ಬಾಳಿಗೆ ಪ್ರೇರಣೆಯಾಗುವ ಹಿರಿಯರ ಸ್ಮರಣೆ

ನಮ್ಮ ಬದುಕಿನಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ, ಪರಂಪರೆ, ಪದ್ಧತಿ, ರೀತಿ – ನೀತಿಗಳನ್ನು ಆಚರಿಸುತ್ತೇವೆ. ನಮ್ಮ ಪೂರ್ವಜರನ್ನು, ಹಿರಿಯರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸುವಂಥ, ನಮ್ಮನ್ನು ಅಗಲಿದ ಅವರಿಗೆ ಗೌರವ ಸಲ್ಲಿಸುವಂಥ ಆಚರಣೆಗಳು ನಮ್ಮಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಇರುವುದು ನಮಗೆಲ್ಲ ತಿಳಿದಿರುವಂಥದ್ದು. ನಾವೂ ಕೂಡ ಮಹಾಲಯ ಆಚರಣೆ ಸಮಯದಲ್ಲಿ, ಇನ್ನು ಕೆಲವರು ದೀಪಾವಳಿಯ ಪಾಡ್ಯ ದಿನ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಅವರನ್ನು ಸ್ಮರಿಸಿಕೊಳ್ಳುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಮ್ಮನ್ನಗಲಿದ ಹಿರಿಯರಿಂದ ನಾವು ಪಡೆದ ಬಳುವಳಿ ಅವರ ಯೋಚನೆಗಳು, ಚಿಂತನೆಗಳು ಮಾರ್ಗದರ್ಶನಗಳನ್ನೆಲ್ಲ ಸ್ಮರಿಸಿಕೊಳ್ಳಬೇಕಾದ ಅಗತ್ಯವೂ ಇದೆ.
ನಮ್ಮ ತಂದೆಯವರಾದ ಪೂಜ್ಯ ರತ್ನವರ್ಮ ಹೆಗ್ಗಡೆಯವರನ್ನು ಇತ್ತೀಚೆಗೆ ಸ್ಮರಿಸಿಕೊಂಡೆವು. ಅವರು ನಿಧನರಾದ ದಿನದಂದು ಕ್ಷೇತ್ರದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆಯನ್ನು ಮಾಡುತ್ತೇವೆ. ಈ ವೇಳೆ ಅವರ ಅನೇಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆoದೆನಿಸಿತು.
ಮೊದಲನೆಯದಾಗಿ ಅವರು ಯಾವಾಗಲೂ ಹೇಳುತ್ತಿದ್ದ ಮಾತೆಂದರೆ “ಧರ್ಮಸ್ಥಳಕ್ಕೆ ನಿತ್ಯವೂ ಭಕ್ತ ಜನರು ಬರುತ್ತಿರುತ್ತಾರೆ. ಶ್ರೀ ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ಬೀಡಿಗೆ ಬಂದು ಭೇಟಿಯಾಗುತ್ತಾರೆ. ಬರುವವರಲ್ಲಿ ಅನೇಕ ರೀತಿಯ ಹಿನ್ನೆಲೆಗಳನ್ನು ಹೊಂದಿದವರು ಇರುತ್ತಾರೆ. ಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಆರ್ತ, ಅರ್ಥಾರ್ಥಿ, ಜಿಜ್ಞಾಸು ಮತ್ತು ಜ್ಞಾನಿ ಎಂಬ ನಾಲ್ಕು ತರಹದವರು ಇರುತ್ತಾರೆ. ‘ಆರ್ತನು’ ಸಂಕಟವನ್ನು ಹೊಂದಿ ಪರಿಹಾರಕ್ಕಾಗಿ ಬರುವವನು. ‘ಅರ್ಥಾರ್ಥಿ’ಯು ಸಂಪತ್ತು ಹಾಗೂ ಇತರ ಲೌಕಿಕ ಭೋಗ ಭಾಗ್ಯಗಳನ್ನು ಪಡೆಯಲು ಇಚ್ಛಿಸುವವನು. ‘ಜಿಜ್ಞಾಸು’ ತಾನು ತಿಳಿದುಕೊಂಡದ್ದು ಅಥವಾ ಪಡೆದುಕೊಂಡದ್ದು ಸಾಲದು, ಇನ್ನಷ್ಟು ತಿಳಿಯಬೇಕೆಂಬ ಉತ್ಸಾಹವುಳ್ಳವನು, ‘ಜ್ಞಾನಿ’ಯು ಆಸೆಗಳಿಂದ ಮುಕ್ತನಾಗಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಭಕ್ತಿಯಿಂದ ವಿಚಾರವಂತನಾಗಿರುವವನು. ಯಾರೇ ಬಂದರೂ ಅವರನ್ನು ತಿರಸ್ಕರಿಸದಿರು” ಎಂಬುದು ಅವರ ಮಾತು.
