ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಕೊಡುಕೊಳ್ಳುವಿಕೆ ಬದುಕಿನ ಒಂದು ಭಾಗ. ಪುರಾತನ ಕಾಲದಿಂದಲೂ ವಿವಿಧ ರೀತಿಯ ಕೊಡುಕೊಳ್ಳುವಿಕೆ, ವ್ಯವಹಾರ ಪದ್ಧತಿಗಳು ನಡೆದುಕೊಂಡು ಬಂದಿವೆ. ಒಂದು ಕಾಲದಲ್ಲಿ ಉಪ್ಪು ಕೊಟ್ಟರೆ ಅದಕ್ಕೆ ಸಮಾನಾಗಿ ತೆಂಗಿನಕಾಯಿ, ಅಕ್ಕಿ ಕೊಟ್ಟರೆ ತರಕಾರಿ ಕೊಡುವುದು ಹೀಗೆ ವಸ್ತು-ವಿನಿಮಯ ವ್ಯವಸ್ಥೆಗಳ ಮೂಲಕ ವ್ಯವಹಾರಗಳು ನಡೆಯುತ್ತಿದ್ದವು. ದಿನಕಳೆದಂತೆ ರಾಜ-ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿ, ವ್ಯಾಪಾರ-ವ್ಯವಹಾರಗಳ ರೂಪವೂ ಬದಲಾದವು. ಇಂದು ಇವು ಕ್ಷಣಮಾತ್ರದಲ್ಲಿ ನಡೆಯುತ್ತವೆ. ಎಲ್ಲೋ ಕುಳಿತು ಏನನ್ನು ಬೇಕಾದರೂ ಖರೀದಿ ಮಾಡುವಷ್ಟು ಜಗತ್ತು ಬದಲಾಗಿದೆ. ಆನ್ಲೈನ್ ಮೂಲಕ ಆಹಾರ ಸರಬರಾಜು ಕೂಡಾ ಆಗುತ್ತಿರುವುದು ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನ.
ಕೇವಲ ಒಂದು ದಶಕಗಳ ಹಿಂದಿನ ವ್ಯವಸ್ಥೆಯನ್ನು ಗಮನಿಸಿದರೆ ಹಿಂದೆ ನಾವು ಎಲ್ಲಿ ಇದ್ದೆವು, ಈಗ ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುವುದರ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಆಗ ಸೀಬೆ, ಕಿತ್ತಳೆ, ಮೂಸಂಬಿ, ಸೇಬು, ಬಾಳೆಹಣ್ಣು, ಸೊಪ್ಪು, ತರಕಾರಿ, ಈರುಳ್ಳಿ, ಟೊಮೆಟೋ ಎಂದು ರಸ್ತೆಯಲ್ಲಿ ಕೂಗುತ್ತಾ, ತಳ್ಳುಗಾಡಿ ದೂಡುತ್ತಾ ಹೋಗುವ ರೈತ ವ್ಯಾಪಾರಿಗಳಿದ್ದರು. ಮನೆ ಮನೆಗೆ ಬಳೆಗಾರ ಬಳೆ, ಕುಂಬಾರ ಮಡಕೆಗಳನ್ನು ತರುತ್ತಿದ್ದ. ಈ ಬಗ್ಗೆ ಅನೇಕ ರೀತಿಯ ಜಾನಪದ ಹಾಡುಗಳೂ ಪ್ರಚಲಿತದಲ್ಲಿ ಇದ್ದವು. ಆಗ ಹೆಚ್ಚಿನ ರೈತರು ತಾವು ಬೆಳೆದ ಫಸಲನ್ನು ತಾವೇ ದಿನನಿತ್ಯ ಮಾರಾಟ ಮಾಡುತ್ತಾ ಹಣ ಸಂಪಾದಿಸುತ್ತಿದ್ದರು. ಹೆಚ್ಚಿನ ಲಾಭವಿಲ್ಲದಿದ್ದರೂ, ತಮ್ಮ ದಿನದ ಖರ್ಚು-ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುವಷ್ಟು ದುಡಿಯುತ್ತಿದ್ದರು. ಮನೆವಾರ್ತೆ ನೋಡಿಕೊಳ್ಳುವ ಹೆಚ್ಚಿನ ಮಹಿಳೆಯರು ಇಂತವರಿoದಲೇ ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿಸುತ್ತಿದ್ದರು. ಮಾರಾಟಗಾರರು ಮತ್ತು ಖರೀದಿದಾರರ ಮಧ್ಯೆ ಆತ್ಮೀಯತೆಯಿತ್ತು. ತರಕಾರಿಗಳಲ್ಲಿ ಒಂದಷ್ಟು ಗ್ರಾಂ. ಜಾಸ್ತಿಯೇ ಕೊಡುವುದು, ಇಲ್ಲವೇ ಒಂದು ಹಿಡಿ ಮೆಣಸಿನಕಾಯಿ, ಶುಂಠಿಯನ್ನು ಉಚಿತವಾಗಿ ಕೊಡುವುದಿತ್ತು. ಬಿಸಿಲಿಗೆ ಮನೆಗೆ ಬಂದ ವ್ಯಾಪಾರಿಗೆ ಒಂದು ಲೋಟ ಮಜ್ಜಿಗೆಯೋ, ನೀರನ್ನೋ ಕೊಡುವ ಉದಾರತನವಿತ್ತು.
ಕಾಲಕ್ರಮೇಣ ರೈತರು ರಸ್ತೆಯಲ್ಲಿ, ಮನೆ-ಮನೆಗೆ ತೆರಳಿ ತಾವು ಬೆಳೆದ ಫಸಲನ್ನು ಮಾರಾಟ ಮಾಡುವುದನ್ನು ಕೈಬಿಟ್ಟರು. ಯಾಕೆಂದರೆ ಈ ಕೆಲಸವನ್ನು ಮಧ್ಯವರ್ತಿಗಳೇ ನಿರ್ವಹಿಸಲು ಮುಂದಾದರು. ನೇರವಾಗಿ ರೈತರ ಮನೆಗೇ ಬಂದು ಎಲ್ಲ ಫಸಲನ್ನು ಕೊಂಡೋಗತೊಡಗಿದರು. ಇದರಿಂದಾಗಿ ರೈತನಿಗೆ ಮಾರಾಟ ಮಾಡುವ ಕೆಲಸ ಸುಲಭವಾಯಿತು. ಮನೆ ಮನೆಗೆ ತೆರಳಿ ಮಾರಾಟ ಮಾಡುವುದಕ್ಕಿಂತ ಇದೇ ಅನುಕೂಲವೆಂದೆನಿಸಿತು. ಮಧ್ಯವರ್ತಿಗಳು ರೈತರ ಬೆಳೆ, ಫಸಲನ್ನು ಖರೀದಿಸಿ ತಾವೇ ತಲೆಯಲ್ಲಿ ಹೆಡಿಗೆಗಳನ್ನು ಇಟ್ಟುಕೊಂಡು ಮನೆಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಇವರು ಮನೆ ಬಾಗಿಲಿಗೆ ಬಂದು ಹೆಡಿಗೆ ಇಳಿಸಿ ಆಯಾಸವನ್ನು ಕಡಿಮೆ ಮಾಡಿಕೊಂಡು ಮನೆಯವರಿಗೆ ‘ತಗೊಳ್ಳಿ ಸ್ವಾಮಿ, ತಗೊಳ್ಳಿ ಅಮ್ಮಾ’ ಎಂದು ಕೇಳಿಕೊಳ್ಳುತ್ತಿದ್ದರು. ಖರೀದಿದಾರರೂ ಮನೆ ಬಾಗಿಲಿಗೆ ಬಂದ ಮಾರಾಟಗಾರರೊಂದಿಗೆ ಚರ್ಚೆ ಮಾಡದೇ ಖರೀದಿ ಮಾಡುತ್ತಿರಲಿಲ್ಲ. ಚೌಕಾಶಿ ಮಾಡಿ ದರ ನಿಗದಿಯಾಗುತ್ತಿತ್ತು. ಈರ್ವರಿಗೂ ಚೌಕಾಶಿ ಅನಿವಾರ್ಯವೆಂದು ಗೊತ್ತಾದ್ದರಿಂದ ಸಹಜವಾಗಿ ಸಂಭಾಷಣೆ ನಡೆಯುತ್ತಿತ್ತು. ಮೊದಲ ಹಂತದಲ್ಲಿ ಜಗಳವೆಂದೇ ಭಾವಿಸುವಷ್ಟು ಚರ್ಚೆ ನಡೆದರೂ ಕೊನೆಗೆ ಸೌಹಾರ್ದಯುತವಾಗಿ ವ್ಯಾಪಾರ ನಡೆಯುತ್ತಿತ್ತು. ಮಧ್ಯವರ್ತಿಗಳು ತಾವು ರೈತರಿಗೆ ನೀಡಿದ ಹಣಕ್ಕಿಂತ ಸ್ವಲ್ಪ ಜಾಸ್ತಿ ದರದಲ್ಲಿಯೇ ಮಾರಾಟ ಮಾಡಿ ಕೊಂಚ ಲಾಭ ಗಳಿಸುತ್ತಿದ್ದರು.
ಇಂದು ಈ ರೀತಿ ಮನೆ ಬಾಗಿಲಿಗೆ ಬಂದು ಮಾರಾಟ ಮಾಡುವವರು ಇಲ್ಲವೆಂದೇ ಹೇಳಬಹುದು. ಈಗ ಮಾಲ್ಗಳು ಅಥವಾ ಅಂಗಡಿಗಳಲ್ಲಿ ಒಂದೇ ಸೂರಿನಡಿ ಮನೆ ಬಳಕೆಯ ಹಾಗೂ ಇತರ ಎಲ್ಲಾ ಅವಶ್ಯಕ ವಸ್ತುಗಳು ದೊರೆಯುತ್ತವೆ. ಅಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿ ನಿಗದಿಪಡಿಸಿದ ಮೊತ್ತವನ್ನು ನೀಡಿ ತುಟಿಪಿಟಿಕ್ಕೆನ್ನದೆ ವ್ಯಾಪಾರಗಳು ನಡೆಯುತ್ತವೆ. ತಳ್ಳುಗಾಡಿ ವ್ಯಾಪಾರ, ಬೀದಿ ಬದಿ ವ್ಯಾಪಾರಗಳಲ್ಲಿ ಅನಿವಾರ್ಯವೆಂಬ ರೀತಿಯಲ್ಲಿ ಚರ್ಚೆಮಾಡಿಕೊಂಡು ವ್ಯವಹಾರ ಮಾಡಲಾಗುತ್ತದೆ. ಆದರೆ ಮಾರಾಟ ಮಳಿಗೆಗಳಲ್ಲಿ, ಮಾಲ್ಗಳಲ್ಲಿ ಚರ್ಚೆಗೆ ಅವಕಾಶವೇ ಇಲ್ಲ.
ದೊಡ್ಡ ಮೊತ್ತದ ಸಗಟು ಖರೀದಿಯಿಂದ ಮಾಲ್ಗಳಲ್ಲಿ ಬೆಲೆ ಕಡಿಮೆಯಾಗಲು ಸಾಧ್ಯವಿದೆ. ಗುಣಮಟ್ಟದ ಸರಕನ್ನು ಪಡೆಯಲು ಸಾಧ್ಯವಿದೆ. ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಯದ ವಿದೇಶಗಳಲ್ಲೂ ಮಾಲ್ಗಳಿಗೆ ಹೋದರೆ ನಂಬಲಾರದಷ್ಟು ಬಗೆಯ ತರಕಾರಿ, ಹಣ್ಣು ಹಂಪಲುಗಳನ್ನು ಕಾಣಬಹುದು. ದರ ತುಸು ಹೆಚ್ಚಾದರೂ ಗ್ರಾಹಕರು ಏನನ್ನೂ ಮಾತನಾಡದೆ ಹಣ ಪಾವತಿಸಿ ಬೇಕಾದುದನ್ನು ಕೊಂಡುಕೊಳ್ಳುತ್ತಾರೆ.
ಇoದಿನ ಹೆಣ್ಣುಮಕ್ಕಳು ಮದುವೆಯಾಗುವ ಮೊದಲು ಗಂಡ ವಾಸವಾಗಿರುವ ಊರಲ್ಲಿ, ನಗರ ಅಥವಾ ಹಳ್ಳಿಯಲ್ಲಿ ಮಾಲ್ ಇದೆಯಾ ಎಂದು ಕೇಳುತ್ತಾರೆ. ಅಂದರೆ ಹಿಂದಿನoತೆ ವಾರಕ್ಕೊಮ್ಮೆ ನಡೆಯುವ ಸಂತೆಗೆ ಹೋಗಿ ಖರೀದಿಸುವ ಅಗತ್ಯವಿಲ್ಲ. ಗುಣಮಟ್ಟ ಖಾತ್ರಿಪಡಿಸಿಕೊಂಡು ವಸ್ತುಗಳ ಆಯ್ಕೆ ಮಾಡಬಹುದು ಎಂಬ ಭಾವನೆ ಖರೀದಿದಾರರಲ್ಲಿ ಇರಬಹುದು. ಇಂದು ಸಣ್ಣ ಹಳ್ಳಿಗಳಲ್ಲಿಯೂ ಮಾಲ್ಗಳು ಇರುವುದರಿಂದ ಮದುವೆಯಾಗುವ ಗಂಡಸರಿಗೆ ಸ್ವಲ್ಪ ನಿಶ್ಚಿಂತೆಯಾಗಿದೆ. ಹೆಣ್ಣು ಮಕ್ಕಳಿಗೂ ಮನೆಯಲ್ಲಿ ಕೈತೋಟದ ಅವಶ್ಯಕತೆ ಇಲ್ಲ. ಜಾನುವಾರುಗಳನ್ನು ಸಾಕಿ ಹಾಲು ಕರೆಯುವ ಪ್ರಮೇಯವಿಲ್ಲ. ಪೌಷ್ಟಿಕ ಆಹಾರವನ್ನು ಸುಲಭವಾಗಿ ಖರೀದಿಸಬಹುದು ಎಂದು ನಿಟ್ಟುಸಿರು ಬಿಡಬಹುದು.
ಕೆಲವು ಕೃಷಿಕರಿಗೆ ವೈವಿಧ್ಯಮಯವಾದ ತರಕಾರಿಗಳನ್ನು, ಹಣ್ಣು-ಹಂಪಲು, ಹೂವು ಬೆಳೆಸುವ ಆಸಕ್ತಿ ಇದೆ. ಈ ಬೆಳೆಗಳನ್ನು ವಾರಕ್ಕೊಮ್ಮೆ ಸಂತೆಗೆ ಕೊಂಡುಹೋಗಬಹುದು, ಹೋಗದೆಯೂ ಇರಬಹುದು. ಸ್ವಲ್ಪ ಹೂವು, ವೀಳ್ಯದೆಲೆ, ತರಕಾರಿ ಬೆಳೆದರೆ ಅವುಗಳನ್ನು ಮಾರಾಟಕ್ಕೆ ಕೊಂಡೋಗುವ ವೆಚ್ಚ, ಸಮಯವನ್ನು ಪರಿಗಣಿಸಿದಾಗ ಲಾಭವಾಗದಿರಬಹುದು. ಈ ಸಮಸ್ಯೆಯನ್ನರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿ ರೈತರೊಬ್ಬರು ಸಣ್ಣ ವಾಹನ ಉಪಯೋಗಿಸಿ ಸ್ಥಳೀಯ ರೈತರು ಬೆಳೆದ ಅಲ್ಪ-ಸ್ವಲ್ಪ ಬೆಳೆಗಳನ್ನು ಒಟ್ಟು ಸೇರಿಸಿ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಸಂಜೆ ಹೊತ್ತಿಗೆ ಆಯಾ ಕೃಷಿಕರ ಬೆಳೆಯ ಮೌಲ್ಯವನ್ನು ಹಿಂದಿರುಗಿಸುವ ಪ್ರಯೋಗ ಮಾಡಿದರು. ಈ ಪ್ರಯೋಗದಿಂದ ಖರೀದಿದಾರರಿಗೆ ತಾಜಾ ವಸ್ತುಗಳು ದೊರೆಯುವಂತಾಗಿ ಮಾರಾಟ ಯೋಗ್ಯವೂ ಆದವು.
