ರೇಡಿಯೋ ಪಯಣ

ಬಾಲ್ಯದಿಂದಲೂ ನನಗೆ ರೇಡಿಯೋ ಬಗ್ಗೆ ಹೆಚ್ಚಿನ ಒಲವು. ರೇಡಿಯೋದಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾರ್ತೆ, ಕೃಷಿ ಮಾಹಿತಿ ಇತ್ಯಾದಿ ಕಾರ್ಯಕ್ರಮಗಳನ್ನು ಕೇಳುವುದೆಂದರೆ ನನಗೆ ಬಲು ಇಷ್ಟ. ಕಾರು ಪ್ರಯಾಣದ ವೇಳೆ ಹೆಚ್ಚಾಗಿ ರೇಡಿಯೋ ಆಲಿಸುತ್ತಿರುತ್ತೇನೆ.
1970ನೇ ದಶಕಗಳಲ್ಲಿ ರೇಡಿಯೋ ಸ್ಟೇಷನ್‌ಗಳ ಸಿಗ್ನಲ್‌ಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಆಯಾ ಆಕಾಶವಾಣಿ ಕೇಂದ್ರಗಳ ಸಂಖ್ಯೆ ನಮೂದಿಸಿರುವ ಗುರುತಿಗೆ ಸರಿಯಾಗಿ ರೇಡಿಯೋದ ಗೆರೆಗಳನ್ನು ಹೊಂದಿಸಲು ನಿಧಾನವಾಗಿ ತಿರುಗಿಸಬೇಕಿತ್ತು. ಸಿಗ್ನಲ್ ಪಡೆಯಲು ಆ್ಯಂಟೇನಾ ಬೇಕಿತ್ತು. ಅನೇಕ ಪ್ರಯತ್ನಗಳಿಂದ ತರಂಗಾoತರಗಳನ್ನು ಸೂಕ್ಷ್ಮವಾಗಿ ಹೊಂದಾಣಿಕೆ ಮಾಡಿದ ಬಳಿಕ ಕಾರ್ಯಕ್ರಮಗಳನ್ನು ಆಲಿಸಬಹುದಿತ್ತು. ಅದರಲ್ಲೂ ಕೆಲವು ಉತ್ತಮ ದರ್ಜೆಯ ಕಂಪನಿಗಳ ರೇಡಿಯೋದಲ್ಲಿ ಮಾತ್ರ ಸೂಕ್ಷ್ಮ ರೇಡಿಯೋ ಚಾನೆಲ್‌ಗಳು ದೊರೆಯುತ್ತಿದ್ದವು. ತರಂಗಾoತರಗಳನ್ನು ಸೆಳೆಯುವ ಸಾಮರ್ಥ್ಯ ವ್ಯವಸ್ಥೆ ಅವುಗಳಲ್ಲಿದ್ದವು. ಇತರ ಸಾಮಾನ್ಯ ರೇಡಿಯೋಗಳಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಆ ಚಾನೆಲ್‌ಗಳು ಲಭ್ಯವಾಗುತ್ತಿರಲಿಲ್ಲ.
ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಎ.ಎಮ್.ಗಳೇ ಹೆಚ್ಚು. ಎಫ್.ಎಮ್.ಗಳು ಸಿಗದಿದ್ದ ಕಾಲವಾಗಿತ್ತು. ಎ.ಎಮ್.ಗಳು ಎಂದರೆ ದೀರ್ಘ ತರಂಗಾoತರಗಳನ್ನು ಹೊಂದಿದ್ದು ಇದು ಆಡಿಯೋ ರೇಡಿಯೋ ಪ್ರಸಾರದಲ್ಲಿ ಅಭಿವೃದ್ಧಿ ಪಡಿಸಿದ ಮೊದಲ ವಿಧಾನವಾಗಿದ್ದು ಇದರಲ್ಲಿ ಜಗತ್ತಿನ ನೂರಾರು ಸ್ಟೇಷನ್‌ಗಳು ಲಭ್ಯವಾಗುತ್ತಿದ್ದವು. ಎಫ್.ಎಮ್. ರೇಡಿಯೋ ಚಾನಲ್‌ಗಳು ಸೀಮಿತ ಪ್ರದೇಶದಲ್ಲಿ ಮಾತ್ರ ಲಭ್ಯವಾಗಿದ್ದು ಅದು ಆ ಭಾಗದ ಜನರ ಅಭಿರುಚಿ, ಸಂಸ್ಕೃತಿ ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ ಮಂಗಳೂರು ಎಫ್.ಎಮ್. ಕರಾವಳಿ ಪ್ರದೇಶದ ಜನರಿಗೆ ಮಾತ್ರ ಸೀಮಿತ.
