ಸ್ವಾತಂತ್ರ‍್ಯ ಕೇವಲ ಹಕ್ಕಾಗದೆ, ಋಣವಾಗಲಿ

ಎಲ್ಲಾ ‘ನಿರಂತರ’ ಓದುಗರಿಗೆ 78ನೇ ವರ್ಷದ ಸ್ವಾತಂತ್ರ್ಯ ದಿನದ ಶುಭಾಶಯಗಳು.
‘ಸ್ವಾತಂತ್ರ್ಯ ದಿನಾಚರಣೆ’ಯನ್ನು ಒಂದು ಸಂಭ್ರಮದ ದಿನವನ್ನಾಗಿ ನಾವೆಲ್ಲ ಆಚರಿಸುತ್ತಿದ್ದೇವೆ. ವರ್ಷಗಳು ಕಳೆದಂತೆ ‘ಸ್ವಾತಂತ್ರ್ಯ’ ಎನ್ನುವ ಪದದ ಅರ್ಥವೂ ಕೂಡ ಮುಂದಿನ ದಿನಗಳಲ್ಲಿ ನಮ್ಮ ಪೀಳಿಗೆಯವರಿಗೆ ಅರ್ಥ ಆಗದೇ ಇರಬಹುದು. ಯಾಕೆಂದರೆ ಇಂದು ಯಾವುದೇ ಮಿತಿ ಇಲ್ಲದ ಪೂರ್ಣ ಸ್ವತಂತ್ರದಿoದ ನಾವು ಬದುಕುತ್ತಿದ್ದೇವೆ. ಬ್ರಿಟಿಷರ ವಸಾಹತುಶಾಹಿಯ ಜೀವನದಲ್ಲಿ ಯಾವೆಲ್ಲ ರೀತಿಯ ಕಷ್ಟಗಳನ್ನು ನಮ್ಮ ಪೂರ್ವಜರು ಅನುಭವಿಸಿದ್ದರು ಎಂಬುವುದನ್ನು ನಾವು ಕಲ್ಪನೆ ಮಾಡಿಕೊಳ್ಳಲು ಅಶಕ್ತರಾಗಿದ್ದೇವೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ಸ್ವಾತಂತ್ರö್ಯಕ್ಕಾಗಿ ನಮ್ಮ ಪೂರ್ವಜರು ಅಂತಹ ತ್ಯಾಗವನ್ನು ಯಾಕೆ ಮಾಡಿದ್ದರು ಎನ್ನುವುದನ್ನು ಆಳವಾಗಿ ಚಿಂತಿಸಿದರೆ ಬಹುಶಃ ನಮಗೆ ಸತ್ಯ ಅರಿವಾಗಬಹುದು. ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಂಡಾಗ ಎಂತಹ ಕಷ್ಟ ಕಾರ್ಪಣ್ಯಗಳಿಂದ ವಸಾಹತುಶಾಹಿ ವ್ಯವಸ್ಥೆಯಲ್ಲಿ ಅವರು ಜೀವನ ನಡೆಸಿದ್ದಾರೆಂದು ತಿಳಿಯುತ್ತದೆ. ಎಂಟು-ಹತ್ತು ದಶಕಗಳ ಹಿಂದೆ ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಸಾಮಾಜಿಕ ಪಿಡುಗುಗಳು, ನಿರುದ್ಯೋಗ, ಅಸಮಾನತೆ ಇಂತಹ ಅನೇಕ ಸಮಸ್ಯೆಗಳು ಸಾಮಾನ್ಯರ ಬದುಕಿನಲ್ಲಿ ಎಷ್ಟೊಂದು ಕಷ್ಟಕಾರ್ಪಣ್ಯಗಳನ್ನು ಸೃಷ್ಟಿಸಿದ್ದಿರಬಹುದು! ಇಷ್ಟೆಲ್ಲ ನೋವುಗಳಿದ್ದರೂ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧರಿದ್ದರೆಂದರೆ ವಸಾಹತುಶಾಹಿ ಬದುಕು ಇವೆಲ್ಲದ್ದಕ್ಕಿಂತಲೂ ಎಷ್ಟೊಂದು ಹೆಚ್ಚಿನ ನೋವಿನ ಹಾಗೂ ದುಸ್ಥಿರ ಬದುಕಾಗಿದ್ದಿರಬಹುದು ಅಲ್ಲವೇ?
ಸ್ವತಂತ್ರ ಜೀವನದ ಅಮೂಲ್ಯತೆಯನ್ನು ಅರಿಯದೇ ಇರುವ ವ್ಯಕ್ತಿ ಮೂಲಭೂತ ಹಕ್ಕುಗಳ ಬಗ್ಗೆ ಸದಾ ಯೋಚಿಸುತ್ತಾನೆ ಹಾಗೂ ಅವುಗಳನ್ನು ಚಲಾಯಿಸುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಾನೆ. ಆದರೆ ಯಾರಿಗೆ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಮಾಡಿದ ಬಲಿದಾನ, ತ್ಯಾಗಗಳ ಅರಿವಿದೆಯೋ ಅವರು ಈ ಸ್ವತಂತ್ರ ಜೀವನದ ಅಮೂಲ್ಯತೆಯನ್ನು ತಿಳಿದುಕೊಳ್ಳುತ್ತಾರೆ. ಅವರು ಎಂದಿಗೂ ಮೂಲಭೂತ ಹಕ್ಕುಗಳ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ತಮ್ಮ ಜೀವನಶೈಲಿಯಲ್ಲಿ ಎಲ್ಲಾ ಮೂಲಭೂತ ಕರ್ತವ್ಯಗಳನ್ನು ಸದ್ದಿಲ್ಲದೆ ಮಾಡುತ್ತಾರೆ.
ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಫಲವಾಗಿ ಇಂದು ಸ್ವತಂತ್ರವಾದ ಸುಂದರ ಬದುಕನ್ನು ನಡೆಸುತ್ತಿರುವ ನಾವು ಕೇವಲ ‘ಸ್ವಾತಂತ್ರ್ಯ ದಿನಾಚರಣೆ’ಯನ್ನು ಒಂದು ದಿನಾಚರಣೆ ಎಂದು ಆಚರಿಸಬಾರದು. ಬದಲಾಗಿ ತಮ್ಮ ಅಮೂಲ್ಯ ಪ್ರಾಣವನ್ನೇ ತ್ಯಾಗ ಮಾಡಿ, ನಮಗೆ ಇಂದು ಸುಂದರ ಬದುಕನ್ನು ನೀಡಿದ ಆ ಎಲ್ಲ ಮಹಾತ್ಮರ ತ್ಯಾಗಗಳನ್ನು ನಾವು ನಿಜಕ್ಕೂ ಗೌರವಿಸುವಂತಾಗಬೇಕು. ಅವರಿಂದ ಸಿಕ್ಕಿದ ಈ ಸ್ವಾತಂತ್ರ್ಯ ನಾವು ಸಮಾಜ ಹಾಗೂ ದೇಶದ ಒಳಿತಿಗಾಗಿ ಬಳಸಬೇಕು ಮತ್ತು ಪ್ರಜ್ಞಾವಂತರಾಗಿ ಜವಾಬ್ದಾರಿಯಿಂದ ನಾವು ಬದುಕಬೇಕು. ಒಂದು ಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಸದಾ ಕಾಯ್ದುಕೊಳ್ಳಬೇಕು. ಪ್ರೀತಿ, ವಿಶ್ವಾಸ, ಗೌರವ ಸಹಬಾಳ್ವೆಯಿಂದ ಮಾನವೀಯ ಮೌಲ್ಯಗಳನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಮೂಲಕ ಸುಸಂಸ್ಕೃತ ಬದುಕು ನಮ್ಮದಾಗಬೇಕು. ರಾಮರಾಜ್ಯದ ಕನಸನ್ನು ಕಂಡ ಆ ಎಲ್ಲಾ ಮಹಾತ್ಮರ, ಹುತಾತ್ಮರ ತ್ಯಾಗ, ಬಲಿದಾನಗಳ ಋಣ ನಮ್ಮ ಮೇಲೆ ಸದಾ ಇರುತ್ತದೆ. ಅವರಿಂದ ಬಳುವಳಿಯಾಗಿ ಪಡೆದ ಈ ಸ್ವಾತಂತ್ರ್ಯವನ್ನು ಸಜ್ಜನಿಕೆಯ ಜೀವನದಿಂದ ಇನ್ನಷ್ಟು ಸಾಕಾರಗೊಳಿಸಿ, ತಮ್ಮ ವೈಯಕ್ತಿಕ ಹಾಗೂ ದೇಶದ ಅಭಿವೃದ್ಧಿಯನ್ನು ಸಾಧಿಸುವುದರ ಮೂಲಕ ಒಂದಿಷ್ಟು ಅವರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ಭಾರತವನ್ನು ವಿಶ್ವಕ್ಕೆ ಮಾದರಿ ಪ್ರಜಾಪ್ರಭುತ್ವ ದೇಶವನ್ನಾಗಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಅಭಿವೃದ್ಧಿಯ ಕಡೆ ಎಲ್ಲರು ಹೆಜ್ಜೆಯನ್ನು ಇಡೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *