ವಾತ್ಸಲ್ಯದ ಕಥೆಗಳು

ಜೀವನದಲ್ಲಿ ಕಷ್ಟ-ಸುಖ, ಸೋಲು-ಗೆಲುವು, ಹುಟ್ಟು ಸಾವು, ಬಡತನ-ಸಿರಿತನ ಇಂತಹ ವೈವಿಧ್ಯಗಳೆಲ್ಲ ಇದ್ದದ್ದೇ. ಕಷ್ಟಕ್ಕೆ ಅಂಜಬೇಕಾಗಿಲ್ಲ. ಕತ್ತಲೆ ಕಳೆದು ಬೆಳಕಾದಂತೆ ಕಷ್ಟದ ಹಿಂದೆ ಸುಖವೂ ಇದೆ ಎಂಬ ಸಮಾಧಾನದ, ಸಾಂತ್ವಾನದ ಮಾತು ಬದುಕನ್ನು ಮುನ್ನಡೆಸುವುದಕ್ಕೆ ಆಸರೆಯಾಗುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ಮನೆಗಳಲ್ಲಿ ಕಷ್ಟ, ಬಡತನ, ನೋವು, ಸೋಲು, ಸಾವು ಇವೆಲ್ಲವನ್ನು ಒಂದೇ ಕಡೆ ಕಂಡಾಗ ‘ಬದುಕು ಯಾಕೆ ಹೀಗೆ? ಮನುಷ್ಯ ಜೀವಿ ಎಷ್ಟೆಲ್ಲಾ ಕಷ್ಟಗಳ ಮಧ್ಯೆ ಇನ್ನು ಬದುಕುತ್ತಿದ್ದಾನೆ’ ಎಂಬ ಉತ್ತರವಿಲ್ಲದ ಪ್ರಶ್ನೆ ನಮ್ಮಲ್ಲಿ ಕಾಡುತ್ತದೆ.ಜೀವಿಗಳಲ್ಲಿ ಅಂತರ್ಗತವಾಗಿರುವ ಬದುಕುವ ಆಸೆಯೇ ಕಷ್ಟದಲ್ಲೂ ಬದುಕಲು ಕಾರಣ ಎಂದರೆ ತಪ್ಪಾಗಲಾರದು.
ಸರಿಪಡಿಸಬಹುದಾದ ಕಾಯಿಲೆ, ಮನೆ ರಿಪೇರಿ, ಬಟ್ಟೆ-ಬರೆ, ಊಟ-ತಿಂಡಿ ಅಷ್ಟೇ ಆದರೆ ಸುಧಾರಿಸಬಹುದು. ಆದರೆ ಹುಟ್ಟಿದ ಎಲ್ಲಾ ಮಕ್ಕಳು ಅಂಗವಿಕಲರು, ನಿನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಮಕ್ಕಳು ಬೆಳೆಯುತ್ತಿದ್ದಂತೆ ಕಾಲಿನ ಸ್ವಾಧೀನ ಕಳೆದುಕೊಳ್ಳುವ ಕಾಯಿಲೆ, ತವರು ಮನೆಯಲ್ಲಿರುವ ಮುದಿ ಅಮ್ಮ, ಬುದ್ಧಿಮಾಂಧ್ಯ ತಂಗಿಯನ್ನು ನೋಡಲೆಂದು ದೂರದ ಗಂಡನ ಮನೆಯಿಂದ ತನ್ನ ಪುಟ್ಟ ಮಗುವಿನೊಂದಿಗೆ ತವರಿಗೆ ಬಂದ ಅಕ್ಕ, ತಾಯಿಯನ್ನು ಕಳೆದುಕೊಂಡು ವಯಸ್ಸಾಗಿ ಪೂರ್ತಿ ಬೆನ್ನು ಬಾಗಿರುವ ಅಜ್ಜಿಗೆ ಅಡುಗೆ ಮಾಡಿ ಹಾಕುವ ಮೊಮ್ಮಕ್ಕಳು, ಮದುವೆಯಾಗಿ ಕೆಲವೇ ಸಮಯದಲ್ಲಿ ಅಪಘಾತದಲ್ಲಿ ಸೊಂಟ ಮುರಿದು ಹಾಸಿಗೆ ಹಿಡಿದಿರುವ ಗಂಡ, ಇಡೀ ದಿನ ಬೊಬ್ಬೆ ಹೊಡೆಯುವ ನಾಲ್ಕು ಬುದ್ಧಿಮಾಂಧ್ಯ ಮಕ್ಕಳನ್ನು ತಂದೆ ಬಿಟ್ಟು ಹೋದ ಬಳಿಕ ನೋಡಿಕೊಳ್ಳುತ್ತಿರುವ ತಾಯಿ, ಮೂರು ದಿನ ಮಳೆಯಲ್ಲೇ ನೆನೆದು ಈಗ ಆಶ್ರಮ ಸೇರಿ ಸುಧಾರಿಸಿಕೊಳ್ಳುತ್ತಿರುವ ಅಜ್ಜಿ, ಮಗಳು ಇನ್ನೂ ಎದ್ದಿಲ್ಲ ಎಂದು ತನ್ನ ಮಗಳ ಹೆಣವನ್ನು ದಾಟಿ ಅತ್ತಿತ್ತ ಹೋಗುತ್ತಿರುವ ತಾಯಿ, ತಾಯಿಗೆ ಮಗಳು ಹೆಣವಾಗಿ ಮಲಗಿದ್ದೆ ಗೊತ್ತಿಲ್ಲ. ರಾತ್ರಿ ಶೌಚಾಲಯದಲ್ಲಿ, ಕಲ್ಲುಬಂಡೆಯ ಎಡೆಯಲ್ಲಿ ಮಲಗುವ ಜೀವಗಳು ಇಂತಹ ಹತ್ತು ಹಲವು ನೋವಿನ ನೈಜ ಕಥೆ, ಕಷ್ಟಗಳನ್ನು ಅನುಭವಿಸುತ್ತಿರುವ ಅಸಹಾಯಕ ಜೀವಗಳನ್ನು ನೋಡಿದಾಗ ಜೀವನದ ‘ಸತ್ಯ ದರ್ಶನ’ವಾಗುತ್ತದೆ. ಮಹಾವೀರಸ್ವಾಮಿ ಅಂದಂತೆ ಜೀವನವನ್ನು ಸರಿಯಾಗಿ ದರ್ಶಿಸಿದರೆ ವೈರಾಗ್ಯ ಬರಲೇಬೇಕು. ಬುದ್ಧನಿಗೆ ಮಾನವ ಜನಾಂಗದ ನೋವು ಸತ್ಯ ದರ್ಶನವನ್ನು ಮಾಡಿದ್ದು ನಮಗೆಲ್ಲ ತಿಳಿದಿದೆ. ಆದರೆ ನಾವು ಯಾವತ್ತೂ ನಮಗಿಂತ ಕಷ್ಟದಲ್ಲಿರುವವರನ್ನು ನೋಡಿಲ್ಲ. ಶ್ರೀಮಂತರನ್ನೇ ನೋಡುತ್ತಿರುತ್ತೇವೆ. ನಮಗಿಂತ ಮೇಲಿನ ಅಂತಸ್ತಿನಲ್ಲಿರುವವರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಇಲ್ಲದ ಕಷ್ಟ-ದುಃಖಕ್ಕೆ ಒಳಗಾಗುತ್ತೇವೆ. ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತದೆ. ಅದನ್ನೇ ಬೆಟ್ಟದಷ್ಟು ದೊಡ್ಡದು ಮಾಡಿ ಕೊರಗುತ್ತಿರುತ್ತೇವೆ.
ಕಷ್ಟದಲ್ಲಿ ಇರುವವರಲ್ಲಿ ತಾನು ಸತ್ತರೆ ಆ ಕಷ್ಟದಿಂದ ಮುಕ್ತಿ ಪಡೆಯುವೆನೆಂಬ ಭಾವನೆ ಇದ್ದರೆ, ಸುಖದಲ್ಲಿರುವವರಿಗೆ ಈ ವೈಭವ, ಅಧಿಕಾರ, ಅಂತಸ್ತು, ಚಿನ್ನ-ಬೆಳ್ಳಿ, ಹೆಂಡತಿ-ಮಕ್ಕಳನ್ನು ಬಿಟ್ಟು ಹೋಗುವುದು ಹೇಗೆ ಎಂಬ ಮರಣದ ಭಯ ಸದಾ ಕಾಡುತ್ತಿರುತ್ತದೆ.