ಒಮ್ಮೆ ಗುಜರಾತಿನ ಮಾವಿನ ತೋಟಕ್ಕೆ ಹೋಗಿದ್ದಾಗ ಅಲ್ಲಿಯ ರೈತರು ಹೇಳಿದರು. ಅವರ ಬಳಿ ನಗರದ ಮಾಲ್ಗಳು ನಿರ್ದಿಷ್ಟ ಗಾತ್ರದ ಪ್ಯಾಕೆಟ್ ಅನ್ನು ಕೊಟ್ಟು ಅದರೊಳಗೆ ಹಿಡಿಯುವ ಗಾತ್ರದ ಹಣ್ಣನ್ನು ಬೆಳೆದು ಕೊಡಲು ಹೇಳಿದರಂತೆ. ಮುಂದಕ್ಕೆ ಈ ಉಪಾಯವನ್ನು ಲಂಡನ್ ನಗರದ ‘ಹ್ಯಾರೋಡ್ಸ್’ ಅನ್ನುವ ಮಾಲ್ನವರು ಮಾಡಿದರಂತೆ. ಹೀಗೆ ತಮಗೆ ಬೇಕಾದ ಗಾತ್ರದ ಹಣ್ಣುಗಳನ್ನು ಬೆಳೆಸುವ ಪದ್ಧತಿಗೆ ಮಾಲ್ನವರು ಮುಂದಡಿಯಿತ್ತರು. ಇದು ಖರೀದಿದಾರರಿಗೂ ಇಷ್ಟವಾಯಿತು. ಸಾಮಾನ್ಯವಾಗಿ ವಿದೇಶಗಳ ಮಾರುಕಟ್ಟೆಗಳು ಸರಕಿನ ಗುಣಮಟ್ಟ ಮತ್ತು ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.
ಇಂದು ಒಂದು ಬೆಳೆಯನ್ನು ಬೆಳೆಯುವಷ್ಟೇ ಸವಾಲು ಮಾರಾಟದಲ್ಲೂ ಇದೆ. ಹಣು,್ಣ ತರಕಾರಿ ಹೀಗೆ ಯಾವುದೇ ಆದರೂ ಅವುಗಳು ಗುಣಮಟ್ಟದಿಂದ ಕೂಡಿರಬೇಕು. ನೋಡಲು ಆಕರ್ಷಕವಾಗಿರಬೇಕು. ಅಂದವಾಗಿ ಪ್ಯಾಕ್ ಮಾಡಿರಬೇಕು. ಆಗ ಮಾತ್ರ ಖರೀದಿದಾರರ ಮನಗೆಲ್ಲಲು ಸಾಧ್ಯ. ಗುಣಮಟ್ಟದ ಮಾವಿನಕಾಯಿಯನ್ನು ಒಂದು ಗೋಣಿಚೀಲದಲ್ಲಿ ಹಾಕಿ ನೀಡಿದರೆ ಅದನ್ನು ಉತ್ತಮ ಬೆಲೆ ನೀಡಿ ಖರೀದಿಸಲು ಯಾರು ಮುಂದೆ ಬರುವುದಿಲ್ಲ. ಮಾರಾಟಕ್ಕೆ ವಿಶೇಷ ಆದ್ಯತೆ ನೀಡಿದಾಗ ಮಾತ್ರ ನಮ್ಮ ಬೆಳೆಗಳೂ ಅಂತಾರಾಷ್ಟಿçÃಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯವಿದೆ. ಈಗಾಗಲೇ ನಮ್ಮಲ್ಲಿ ಬೆಳೆದ ಹಣ್ಣು, ತರಕಾರಿಗಳು ವಿದೇಶಗಳಿಗೆ ರಫ್ತಾಗುತ್ತಿವೆ. ಖರೀದಿಯಲ್ಲಿ ಹೊರ ರಾಷ್ಟçಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿವೆ. ನಮ್ಮ ದೇಶದ ಕೃಷಿಕರು ಕೂಡಾ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಮಾರಾಟದ ಬಗ್ಗೆ ವಿಶೇಷ ಗಮನಹರಿಸಿದಾಗ ಮಾತ್ರ ನಮ್ಮ ಬೆಳೆಗಳೂ ಅಂತಾರಾಷ್ಟಿçÃಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯ.
ಬೇರೆ ಬೇರೆ ದೇಶಗಳಿಂದ ಇತರ ವಸ್ತುಗಳಂತೆ ಹಣ್ಣು, ತರಕಾರಿಗಳನ್ನು ಆಮದು ಮಾಡಿಕೊಳ್ಳುವ ಅನೇಕ ರಾಷ್ಟçಗಳಿವೆ. ಹಿಂದೊಮ್ಮೆ ಭಾರತದಲ್ಲಿ ಬೆಳೆಯುವ ಮಾವಿನಕಾಯಿಯಲ್ಲಿ ರಾಸಾಯನಿಕ ಅಂಶ ಕಂಡು ಬಂದ ಕಾರಣ ಮಾವಿನಕಾಯಿಯನ್ನು ವಿದೇಶದವರು ಆಮದು ಮಾಡಿಕೊಳ್ಳುವುದನ್ನೇ ನಿಲ್ಲಿಸಿದ್ದರು. ಈ ಒಂದು ಘಟನೆ ರೈತರು ಬೆಳೆಯುವ ಯಾವುದೇ ವಸ್ತುಗಳಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
‘ನನ್ನ ತೋಟದ ಕಾಫಿ ಬೆಳೆಗೆ ಎಷ್ಟು ಮಹತ್ವವನ್ನು ಕೊಡುತ್ತೇನೋ ಅಷ್ಟೇ ಗಮನವನ್ನು ಅದರ ಪರಿಷ್ಕರಣೆಗೂ ಕೊಡುತ್ತೇನೆ. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರಿಲ್ಲದೆ ಸೂಕ್ತ ಬೆಲೆ ದೊರೆಯುವುದಿಲ್ಲ. ವಿದೇಶಿ ಕಂಪನಿಗಳು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವುದರಿಂದ ಅದನ್ನು ಕಾಯ್ದುಕೊಳ್ಳಬೇಕಾದ ಆದ್ಯತೆ ಹಾಗೂ ಅನಿವಾರ್ಯತೆ ನಮ್ಮದಾಗಿದೆ’ ಎಂದು ಕಾಫಿ ಬೆಳೆಗಾರರೊಬ್ಬರು ಅವರ ಅನುಭವವನ್ನು ನನ್ನೊಂದಿಗೆ ಹಂಚಿಕೊAಡರು. ಈ ಮಾತನ್ನು ಎಲ್ಲ ಕೃಷಿಕರು ಪಾಲಿಸಬೇಕಿದೆ.
ಈಗ ಸರಕಾರದ ನೆಲೆಯಲ್ಲಿ ಪ್ರಾರಂಭವಾದ ಹಲವು ಸಹಕಾರಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ನಿಗದಿತ ಬೆಲೆಯಲ್ಲಿ ಮಾರಾಟವಾಗುತ್ತವೆ. ಉತ್ತಮ ಮಾರುಕಟ್ಟೆ ವ್ಯವಸ್ಥೆ ಇದ್ದಲ್ಲಿ ಇದರಿಂದಾಗಿ ರೈತರಿಗೆ ಅನುಕೂಲವಾಗುತ್ತದೆ. ಇದು ಕೂಡಾ ಬೆಳೆಗಾರರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ‘ಕೋಲ್ಡ್ ಸ್ಟೋರೇಜ್’ ಅಂದರೆ ತರಕಾರಿ ಮತ್ತು ಹಣ್ಣುಗಳ ಬೆಳೆ ಬಂದ ತಕ್ಷಣ ಶೀತಲ ಕೇಂದ್ರದಲ್ಲಿರಿಸಿ ಕೆಲವು ವಾರ, ತಿಂಗಳು ಕೆಡದಂತೆ ರಕ್ಷಿಸಿ ಮಾರುಕಟ್ಟೆ ನಿರ್ಮಾಣ ಮಾಡುವ ವ್ಯವಸ್ಥೆ ಬಂದಿದೆ. ಇಂತಹ ಶೀತಲೀಕರಣ ವ್ಯವಸ್ಥೆ ತಾಲೂಕುಮಟ್ಟದಲ್ಲೂ ಹೆಚ್ಚಾಗಬೇಕಾಗಿದೆ.
ಒಂದು ಬೆಳೆಯನ್ನು ಬೆಳೆಯುವುದರಿಂದ ಹಿಡಿದು ಗ್ರಾಹಕನ ಕೈ ಸೇರುವವರೆಗೂ ಸಾಕಷ್ಟು ಹಂತಗಳಿವೆ. ಎಲ್ಲ ಹಂತಗಳಲ್ಲೂ ವಿಶೇಷವಾದ ಮುತುವರ್ಜಿ ವಹಿಸಿದಾಗ ಮಾತ್ರ ಆ ಬೆಳೆ ಉತ್ತಮ ರೀತಿಯಲ್ಲಿ ಗ್ರಾಹಕನ ಕೈ ಸೇರಲು ಸಾಧ್ಯ. ಅಂತೆಯೇ ಬೆಳೆಗಳಿಗೆ ಉತ್ತಮ ಬೆಲೆ ಲಭ್ಯವಾದಾಗ ಮಾತ್ರ ಬೆಳೆಗಾರರೂ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ರೈತರು, ಮಧ್ಯವರ್ತಿ, ವ್ಯಾಪಾರಿ, ಗ್ರಾಹಕರು ಇವರೆಲ್ಲರು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಎಲ್ಲರೂ ಅವರವರ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಇಂದಿನ ಈ ಆಧುನಿಕ ಮಾರುಕಟ್ಟೆಯ ಯುಗದಲ್ಲಿ ಲಾಭವೇ ಪ್ರಮುಖ ಉದ್ದೇಶವಾಗಬಾರದು. ಬೆಳೆ ಬೆಳೆದ ರೈತನಿಗೂ, ಕೊಂಡ ಗ್ರಾಹಕರಿಗೂ ಇಬ್ಬರಿಗೂ ವ್ಯಾಪಾರ-ವ್ಯವಹಾರದಲ್ಲಿ ಮನಸ್ಸಿಗೆ ತೃಪ್ತಿಯಾಗಬೇಕು. ಆಗ ಮಾತ್ರ ಉತ್ತಮ ಬೆಳವಣಿಗೆಗಳನ್ನು ಕಾಣಲು ಸಾಧ್ಯವಿದೆ. ಇಂದು ಕೃಷಿಕ ಅವನು ಬೆಳೆದ ಬೆಳೆ ಗ್ರಾಹಕರ ಕೈಗೆ ತಲುಪುವವರೆಗೂ ಗಮನಹರಿಸಬೇಕಾದ ಅಗತ್ಯತೆಯಿದೆ. ಮಾರುಕಟ್ಟೆಯ ಒಳಗುಟ್ಟನ್ನು ಅರಿತುಕೊಂಡಲ್ಲಿ ಮಾತ್ರ ಯಶಸ್ಸು ತಮ್ಮದಾಗಬಹುದು.