ಅವರ ಸಮಸ್ಯೆಗಳಿಗೆ ನಮ್ಮಲ್ಲಿ ಸ್ಪಂದಿಸುವ ಗುಣವಿದ್ದಲ್ಲಿ, ಆರ್ಥಿಕವಾಗಿ ಸ್ಪಂದಿಸುವ ಶಕ್ತಿ ಇದ್ದಲ್ಲಿ ಅವರು ಕೇಳಿಕೊಂಡು ಸಹಾಯ ಪಡೆದುಕೊಳ್ಳಲು ಬರುತ್ತಾರೆ. ಧಾರ್ಮಿಕ ವಿಚಾರ, ಶ್ರದ್ಧೆ, ಸಾಮಾಜಿಕ ಸ್ಪಂದನೆ, ಜ್ಞಾನ ಹೀಗೆ ಒಂದಲ್ಲ ಒಂದು ವಿಷಯಕ್ಕಾಗಿ ಕ್ಷೇತ್ರಕ್ಕೆ ಬರುತ್ತಾರೆ. ಆದರೆ ಬರುವವರೆಲ್ಲ ಸ್ವಾರ್ಥಕ್ಕಾಗಿ ಬರುತ್ತಾರೆ ಎಂಬ ಭಾವನೆಯನ್ನು ಖಂಡಿತಾ ಹೊಂದಿರಬಾರದು. ಯಾಕೆಂದರೆ ಬೆಲ್ಲ ಇದ್ದ ಕಡೆ ಮಾತ್ರ ಇರುವೆಯು ಹುಡುಕಿಕೊಂಡು ಬರುವಂತೆ, ಇನ್ನೊಬ್ಬರಿಗೆ ಸಹಾಯ, ನೆರವನ್ನು ಮಾಡಲು ಶಕ್ತಿ ಹಾಗೂ ಯೋಗ್ಯತೆ ಇದ್ದಲ್ಲಿ ಮಾತ್ರ ಸಹಾಯ ಮಾಡಬಹುದು. ಹಾಗೆಯೇ ದೈವಿಚ್ಛೆಯಂತೆ ಒಬ್ಬರು ಇನ್ನೊಬ್ಬರನ್ನು ಸಂಧಿಸುತ್ತಾರೆ ಎಂಬುದು ಅವರು ನೀಡಿದ ದೊಡ್ಡ ಸಂದೇಶ.
