ಬ್ಯಾಂಕ್ ಮ್ಯಾನೇಜರ್‌ನ ನೋವು

ಹಿಂದಿನ ಸಂಚಿಕೆಯಲ್ಲಿ ದಾಖಲೆಗಳು, ಅರ್ಹತೆ, ಉದ್ದೇಶಗಳು ಸಮರ್ಪಕವಾಗಿರದೇ ಸಾಮಾನ್ಯರಿಗೆ ಬ್ಯಾಂಕಿನಿoದ ಸಾಲ ಸಿಗದೇ ಇರುವುದರ ಬಗ್ಗೆ ತಿಳಿಸಿದೆ. ಒಂದು ವೇಳೆ ಇವೆಲ್ಲಾ ಸಮರ್ಪಕವಾಗಿದ್ದರೂ ಕೊನೆಗೆ ಬ್ಯಾಂಕಿನ ಜಾತಕದಲ್ಲಿ ದೋಷ ಕಂಡು ಬಂದು ಇವರಿಗೆ ಸಾಲ ಸಿಗದೇ ಇರಬಹುದು. ಅಚ್ಚರಿ ಪಡಬೇಡಿ, ಜಾತಕ ಎಂದರೆ ಜೋತಿಷ್ಯ ಶಾಸ್ತçದ ಜಾತಕ ಅಲ್ಲ, ಅದು ವ್ಯವಹಾರ ಜೀವನದ ಜಾತಕ. ಅದಕ್ಕೆ ಸಿಬಿಲ್(CIBIL) ಎನ್ನುತ್ತಾರೆ. ಸಿಬಿಲ್ ಎನ್ನುವುದು ಒಬ್ಬ ವ್ಯಕ್ತಿಯ ಸಾಲ ವ್ಯವಹಾರಗಳ ಗುಣಮಟ್ಟ, ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ತೋರಿಸುವ ಜಾತಕವಾಗಿದೆ. ಮೇಲೆ ತಿಳಿಸಿದಂತೆ ಎಲ್ಲಾ ದಾಖಲೆ, ಅರ್ಹತೆಗಳಿದ್ದರೂ ಬ್ಯಾಂಕಿನಲ್ಲಿ ಸಿಬಿಲ್ ರಿಪೋರ್ಟ್ ತೆಗೆಯುವಾಗ ನಿಗದಿತ ಕನಿಷ್ಠ ಅಂಕಗಳು ಸಿಗದೇ ಇದ್ದಲ್ಲಿ ಆ ವ್ಯಕ್ತಿಗೆ ಖಂಡಿತಾ ಸಾಲ ನೀಡಲು ಸಾಧ್ಯವಿಲ್ಲ. ಎಷ್ಟೋ ಸಂದರ್ಭದಲ್ಲಿ ಲಕ್ಷಾಂತರ ಬೆಳೆಬಾಳುವ ಆಸ್ತಿ, ಆದಾಯಗಳಿದ್ದರೂ ಕೇವಲ ಸಿಬಿಲ್‌ನಲ್ಲಿ ಋಣಾತ್ಮಕ ಅಂಶಗಳು ಕಂಡು ಬಂದು ಸಾಲ ಸಿಗದೇ ಒದ್ದಾಡುವವರನ್ನು ನೋಡಿದ್ದೇವೆ. ರೈತಾಪಿ ವರ್ಗದವರ ವಿಷಯದಲ್ಲಿ ಕೆಲವರು ತಮ್ಮ ಸಾಲಗಳು ಯಾವುದಾದರು ಸಂದರ್ಭದಲ್ಲಿ ಮನ್ನ ಆಗಬಹುದು ಅಥವಾ ಇನ್ಯಾವುದಾದರೂ ರೀತಿಯ ಪ್ರಯೋಜನಗಳು ನಮಗಾಗುವ ನಿಟ್ಟಿನಲ್ಲಿ ಕೃಷಿ ಸಾಲ, ಬೆಳೆ ಸಾಲ ಮುಂತಾದ ಸಾಲಗಳನ್ನು ಕಟ್ಟದೇ ಬಾಕಿ ಉಳಿಸಿಕೊಳ್ಳುತ್ತಾರೆ.
ಸಬ್ಸಿಡಿ ಆಕರ್ಷಣೆಯಿಂದ ಸರ್ಕಾರಿ ಯೋಜನೆಗಳಲ್ಲಿ ಸಾಲ ತೆಗೆದು ಸ್ವ-ಉದ್ಯೋಗಗಳನ್ನು ಸರಿಯಾಗಿ ನಿರ್ವಹಿಸದೇ ಎಷ್ಟೋ ಸಾಲ ಬಾಕಿ ಉಳಿಸಿಕೊಂಡ ಎಷ್ಟೊ ಯುವಜನತೆ ಇದ್ದಾರೆ. ಇನ್ನೂ ಹಾಸಿಗೆಗಿಂತ ಕಾಲನ್ನು ಉದ್ದ ಚಾಚಿದಂತೆ ಉದ್ದುದ್ದ ಸಾಲವನ್ನು ಮಾಡಿಕೊಂಡು ತೀರಿಸಲಾಗದೆ ಇರುವವರೂ ಇದ್ದಾರೆ. ಯಾವುದೋ ಒಂದು ವಿಶ್ವಾಸದಿಂದ ಹೊಸ ಉದ್ದಿಮೆಗಳನ್ನು ಪ್ರಾರಂಭಿಸಿ ವೈಫಲ್ಯಗೊಂಡು ಸಾಲವನ್ನು ಮೈತುಂಬಾ ಮಾಡಿಕೊಂಡವರೂ ಇದ್ದಾರೆ. ಹೀಗೇ ಅನೇಕ ಕಾರಣಗಳಿಂದಾಗಿ ಸರಿಯಾಗಿ ಸಾಲ ಕಟ್ಟದೇ ತಮ್ಮ ಸಿಬಿಲ್ ಅಂಕವನ್ನು ಕಳೆದುಕೊಂಡಿರುತ್ತಾರೆ. ಇವರಾದರೂ ಸ್ವತಃ ಸಾಲ ಮಾಡಿ ಕಟ್ಟದೇ ತಮ್ಮ ರೇಟಿಂಗ್ ಅನ್ನು ಹಾಳು ಮಾಡಿಕೊಂಡಿರುತ್ತಾರೆ. ಆದರೆ ಇನ್ನೊಂದಿಷ್ಟು ದುರಾದೃಷ್ಟವಂತರು ತಾವು ಇನ್ನೊಬ್ಬರಿಗೆ ಜಾಮೀನು ಹಾಕಿ, ಸಾಲಗಾರರು ಸಾಲ ಕಟ್ಟದೇ ಇರುವಾಗ ಅದಕ್ಕೆ ಇವರು ಜವಾಬ್ದಾರರಾಗಿ ತಮ್ಮ ಸಿಬಿಲ್‌ನಲ್ಲಿ ಗ್ರಹಚಾರ ಕೆಡಿಸಿಕೊಂಡಿರುವವರೂ ಇದ್ದಾರೆ. ಇದೊಂದು ದುರಾದೃಷ್ಟವೇ ಸರಿ.
ಸಿಬಿಲ್ ವಿಚಾರದಲ್ಲಿ ಬ್ಯಾಂಕ್ ಮ್ಯಾನೇಜರ್‌ಗಳಿಗೆ ವಿಭಿನ್ನ ಅನುಭವಗಳು ಇರುತ್ತವೆ. ಸಾಲಕ್ಕೆ ಏನೆಲ್ಲಾ ಬೇಕು ಎಂದು ಒಮ್ಮೆ ಕೇಳಿ ಹೋದವರು ಎಷ್ಟೋ ಸಮಯದ ನಂತರ ಒಮ್ಮೆಲೇ ಪ್ರತ್ಯಕ್ಷ ಆಗುತ್ತಾರೆ. ಬಹಳಷ್ಟು ಕಷ್ಟಪಟ್ಟು ಎಲ್ಲಾ ದಾಖಲೆ ಹೊಂದಿಸಿ ಮ್ಯಾನೇಜರ್‌ಗೆ ನೀಡುತ್ತಾರೆ. ಮುಂದಿನ ಪ್ರಕ್ರಿಯೆಯಾಗಿ ಅವರ ಸಿಬಿಲ್ ಜಾತಕವನ್ನು ಕಂಪ್ಯೂಟರ್‌ನಲ್ಲಿ ತೆಗೆದಾಗ ದೊಡ್ಡ ಗ್ರಹಚಾರ ಕಾಣುತ್ತದೆ. ಸಿಬಿಲ್‌ನ ಕನಿಷ್ಟ ಅಂಕಗಳು ಸಿಗದೇ ನಿಮಗೆ ಸಾಲ ಇಲ್ಲ ಎಂದಾಗ ಕೋಪದಿಂದ ಬುಸುಗುಟ್ಟುತ್ತಾರೆ. ಸಮಾಧಾನದಿಂದ ಅವರಿಗೆ ಅವರ ಜಾತಕವನ್ನೇ ತೋರಿಸಿ ಈ ಕೃಷಿ ಸಾಲ ಇದ್ದು ವರ್ಷದಿಂದ ಕಟ್ಟದೇ ಬಾಕಿ ಉಳಿದಿದೆ ಎಂದು ತೋರಿಸಬೇಕಾಗುತ್ತದೆ. ಅದನ್ನು ಚುಕ್ತಮಾಡಿ ಅಲ್ಲಿಂದ ನೋ ಡ್ಯೂ ಸರ್ಟಿಫಿಕೇಟ್ (NOC)) ತಂದಲ್ಲಿ ಮೇಲಾಧಿಕಾರಿಗಳು ವಿಶೇಷ ಅನುಮತಿ ನೀಡಿದ್ದಲ್ಲಿ ಮಾತ್ರ ಸಾಲ ಸಿಗುವುದು ಎಂದಾಗ ಅಸಮಾಧಾನದಿಂದಲೇ ಹೊರಹೋಗುತ್ತಾರೆ. ಇನ್ನೂ ಆ ಬ್ಯಾಂಕಿಗೆ ಹೋದರೆ ಸುಮ್ಮನೆ ಬಿಡುತ್ತಾರೆಯೇ? ಅಸಲು, ಬಡ್ಡಿ, ದಂಡ ಎಲ್ಲಾ ಹಾಕಿ ಎಲ್ಲಾ ಚುಕ್ತ ಮಾಡಿದಲ್ಲಿ ಮಾತ್ರ ನೋ ಡ್ಯೂ ಸರ್ಟಿಫಿಕೇಟ್ ಕೊಡುತ್ತೇವೆ ಎಂದು ತಿಳಿಸುತ್ತಾರೆ. ಹೆಚ್ಚಿನವರು ಇಲ್ಲಿಗೆ ಕೈ ಬಿಡುತ್ತಾರೆ. ಇನ್ನೂ ಕೆಲವರು ಇದರಿಂದ ಹೊಸ ಪಾಠ ಕಲಿತು ಈ ಸಾಲವನ್ನೆಲ್ಲಾ ಚುಕ್ತ ಮಾಡಿ ಇನ್ನೆಂದೂ ತನ್ನ ವ್ಯವಹಾರಗಳನ್ನು ಹಾಳು ಮಾಡಿಕೊಳ್ಳುವುದಿಲ್ಲ ಎಂಬ ಸಂಕಲ್ಪದಿoದ ಬ್ಯಾಂಕಿನವರಲ್ಲಿ ವಿಶ್ವಾಸ ಗಳಿಸಿ ಹೆಚ್ಚಿನ ನಿಬಂಧನೆಗಳೊoದಿಗೆ ಆ ಸಾಲ ಪಡೆಯಲು ವಿಶೇಷ ಅನುಮತಿಗಾಗಿ ಮೇಲಾಧಿಕಾರಿಗಳಿಗೆ ಸಾಲದ ಅರ್ಜಿ ಕಳುಹಿಸುತ್ತಾರೆ, ಕೊನೆಗೂ ಅದು ಸಿಕ್ಕರೆ ಪುಣ್ಯ. ಇಂತಹ ಕೇಸ್‌ನಲ್ಲಿ ಇವನ ತಪ್ಪಿನಿಂದಾದ ಸಾಲ ಬಾಕಿಗಳನ್ನು ಚುಕ್ತ ಮಾಡಬೇಕೆಂದಾಗುತ್ತದೆ. ಆದರೆ ಇನ್ನೊಂದಿಷ್ಟು ಕೇಸ್‌ಗಳಲ್ಲಿ ಯಾರಿಗೂ ಜಾಮೀನು ಹಾಕಿ ಅವನು ಸಾಲವನ್ನು ಪೂರ್ಣವಾಗಿ ಕಟ್ಟದೆ ಉಳಿದು ಇವನ ಸಿಬಿಲ್ ಅಂಕ ನೆಲಕ್ಕುರುಳಿ ಇವನಿಗೆ ಸಾಲ ಸಿಗುವುದಿಲ್ಲ್ಲ. ಇವನಿಗೆ ಸಾಲ ಬೇಕೇ ಆದಲ್ಲಿ ಆ ಪುಣ್ಯಾತ್ಮ ಬಾಕಿ ಉಳಿಸಿದ ಎಲ್ಲಾ ಸಾಲದ ಅಸಲು, ಬಡ್ಡಿ ದಂಡವನ್ನೆಲ್ಲ್ಲಾ ತೆತ್ತು ಚುಕ್ತಗೊಳಿಸಿ ಪುನಃ ಶುದ್ದ ಕೈಗಳಿಂದ ಸಾಲಕ್ಕೆ ಹೊಸ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಇದಕ್ಕಿಂತ ಗ್ರಹಚಾರ ಇನ್ನೊಂದಿದೆಯೇ?.
ಸಿಬಿಲ್ ಕಥೆಯು ಇಷ್ಟಕ್ಕೇ ಮುಗಿದಿಲ್ಲ, ಬಾಕಿಯನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇವೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *