ಸಂಘದ ಗುಣಮಟ್ಟದಲ್ಲಿ ವಾರದ ಸಭೆಗಳು ಮತ್ತು ನಿರ್ಣಯಗಳ ಪಾತ್ರ

ಯೋಜನೆಯ ಪಾರದರ್ಶಕ ವರದಿಗಳು ಹಾಗೂ ಲೆಕ್ಕಾಚಾರದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳಲಾಗಿದೆ. ಸಂಘದ ವ್ಯವಹಾರ, ಲೆಕ್ಕಾಚಾರಗಳನ್ನು ಪಾರದರ್ಶಕವಾಗಿ ಹಾಗೂ ಗುಣಮಟ್ಟಯುಕ್ತವಾಗಿ ನಿರಂತರವಾಗಿ ಉತ್ತಮ ರೀತಿಯಿಂದ ನಡೆಸಿಕೊಂಡು ಹೋಗಲು ವಾರದ ಸಭೆಯೂ ಒಂದು ಪ್ರಮುಖ ಕಾರಣವಾಗಿದೆ. ಸಂಘದ ವಾರದ ಸಭೆಗಳು ಸಂಘದ ಜೀವಾಳವಾಗಿದೆ. ವಾರದ ಸಭೆಗಳನ್ನು ನಡೆಸುವುದು ಸ್ವಸಹಾಯ ಸಂಘ ಚಳುವಳಿಯ ಒಂದು ಪ್ರಮುಖ ಭಾಗವಾಗಿದೆ. ಯೋಜನೆಯಲ್ಲಿ ವಾರದ ಸಭೆಗಳಿಗೆ ಅತೀ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಏಕೆಂದರೆ, ಸಂಘದ ಗುಣಮಟ್ಟ, ನಿರಂತರತೆ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಇದುವೇ ಭದ್ರ ಬುನಾದಿಯಾಗಿದೆ. ಯೋಜನೆಯ ಸ್ವಸಹಾಯ ಸಂಘಗಳು ಕಡ್ಡಾಯವಾಗಿ ಪ್ರತೀ ವಾರವೂ ಸಭೆಗಳನ್ನು ನಡೆಸಬೇಕಾಗಿದೆ. ಆ ವಾರದ ಸಭೆಗೆ ಸೇವಾಪ್ರತಿನಿಧಿಗಳು ಕಡ್ಡಾಯವಾಗಿ ಭೇಟಿ ನೀಡಬೇಕಾಗಿರುವುದಲ್ಲದೇ ಎಲ್ಲವನ್ನೂ ದಾಖಲೀಕರಿಸಬೇಕಾಗಿದೆ. ವಾರದ ಸಭೆಯಲ್ಲಿ ಸಂಘದ ಸದಸ್ಯರಿಗೆ ಶಿಸ್ತನ್ನು ಮೂಡಿಸುವುದು, ಹೊಂದಾಣಿಕೆಯ ಕಲೆಯನ್ನು ಬೆಳೆಸುವುದು, ಅನೇಕ ವಿಷಯಗಳನ್ನು ಚರ್ಚಿಸುವುದು, ವಿಷಯಗಳನ್ನು ತಿಳಿದುಕೊಳ್ಳುವುದು, ನಾಯಕತ್ವ ಗುಣ, ಉತ್ತಮ ಮಾತುಗಾರಿಕೆಯನ್ನು ಬೆಳೆಸಿಕೊಳ್ಳುವುದು, ಲೆಕ್ಕಾಚಾರಗಳನ್ನು ಹಾಗೂ ಬರವಣಿಗೆಯನ್ನು ತಿಳಿದುಕೊಳ್ಳುವುದು, ನಿರ್ಣಯಗಳನ್ನು ಕೈಗೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳುವುದು, ಸಾಲ ಬಿಡುಗಡೆ ವಿಮರ್ಶೆ ಮಾಡುವುದು, ಯೋಜನೆಯ ಮತ್ತು ಸರಕಾರದ ಅನೇಕ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವುದು ಮುಂತಾದ ಅನೇಕ ವಿಷಯಗಳಿಂದ ಸಂಘದ ಸದಸ್ಯರಿಗೆ ಆರ್ಥಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಅನೇಕ ಪ್ರಯೋಜನಗಳಿವೆ. ಇವುಗಳಲ್ಲದೇ ಸ್ವಸಹಾಯ ಸಂಘದ ಗುಣಮಟ್ಟ ಹಾಗೂ ಇತರ ಅಂಶಗಳಿಗೂ ಈ ವಾರದ ಸಭೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅವುಗಳೆಂದರೆ,
ವಾರದ ಸಭೆಗಳಲ್ಲಿ ಪ್ರತೀ ವಾರವೂ ಸಂಘದ ಹಾಗೂ ಸದಸ್ಯರ ಲೆಕ್ಕಾಚಾರಗಳನ್ನು ಅವರಿಂದಲೇ ಪುನರ್‍ಪರಿಶೀಲಿಸಲಾಗುತ್ತದೆ.
ಸದಸ್ಯರ ಉಳಿತಾಯ, ಮರುಪಾವತಿಗಳನ್ನು ಪ್ರತೀ ವಾರವೂ ಸಂಗ್ರಹಿಸುವುದು ಹಾಗೂ ಹಿಂದಿನ ವಾರದ ರಶೀದಿಯನ್ನು, ನಿರ್ಣಯವನ್ನು ಪುಸ್ತಕದೊಂದಿಗೆ ಪರಿಶೀಲಿಸಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತದೆ.
ತಿಂಗಳ ಮಾಸಿಕ ವರದಿ ಪರಿಶೀಲನಾ ಸಭೆಯಲ್ಲಿ ಪ್ರತೀ ಸದಸ್ಯರ ಉಳಿತಾಯ, ಪ್ರಗತಿನಿಧಿ ಸಾಲದ ಹೊರಬಾಕಿ ಮೊತ್ತ, ಕಟ್ಟಿದ ಮೊತ್ತ, ಬಡ್ಡಿ ಇತ್ಯಾದಿಗಳನ್ನು ವಿಸ್ತøತವಾಗಿ ಚರ್ಚಿಸಿ ತಿಳಿದುಕೊಳ್ಳಲಾಗುತ್ತದೆ.
ಯಾವುದೇ ಸದಸ್ಯರು ಪ್ರಗತಿನಿಧಿ ಸಾಲದ ಬೇಡಿಕೆ ಇದ್ದಲ್ಲಿ, ಅದನ್ನು ವಾರದ ಸಭೆಯಲ್ಲಿ ವಿಸ್ತøತವಾಗಿ ಚರ್ಚಿಸಿ, ಅಗತ್ಯತೆ ಮತ್ತು ಅರ್ಹತಾನುಸಾರವಾಗಿ ಸಂಘದ ಸದಸ್ಯರೇ ನಿರ್ಣಯ ಕೈಗೊಳ್ಳುವುದರಿಂದ ಸಾಲ ಮಂಜೂರಾತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಲ್ಲದೇ, ಸಾಮೂಹಿಕ ಬದ್ಧತೆಯ ಜವಾಬ್ದಾರಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ವಾರದ ಸಭೆಗಳಿಂದಾಗಿ ಸದಸ್ಯರಿಗೆ ಯಾವುದೇ ಹೆಚ್ಚುವರಿ ಶ್ರಮವಿಲ್ಲದೆ ವಾರದ ಮರುಪಾವತಿಯನ್ನು ಕೈಗೊಂಡು ಗರಿಷ್ಠ ಬಡ್ಡಿ ಲಾಭದ ಪ್ರಯೋಜನವನ್ನು ಪಡೆಯಬಹುದಾಗಿದೆ. (ಈ ಹಿಂದೆ ವಿವರಿಸಿದಂತೆ ಕಂತುಗಳನ್ನು ವಾರದ ಕಂತುಗಳಾಗಿ ಪಾವತಿಸಿದಲ್ಲಿ, ನಿವ್ವಳ ಬಡ್ಡಿ ಪಾವತಿಯ ಶೇಕಡಾವಾರು ಕೇವಲ ಶೇ. 7.27 ಆಗುತ್ತದೆ. ಕಂತುಗಳನ್ನು ಮಾಸಿಕ ಕಂತುಗಳಾಗಿ ಪಾವತಿಸಿದಲ್ಲಿ, ನಿವ್ವಳ ಬಡ್ಡಿ ಪಾವತಿಯ ಶೇಕಡಾವಾರು ಶೇ. 8.05 ಆಗುತ್ತದೆ.)
ಸ್ವಸಹಾಯ ಸಂಘಗಳ ಬಹುತೇಕ ಸದಸ್ಯರು ಮಾಸಿಕ ಸಂಬಳ ಪಡೆಯುವಂತಹ ಅಧಿಕಾರಿಗಳು/ಉದ್ಯೋಗಿಗಳು/ವೃತ್ತಿಪರರು ಅಲ್ಲ. ಬದಲಾಗಿ ನಿರಂತರ ಆದಾಯ ಪಡೆಯುವ ವರ್ಗದವರಾಗಿರುತ್ತಾರೆ. ಈ ವರ್ಗದವರಿಗೆ ನಿರಂತರ ಆದಾಯ ಪಡೆದು ಅವುಗಳನ್ನು ತಿಂಗಳವರೆಗೆ ಕ್ರೋಡೀಕರಿಸಿ ಮಾಸಿಕ ಕಂತಿನಲ್ಲಿ ಪಾವತಿಸುವುದರಿಂದ ಯಾವುದೇ ಲಾಭಗಳಿಲ್ಲ. ಬದಲಾಗಿ ಹೆಚ್ಚುವರಿ ಬಡ್ಡಿ ನಷ್ಟ ಹಾಗೂ ಕ್ರೋಡೀಕರಿಸುವ ಸಂದರ್ಭದಲ್ಲಿ ಆ ಮೊತ್ತಗಳು ಮದ್ಯಂತರದಲ್ಲಿ ಏನಕ್ಕಾದರೂ ಖರ್ಚು ಮಾಡಿ ತಿಂಗಳ ಕೊನೆಯಲ್ಲಿ ಕಂತು ಕಟ್ಟಲು ಹಣ ಇಲ್ಲದೇ ಪರದಾಡಬೇಕಾಗುತ್ತದೆ.
ದೊಡ್ಡ ಮೊತ್ತದ ಮಾಸಿಕ ಕಂತಿಗಿಂತ, ಸಣ್ಣ ಮೊತ್ತದ ವಾರದ ಕಂತು ಹೊರೆ ಹಾಗೂ ಬಡ್ಡಿದರವನ್ನು ಕಡಿಮೆ ಮಾಡುವುದಲ್ಲದೇ ಅನಗತ್ಯವಾಗಿ ವ್ಯಯಿಸುವುದನ್ನೂ ತಪ್ಪಿಸುತ್ತದೆ.
ಯಾವುದಾದರೂ ಸದಸ್ಯರಿಗೆ ಅನಾರೋಗ್ಯ, ಆರ್ಥಿಕ ಸಂಕಷ್ಟ ಇತ್ಯಾದಿ ಯಾವುದೇ ತೀವ್ರ ಸಮಸ್ಯೆಗಳು ಸಂಭವಿಸಿದಲ್ಲಿ, ಆ ಸದಸ್ಯರ ಸಾಲ ಮರುಪಾವತಿಗೆ ಒಂದಿಷ್ಟು ಸಮಯದವರೆಗೆ (3 ತಿಂಗಳು, 6 ತಿಂಗಳು) ವಿರಾಮವನ್ನು ನೀಡುವ ನಿರ್ಣಯವನ್ನು ಸಂಘಗಳು ಕೈಗೊಳ್ಳಬಹುದಾಗಿದೆ. ಸಂಘಗಳು ಕೈಗೊಂಡ ನಿರ್ಣಯದಂತೆ, ಯೋಜನೆಯಲ್ಲಿ ಆ ಗುಂಪುಗಳಿಗೆ ವಾರದ ಕಂತು ವಿರಾಮವನ್ನು ನೀಡಲಾಗುತ್ತದೆ. ಇದರರ್ಥ ಯಾವುದೇ ಸದಸ್ಯರ ಕಷ್ಟದ ಸಂದರ್ಭದಲ್ಲಿ ಒತ್ತಾಯಪೂರ್ವಕ ವಸೂಲಾತಿ ಪ್ರಕ್ರಿಯೆಗೆ ಯೋಜನೆಯಲ್ಲಿ ಅವಕಾಶವಿಲ್ಲ. ಬದಲಾಗಿ ಆ ಸದಸ್ಯರಿಗೆ ಅನೇಕ ಕಾರ್ಯಕ್ರಮಗಳ ಮೂಲಕ ಸಹಾಯಹಸ್ತವನ್ನು ಯಾಚಿಸುತ್ತದೆ. ಆ ಸದಸ್ಯರಿಗೆ ಸೂಕ್ತ ಸಹಾಯಹಸ್ತ (ವಿಮೆಗಳು, ಕ್ರಿಟಿಕಲ್ ಇಲ್‍ನೆಸ್ ಫಂಡ್, ಅಧ್ಯಕ್ಷರ ಅನುದಾನಗಳು) ಒದಗಿಸಿಕೊಡಲೂ ಕೂಡಾ ಈ ವಾರದ ಸಭೆಯಲ್ಲಿಯೇ ಸಂಘಗಳು ನಿರ್ಣಯ ಮಾಡುತ್ತವೆ.
ಒಟ್ಟಿನಲ್ಲಿ ಹೇಳುವುದಾದರೆ, ವಾರದ ಸಭೆ ಒಂದು, ಪ್ರಯೋಜನಗಳು ಹಲವು. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates