇಕ ಒಳ್ಳೆಯ ಸಂಕಲ್ಪಗಳನ್ನು ಕೈಗೊಳ್ಳುವುದು ನಿಜಕ್ಕೂ ಅರ್ಥಪೂರ್ಣವಾದ ಆಚರಣೆಯಾಗಿದೆ. ತನ್ನಲ್ಲಿ ವರ್ಷದಿಂದ ವರ್ಷಕ್ಕೆ ಯಾವುದಾದರೂ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ, ಇರುವ ಕೆಟ್ಟ ಗುಣಗಳನ್ನು ತ್ಯಜಿಸುವ, ಯಾವುದಾದರೂ ನಿರ್ಧಿಷ್ಟ ಗುರಿಯನ್ನು ವರ್ಷಾಂತ್ಯದಲ್ಲಿ ಸಾಧಿಸುವ, ಒಳ್ಳೆಯ ಹವ್ಯಾಸ, ಅಭ್ಯಾಸಗಳನ್ನು ಪ್ರಾರಂಭಿಸಿ ರೂಢಿಸಿಕೊಳ್ಳುವ ಸಂಕಲ್ಪ ಇಂತಹ ಮೌಲ್ಯಯುತ ವಿಷಯಗಳನ್ನು ಕೈಗೊಂಡಲ್ಲಿ ಖಂಡಿತವಾಗಿ ಅರ್ಥಪೂರ್ಣವಾದ ಸಂಭ್ರಮಾಚರಣೆ ಆಗಿರುತ್ತದೆ. ಆ ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ, ಅವನ ಕುಟುಂಬ ಹಾಗೂ ಸಮಾಜಕ್ಕೂ ಅದು ಒಳ್ಳೆಯದನ್ನೇ ಮಾಡುತ್ತದೆ.
ನಮ್ಮ ದೇಶದಲ್ಲಿ ಹೊಸ ಸಂವತ್ಸರವನ್ನು ‘ಯುಗಾದಿ’ಯ ಮೂಲಕ ಒಂದು ಹಬ್ಬವನ್ನಾಗಿ ಆಚರಿಸುವುದರ ಮೂಲಕ ಸ್ವಾಗತಿಸಲಾಗುತ್ತದೆ. ನೂತನ ಸಂವತ್ಸರದಲ್ಲಿ ಎಂತಹ ಸುಖಕಷ್ಟಗಳು ಬಂದರೂ ಕೂಡಾ ಜೀವನವನ್ನು ಸವಿಯುತ್ತೇವೆ ಎನ್ನುವ ಮನೋಭಾವನೆಯನ್ನು ಬೆಳಸುವಂತಹ ಬೇವು ಬೆಲ್ಲವನ್ನು ಸವಿಯುವ ಆಚರಣೆ ಇಲ್ಲಿ ಪ್ರಮುಖವಾಗಿದೆ. ಹಾಗೆಯೇ ಮಕ್ಕಳು, ವಿದ್ಯಾರ್ಥಿಗಳು, ದೊಡ್ಡವರೂ ಅವರ ಮಟ್ಟಿಗೆ ಅವರದ್ದೇ ಆದ ಒಳ್ಳೆಯ ಸಂಕಲ್ಪಗಳನ್ನು ಕೈಗೊಳ್ಳುತ್ತಾರೆ. ಒಟ್ಟಿನಲ್ಲಿ ನಾವು ತಿಳಿದುಕೊಳ್ಳಬೇಕಾದುದು ಇಷ್ಟೆ. ನಾವು ಯಾವುದೇ ರೀತಿಯಲ್ಲಿಯೂ ಹೊಸ ವರ್ಷವನ್ನು ಸ್ವಾಗತಿಸುವುದು, ಸಂಭ್ರಮಿಸುವಂತದ್ದು ಅತ್ಯಂತ ಅರ್ಥಪೂರ್ಣವಾಗಿರಬೇಕು ಹಾಗೂ ನಮ್ಮ ವೈಯಕ್ತಿಕ ಜೀವನ, ಕುಟುಂಬ ಮತ್ತು ಸಮಾಜಕ್ಕೆ ಮೌಲ್ಯವನ್ನು ತುಂಬುವಂತದ್ದಾಗಿರಬೇಕು. ಈ ದೃಷ್ಟಿಕೋನದಲ್ಲಿ ಜನವರಿ 1ನೇ ತಾರೀಕು ಹೊಸ ಸಂಕಲ್ಪಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.
‘ನಿರಂತರ’ದ ಎಲ್ಲಾ ಓದುಗರಿಗೂ ಹೊಸ ವರ್ಷ 2025ರ ಶುಭಾಶಯಗಳು ಹಾಗೂ ಈ ವರ್ಷದ ಪ್ರತಿ ದಿನವನ್ನೂ ಹೊಸ ದಿನ ಎಂದು ತಿಳಿದುಕೊಂಡು ಜೀವನವನ್ನು ಸಂಭ್ರಮಿಸೋಣ.