ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಜಗತ್ತಿನಾದ್ಯಂತ ಪರಿಹಾರ ಕಾಣದ ಸಾಕಷ್ಟು ಸಮಸ್ಯೆಗಳಿದ್ದರೂ ಜನರು ಸಂತೋಷದಿAದ ಜೀವನ ನಡೆಸುತ್ತಿದ್ದಾರೆ. ಅಂದರೆ ಕಾಡುವ ಕೈಗಳು, ಸಮಸ್ಯೆಗಳಿಗಿಂತ ಕಾಪಾಡುವ ಶಕ್ತಿ, ಕೈಗಳ ಬಗ್ಗೆ ಜನರು ಇನ್ನೂ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಎಂದೇ ಅರ್ಥ. ಗುರುನಾನಕರು ಒಂದು ಹಳ್ಳಿಗೆ ಹೋಗಿದ್ದಾಗ ಆ ಹಳ್ಳಿಯ ಮಂದಿ ಅವರಿಗೆ ಅದ್ಧೂರಿಯ ಸ್ವಾಗತ ಕೋರಿ ಗೌರವದಿಂದ ನೋಡಿಕೊಂಡರು. ಗುರುಗಳು ಹಳ್ಳಿಯಿಂದ ಹೊರಡುವ ಸಮಯದಲ್ಲಿ ‘ನೀವೆಲ್ಲಾ ಚದುರಿ ಹೋಗಿ ಯಾರೂ ಒಂದೆಡೆ ಇರಬೇಡಿ’ ಅಂದರು. ಇದನ್ನು ಕೇಳಿ ಹಳ್ಳಿಗರಿಗೆ ಆಶ್ಚರ್ಯದೊಂದಿಗೆ ಬೇಸರವೂ ಆಯಿತು. ನಂತರ ಗುರುನಾನಕರು ಪಕ್ಕದ ಊರಿಗೆ ಹೋದರು. ಆದರೆ ಆ ಊರಿನ ಜನ ಗುರುಗಳಿಗೆ ಒಂಚೂರು ಗೌರವವನ್ನು ಕೊಡಲಿಲ್ಲ. ಗುರುಗಳು ಆ ಊರಿನಿಂದ ಹೊರಡುವ ಸಮಯದಲ್ಲಿ ‘ನೀವೆಲ್ಲಾ ನಿಮ್ಮೂರಿನಲ್ಲೇ ಸುಖವಾಗಿರಿ’ ಅಂದರು. ಇದರಿಂದ ಆ ಊರಿನವರಿಗೆ ತುಂಬಾ ಸಂತೋಷವಾಯಿತು. ಗುರುಗಳ ಮಾತಿನ ತಾತ್ಪರ್ಯ ಇಷ್ಟೇ. ಒಳ್ಳೆಯ ಮಂದಿ ಊರೆಲ್ಲಾ ಹರಡಿ ಹೋದರೆ ಹೋದಲ್ಲೆಲ್ಲಾ ಒಳಿತನ್ನೇ ಮಾಡುತ್ತಾರೆ. ಕೆಟ್ಟವರು ಇದ್ದಲ್ಲೇ ಇದ್ದರೆ ಬೇರೆಯವರಿಗೆ ಒಳ್ಳೆಯದು. ಆಗ ಅವರಿಂದ ಯಾವುದೇ ಆತಂಕ, ಕಷ್ಟ ಇತರರಿಗೆ ಇರುವುದಿಲ್ಲ. ಹೀಗೆ ಒಳ್ಳೆಯ ಕಾರ್ಯಕ್ರಮಗಳು, ಒಳ್ಳೆಯ ಕೆಲಸ ವಿಸ್ತರಿಸಿದಷ್ಟು, ಒಳ್ಳೆಯ ಮಂದಿ ಹೆಚ್ಚಿದಷ್ಟೂ ಜನರಿಗೆ ಪ್ರಯೋಜನವಾಗುತ್ತದೆ.
ದಸರಾ ಮೆರವಣಿಗೆಗೆ ತಿಂಗಳುಗಳಿರುವಾಗಲೇ ಮೈಸೂರಿನಲ್ಲಿ ಅಂಬಾರಿ ಹೊರುವ ಆನೆಗಳ ತರಬೇತಿ ನಡೆಯುತ್ತದೆ. ೭೫೦ ಕೆ.ಜಿ. ಭಾರದ ಅಂಬಾರಿ ಹೊರಬೇಕಾದರೆ ಹಂತಹ0ತವಾಗಿ 150 ರಿಂದ 200 ಕೆ.ಜಿ. ಭಾರ ಹೊರಿಸಿ ಆನೆಗೆ ಅಭ್ಯಾಸ ಮಾಡಿಸುತ್ತಾರೆ. ಜೊತೆಗೆ ಅದು ನಡೆಯಬೇಕಾದ ದಾರಿ, ಬ್ಯಾಂಡ್, ವಾದ್ಯಗಳ ಗದ್ದಲಕ್ಕೆ ಆನೆಗಳು ಒಗ್ಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಯಾವುದೇ ಕೆಲಸಕ್ಕೂ ತರಬೇತಿ ಬೇಕೇ ಬೇಕು. ಸೇವೆ ಮಾಡಬೇಕೆನ್ನುವವರಲ್ಲಿ ಸೇವಾ ಮನೋಭಾವ ಇರಬೇಕು. ಪರರ ಕಷ್ಟ ನೋವುಗಳ ಅರಿವು ಸ್ವಲ್ಪ ಮಟ್ಟಿಗಾದರೂ ಇದ್ದಲ್ಲಿ ಅವರಿಂದ ಹೆಚ್ಚಿನ ಸೇವೆ ಸಾಧ್ಯ. ಒಂದು ಕುಟುಂಬದ ಯಜಮಾನ ಹೆಣ ಸುಡುವ ಕೆಲಸ ಮಾಡಿ ಅದರಿಂದ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದ. ಸ್ಮಶಾನ ಹತ್ತಿರವೇ ಮನೆಯಿತ್ತು. ಹೆಣ ಬಂದರೆ ಮನೆ ಮಂದಿಗೆ ಸಂತೋಷ. ಹೆಣದ ಜೊತೆ ಬಂದವರ ದುಃಖ, ನೋವು, ಅಳು ಯಾವುದೂ ಅವರ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಒಂದು ದಿನ ಒಂದೂ ಹೆಣ ಕೂಡಾ ಬಂದಿರಲಿಲ್ಲ. ಯಜಮಾನನೂ ಮನೆಗೆ ಬರಲಿಲ್ಲ. ಮಗಳಿಗೆ ಜೋರಾಗಿ ಹಸಿವಾಗುತ್ತಿತ್ತು. ‘ಒಂದಾದರೂ ಹೆಣ ಬರಲಿ’ ಎಂದು ಕಾಯುತ್ತಿದ್ದಾಗ ನಾಲ್ಕು ಜನ ಬಂದು ಹೆಣವನ್ನು ಇಳಿಸಿ ಹೋದರು. ಮನೆಯವರು ಖುಷಿಯಿಂದ ಹತ್ತಿರ ಹೋಗಿ ನೋಡಿದರೆ ಅದು ಅವಳ ಅಪ್ಪನ ಹೆಣವೇ ಆಗಿತ್ತು. ಆ ದಿನ ಮನೆಮಂದಿಗೆಲ್ಲಾ ಸಾವಿನ ದುಃಖ – ನೋವುಗಳೇನು ಎನ್ನುವುದರ ಪರಿಚಯವಾಯಿತು.
ಹುಟ್ಟಿದ್ಯಾಕೆ? ಎಂಬ ಪ್ರಶ್ನೆಗೆ ಬದುಕುವುದಕ್ಕೆ ಎಂದು ಉತ್ತರಿಸುವುದು ಸುಲಭ. ಆದರೆ ಬದುಕುವುದ್ಯಾಕೆ? ಅಂದರೆ ಉತ್ತರಿಸುವುದು ಕಷ್ಟ. ಆಹಾರ, ನಿದ್ರೆ, ಭಯ ಎಲ್ಲವು ಸೃಷ್ಟಿಯ ಸಕಲ ಜೀವಿಗಳಿಗೂ ಇದೆ. ಹಾಗಾಗಿ ಜೀವನಕ್ಕೊಂದು ಗುರಿ, ಉದ್ದೇಶ ಇಲ್ಲವಾದಲ್ಲಿ ಬದುಕುವುದು ಬರೀ ಸಾವನ್ನು ಕಾಯುವುದಕ್ಕೆ ಎನ್ನಬೇಕಾಗುತ್ತದೆ. ಕುಂತಿ ಶ್ರೀಕೃಷ್ಣನಲ್ಲಿ ಹೇಳುತ್ತಾಳೆ; ‘ನನ್ನನ್ನು, ನನ್ನ ಮಕ್ಕಳನ್ನು ಅನೇಕ ಕಷ್ಟ ನೋವುಗಳಿಂದ ರಕ್ಷಿಸಿದೆ. ಇಂಥ ವಿಪತ್ತುಗಳು ಬಂದಾಗಲೆಲ್ಲಾ ನೀನು ಬರುತ್ತಿದ್ದೆ. ಆಗ ನಿನ್ನ ದರ್ಶನ ಭಾಗ್ಯ ಲಭಿಸುತ್ತಿತ್ತು. ಹಾಗಾಗಿ ಇಂಥಾ ವಿಪತ್ತುಗಳು ಸದಾ ಬರುತ್ತಿರಲಿ.’ ದೇವಾಲಯ, ವೈದ್ಯರ ಬಳಿ ಕಷ್ಟ, ವ್ಯಾಧಿ, ದುಃಖ, ಸಮಸ್ಯೆಗಳಿದ್ದಾಗ ಮಾತ್ರ ಹೋಗುತ್ತೇವೆ. ದೇವರನ್ನಾಗಲಿ, ವೈದ್ಯರನ್ನಾಗಲಿ ನೀವು ಹೇಗಿದ್ದೀರಿ? ಎಂದು ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳುವುದಕ್ಕೆ ಯಾರೂ ಹೋಗುವುದಿಲ್ಲ.
ಹಿಂದೆ ಒಬ್ಬ ದಾರಿಯಲ್ಲಿ ನಡೆಯುತ್ತಿರುವಾಗ ಎಡವಿ ಬಿದ್ದರೆ ಜನ ಎಬ್ಬಿಸಿ ಉಪಚರಿಸುತ್ತಿದ್ದರು. ಈಗ ಮಾರ್ಗ ಮಧ್ಯೆ ಅಪಘಾತಕ್ಕೊಳಗಾಗಿ ಬಿದ್ದು ನೀರಿಗಾಗಿ, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಜನ ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಿಸಿ ಅದನ್ನು ಇನ್ನೊಬ್ಬರಿಗೆ ಕಳುಹಿಸುತ್ತಿರುತ್ತಾರೆ. ಬಿದ್ದ ತಕ್ಷಣ ಜನ ಗುಂಪು ಗುಂಪಾಗಿ ಸೇರುತ್ತಾರೆ. ಆದರೆ ಅಲ್ಲಿ ಎಲ್ಲರೂ ನಿಂತು ನೋಡುವವರಲ್ಲದೆ ಸಹಾಯಕ್ಕೆ ಧಾವಿಸುವವರಿರುವುದಿಲ್ಲ. ಜನ ಸಂವೇದನೆಗಳನ್ನು ಕಳೆದುಕೊಳ್ಳುತ್ತಿರುವ ಇಂಥಾ ಸಂದರ್ಭದಲ್ಲಿ ಒಂದು ಒಳ್ಳೆಯ ಪ್ರಜ್ಞೆಯನ್ನು ಜನರಲ್ಲಿ ಬೆಳೆಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆಯ ‘ಶೌರ್ಯ’ ಕಾರ್ಯಕ್ರಮ ಮಾಡುತ್ತಿದೆ.
ಇನ್ನೊಬ್ಬರ ಕಷ್ಟಗಳಿಗೆ ನೆರವಾಗುವುದರಲ್ಲಿ ದೊರೆಯುವ ಸಂತೋಷ, ನೆಮ್ಮದಿ ಬೇರೆಲ್ಲೂ ದೊರೆಯಲಾರದು. ನಾವು ಇನ್ನೊಬ್ಬರಿಗೆ ಕಷ್ಟ ಕಾಲದಲ್ಲಿ ನೆರವಾದರೆ ನಮ್ಮ ಕಷ್ಟಕ್ಕೆ ಇತರರು ನೆರವಾಗುತ್ತಾರೆ. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಕೆಲಸಗಳಿಗೆ ದೇವರ ದಯೆ ಇದ್ದೇ ಇರುತ್ತದೆ.