ಹಾಗೆಯೇ ಒಳ್ಳೆಯ ವ್ಯಕ್ತಿಯಾಗಬೇಕಾದರೆ ಬಹಳ ಕಷ್ಟ ಇದೆ. ಕೆಟ್ಟವನಾಗಬೇಕಾದರೆ ಕ್ಷಣಾರ್ಧದಲ್ಲಿ ಆಗಬಹುದು. ಮಾತನಾಡುವಾಗಲೂ ಅಷ್ಟೇ, ಒಳ್ಳೆಯ ಮಾತನ್ನು ಹೇಳಬೇಕಾದರೆ ಬಹಳ ಕಷ್ಟ ಇದೆ. ಕೆಟ್ಟ ಮಾತನ್ನು ಬಹಳ ಸುಲಭವಾಗಿ ಹೇಳಬಹುದು. ಉದಾಹರಣೆಗೆ ಯಾರಾದರೂ ಇನ್ನೊಬ್ಬರನ್ನು ಕೆಟ್ಟ ಶಬ್ದ ಬಳಸಿ ನಿಂದನೆ ಮಾಡಬೇಕಾದರೆ ಸರಾಗವಾಗಿ ಪದಗಳು ಸಿಗುತ್ತವೆ. ಹಾಗೂ ವಿವಿಧ ಪದ ಬಳಸಿ ಬೈಗುಳದ ಸುರಿಮಳೆಗೈಯುತ್ತಾರೆ. ನಿಂದನೆ ಮಾಡುವಾಗ ಸ್ವಾಭಾವಿಕವಾಗಿ ವಿಷಯಗಳು ಮೂಡಿ ಬರುವಂತೆ ಒಳ್ಳೆಯ ವಿಚಾರಗಳನ್ನು ಹೇಳಲಾಗದೆ ಪದಗಳಿಗಾಗಿ ತಡಕಾಡಬೇಕಾಗುತ್ತದೆ.
60-70 ವರ್ಷಗಳ ಹಿಂದೆಯೇ ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಮಯದಲ್ಲಿ ನಡೆಯುತ್ತಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಗೌರವಾನ್ವಿತರಿಗೆ ಸನ್ಮಾನ ಪತ್ರ ಕೊಡುವಂಥ ಪರಿಪಾಠವಿತ್ತು. ಈಗಲೂ ನಾವದನ್ನು ಮುಂದುವರೆಸಿಕೊoಡು ಹೋಗುತ್ತಿದ್ದೇವೆ. ಇತ್ತೀಚೆಗೆ ಮಾನಪತ್ರ ಅಥವಾ ಗೌರವ ಸನ್ಮಾನ ಪತ್ರದಲ್ಲಿ ಸಂಕ್ಷಿಪ್ತವಾಗಿ ಗೌರವ ಸೂಚಕ ಪದಗಳನ್ನು ಬಳಸಿಕೊಂಡು ವ್ಯಕ್ತಿಯ ಸಾಧನೆಯನ್ನು ತಿಳಿಸಲಾಗುತ್ತದೆ. ನಾವೂ ಕೂಡ ಅನೇಕ ಕಡೆಗಳಲ್ಲಿ ಗೌರವಕ್ಕೆ ಪಾತ್ರರಾದಾಗ ಮಾನ್ಯರೇ, ವಿದ್ವಾಂಸರೇ, ದಾನಿಗಳೇ, ಪೂಜ್ಯರೇ ಹೀಗೆ ಗೌರವ ವಾಚಕ ಪದಗಳನ್ನು ಬಳಸಿ ಗುಣಗಾನ ಮಾಡುತ್ತಾರೆ. ಹೀಗೆ ಗುಣವಾಚಕಗಳನ್ನು ಬಳಸಿ ಒಳ್ಳೆಯ ಪದಗಳನ್ನು ಬರೆದು ಅವರಿಗೆ ಗೌರವ ಕೊಡಲು ಎಲ್ಲರಿಗೂ ಆಗುವುದಿಲ್ಲ. ಆಗ ಸನ್ಮಾನ ಪತ್ರ ಬರೆಯಲು ಕೆ.ಎಸ್. ಧರಣೇಂದ್ರಯ್ಯ ಎಂಬ ಹಿರಿಯರಿದ್ದರು. ಅವರಿಗೆ ಅಪ್ಪಾಜಿಯವರು ಹೇಳುತ್ತಿದ್ದರು. “ಧರಣೇಂದ್ರಯ್ಯ, ಇಬ್ಬರು ಮುಖ್ಯ ಅತಿಥಿಗಳು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಅವರಿಗೆ ಮಾನ ಪತ್ರ ಬರೆದುಕೊಡಿ,” ಎಂದು. ಉಜಿರೆ ಕಾಲೇಜಿನಲ್ಲಿ ನಾಗರಾಜ ಪೂವಣಿ ಎಂಬವರು ನೆರವಾಗುತ್ತಿದ್ದರು. ಯಾವುದೇ ಇರಲಿ ಕೆಟ್ಟದಾಗಿ ಬಿಂಬಿಸಲು ಯಾರಿಗೂ ಬಹಳಷ್ಟು ಕಷ್ಟವಾಗಲಾರದು. ಒಳ್ಳೆಯದನ್ನು ಗುಣಗ್ರಾಹ್ಯ ಮಾಡಿಕೊಂಡು ಹೇಳಬೇಕಾದರೆ ಅದು ಕೆಲವೇ ವ್ಯಕ್ತಿಗಳಿಂದ ಮಾತ್ರ ಸಾಧ್ಯ.
ಸುಮಾರು 60 ವರ್ಷಗಳ ಹಿಂದಿನ ಕಾಲ. ಆಗ ಧರ್ಮಸ್ಥಳದ ಸುತ್ತಮುತ್ತ ಬಹಳ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ಇತ್ತು. ಆಟಿ (ಆಷಾಢ) ತಿಂಗಳಲ್ಲoತೂ ಜೀವನ ಮಾಡಲು ಬಲು ಕಷ್ಟವಿತ್ತು. ಅನೇಕರಿಗೆ ಒಂದು ಊಟ ಮಾಡಲೂ ಸಾಧ್ಯವಿರಲಿಲ್ಲ. ಕೆಲಸ ಮಾಡೋಣವೆಂದರೆ ಕೆಲಸ ಇಲ್ಲ, ವ್ಯಾಪಾರ, ವಹಿವಾಟಿಗೆ ಮಾರುಕಟ್ಟೆಗಳೂ ನಡೆಯುತ್ತಲೇ ಇರಲಿಲ್ಲ. ಆ ಸಂಕಷ್ಟದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮೂರು ತಿಂಗಳ ಕಾಲ ಯಾರೇ ಬಂದರೂ ಛತ್ರದಲ್ಲಿ ಊಟ ನೀಡುವಂತೆ ತಿಳಿಸಲಾಗಿತ್ತು.
ಆಗೊಮ್ಮೆ ತಂದೆಯವರು ಚಾವಡಿಯ ಒಳಗಡೆಯಿಂದ ಕಿಟಕಿಯಲ್ಲಿ ಹೊರಗಡೆ ನೋಡುತ್ತಿದ್ದಾಗ ವೃದ್ಧೆಯೊಬ್ಬಳು ತೋಟ, ಗದ್ದೆ, ರಸ್ತೆ ಬದಿಗಳಲ್ಲಿ ಬೆಳೆಯುವ ಕೆಸುವನ್ನು ಹೊತ್ತುಕೊಂಡು ಅನ್ನ ಛತ್ರದ ಕಡೆ ಸಾಗುವುದನ್ನು ಕಂಡರು. ಅದನ್ನು ವೃದ್ಧೆ ಯಾಕಾಗಿ ಹೊತ್ತುಕೊಂಡು ಬಂದಳು? ಏನು ವಿಷಯ ಎಂದು ವಿಚಾರಿಸಿದರು. ಆಗ ವೃದ್ಧೆಯು “ಸ್ವಾಮೀ.. ಅನ್ನ ಛತ್ರಕ್ಕೆ ಊಟಕ್ಕೆ ಬರುವಾಗ ಬರಿಗೈಲಿ ಬರಬಾರದು. ಏನಾದರೂ ತರಕಾರಿ ತೆಗೆದುಕೊಂಡು ಬನ್ನಿ ಎಂದು ಛತ್ರದ ಪಾರುಪತ್ಯಾಗಾರರು (ಮುಖ್ಯಸ್ಥರು) ತಿಳಿಸಿದ್ದಾರೆ. ಹಾಗಾಗಿ ಇದನ್ನು ತಂದಿದ್ದೇನೆ ಎಂದಾಗ” ತಂದೆಯವರು ಬಹಳ ಸಿಡಿಮಿಡಿಗೊಂಡಿದ್ದರು. “ಅನ್ನ ಹಾಕುವಾಗ, ಪರೋಪಕಾರ ಮಾಡುವಾಗ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು. ಅಂತದ್ರಲ್ಲಿ ಅನ್ನ ದಾಸೋಹ ಮಾಡುವಾಗ ತರಕಾರಿ ತರಬೇಕೆಂದು ಕಡ್ಡಾಯ ಮಾಡುವುದು ತಪ್ಪು. ಅದನ್ನು ಕೂಡಲೇ ನಿಲ್ಲಿಸಿ ಬಿಡಿ. ಹಾಗೆಲ್ಲ ಮಾಡಲೇ ಬೇಡಿ” ಎಂದು ಪಾರುಪತ್ಯಗಾರರಿಗೆ ಸೂಚಿಸಿದರು. ಹಾಗೆಯೇ ಅನೇಕ ಮಂದಿಗೆ ದಿನವೂ ಛತ್ರಕ್ಕೆ ಊಟಕ್ಕೆ ಹೋಗುವಾಗ ನಾವು ಸರಿಯಾದ ವಸ್ತುಗಳನ್ನು ಕೊಂಡುಹೋಗದಿದ್ದರೆ ನಮಗೆ ಊಟ ಹಾಕುತ್ತಾರೋ ಇಲ್ಲವೋ ಎಂದು ಸಂಕೋಚ ಇರುತ್ತಿತ್ತು ಮತ್ತು ಅರೆಮನಸ್ಕರಾಗಿ ಬರುತ್ತಿದ್ದರು. ಅದರ ಬದಲು ತಲೆ ಎತ್ತಿಕೊಂಡು ಬಂದು ಊಟ ಮಾಡುವಂತಹ ವ್ಯವಸ್ಥೆಯನ್ನು ಅವರು ಕಲ್ಪಿಸಿದರು. ಅವರ ಪ್ರೇರಣೆಯಂತೆ ಅಂದಿನಿoದ ಎಲ್ಲರಿಗೂ ಅನ್ನ ದಾಸೋಹ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಮಾಡುವ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಯಿತು. ಜೊತೆಗೆ ಕ್ಷೇತ್ರಕ್ಕೆ ದಾನವಾಗಿ ಬರುವ ಅಕ್ಕಿ, ಫಲವಸ್ತುಗಳನ್ನು ಬಳಸಿಕೊಂಡು ಅನ್ನದಾಸೋಹವನ್ನು ನಡೆಸಿಕೊಂಡು ಬರಲು ಸಾಧ್ಯವಾಯಿತು.
ಆರ್ಥಿಕ ಸಂಪನ್ಮೂಲಗಳ ಕೊರತೆಯಿದ್ದರೂ ಕ್ಷೇತ್ರಕ್ಕೆ ಬರುವ ಯಾತ್ರಿಕರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಯಾತ್ರಾರ್ಥಿಗಳಿಗಾಗಿ ಬಸ್‌ಸ್ಟಾö್ಯಂಡಿನ ಪಕ್ಕ ನರ್ಮದಾ, ಗೋದಾವರಿ, ಗಂಗಾ, ಕಾವೇರಿ ಮುಂತಾದ ವಸತಿ ಕಟ್ಟಡಗಳನ್ನು ನಿರ್ಮಿಸಿದರು. ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ‘ಗೇಟ್ ವೇ ಆಫ್ ಇಂಡಿಯಾ’ ದ್ವಾರವನ್ನು ನೋಡಿ ಧರ್ಮಸ್ಥಳಕ್ಕೂ ಇದೇ ರೀತಿಯ ‘ಗೇಟ್ ವೇ ಆಫ್ ಧರ್ಮಸ್ಥಳ’ ಬೇಕು ಎಂದು ಅವರಿಗೆ ಅನಿಸಿತು. ಧರ್ಮಸ್ಥಳದಲ್ಲೂ ಮಹಾದ್ವಾರದ ನಿರ್ಮಾಣ ಪ್ರಾರಂಭವಾಯಿತು. ಅದರ ಎಡಭಾಗದಲ್ಲಿ ಶಿವರಾತ್ರಿಗೆ ಶ್ರೀ ಸ್ವಾಮಿ ವಿಹಾರ ಹೋಗುವ ಕಟ್ಟೆ, ಬಲ ಭಾಗದಲ್ಲಿ ದೀಪೋತ್ಸವದ ಸಂದರ್ಭದಲ್ಲಿ ದೇವಾಲಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಲು ಗೌರಿಮಾರುಕಟ್ಟೆ ಹೀಗೆ ಎರಡು ಕಟ್ಟೆಗಳನ್ನು ಮಹಾದ್ವಾರದ ಪಕ್ಕ ಆಕರ್ಷಕವಾಗಿ ನಿರ್ಮಾಣ ಮಾಡಿ ಕ್ಷೇತ್ರಕ್ಕೆ ಮೆರುಗು ತಂದು ಕೊಟ್ಟರು. ಹೀಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಕನಸು ಕಾಣುತ್ತಾ ಅದನ್ನು ಸಕಾರಗೊಳಿಸುವಲ್ಲಿ ಅವರು ಅವಿರತವಾಗಿ ಶ್ರಮಿಸಿದರು.
ವಿದ್ಯೆಗೆ ಅವರು ಬಹಳ ಪ್ರಾಶಸ್ತö್ಯ ಕೊಡುತ್ತಿದ್ದರು. ನನ್ನ ತಾಯಿಯ ಸಹೋದರ ಡಾ| ನಾಗಕುಮಾರ್ ಶೆಟ್ಟಿಯವರು ವೈದ್ಯಕೀಯ ಡಿಗ್ರಿ ಪಡೆದಾಗ ನಮ್ಮ ಕುಟುಂಬದಲ್ಲಿ ಒಬ್ಬ ವೈದ್ಯನಾಗುತ್ತಿದ್ದಾನೆ ಎಂದು ತುಂಬಾ ಸಂತೋಷಪಟ್ಟರು. ಅವರು ಮನೆಗೆ ಬಂದಾಗ ಕೈಯಲ್ಲಿದ್ದ ವಾಚನ್ನೂ ಮತ್ತು ಅನೇಕ ಉಡುಗೊರೆಯನ್ನು ಕೊಟ್ಟರು. ಏನು ಕೊಟ್ಟರೂ ಕಡಿಮೆಯಾಯಿತು ಎಂದು ಅವರಿಗೆ ಅನಿಸುತ್ತಿತ್ತು. ಹಾಗೆಯೇ ವೈದ್ಯರಾಗಿ ಅವರು ವಿದೇಶಕ್ಕೆ ಹೊರಟಾಗ ಅವರಿಗೆ ತುಂಬಾ ಖುಷಿಯಾಗಿತ್ತು. 1945ರಲ್ಲಿ ಉಜಿರೆಯಲ್ಲಿ ‘ಸಿದ್ಧವನ ಗುರುಕುಲ’ವನ್ನು ಪೂಜ್ಯ ಮಂಜಯ್ಯ ಹೆಗ್ಗಡೆಯವರು ಸಂಸ್ಥಾಪಿಸಿದರು. ಆಗ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಇತ್ತು. ಮುಂದೆ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸಬೇಕು ಎಂದು ತಂದೆಯವರಿಗೆ ಆಸೆಯಾಗಿ, ನಮ್ಮ ಹಳ್ಳಿಯಲ್ಲಿ ಕಾಲೇಜು ಶಿಕ್ಷಣ ಬೇಕು, ಅದಕ್ಕೊಂದು ಟ್ರಸ್ಟ್ ಮಾಡಬೇಕು ಎಂದು ಶೀಘ್ರ ಕಾರ್ಯೋನ್ಮುಖರಾದರು. ತಂದೆಯವರದ್ದು ಶೀಘ್ರವಾದ ತೀರ್ಮಾನ. ಅಂದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಅದಕ್ಕೆ ಅವಕಾಶ ಮಾಡಿ ಕೊಡಬೇಕು ಎನ್ನುವುದು ಅವರ ಹಂಬಲ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ನಿರತರಾದರೂ ಕೂಡ.
ಬಹಳಷ್ಟು ಜನ ಉಜಿರೆಯಂತಹ ಸಣ್ಣ ಊರಿನಲ್ಲಿ ಕಾಲೇಜು ಮಾಡಲು ಸಾಧ್ಯವೇ, ಇಲ್ಲಿ ಯಾರು ಶಿಕ್ಷಣಕ್ಕೆ ಬರುತ್ತಾರೆ, ಯಾರು ಓದಲಿಕ್ಕೆ ಬರುತ್ತಾರೆ, ವಸತಿ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳನ್ನು ಹೇಳುವಾಗ ಅವರು ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡಬೇಕು, ಗ್ರಾಮೀಣ ವಿದ್ಯಾರ್ಥಿಗಳು ಒಳ್ಳೆಯ ಅವಕಾಶಗಳನ್ನು ಪಡೆದು ಉತ್ತಮ ಜೀವನವನ್ನು ನಡೆಸಬೇಕು ಎಂಬ ತೀರ್ಮಾನವನ್ನು ಅಂದು ಕೈಗೊಂಡಿದ್ದರಿoದ ಇಂದು ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಯಿತು. ಪ್ರಭಾಕರ್ ಮಂಡ್ಯದ ಸರಕಾರಿ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದರು. ಅವರನ್ನು ಸರಕಾರಿ ಉದ್ಯೋಗoಕ್ಕೆ ರಾಜಿನಾಮೆ ನೀಡಲು ತಿಳಿಸಿ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರನ್ನಾಗಿಸಿದರು. ಹೀಗಾಗಿ ಅವರು ಶಿಕ್ಷಣಕ್ಕೆ ಕೊಟ್ಟ ಪ್ರಾಶಸ್ತö್ಯ ನನಗೆ ಹೆಚ್ಚಿನ ಸ್ಫೂರ್ತಿಯನ್ನು ನೀಡಿತು. ಮುಂದೆ ನಾನೇನಾದರೂ ಸಾಧನೆ ಮಾಡಿ ಹೊಸ ಸಂಸ್ಥೆಗಳನ್ನು ತೆರೆದಿದ್ದರೆ ಅದಕ್ಕೆ ಅವರ ಸ್ಫೂರ್ತಿ, ಉತ್ಸಾಹ, ಅಚಲವಾದ ಶ್ರದ್ಧೆ, ನಂಬಿಕೆಗಳೇ ಪ್ರೇರಣೆ.
ಹೀಗೆ ಅದೆಷ್ಟೋ ಸಂಗತಿಗಳು, ನಮ್ಮ ಹಿರಿಯರ ಬದುಕಿನ ಅಂಶಗಳು ನಮ್ಮ ಬದುಕಿಗೂ ಪ್ರೇರಣೆ ಹಾಗೂ ಮಾರ್ಗದರ್ಶನವನ್ನು ನೀಡುತ್ತವೆ. ವರ್ಷದಲ್ಲೊಮ್ಮೆ ಅವರನ್ನು ಸ್ಮರಿಸುವುದು ಧಾರ್ಮಿಕ ಕಾರ್ಯವಾದರೂ ಅವರು ತೋರಿದ ಪಥದಲ್ಲಿ ಮುನ್ನಡೆದಾಗ ನಾವು ಅವರನ್ನು ಸದಾ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಹಾಗೆಯೇ ಅವರ ಆಸೆ-ಆಕಾಂಕ್ಷೆಗಳoತೆ ನಾವು ಉತ್ತಮ ಜೀವನವನ್ನು ಕಂಡು ಕೊಂಡಾಗ ಅವರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ ಎಂಬುದು ನನ್ನ ಭಾವನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates