ಹಳ್ಳಿ ಹಳ್ಳಿಗೂ ಸದ್ದಿಲ್ಲದೇ ಸಿ.ಎಸ್.ಸಿ.ಯಿಂದ ಉಚಿತ ಕಾನೂನು ಸೇವೆ

ಅನಿಲ್ ಕುಮಾರ್ ಎಸ್. ಎಸ್.

ನಾನು ಬ್ಯಾಂಕ್‌ನ ವೃತ್ತಿಯಲ್ಲಿದ್ದಾಗ ಎಷ್ಟೋ ಜನ ತಮ್ಮ ಭೂಮಿಯ ದಾಖಲೆಗಳನ್ನು ತಂದು ಕೃಷಿ ಅಥವಾ ಗೃಹ ಸಾಲಗಳನ್ನು ಕೇಳುತ್ತಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಹೆಸರು ಕಾಣುತ್ತಿರಲಿಲ್ಲ, ಬದಲಾಗಿ ಅವರ ಅಜ್ಜನ ಹೆಸರು ಇರುತ್ತಿತ್ತು. ಯಾಕೆ ದಾಖಲೆ ವರ್ಗಾವಣೆ ಮಾಡಿಕೊಂಡಿಲ್ಲ ಎಂದು ಕೇಳಿದರೆ ತಮ್ಮ ಪೂರ್ವಜರು ಮಾಡಲಿಲ್ಲ ಎಂದು ಹೇಳುತ್ತಿದ್ದರು. ಹಿಂದಿನ ತಲೆಮಾರಿನವರು ಯಾವುದೇ ಸರ್ವೆಗಳನ್ನು ಮಾಡದೇ ಕೇವಲ ಕಣ್ಣಂದಾಜಿನಲ್ಲಿ ತಮ್ಮ ಮಕ್ಕಳಿಗೆ ಭೂಮಿಯನ್ನು ಹಂಚಿಕೆ ಮಾಡುತ್ತಿದ್ದರು. ಮುಂದಿನ ತಲೆಮಾರಿಗೆ ಆ ಭೂಮಿ ಇನ್ನೂ ಹಂಚಿಹೋಗುತ್ತಿತ್ತೇ ಹೊರತು, ದಾಖಲೆಗಳು ಮಾತ್ರ ವರ್ಗಾವಣೆ ಆಗುತ್ತಿರಲ್ಲಿಲ್ಲ. ಇವುಗಳಿಗೆಲ್ಲ ಮುಖ್ಯ ಕಾರಣ ಗ್ರಾಮೀಣ ಜನರಿಗೆ ಕಾನೂನಿನ ಬಗ್ಗೆ ಇರುವ ಮಾಹಿತಿಯ ಕೊರತೆ. ಸುಲಭವಾಗಿ ತಮ್ಮ ದಾಖಲಾತಿಗಳನ್ನು ಪಡೆದುಕೊಳ್ಳಲು ಅಥವಾ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದ್ದರೂ ಅರಿವಿನ ಕೊರತೆಯಿಂದಲೋ ಅಥವಾ ತಪ್ಪು ಕಲ್ಪನೆಯಿಂದಲೋ ಪ್ರಯತ್ನ ಮಾಡದೇ ಹಾಗೆಯೇ ಉಳಿಯುತ್ತಾರೆ. ಹಳ್ಳಿಗಳಿಗೆ ಹೋಗಿ ವಕೀಲರು ಸೇವೆ ಸಲ್ಲಿಸುವುದಿಲ್ಲ, ಹಳ್ಳಿಗರು ಪೇಟೆಯ ವಕೀಲರ ಬಳಿ ಹೋಗುವುದಿಲ್ಲ. ಸಮಸ್ಯೆಗಳು ಮಾತ್ರ ಹಾಗೆಯೇ ಉಳಿಯುತ್ತವೆ. ಈ ಸಮಸ್ಯೆಗಳಿಗೆ ಏಕೈಕ ಪರಿಹಾರ ಗ್ರಾಮೀಣ ಜನತೆಗೆ ಸಾಮಾನ್ಯ ಕಾನೂನುಗಳ ಅರಿವು ಹಾಗೂ ಸಲಹೆಗಳು ಸುಲಭವಾಗಿ ಸಿಗುವಂತಾಗುವುದು ಆಗಿದೆ. ಈ ಸಲುವಾಗಿಯೇ ಭಾರತ ಸರ್ಕಾರದ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಿ.ಎಸ್.ಸಿ. ಕಾರ್ಯಕ್ರಮದ ಮೂಲಕ ಗ್ರಾಮ ಮಟ್ಟದ ಸಿ.ಎಸ್.ಸಿ. ಕೇಂದ್ರಗಳಲ್ಲಿ ‘ಉಚಿತ ಕಾನೂನು ಸಲಹಾ ಸೇವೆ’ಗಳನ್ನು ನೀಡಲು ಪ್ರಾರಂಭಿಸಿದೆ.
ಪೂಜ್ಯ ಶ್ರೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ನಮ್ಮ ಯೋಜನೆಯ ಸಿ.ಎಸ್.ಸಿ. ಕೇಂದ್ರಗಳಲ್ಲಿ ಈ ಸೇವೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ಒಟ್ಟು 12,000 ಕಾನೂನು ಸೇವೆಗಳನ್ನು ಉಚಿತವಾಗಿ ನೀಡಲಾಗಿದೆ. ಸಿ.ಎಸ್.ಸಿ. ವ್ಯವಸ್ಥೆಯಲ್ಲಿ ಅತ್ಯಂತ ಕುಗ್ರಾಮದ ನಿವಾಸಿಯೂ ಕೂಡ, ನಗರದ ಪ್ರಸಿದ್ಧ ವಕೀಲರಿಂದ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ. ಅದೂ ಉಚಿತವಾಗಿ! ಕಾನೂನು ಸಲಹೆ ಅಪೇಕ್ಷಿಸುವ ವ್ಯಕ್ತಿಯು ಯೋಜನೆಯ ಸಿ.ಎಸ್.ಸಿ. ಕೇಂದ್ರಕ್ಕೆ ಬಂದು ಯಾವ ವಿಷಯದಲ್ಲಿ ತನಗೆ ಕಾನೂನು ಸಲಹೆ ಬೇಕಾಗಿದೆ ಎನ್ನುವ ವಿವರ ಹಾಗೂ ಸಲಹೆಗಳನ್ನು ಪಡೆಯಲು ತನಗೆ ಸೂಕ್ತವಾಗುವ (ಬಿಡುವಿನ) ದಿನ ಹಾಗೂ ಸಮಯವನ್ನು ತಿಳಿಸಬೇಕು. ಆ ವಿವರಗಳನ್ನು ಸಿ.ಎಸ್.ಸಿ.ಯ Tele Law Portal ನಲ್ಲಿ ನಮೂದಿಸಿದಾಗ ಕ್ಷಣಾರ್ಧದಲ್ಲಿ ಆನ್‌ಲೈನ್ ಮೂಲಕ ಆ ಅರ್ಜಿ ಸಿ.ಎಸ್.ಸಿ.ಯಲ್ಲಿ ನೋಂದಾಯಿತರಾದ ವಕೀಲರಿಗೆ ಹೋಗುತ್ತದೆ. ಅರ್ಜಿದಾರರು ಅಪೇಕ್ಷಿಸಿದ ಸಮಯಕ್ಕೆ ಲಭ್ಯವಿರುವ ವಕೀಲರು ಸೇವೆ ನೀಡಲು ದೃಢೀಕರಿಸುತ್ತಾರೆ. ಹೀಗೆ ಬೇಡಿಕೆ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಅರ್ಜಿದಾರರಿಗೆ ಸ್ವೀಕೃತಿ ಸಿಗುತ್ತದೆ. ಅರ್ಜಿಯಲ್ಲಿ ನಿಗದಿಪಡಿಸಿದ ದಿನ ಹಾಗೂ ಸಮಯಕ್ಕೆ ಸರಿಯಾಗಿ ಸಿ.ಎಸ್.ಸಿ. ವಕೀಲರು ಅರ್ಜಿದಾರರಿಗೆ ನೇರವಾಗಿ ಕರೆ ಮಾಡುವರು ಹಾಗೂ ಅವರ ಸಮಸ್ಯೆಗಳನ್ನು ಆಲಿಸಿಕೊಂಡು ಸೂಕ್ತ ಕಾನೂನು ಸಲಹೆ ನೀಡುತ್ತಾರೆ. ಒಂದು ವೇಳೆ ಹಂತ ಹಂತವಾಗಿ ಕಾನೂನು ಸಲಹೆ ಪಡೆಯುವಂತಹ ಕ್ಲಿಷ್ಟಕರ ಸಮಸ್ಯೆಗಳಿದ್ದರೂ ಕೂಡ ಇದೇ ಪ್ರಕ್ರಿಯೆ ಮಂದುವರೆದು ಇನ್ನೆರಡು ಸುತ್ತಿನ ಹೆಚ್ಚುವರಿ ಮಾತುಕತೆಗಳನ್ನು ವಕೀಲರೊಂದಿಗೆ ಮಾಡಬಹುದಾಗಿದೆ. ಎಷ್ಟೋ ಸಂದರ್ಭಗಳಲ್ಲಿ ವಕೀಲರು ಅರ್ಜಿದಾರರ ಕುಟುಂಬದವರನ್ನು ಮಾತನಾಡಿಸಿ ಒಂದೇ ಹಂತದಲ್ಲಿ ಕುಟುಂಬದ ವ್ಯಾಜ್ಯಗಳನ್ನು ಪರಿಹರಿಸಿದ್ದಾರೆ. ಒಂದು ವೇಳೆ ಕೆಲವು ದಾಖಲಾತಿಗಳನ್ನು ವಕೀಲರಿಗೆ ತೋರಿಸಬೇಕಾದಲ್ಲಿ ವಕೀಲರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದವನ್ನು ನಡೆಸಲು ಈ ಸಿ.ಎಸ್.ಸಿ. ಕೇಂದ್ರದಲ್ಲಿ ಅವಕಾಶವಿರುತ್ತದೆ. ಈ ಎಲ್ಲಾ ಸಂವಹನ/ಇತರ ಪ್ರಕ್ರಿಯೆಗಳನ್ನು ಸಿ.ಎಸ್.ಸಿ. ಸಂಸ್ಥೆಯು ಅತ್ಯಂತ ಗೌಪ್ಯತೆಯಲ್ಲಿಟ್ಟಿರುತ್ತದೆ.
ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಎಷ್ಟೋ ಬಾರಿ ಪಟ್ಟಣಕ್ಕೆ ಹೋಗಿ ವಕೀಲರನ್ನು ಸಂಪರ್ಕಿಸಿ ಹಿಂದೆ ಪಡೆಯುತ್ತಿದ್ದ ಕಾನೂನು ಸಲಹಾ ಸೇವೆಗಳು ಈಗ ಸಿ.ಎಸ್.ಸಿ. ಯೋಜನೆಯಿಂದಾಗಿ ಅವರ ಮನೆಬಾಗಿಲಿಗೆ ಬಂದoತಾಗಿದೆ. ಅದೂ ಉಚಿತವಾಗಿ! ಇದೊಂದು ಕ್ರಾಂತಿಯೇ ಸರಿ. ಯೋಜನೆಯ ಸಿ.ಎಸ್.ಸಿ. ಕೇಂದ್ರಗಳಿoದ ಅಲ್ಪಕಾಲದಲ್ಲಿ 12,000 ಕಾನೂನು ಸಲಹಾ ಸೇವೆಗಳನ್ನು ನಮ್ಮ ಜನತೆ ಸುಲಭವಾಗಿ ಪಡೆದುಕೊಂಡಿದ್ದಾರೆ. ಇವುಗಳಲ್ಲಿ ಸುಮಾರು 3,500 ಸೇವೆಗಳು ವಂಶಪಾರoಪರೆ ಆಸ್ತಿ ಹಂಚಿಕೆ, ಭೂಮಿ ಹಂಚಿಕೆ ಇತ್ಯಾದಿ ವಿಷಯಗಳಿಗೆ ಸಂಬoಧಪಟ್ಟಿದ್ದಾಗಿವೆ. ಸುಮಾರು 1,600 ಕ್ಕೂ ಮಿಕ್ಕಿದ ಅರ್ಜಿದಾರರು ಕುಟುಂಬ ಕಲಹ, ವರದಕ್ಷಿಣೆ, ಮಹಿಳಾ ದೌರ್ಜನ್ಯ ಸಮಸ್ಯೆಗಳಿಗೆ ಕಾನೂನು ಸಲಹೆ ಪಡೆದಿದ್ದಾರೆ. ಹಾಗೆಯೇ ಸುಮಾರು 1,400 ಅರ್ಜಿದಾರರು ಬಾಲ ಕಾರ್ಮಿಕ ಹಾಗೂ ಶಿಕ್ಷಣ ಹಕ್ಕುಗಳ ವಿಷಯಗಳಲ್ಲಿ ಸಲಹೆಗಳನ್ನು ಪಡೆದಿದ್ದಾರೆ. ಆಶ್ಚರ್ಯ ಎಂದರೆ ಈ ಸೇವೆಯಿಂದಾಗಿ ಸುಮಾರು 540 ಅರ್ಜಿದಾರರು ಬಾಲ್ಯ ವಿವಾಹಗಳ ಬಗ್ಗೆ ಸಲಹೆಗಳನ್ನು ಪಡೆದುಕೊಂಡು ಸಂಭಾವ್ಯ ಬಾಲ್ಯವಿವಾಹಗಳನ್ನು ತಡೆಹಿಡಿದಿದ್ದಾರೆೆ. ಇವುಗಳಲ್ಲದೇ ಇನ್ನೂ ಹತ್ತಾರು ವಿಷಯಗಳಲ್ಲಿ ಅರ್ಜಿದಾರರು ಉಚಿತವಾಗಿ ಕಾನೂನು ಸೇವೆಗಳನ್ನು ಪಡೆದುಕೊಂಡಿದ್ದಾರೆ. ಗ್ರಾಮೀಣ ಜನತೆಗೆ ಈ ಸೇವೆಯು ಒಂದು ವರದಾನವೇ ಸರಿ. ನಮ್ಮ ಸಮಸ್ತ ಪಾಲುದಾರ ಬಂಧುಗಳು ಹಾಗೂ ಗ್ರಾಮೀಣ ಜನತೆ ಇದರ ಸದುಪಯೋಗವನ್ನು ಪಡೆಯಬೇಕಾಗಿ ವಿನಂತಿಸುತ್ತೇವೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates