ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ಜ್ಞಾನವಿಕಾಸ

‘ಹಿಂದಿನ ಸಂಚಿಕೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘದಿoದ ಉಂಟಾದ ಪರಿವರ್ತನೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಯಶಸ್ಸಿನಿಂದಾಗಿ ಪೂಜ್ಯರು ಹಾಗೂ ಮಾತೃಶ್ರೀಯವರ ಚಿತ್ತ ಮಹಿಳಾ ಸಬಲೀಕರಣದತ್ತ ವಾಲಿತು. ಪ್ರಾರಂಭದ ಉತ್ತಮವಾದ ಪರಿಣಾಮದಿಂದಾಗಿ ಮಹಿಳಾ ಸ್ವಸಹಾಯ ಸಂಘಗಳ ಅದ್ಭುತ ಪರಿಕಲ್ಪನೆಗೆ 1990ರ ದಶಕದ ಆರಂಭದಲ್ಲಿ ಚಾಲನೆ ಸಿಕ್ಕಿತು. ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳೆಯರ ಸ್ಥಿತಿಗತಿಗಳು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತದ್ದು ಎಂತಹ ದೊಡ್ಡ ಕಠಿಣ ಸವಾಲಾಗಿತ್ತು ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೂ ಕಾರ್ಯಕರ್ತರ ಮೂಲಕ ಪೂಜ್ಯ ಶ್ರೀ ಹೆಗ್ಗಡೆಯವರು ಆ ಕೈಂಕರ್ಯವನ್ನು ಮುಂದುವರಿಸಿದರು. ಒಂದು ಸಮಾಜದಲ್ಲಿ ಹೆಣ್ಣು ಎಲ್ಲಾ ಆಯಾಮಗಳಲ್ಲೂ ಸಬಲತೆಯನ್ನು ಹೊಂದಿದ್ದರೆ ಅವಳು ಆ ಕುಟುಂಬಕ್ಕೆ ಬೆಳಕಾಗುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ಒಂದು ಸರ್ವಾಂಗೀಣ ಅಭಿವೃದ್ಧಿಗೆ ಮಹಿಳಾ ಸಬಲೀಕರಣವೇ ಕೀಲು ಕೈಯಾಗಿದೆ. ಆದರೆ ಮಹಿಳಾ ಸಬಲೀಕರಣಕ್ಕೆ ಪ್ರತ್ಯೇಕ ಹಾಗೂ ವಿಶೇಷ ಪ್ರಯತ್ನವು ಅಗತ್ಯವಿತ್ತು. ‘ಹೆಣ್ಣು ಸಮಾಜದ ಕಣ್ಣು’ ಎನ್ನುವ ಅರ್ಥಗರ್ಭಿತವಾದ ಮಾತಿದ್ದರೂ, ಎಷ್ಟೋ ಸಂದರ್ಭದಲ್ಲಿ ಅವಕಾಶ ವಂಚಿತರಾದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಅಜ್ಞಾನದ ಅಂಧಕಾರದಿoದಾಗಿ ಕಣ್ಣನ್ನೇ ತೆರೆಯಲಾಗದಂತಹ ಸ್ಥಿತಿಯಲ್ಲಿರುವಾಗ ಸಮಾಜದ ಕಣ್ಣಾಗುವುದು ಹೇಗೆ ಸಾಧ್ಯ? ಬಹಳಷ್ಟು ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣವೇ ಕಷ್ಟ, ಇನ್ನು ಸಂಸಾರಸ್ಥ ಮಹಿಳೆಯರಿಗೆ ಇನ್ನೆಲ್ಲಿಯ ಶಿಕ್ಷಣ? ಇದಕ್ಕೆ ಒಂದು ಸೂಕ್ತ ಮಾರ್ಗೋಪಾಯವನ್ನು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು 1993ರಲ್ಲಿ ಕಂಡುಕೊoಡವರು. ಅದುವೇ ಜ್ಞಾನವಿಕಾಸ ಕಾರ್ಯಕ್ರಮ.
ಜ್ಞಾನವಿಕಾಸ ಕಾರ್ಯಕ್ರಮ ಶೈಕ್ಷಣಿಕ ಶಿಕ್ಷಣ ನೀಡುವಂತಹ ಸಾಂಪ್ರದಾಯಿಕ ಪದ್ಧತಿಯಾಗಿರಲಿಲ್ಲ. ಬದಲಾಗಿ ಮಹಿಳೆಯರಲ್ಲಿ ಜ್ಞಾನವನ್ನು ವಿಕಸಿತಗೊಳಿಸುವ ಬದುಕಿನ ಶಿಕ್ಷಣವಾಗಿದೆ. ಮಾತೃಶ್ರೀಯವರು ಪ್ರಥಮವಾಗಿ ಜ್ಞಾನವಿಕಾಸ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದರು. ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಇಂದು ರಾಜ್ಯದ ಉದ್ದಗಲಕ್ಕೂ ಪಸರಿಸಿದೆ. ಒಂದು ತಾಲೂಕಿನಲ್ಲಿ ಕನಿಷ್ಟ 25 ಕೇಂದ್ರದoತೆ ರಾಜ್ಯಾದ್ಯಂತ ಒಟ್ಟು 5205 ಜ್ಞಾನವಿಕಾಸ ಕೇಂದ್ರಗಳನ್ನು ಸ್ಥಾಪಿಸಿ, ಪ್ರತೀ ಗ್ರಾಮಮಟ್ಟದ ಕೇಂದ್ರದಲ್ಲಿ ಅಲ್ಲಿಯ ಮಹಿಳೆಯರು ಈ ಕಾರ್ಯಕ್ರಮದ ಸದಸ್ಯರಾಗಲು ಅವಕಾಶ ಕಲ್ಪಿಸಿದರು. ಕೌಟುಂಬಿಕ ಸಾಮರಸ್ಯ, ಆರೋಗ್ಯ ಮತ್ತು ನೈರ್ಮಲ್ಯ, ಶಿಕ್ಷಣ, ಪೌಷ್ಠಿಕ ಆಹಾರ, ಸರಕಾರದ ಯೋಜನೆಗಳು ಮತ್ತು ಕಾನೂನು ಹಾಗೂ ಸ್ವ ಉದ್ಯೋಗಗಳೆಂಬ 6 ಮೂಲಭೂತ ವಿಷಯಾಧಾರಿತವಾಗಿ ಮಾತೃಶ್ರೀಯವರು ಈ ಕಾರ್ಯಕ್ರಮವನ್ನು ರೂಪಿಸಿದರು. ಗ್ರಾಮಗಳಲ್ಲಿರುವ ನಮ್ಮ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರೆ ಜ್ಞಾನವಿಕಾಸ ಕಾರ್ಯಕ್ರಮದ ಸದಸ್ಯರಾಗಿ ಅಲ್ಲಿಯ ಕೇಂದ್ರಗಳಲ್ಲಿ ಸೇರಿಕೊಂಡು ಮೇಲಿನ ೬ ವಿಷಯಾಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ತಾಲೂಕಿಗೆ ಓರ್ವರಂತೆ ಇರುವ ಜ್ಞಾನವಿಕಾಸ ಸಮನ್ವಯಾಧಿಕಾರಿ ಈ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಜ್ಞಾನವಿಕಾಸದ ಪ್ರತಿಯೊಂದು ಕಾರ್ಯಕ್ರಮನ್ನು ಮಾತೃಶ್ರೀಯವರೇ ಬಹಳ ಸೂಕ್ಷö್ಮತೆಯಿಂದ ರೂಪಿಸಿ, ಪ್ರತಿ ಗ್ರಾಮಮಟ್ಟದ ಕೇಂದ್ರಗಳಲ್ಲಿ ಅವುಗಳು ಸಮರ್ಪಕವಾಗಿ ಅನುಷ್ಠಾನ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ, ವಿಷಯಾಧಾರಿತ ತಜ್ಞರಿಂದ ಇಂತಹ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಮಾಹಿತಿ ಕಾರ್ಯಾಗಾರ, ವಿಮರ್ಶೆ, ಅಭಿಪ್ರಾಯ ವಿಚಾರಗೋಷ್ಠಿಯಂತಹ ಅನೇಕ ಕಾರ್ಯಕ್ರಮಗಳು ಮಹಿಳೆಯರಿಗೆ ಸಾಕಷ್ಟು ಅರಿವನ್ನು ಮೂಡಿಸುತ್ತಿವೆ. ಜೊತೆಗೆ ಕೌಶಲ್ಯಾಭಿವೃದ್ಧಿ ಕಾರ್ಯಗಾರಗಳು, ಸೃಜನಶೀಲ ಕಾರ್ಯಕ್ರಮಗಳು, ಸ್ವ-ಉದ್ಯೋಗ ತರಬೇತಿಗಳು, ಅಧ್ಯಯನ ಪ್ರವಾಸ ಹಾಗೂ ಜ್ವಲಂತ ವಿಷಯಾಧಾರಿತ ಕಾರ್ಯಕ್ರಮಗಳಂತಹ ಅನೇಕ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ಒಳ್ಳೆಯ ಅನುಭವ ಹಾಗೂ ಕೌಶಲ್ಯಗಳನ್ನು ಕಲಿಸಿಕೊಡುತ್ತಿದ್ದವು. ಈ ಅರಿವು ಮತ್ತು ಅನುಭವಗಳು ಪರಿಪಕ್ವ ಸಮನ್ವತೆಯೊಂದಿಗೆ ಅವರ ಜ್ಞಾನವನ್ನು ವಿಕಸಿತಗೊಳಿಸುತ್ತಾ, ಅವರನ್ನು ಪ್ರಜ್ಞಾವಂತ ಮಹಿಳೆಯರನ್ನಾಗಿಸಿದೆ.
ಇಂದು ಜ್ಞಾನವಿಕಾಸ ತಂಡದ ಸದಸ್ಯರು ಉತ್ತಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಸಂಸಾರ ಹಾಗೂ ಸಮಾಜದ ನಿಜಾರ್ಥದ ಕಣ್ಣುಗಳಾಗಿದ್ದಾರೆ. ಯೋಜನೆಯ ಅನೇಕ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಂಡವರಲ್ಲಿ ಇವರೇ ಮೊದಲಿಗರು. ತಾವು ಅವಿದ್ಯಾವಂತರಾದರೂ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸುತ್ತಿದ್ದಾರೆ. ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದಾರೆ. ಸ್ವಚ್ಛತೆ, ಆರೋಗ್ಯದ ಅರಿವಿದ್ದುದರಿಂದ ಆರೋಗ್ಯ ಕುಟುಂಬಕ್ಕೆ ಕಾರಣರಾಗಿದ್ದಾರೆ. ಉತ್ತಮ ವ್ಯವಹಾರ ಜ್ಞಾನವನ್ನು ಕಲಿತಿದ್ದಾರೆ. ಯೋಜನೆಯಿಂದ ಸಾಲವನ್ನು ಪಡೆದು ಅನೇಕ ಆದಾಯ ಚಟುವಟಿಕೆಗಳನ್ನು ಕೈಗೊಂಡು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಸಂಖ್ಯಾಶಾಸ್ತç ತಿಳಿದಿಲ್ಲದಿದ್ದರೂ, ಉತ್ತಮ ವ್ಯವಹಾರ ಜ್ಞಾನ ಹೊಂದಿದ್ದು, ಸ್ವತಂತ್ರವಾಗಿ ಸಂಘದ ಹಾಗೂ ಬ್ಯಾಂಕಿನ ವ್ಯವಹಾರವನ್ನು ಮಾಡುತ್ತಿದ್ದಾರೆ. ಅಸಲು, ಬಡ್ಡಿ, ಕಂತು, ಮರುಪಾವತಿ, ಉಳಿತಾಯ ಎಲ್ಲಾ ಲೆಕ್ಕಾಚಾರದಲ್ಲಿ ಪರಿಣಿತರಾಗಿದ್ದಾರೆ. ಸಾಮಾನ್ಯ ಜ್ಞಾನದೊಂದಿಗೆ ಸಮಾಜದ ಆಗು-ಹೋಗುಗಳ ಅರಿವಿದೆ. ಸರಕಾರಿ ಸೌಲಭ್ಯಗಳನ್ನು ಪಡೆದು ಸದ್ವಿನಿಯೋಗಿಸುತ್ತಿದ್ದಾರೆ. ಸಂಘದ ವಾರದ ಸಭೆಗಳಲ್ಲಾಗಲಿ, ಗ್ರಾಮದ ಸಭೆಗಳಲ್ಲಾಗಲಿ ಅಳುಕಿಲ್ಲದೆ ಮುಂದೆ ಬಂದು ಮಾತಾನಾಡುತ್ತಾರೆ.
ಒಂದು ರೀತಿಯಲ್ಲಿ ಹೇಳುವುದಾದರೆ ‘ಹೆಣ್ಣು ಸಮಾಜದ ಕಣ್ಣು’ ಎನ್ನುವುದಕ್ಕೆ ಜ್ಞಾನವಿಕಾಸ ಕಾರ್ಯಕ್ರಮ ನಿಜವಾದ ಅರ್ಥವನ್ನು ತುಂಬಿದೆ. ಇದೊಂದು ರೀತಿಯಲ್ಲಿ ಗ್ರಾಮೀಣ ಮಹಿಳಾ ಸಬಲೀಕರಣದ ಯಶೋಗಾಥೆಯೇ ಸರಿ. ಇತರ ರಾಜ್ಯಗಳ ಸೇವಾಸಂಸ್ಥೆಗಳಿಗೂ ಇದು ಒಂದು ಅಧ್ಯಯನ ಕಾರ್ಯಕ್ರಮವಾಗಿದೆ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಮಾಹಿತಿಗಳನ್ನು ತಿಳಿಯೋಣ.

Facebook
Twitter
WhatsApp
LinkedIn
Telegram