ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಮದ್ಯಪಾನ ಹಾಗೂ ದುಶ್ಚಟಮುಕ್ತ ಸಮಾಜದ ಕನಸನ್ನು ಕಂಡವರು ಮಹಾತ್ಮ ಗಾಂಧೀಜಿಯವರು. ಆ ಕನಸನ್ನು ನನಸು ಮಾಡಿದವರು ಪೂಜ್ಯ ಶ್ರೀ ಹೆಗ್ಗಡೆಯವರು. ಕಳೆದ 35 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದುಶ್ಚಟಮುಕ್ತ ಸಮಾಜದ ನಿರ್ಮಾಣಕ್ಕೆ ಅನನ್ಯ ಕೊಡುಗೆಯನ್ನು ಅವರು ನೀಡಿದ್ದಾರೆ. ‘ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ’ಯ ಮೂಲಕ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿಸಿ ಸಮಾಜದ ಅದ್ಭುತ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿವರ್ತಿಸಿದ್ದಾರೆ. ದೇಶದಲ್ಲೇ ಇದೊಂದು ಅಪರೂಪವಾದ ಮಹಾನ್ ಪರಿವರ್ತನೆಯ ಕಾರ್ಯವಾಗಿದೆ.
ಮದ್ಯಪಾನವು ಒಂದು ಗಂಭೀರ ವ್ಯಸನವಾದರೆ, ಮಾದಕದ್ರವ್ಯ ಸೇವನೆ ಒಂದು ಭೀಕರ ದುಶ್ಚಟವಾಗಿದೆ. ಇಂದಿನ ಮಕ್ಕಳು, ವಿದ್ಯಾರ್ಥಿಗಳು ಮುಂದಿನ ಸದೃಢ ಭಾರತದ ಶಿಲ್ಪಿಗಳು. ಆದರೆ ಇತ್ತೀಚೆಗೆ ಯುವಜನತೆಯು ಈ ಭೀಕರ ದುಶ್ಚಟಕ್ಕೆ ಅಗಾಧ ಪ್ರಮಾಣದಲ್ಲಿ ಬಲಿಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಸಮಸ್ಯೆಯಾಗಿದೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಮಾರ್ಗವಾಗಿ ಪೂಜ್ಯ ಶ್ರೀ ಹೆಗ್ಗಡೆಯವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ‘ಸ್ವಾಸ್ಥ್ಯ ಸಂಕಲ್ಪ’ ಎಂಬ ಕಾರ್ಯಕ್ರಮವನ್ನು 2010ರಲ್ಲಿ ಪ್ರಾರಂಭಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ವ್ಯವಸ್ಥೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಇಲ್ಲಿಯವರೆಗೆ ಸುಮಾರು 25,155 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಸುಮಾರು 21 ಲಕ್ಷ ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ಧ, ವಿಶೇಷವಾಗಿ ಮಾದಕ ವಸ್ತುಗಳ ವಿರುದ್ಧ ಸ್ವಾಸ್ಥ್ಯ ಸಂಕಲ್ಪವನ್ನು ಕೈಗೊಳ್ಳುವಂತೆ ಮಾಡಲಾಗಿದೆ ಹಾಗೂ ಅವರಿಗೆ ಪರಿಣಾಮಕಾರಿಯಾದ ಅರಿವನ್ನು ಮೂಡಿಸಲಾಗಿದೆ. ಇಲ್ಲಿಯವರೆಗೆ 1300ಕ್ಕೂ ಮಿಕ್ಕಿದ ತರಬೇತುದಾರರನ್ನು ತರಬೇತುಗೊಳಿಸಿ ಅವರಿಂದಲೂ ವಿದ್ಯಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ‘ಮಾದಕ ವಸ್ತು ವಿರೋಧಿ ದಿನಾಚರಣೆ’ಯ ಪ್ರಯುಕ್ತ ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆನ್ಲೈನ್ ಮೂಲಕ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಹೆಗ್ಗಡೆಯವರು ಉದ್ಘಾಟಿಸಿದರು. ರಾಜ್ಯದ 1,281 ಶಾಲಾ-ಕಾಲೇಜುಗಳ 1,31,039 ವಿದ್ಯಾರ್ಥಿಗಳು ಏಕಕಾಲದಲ್ಲಿ ಆನ್ಲೈನ್ ಮೂಲಕ ಮಾಹಿತಿಯನ್ನು ಪಡೆದರು.
‘ಯುವಜನತೆ ನಮ್ಮ ದೇಶದ ಆಸ್ತಿ. ಅವರು ದುಶ್ಚಟಗಳ ಮೊರೆ ಹೋಗದಂತೆ ಜಾಗೃತೆವಹಿಸಬೇಕಾದ ಅಗತ್ಯತೆ ಇಂದು ನಮ್ಮೆದುರಿಗಿದೆ. ಪಂಚೇಂದ್ರಿಯಗಳು ಆಕರ್ಷಿಸುತ್ತವೆ. ಆದರೆ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಕರ್ತವ್ಯ ನಮ್ಮದು. ಪ್ರಜ್ಞಾಪೂರ್ವಕವಾಗಿ ತಪ್ಪುಗಳಾಗದಂತೆ ಜಾಗೃತೆವಹಿಸಬೇಕು. ದುಶ್ಚಟಗಳು ನಮ್ಮ ಬದುಕನ್ನು ಹಾಳು ಮಾಡುತ್ತವೆ. ಕೆಟ್ಟದ್ದನ್ನು ತಿರಸ್ಕರಿಸುವ ಮನೋಭಾವ ನಮ್ಮಲ್ಲಿರಬೇಕು. ದುಶ್ಚಟಗಳಿಂದ ದೂರವಿದ್ದಲ್ಲಿ ಸುಂದರ ಬದುಕು ನಮ್ಮೆದುರಿಗಿದೆ. ದುಶ್ಚಟಗಳು ತನ್ನನ್ನು ಮಾತ್ರ ಕೆಡಿಸುವುದಲ್ಲದೆ ಇಡಿ ಸಮಾಜವನ್ನೇ ಕೆಡಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದಾರಿತಪ್ಪದೆ ಸದಾ ಎಚ್ಚರಿಕೆಯಿಂದ ಇರಬೇಕು’ ಎಂದು ಪೂಜ್ಯ ಶ್ರೀ ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ‘ಮಾದಕವಸ್ತು ವ್ಯಕ್ತಿ ಮತ್ತು ಸಮಾಜಕ್ಕೆ ನೋವನ್ನು ನೀಡುತ್ತದೆ. ನಾವು ಬದುಕಿರುವಷ್ಟು ದಿನ ಸುತ್ತಮುತ್ತಲಿನವರಿಗೆ ಬೆಳಕನ್ನು ನೀಡಬೇಕು. ಬೆಳಕು ನೀಡುವ ಶಕ್ತಿ ಇಂದಿನ ಯುವಕರಲ್ಲಿದೆ. ಅದನ್ನರಿತು ಈ ಸಮಾಜವನ್ನು ಮುನ್ನಡೆಸಬೇಕಿದೆ’ ಎಂಬ ಕಿವಿಮಾತನ್ನು ಹೇಳಿದರು.
ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷರು, ಭಾರತದ ಪ್ರಸಿದ್ಧ ಹೃದಯ ಚಿಕಿತ್ಸಕರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ‘ಯುವ ಸಮುದಾಯ ತಮ್ಮ ಜಾಗೃತ ಮನಸ್ಸನ್ನು ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉಪಯೋಗಿಸಬೇಕು. ಅವರು ಯಾವುದೇ ಮಾದಕ ವ್ಯಸನಕ್ಕೆ ಬಲಿಯಾಗದೆ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಜನಸೇವೆ, ಸಮಾಜಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಈ ಸಮಾಜವನ್ನು ಕಾಪಾಡಬೇಕು’ ಎಂಬ ಮಾಹಿತಿಯನ್ನು ನೀಡಿದರು. ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಹೆಚ್. ಎನ್. ವೆಂಕಟೇಶ ಪ್ರಸನ್ನ ಮಾದಕ ವಸ್ತುಗಳ ಬಳಕೆ, ದುರ್ಬಳಕೆ, ದುಷ್ಪರಿಣಾಮಗಳು, ಎದುರಿಸಬೇಕಾದ ಕಾನೂನುಕ್ರಮ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಿದರು.
ಪೋಷಕರಲ್ಲಿ, ಅಧ್ಯಾಪಕರಲ್ಲಿ ನನ್ನ ಕಳಕಳಿಯ ವಿನಂತಿ, ನಿಮ್ಮ ಮಕ್ಕಳಿಗೆ ಸಂಸ್ಕಾರವನ್ನು ನೀವು ಕಲಿಸದಿದ್ದಲ್ಲಿ ಮತ್ತೆ ಯಾರು ಕಲಿಸುವವರಿದ್ದಾರೆ! ಅವರ ಸುಂದರ ಭವಿಷ್ಯದ ಶಿಲ್ಪಿಗಳು ನೀವು. ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಅಧ್ಯಾಪಕರು ಮಕ್ಕಳಿಗೆ ಮೌಲ್ಯ ಹಾಗೂ ಸಂಸ್ಕಾರಗಳನ್ನು ತುಂಬುತ್ತಾ, ಯಾವುದೇ ವ್ಯಸನಗಳಿಗೆ ಬಲಿಯಾಗದಂತೆ ಅವರಲ್ಲಿ ಅತ್ಯುತ್ತಮವಾದ ವ್ಯಕ್ತಿತ್ವವನ್ನು ರೂಪಿಸಿರಿ. ಮುಂದೆ ಅವರೇ ಈ ಸಮಾಜ ಹಾಗೂ ದೇಶದ ಆಸ್ತಿಯಾಗುತ್ತಾರೆ. ‘ಮಕ್ಕಳಿಗೆ ಆಸ್ತಿ ಮಾಡಿಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿಸುವ’ ಮೂಲಕ ಸಮಷ್ಟಿಗೂ ಒಳಿತನ್ನುಂಟು ಮಾಡುವ ಶ್ರೇಷ್ಠ ಜವಾಬ್ದಾರಿ ಪೋಷಕರು ಹಾಗೂ ಅಧ್ಯಾಪಕರದ್ದಾಗಿರುತ್ತದೆ.