ಈ ಎಲ್ಲಾ ಕಷ್ಟಗಳ ಮಧ್ಯೆ ಅಪರೂಪವೆನಿಸಿರುವ ಪ್ರೀತಿಯ, ವಾತ್ಸಲ್ಯದ ಸಿಂಚನಗಳು ಅಲ್ಲಲ್ಲಿ ಗೋಚರಿಸುವುದಿದೆ. ಆ ಮನೆಯಲ್ಲಿ ಅಣ್ಣ-ತಂಗಿ ಇಬ್ಬರಿದ್ದಾರೆ. ‘ತಂಗಿಗೆ ಮದುವೆ ಆಗಿಲ್ಲ. ಅದಕ್ಕಾಗಿ ಅಣ್ಣನು ಮದುವೆ ಆಗಿಲ್ಲ. ಅವಳಿಗೆ ಯಾವಾಗಲೂ ಶೀತ. ಅದಕ್ಕಾಗಿ ಶುಂಠಿ ಗುದ್ದಿ ಕಷಾಯ ಮಾಡುತ್ತೇನೆ. ಅಲ್ಲದೇ ದಿನಕ್ಕೆ ಮರ‍್ನಾಲ್ಕು ಕಟ್ಟು ನಶ್ಯ ತಂದು ಕೊಡಲೇಬೇಕು. ಇಲ್ಲದೆ ಹೋದರೆ ತನ್ನ ಮೇಲೆ ಕೋಪಿಸಿಕೊಳ್ಳುತ್ತಾಳೆ ಎಂದು ಅಣ್ಣ ಅವಳ ಮೇಲೆ ಹುಸಿ ಕೋಪ ತೋರಿಸಿದರೆ ಕುಳಿತಲ್ಲೆ ಸಣ್ಣಗೆ ನಗುವ ತಂಗಿ, ಕಷ್ಟದಲ್ಲಿ ಕೋಲನ್ನು ಊರಿಕೊಂಡು ಮನೆಯಿಂದ ಹೊರಹೋಗಿ ಬರುವ ನನಗೆ ಸೋರುವ ಮನೆಯಲ್ಲಿ ಮುಂದೇನು ಎಂಬ ಆತಂಕ ಕಾಡುತ್ತಿದೆ. ಅವಳನ್ನು ಬಾವಿಗೆ ದೂಡಿ ನಾನೂ ಹಾರಿ ಜೀವ ಕಳೆದುಕೊಂಡರೆ ಹೇಗೆ ಎಂದೂ ಯೋಚಿಸಿದ್ದಿದೆ. ಆದರೆ ಒಂದೇ ಭಯ ನಾನು ಸತ್ತು ಅವಳು ಉಳಿದರೆ ಅವಳಿಗ್ಯಾರು ಗತಿ!’ ಎನ್ನುವಾಗ ಅಣ್ಣನ ಕಣ್ಣಾಲಿಗಳು ತುಂಬಿ ಬರುತ್ತದೆ.
ಈ ಸಣ್ಣ ಪ್ರೀತಿಯ ಸೆಳೆತವೇ ಬದುಕಿನ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯಾಗಿದೆ. ಮುಸ್ಲಿಂ ಸಮುದಾಯದ ವೃದ್ಧೆಯೊಬ್ಬರ ಊಟ ತಿಂಡಿ, ಸ್ನಾನ ಇತ್ಯಾದಿ ಕೆಲಸಗಳನ್ನು ನೋಡಿಕೊಳ್ಳುತ್ತಿರುವ ಹಿಂದೂ ಟೀಚರ್, ಹಿಂದೂ ಸ್ತ್ರೀಗೆ ಪೋಷಕಳಾಗಿ ಪೊರೆವ ಮುಸ್ಲಿಂ ಮಹಿಳೆ. ಇಂತಹ ಸಾಕಷ್ಟು ಉದಾಹರಣೆಗಳು ಮಾನವೀಯತೆಗೆ ಜಾತಿಯ ಹಂಗಿಲ್ಲ ಅನ್ನುವುದನ್ನು ತೋರಿಸಿಕೊಟ್ಟಿವೆ.
ಬೌದ್ಧ ಗುರುಗಳೊಬ್ಬರು ಹೇಳುತ್ತಾರೆ; ‘ರಕ್ಷಕರಿಲ್ಲದವರಿಗೆ ನಾನು ರಕ್ಷಕನಾಗುವೆ. ದಾರಿಯಲ್ಲಿ ನಡೆಯುವವರಿಗೆ ಮಾರ್ಗದರ್ಶಿಯಾಗುವೆ. ನೀರಿನಲ್ಲಿ ದಾಟಿ ಹೋಗಬಯಸುವವರಿಗೆ ಸೇತುವೆ, ದೋಣಿ, ನೌಕೆ ನಾನಾಗುವೆ.’ ಹೀಗೆ ಕಣ್ಣೀರಿನ ಕಡಲಿನಲ್ಲಿ ಬದುಕು ಸಾಗಿಸುತ್ತಿರುವ ನಮ್ಮ ಸಹಜೀವಿಗಳಿಗೆ ಸಾಧ್ಯವಾದರೆ ನಾವು ಸೇತುವೆ, ದೋಣಿಗಳಾಗೋಣ. ಅವರ ಕಷ್ಟಕಾಲದಲ್ಲಿ ನೆರವಾಗೋಣ.

Facebook
Twitter
WhatsApp
LinkedIn
Telegram