ಎ.ಎಮ್. ತರಂಗಾoತರಗಳಲ್ಲಿ ಬೃಹತ್ ನಗರಗಳಾದ ಬೆಂಗಳೂರು, ಮೈಸೂರಿನಲ್ಲಿ ಮಾತ್ರ ಅತಿ ಹೆಚ್ಚು ಚಾನಲ್‌ಗಳು ಲಭ್ಯವಾಗುತ್ತಿದ್ದವು. ಗ್ರಾಮಾಂತರ ಪ್ರದೇಶ ಧರ್ಮಸ್ಥಳದಲ್ಲಂತೂ ಯಾವುದೇ ಸ್ಟೇಷನ್ ಸಿಗುತ್ತಿರಲಿಲ್ಲ. ನನ್ನ ತಾಯಿ ರತ್ನಮ್ಮರವರಿಗೆ ರೇಡಿಯೋ ಕೇಳುವ ಆಸಕ್ತಿ. ಒಳ್ಳೆಯ ಕಂಪನಿಯ ಟ್ರಾನ್ಸಿಸ್ಟರ್ ರೇಡಿಯೋ ಹಿಡಿದುಕೊಂಡು ರೇಡಿಯೋ ಸಿಗ್ನಲ್ ದೊರೆಯುತ್ತದೆಯೋ ಎಂದು ಮನೆಯ ಒಳಗೆ, ಹೊರಗೆ, ಅಂಗಳದಲ್ಲಿ ಹೀಗೆ ಬಹಳ ಹುಡುಕಾಟ ನಡೆಸುತ್ತಿದ್ದರು. ಸಾಕಷ್ಟು ಪ್ರಯತ್ನದ ಬಳಿಕ ಸರಿಯಾದ ದಿಕ್ಕಿಗೆ ಅನುಗುಣವಾಗಿ ಆ್ಯಂಟೆನಾವನ್ನು ತಿರುಗಿಸಿದಾಗ ಅವರಿಗೆ ಬೇಕಾದ ಕೆಲವೊಂದು ರೇಡಿಯೋ ಸ್ಟೇಷನ್‌ಗಳು ದೊರೆಯುತ್ತಿದ್ದವು. ಆದರೆ ಮಕ್ಕಳು ಬಂದು ಕೀಟಲೆ ಮಾಡಿ ಸಿಗುತ್ತಿದ್ದ ಸ್ಟೇಷನ್‌ನ ಸಂಕೇತಗಳು ತಪ್ಪಿದಾಗ ‘ಇಷ್ಟು ಕಷ್ಟಪಟ್ಟು ಸಂಕೇತಗಳನ್ನು (ಸಿಗ್ನಲ್) ಹುಡುಕಿದ್ದೆ ನೀವು ಅದನ್ನು ಮುಟ್ಟಿ ತಪ್ಪಿಸಿದಿರಿ’ ಎಂದು ರೇಗುತ್ತಿದ್ದರು. ಇಂತಹ ಕಾಲದಿಂದ ನಾವು ಇವತ್ತು ಎಲ್ಲಿಗೆ ಬಂದು ತಲುಪಿದ್ದೇವೆ ಎಂದರೆ ಕಾರಿನಲ್ಲಿ ಕುಳಿತು ನಮ್ಮ ಧ್ವನಿಯಲ್ಲಿಯೇ ‘ಇಂತಹ ಸ್ಟೇಷನ್/ಚಾನಲ್ ಬೇಕು’ ಎಂದಾಗ ಸ್ವಯಂಚಾಲಿತವಾಗಿ ಆ ಸ್ಟೇಷನ್ ಪ್ರಾರಂಭವಾಗಿ ಬಿಡುತ್ತದೆ. ಸಿಗ್ನಲ್‌ಗಳನ್ನು ತನ್ನಿಂತಾನೇ ಸರಿಹೊಂದಿಸಿಕೊಳ್ಳುತ್ತದೆ. ಸಿಗ್ನಲ್ ಹೊಂದಿಸುವ ಯಾವ ಕಿರಿಕಿರಿಯೂ ಇಲ್ಲವಾಗಿದೆ.
ಹಿಂದೆ ರೇಡಿಯೋ ಆಲಿಸುವ ಆಸಕ್ತಿ ಯಾಕೆ ಇತ್ತು ಎಂದರೆ ಹಾಡು, ಸಂಗೀತ ಮತ್ತು ವಾರ್ತೆಯನ್ನು ಕೇಳಲು. ಹಿಂದೆ ವಾರ್ತೆಯನ್ನು ಕೇವಲ ಆಲ್ ಇಂಡಿಯಾ ರೇಡಿಯೋದಲ್ಲಿ ಮಾತ್ರ ಬಿತ್ತರಿಸುತ್ತಿದ್ದರು. ಆಗ ಯಾವುದೇ ಖಾಸಗಿ ಚಾನಲ್‌ಗಳಲ್ಲಿ ವಾರ್ತೆಗಳು ಬರುತ್ತಿರಲಿಲ್ಲ. ಹಾಗಾಗಿ ಸುದ್ದಿ – ಮಾಹಿತಿಯನ್ನು ಅರಿಯಲು ಜನರು ರೇಡಿಯೋ ಮೊರೆ ಹೋಗುತ್ತಿದ್ದರು. ವಾರ್ತೆಗಳನ್ನು ಆಲಿಸುವುದು ಎಂದರೆ ಆಗ ನಮಗೆಲ್ಲ ಬಹಳ ಕುತೂಹಲ. ಇದರ ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾರ್ತೆಗಳನ್ನು ಕೇಳುವ ಹಂಬಲವೂ ಇತ್ತು. ಆದರೆ ಅದು ಆಗ ಲಭ್ಯವಾಗುತ್ತಿರಲಿಲ್ಲ. ಭಾರತ – ಚೀನಾ ಯುದ್ಧದ ಸಂದರ್ಭದಲ್ಲಿ, ಬಾಂಗ್ಲಾದೇಶ ರೂಪುಗೊಂಡ ಸಂದರ್ಭದಲ್ಲಿ ಜನರು ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ರೆಡಿಯೋ ವಾರ್ತೆಗೆ ಕಿವಿಗೊಡುತ್ತಿದ್ದರು. ಭಾರತ ಪಾಕಿಸ್ತಾನವನ್ನು ಮಣಿಸಿ, ಶರಣಾಗತಿಗೆ ಸಹಿ ಮಾಡಿಸಿದಾಗಲಂತೂ ದೇಶದೆಲ್ಲೆಡೆ ಸಂಭ್ರಮ ಇಮ್ಮಡಿಗೊಂಡಿತ್ತು. ಮರು ದಿನದ ಪತ್ರಿಕೆ ನೋಡುವುದಕ್ಕಿಂತಲೂ ವಾರ್ತೆಗಳನ್ನು ಕೇಳಲು ಪ್ರಜೆಗಳು ಉತ್ಸುಕರಾಗಿದ್ದರು.
ನಾನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿ, ಅದನ್ನು ನೋಡಲು ಹೋಗುವ ಸಂಪ್ರದಾಯವಿತ್ತು. ಆಗ ಸಿನಿಮಾ ಆರಂಭಗೊಳ್ಳುವ ಮೊದಲು ಥಿಯೇಟರ್‌ಗಳಲ್ಲಿ ‘ನ್ಯೂಸ್ ರೀಲ್’ ಎಂದು ಹಾಕುತ್ತಿದ್ದರು. ಈ ನ್ಯೂಸ್ ರೀಲ್‌ನಲ್ಲಿ ದೇಶದ ವಿವಿಧ ಸುದ್ದಿಗಳನ್ನು ಹಾಕುತ್ತಿದ್ದರು. ಆ ರೀತಿ ಪ್ರದರ್ಶಿಸುವುದನ್ನು ಆಗ ಸರಕಾರ ಕಡ್ಡಾಯ ಮಾಡಿತ್ತು. ಯಾವುದೇ ಭಾಷೆಯ ಚಲನಚಿತ್ರವಾದರೂ ‘ನ್ಯೂಸ್ ರೀಲ್’ ಹಾಕುವುದು ಕಡ್ಡಾಯವಾಗಿತ್ತು. ಟಿ.ವಿ.ಗಳು ಹೆಚ್ಚು ಪ್ರಚಲಿತದಲ್ಲಿ ಇರದಿದ್ದ ಆ ಕಾಲದಲ್ಲಿ ರಾಷ್ಟ್ರೀಯ ವಾರ್ತೆಯನ್ನು ದೃಶ್ಯ ರೂಪದಲ್ಲಿ ನೋಡುವ ಕುತೂಹಲ ನನ್ನಲ್ಲಿತ್ತು.
ಒಮ್ಮೆ ಸಿನಿಮಾ ಥಿಯೇಟರ್‌ಗೆ ಹೋಗಿದ್ದಾಗ ರಾಷ್ಟ್ರೀಯ ವಾರ್ತೆಯನ್ನು ನೋಡಿದ ನೆನಪು ಈಗಲೂ ಅಚ್ಚಳಿಯದೆ ಇದೆ. ಆ ಸುದ್ದಿ ಏನೆಂದರೆ ‘ಉತ್ತರ ಭಾರತದಲ್ಲಿ ಗಂಗೆಯ ಆರ್ಭಟ ಹೇಳತೀರದು. ಆಕೆ ಉಕ್ಕಿ ಹರಿಯುತ್ತಿದ್ದಾಳೆ ಹಾಗೂ ಎಲ್ಲಾ ಕಡೆ ಭೂಮಿಯನ್ನು ಕಬಳಿಸುತ್ತಿದ್ದಾಳೆ, ಜನರು ಅಸಹಾಯಕರಾಗಿದ್ದಾರೆ’ ಎಂದು ವಾರ್ತೆ ದೃಶ್ಯ ಸಮೇತ ಬಿತ್ತರವಾಗಿತ್ತು. ಆ ಪ್ರವಾಹವನ್ನು ಮತ್ತು ಅದರಿಂದ ಉಂಟಾದ ಅನೇಕ ಸಮಸ್ಯೆಗಳನ್ನು ತೋರಿಸುವ ಸಂದರ್ಭದಲ್ಲಿ ನಾವೆಲ್ಲ ನಿಬ್ಬೆರಗಾಗಿದ್ದೆವು. ಹಾಗಾಗಿ ಸಿನಿಮಾಗಿಂತ ನಮಗೆ ‘ನ್ಯೂಸ್ ರೀಲ್’ ಬಗ್ಗೆಯೇ ಹೆಚ್ಚು ಆಕರ್ಷಣೆ ಇತ್ತು. ನ್ಯೂಸ್ ರೀಲ್‌ಗಳಲ್ಲಿ ಚಿಕ್ಕದಾಗಿ ಒಂದೆರಡು ಕ್ಷಣಗಳಲ್ಲಿ ವಿಷಯಗಳನ್ನು ಹೇಳುತ್ತಿದ್ದರು. ರೇಡಿಯೋ ವಾರ್ತೆಯಷ್ಟು ವಿಶಾಲತೆ, ಸಮಗ್ರತೆ ಅದರಲ್ಲಿರುತ್ತಿರಲಿಲ್ಲ. ವಿಶೇಷವಾಗಿ ರಾಷ್ಟ್ರೀಯ ಘಟನಾವಳಿಗಳು, ಗಾಂಧೀಜಿಯವರು ಮೃತರಾದಾಗ ಆ ಸುದ್ದಿಯನ್ನು ಕೇಳಲು ಜನರೆಲ್ಲ ರೇಡಿಯೋದ ಸುತ್ತಲೂ ಕುಳಿತುಕೊಳ್ಳುತ್ತಿದ್ದರು. 1950ರ ದಶಕದಲ್ಲಿ ಗ್ರಾಮ ಪಂಚಾಯತ್ ಕಚೇರಿಗಳ ಮೂಲಕ ಸಾರ್ವಜನಿಕವಾಗಿ ರೇಡಿಯೋ ಕಾರ್ಯಕ್ರಮಗಳ ಪ್ರಸಾರಕ್ಕೆ ವ್ಯವಸ್ಥೆಯಾಯಿತು. ಸಾರ್ವಜನಿಕ ಉದ್ಯಾನವನಗಳಲ್ಲಿ, ಮೈದಾನದ ಬಳಿ ರೇಡಿಯೋ ಅಳವಡಿಸಿದ್ದರು. ಸಿಗ್ನಲ್ ಸರಿಯಾಗಿ ಸಿಗದೆ ಕರ್ಕಶವಾದಾಗ ರೇಡಿಯೋ ಸಮೀಪ ಹೋಗಿ ಕಿವಿಕೊಟ್ಟು ಕೇಳಿದ್ದೂ ಇದೆ. ‘ಇನ್ನೂ ಹತ್ತಿರ ಹೋದರೆ ರೇಡಿಯೋ ನಿನ್ನ ತಲೆಯನ್ನು ಎಳೆದುಕೊಳ್ಳುತ್ತದೆ’ ಎಂದು ಅನೇಕರು ಹತ್ತಿರದಿಂದ ರೇಡಿಯೋವನ್ನು ಆಲಿಸುವವರಿಗೆ ಹಾಸ್ಯ ಮಾಡಿದ್ದೂ ಇದೆ.
ಭಾರತದ ಯಾವುದೇ ರೇಡಿಯೋ ಸ್ಟೇಷನ್‌ಗಳು ಸರಿಯಾಗಿ ಸಿಗದಿದ್ದರೂ, ‘ರೇಡಿಯೋ ಸಿಲೋನ್’ ಎನ್ನುವ ಬಾನುಲಿ ಕೇಂದ್ರ ಎಲ್ಲರಿಗೂ ದೊರೆಯುತ್ತಿತ್ತು. ರೇಡಿಯೋ ಸಿಲೋನ್‌ನಲ್ಲಿ ಬುಧವಾರ ಬರುತ್ತಿದ್ದ ಅಮೀನ್ ಸಹಾನಿಯವರ ‘ಬಿನಾಕ ಗೀತ ಮಾಲ’ ಬಹಳ ಪ್ರಸಿದ್ಧವಾಗಿತ್ತು. ಬೆಂಗಳೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಮಾವ ಶ್ರೀನಿವಾಸ ಶೆಟ್ರು ಪ್ರತಿ ಬುಧವಾರ ಸಂಜೆ ಆ ಕಾರ್ಯಕ್ರಮ ಆಲಿಸಲು ಸಮಯಕ್ಕೆ ಸರಿಯಾಗಿ ಕುಳಿತು ಬಿಡುತ್ತಿದ್ದರು. ನಾವೆಲ್ಲ ಅವರ ಸುತ್ತಮುತ್ತ ಕುಳಿತು ಹಾಡುಗಳನ್ನು ಆಸ್ವಾದಿಸುತ್ತಿದ್ದೆವು. ವಾರದ ಅತ್ಯುತ್ತಮ ಹಾಡುಗಳನ್ನು ಅಲ್ಲಿ ಅವರು ಹಾಡುತ್ತಿದ್ದರು. ರೇಡಿಯೋ ಸಿಲೋನ್ ಹೊರತುಪಡಿಸಿದರೆ ಇತರ ಯಾವುದೇ ಸ್ಟೇಷನ್‌ಗಳು ಅಷ್ಟು ಸ್ಪಷ್ಟವಾಗಿ ಇರುತ್ತಿರಲಿಲ್ಲ. ಇನ್ನು ಕ್ರಿಕೆಟ್ ಸಂದರ್ಭದಲ್ಲಿ ವೀಕ್ಷಕ ವಿವರಣೆ ಕೇಳುವುದು ಅಚ್ಚುಮೆಚ್ಚಿನ ವಿಷಯವಾಗಿತ್ತು. ಪ್ರತಿ ಬಾಲ್‌ನ ವಿವರಣೆ ಕೇಳುವುದು, ವಿಶ್ಲೇಷಣೆ ಆಲಿಸುವುದು ನಮ್ಮ ಹವ್ಯಾಸವಾಗಿತ್ತು.
ಕ್ಷೇತ್ರದ ವಸ್ತುಸಂಗ್ರಹಾಲಯದಲ್ಲಿ ಸುಮಾರು 30-40ರ ದಶಕಗಳಲ್ಲಿನ ರೇಡಿಯೋಗಳನ್ನು ಸಂಗ್ರಹ ಮಾಡಿದ್ದೇವೆ. ಆ ರೇಡಿಯೋಗಳಲ್ಲಿ ಸುಮಾರು ನೂರು ಸ್ಟೇಷನ್‌ಗಳಿದ್ದವು. ದೇಶದೊಳಗಿನ ಸ್ಟೇಷನ್‌ಗಳು ಸೇರಿ ನೆರೆಯ ಪಾಕಿಸ್ತಾನದ ಕರಾಚಿ ಸ್ಟೇಷನ್ ಹಾಗೂ ಪ್ಯಾರಿಸ್, ರೋಮ್, ಅಮೆರಿಕಾ, ವೆಟಿಕನ್, ಮಾಸ್ಕೋ, ಕೈರೋ, ಚೀನಾ ಸಿಂಗಾಪುರ್, ಜೋಹಾನ್ಸ್ಬರ್ಗ್ ಸೇರಿದಂತೆ ಅನೇಕ ಪಾಶ್ಚಾತ್ಯ ರಾಷ್ಟçಗಳ ಸ್ಟೇಷನ್‌ಗಳಿದ್ದವು. ಅಂದಿನ ಕಾಲದಲ್ಲೂ ವಿದೇಶಗಳ ಚಾನೆಲ್‌ಗಳು ಹೇಗೆ ಲಭ್ಯವಾಗುತ್ತಿತ್ತು ಎನ್ನುವುದು ಬಹಳ ಕುತೂಹಲಕಾರಿಯಾಗಿದೆ. ಅಮೆರಿಕಾದ ಪೈಲಟ್, ಜೆನಿತ್, ಬಿಪಿ -10 ಪರ್ಸನಲ್, ಮೊಟೊರೊಲಾ, ಹ್ಯಾಲಿಕ್ರಾಪ್ಟರ್ಸ್, ಗ್ರೇಟ್ ಬ್ರಿಟನ್‌ನ ಹಿಸ್ ಮಾಸ್ಟರ್ಸ್ ವಾಯಿಸ್, ಜನರಲ್ ಎಲೆಕ್ಟಿçಕ್ ಸೇರಿದಂತೆ ಸೋನಿ, ಪ್ಯಾನಾಸೋನಿಕ್, ಫಿಲಿಪ್ಸ್ನಂತಹ ಕಂಪನಿಗಳ ರೇಡಿಯೋಗಳು ಆಗ ರಾರಾಜಿಸುತ್ತಿದ್ದುವು.
ನಲುವತ್ತು ವರ್ಷಗಳಿಂದ ಇತ್ತೀಚೆಗೆ ಹೊಸ ಹೊಸ ರೀತಿಯ ರೇಡಿಯೋಗಳು ಬಂದವು. ಅದರಲ್ಲಿ ಐದಾರು ಕಪ್ಪು ಬಟನ್‌ಗಳು (ಗುಂಡಿ) ಇರುತ್ತಿದ್ದವು. ಆ ಬಟನ್ ಅನ್ನು ಒತ್ತಿದರೆ ಸ್ಟೇಷನ್ ಸೂಚಿಸುತ್ತಿದ್ದ ಮುಳ್ಳು ಸರಿಯಾಗಿ ಅಲ್ಲೇ ಹೋಗಿ ನಿಲ್ಲುತ್ತಿತ್ತು. ಉದಾಹರಣೆಗೆ ಒಂದನೇ ಬಟನ್ ಅನ್ನು ಒತ್ತಿದರೆ ‘ವಿವಿಧ ಭಾರತಿ’ ಕೇಳಿಸುತ್ತಿತ್ತು. ಎರಡನೇ ಬಟನ್ ಒತ್ತಿದರೆ ‘ಆಲ್ ಇಂಡಿಯಾ ರೇಡಿಯೋ’ ಕೇಳುತ್ತಿತ್ತು. ಆ ಬಳಿಕ ಬಂದದ್ದೇ ಡಿಜಿಟಲ್ ಎಲೆಕ್ಟಾçನಿಕ್ ಯುಗ.
ಈಗಂತೂ ತಂತ್ರಜ್ಞಾನ ತೀರಾ ಮುಂದುವರಿದಿದೆ. ವಾಯ್ಸ್ ಕಮಾಂಡ್ (ಧ್ವನಿ ಆಜ್ಞೆ) ಮೂಲಕ ಯಾವ ರೇಡಿಯೋ ಚಾನೆಲ್ ಆಲಿಸಬೇಕು ಎಂದು ತಿಳಿಸಿದರೆ ಸಾಕು ಸ್ವಯಂಚಾಲಿತವಾಗಿ ಆ ಚಾನೆಲ್ ಆರಂಭವಾಗುತ್ತದೆ. ಅಲ್ಲದೆ ಅನೇಕ ರೀತಿಯ ಬದಲಾವಣೆಗಳು ರೇಡಿಯೋ ಕಾರ್ಯಕ್ರಮಗಳಲ್ಲೂ ಆಗಿದೆ. ಈ ಬದಲಾವಣೆಯನ್ನು ನಾವು ಗಮನಿಸುತ್ತಿದ್ದೇವೆ. ಇಂದಿಗೂ ರೇಡಿಯೋವನ್ನು ಜನರ ಬಳಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಆಕರ್ಷಕವಾದ ಮಾಧ್ಯಮವನ್ನಾಗಿಸಿ ಹಳೆಯ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗುತ್ತಿವೆ.
ನಮ್ಮ ದೇಶದ ಪ್ರಗತಿಗೆ ರೇಡಿಯೋ ಮಹತ್ತರ ಕೊಡುಗೆಯನ್ನು ನೀಡಿದೆ ಎಂಬುದು ಹೆಮ್ಮೆ ಮತ್ತು ಸಂತಸದ ವಿಚಾರ. ಕೃಷಿ ವಾರ್ತೆ, ಕೃಷಿಕರ ಜೊತೆ ಸಂವಾದ, ಕೃಷಿಕರ ಅನುಭವ ಹಂಚಿಕೆಯಿoದ ಲಾಭವಿದೆ. ಈ ಕಾರ್ಯಕ್ರಮ ಹೊಸ ಕೃಷಿಯ ಬಗ್ಗೆ ಆಸಕ್ತಿಯನ್ನು ಮೂಡಿಸುತ್ತಿದೆ. ‘ಹಲೋ ಡಾಕ್ಟರ್’ ಕಾರ್ಯಕ್ರಮ ಆರೋಗ್ಯ ಮಾಹಿತಿಯನ್ನು ನೀಡುತ್ತದೆ.
ಸನ್ಮಾನ್ಯ ನರೇಂದ್ರ ಮೋದಿಜಿಯವರು ಪ್ರಧಾನಿಯಾದಗಿನಿಂದ ರೇಡಿಯೋದಲ್ಲಿ ಪ್ರಸಾರವಾಗುವ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮ ಸಾಮಾನ್ಯ ಜನರನ್ನು ಆಕರ್ಷಿಸಿದೆ. ಇದು ಒಂದು ಆಯಾಮವಷ್ಟೇ. ರೇಡಿಯೋ ಹೊಸ ವಿಷಯಗಳನ್ನು ತಿಳಿಸಿದೆ. ಮಾಹಿತಿ, ಮಾರ್ಗದರ್ಶನಗಳನ್ನು ನೀಡಿದೆ. ಕುತೂಹಲವನ್ನು ಕೆರಳಿಸಿದೆ. ಮುಂದಿನ ದಿನಗಳಲ್ಲಿ ಖಾಸಗಿ ರೇಡಿಯೋ ಚಾನೆಲ್‌ಗಳಲ್ಲೂ ವಾರ್ತೆಗಳು ಪ್ರಸಾರಗೊಳ್ಳಲಿ, ಬಳಕೆಯೂ ಹೆಚ್ಚಾಗಲಿ. ರೇಡಿಯೋ ದೀರ್ಘಕಾಲ ಉಳಿಯಲಿ ಎನ್ನುವುದೇ ನಮ್ಮ ಆಶಯ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates