ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಕಳೆದ ಸಾವಿರಾರು ವರ್ಷಗಳಿಂದ ಪ್ರಕೃತಿಯ ಮೇಲೆ ಆಘಾತಗಳು ನಡೆಯುತ್ತಾ ಬಂದಿವೆ. ಕೃಷಿ, ಜನವಸತಿ ಪ್ರದೇಶ ನಿರ್ಮಿಸಲು, ವಾಣಿಜ್ಯ ಉದ್ದೇಶಗಳಿಗಾಗಿ ಹೀಗೆ ಸುತ್ತಮುತ್ತಲಿರುವ ಕಾಡುಗಳನ್ನು ನಾಶಮಾಡಿದ ಪರಿಣಾಮ ಕಾಡು ಪ್ರಾಣಿಗಳು ತಾವು ವಾಸಿಸುವ ಕಾಡಿನಿಂದ ದೂರ ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ದಿನಕಳೆದಂತೆ ಅನೇಕ ಕಾರಣಗಳಿಗಾಗಿ ಕಾಡನ್ನು ನಾಶ ಮಾಡುವ ಮನಸ್ಥಿತಿ ಹೆಚ್ಚಾಗುತ್ತಾ ಬಂತು. ಕಾಡು ನಾಶ ಒಂದೆಡೆಯಾದರೆ ಕಾಡನ್ನು ರಕ್ಷಣೆ ಮಾಡುವ ನಿಟ್ಟಿನಲ್ಲೂ ಅನೇಕರು ತಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಇಂದಿಗೂ ಪರಿಸರ ಪ್ರೇಮಿಗಳು ನಿರಂತರವಾಗಿ ಪ್ರಕೃತಿ ಮತ್ತು ಪ್ರಕೃತಿ ಸಂಪತ್ತಿನ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಬುದ್ಧ, ಮಹಾವೀರ, ಕೃಷ್ಣ ಮತ್ತು ಇತರ ಅನೇಕ ಮಂದಿ ಮಹಾತ್ಮರು, ಗಣ್ಯರು ತಮ್ಮ ಬೋಧನೆಗಳಲ್ಲಿ ಮನುಷ್ಯನಷ್ಟೇ ಪ್ರಾಮುಖ್ಯತೆಯನ್ನು ಪ್ರಕೃತಿಗೆ, ವನ್ಯ ಜೀವಿಗಳಿಗೆ, ವನ್ಯ ರಕ್ಷಣೆಗೆ ಕೊಡುವ ಮೂಲಕ ‘ಕಾಡು ಬೆಳೆಸಿ, ನಾಡು ಉಳಿಸಿ’ ಎನ್ನುವಂತಹ ಸಂದೇಶವನ್ನು ಸಾರುತ್ತಾ ಬಂದಿದ್ದಾರೆ. ಮಹಾತ್ಮರ ಸಂದೇಶಗಳನ್ನು ನಾವು ಸರಿಯಾಗಿ ಅರ್ಥೈಸಿಕೊಂಡರೆ ಇಂದು ಕಾಡು ಮತ್ತು ನಾಡು ಇವೆರಡನ್ನು ಕೂಡ ಉಳಿಸಿ ಬೆಳೆಸಬೇಕಾದ ಸಂದರ್ಭ ಒದಗಿ ಬಂದಿದೆ ಎಂಬುವುದು ನಮಗೆ ಸುಲಭವಾಗಿ ಅರ್ಥವಾಗುತ್ತದೆ.
ಇತ್ತೀಚೆಗೆ ನಾನೊಂದು ಪುಸ್ತಕ ಓದುತ್ತಿದ್ದೆ. ಅದರಲ್ಲಿ ಬರಹವೊಂದು ಈ ರೀತಿ ಇತ್ತು. ‘ವ್ಯಕ್ತಿಯೊಬ್ಬ ಕಾಡನ್ನೆಲ್ಲ ಸಂಚರಿಸುತ್ತಾನೆ. ಕಾಡಿನಲ್ಲಿರುವ ಮರಗಿಡಗಳ ಪರಿಚಯ ಅವನಿಗೆ ಎಲ್ಲಿಯವರೆಗೆ ಇತ್ತೆಂದರೆ ಯಾರಿಗಾದರೂ ಗಾಯವಾದರೆ, ಕಾಯಿಲೆ ಬಂದರೆ ಅಥವಾ ಆಯುರ್ವೇದ ಔಷಧಿಯ ಅಗತ್ಯವಿದ್ದರೆ ಅವನು ತಕ್ಷಣ ಕಾಡಿಗೆ ಹೋಗಿ ಇಂತಹ ಗಿಡದಲ್ಲಿ ಇಂತಹ ಮದ್ದಿನ ಗುಣಗಳಿವೆ ಮತ್ತು ಈ ಕಾಯಿಲೆ, ಗಾಯಕ್ಕೆ ಈ ಮದ್ದನ್ನು ಬಳಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬುವುದು ಅವನಿಗೆ ತಿಳಿದಿತ್ತು. ಅವನು ಆ ಔಷಧಗಳನ್ನು ಸಂಗ್ರಹ ಮಾಡುತ್ತಿದ್ದ. ಅವನು ಕಾಡು ನಾಶಕ್ಕೆ ಕಾರಣಗಳನ್ನು ಈ ರೀತಿ ಉಲ್ಲೇಖಿಸುತ್ತಾನೆ. ಕಾಡಿನಲ್ಲಿರುವ ಸಾಗುವಾನಿ, ಹಲಸು, ಮಾವಿನ ಮರಗಳನ್ನು ಪೀಠೋಪಕರಣ ತಯಾರಿಗಾಗಿ ಕಡಿಯಲಾಗುತ್ತಿದೆ. ಇನ್ನೂ ಕೆಲವು ವೃಕ್ಷಗಳ ನಾಶಕ್ಕೆ ಕಾರಣ ಅವುಗಳ ಮೌಲ್ಯ. ಅಪರೂಪದ ತಳಿ ಎಂಬ ಕಾರಣಕ್ಕೆ ಅವುಗಳಿಗೆ ಹೆಚ್ಚಿನ ಮೌಲ್ಯವಿದ್ದು ಅವುಗಳನ್ನು ಕಡಿದು ಮಾರಾಟ ಮಾಡುವ ವ್ಯವಹಾರ ದೃಷ್ಟಿಯೂ ಸೇರಿದೆ. ಇನ್ನೂ ಕೆಲವು ಮರಗಳನ್ನು ಪೇಪರ್ ತಯಾರಿಕೆಗೆ ಕಡಿಯಲಾಗುತ್ತದೆ. ಹೀಗೆ ಮರಗಳನ್ನು ವಿವಿಧ ಉದ್ದೇಶಗಳಿಗೆ ಕಡಿಯುವ ಮೂಲಕ ಅರಣ್ಯನಾಶ ಮಾಡಲಾಗುತ್ತಿದೆ.’
ನಾನು ಏನನ್ನಾದರೂ ಪೇಪರ್‌ನಲ್ಲಿ ಬರೆದು ಬೇಡವೆಂದು ಬಿಸಾಡಿದರೆ ನನ್ನ ಮಗಳು ಶ್ರದ್ಧಾ ‘ಅಪ್ಪಾ ನೀವು ವಿನಾಃ ಕಾರಣ ಪೇಪರ್ ಬಳಸಬೇಡಿ, ಆ ಪೇಪರ್ ತಯಾರಿಸಲು ಎಷ್ಟು ಮರಗಳನ್ನು ಉಪಯೋಗಿಸುತ್ತಾರೆ ಗೊತ್ತಾ’ ಎಂದು ನನ್ನನ್ನು ಪ್ರಶ್ನಿಸುತ್ತಿದ್ದಳು. ಅದನ್ನು ಕೇಳಿ ನನ್ನ ಶ್ರೀಮತಿಯವರು (ಹೇಮಾವತಿಯವರು) ಟಿಶ್ಯು ಬಳಕೆ ಮಾಡುವುದನ್ನೂ ಕೂಡಾ ಇಷ್ಟಪಡುತ್ತಿರಲಿಲ್ಲ. ಟಿಶ್ಯು ಪೇಪರ್ ಅನ್ನು ಕೂಡ ಮರದಿಂದಲೇ ತಯಾರಿಸಬೇಕಾಗುತ್ತದೆ ಎಂದು ಆದಷ್ಟು ಜಾಗ್ರತೆವಹಿಸುತ್ತಿದ್ದರು.
ಕಾಡುಗಳಲ್ಲಿದ್ದ ಅನೇಕ ಮರಗಳನ್ನು ಕಡಿದು ಬಳಿಕ ಕಾಡಿನಲ್ಲಿ ನೀಲಗಿರಿ, ಹತ್ತಿ ಮುಂತಾದ ಮರಗಳನ್ನು ಬೆಳೆಸಲಾಯಿತು. ಇವುಗಳಲ್ಲಿ ನೀಲಗಿರಿ ಬಹಳ ಮೃದುವಾದ ಮರ. ಇದು ಪೇಪರ್ ತಯಾರಿಕೆಗೆ ಅತ್ಯಂತ ಉಪಯುಕ್ತವಾದ ಮರವಾಗಿತ್ತು. ಹತ್ತಿ ಮುಂತಾದ ಕೆಲವು ಮರಗಳಿಂದ ಬಹಳ ಉಪಯೋಗವೂ ಆಗುತ್ತಿತ್ತು. ಸರಕಾರ ಒಂದು ಕಾಲದಲ್ಲಿ ಸಾಗುವಾನಿ, ಅಕೇಶಿಯಾ, ಮ್ಯಾಂಜಿಯಮ್ ಮುಂತಾದ ಗಿಡಗಳು ಬಹಳ ವೇಗವಾಗಿ ಬೆಳೆಯುತ್ತವೆ ಎಂದು ಬಹಳ ಪ್ರಚಾರವನ್ನು ಕೊಟ್ಟಿತ್ತು. ಸರಕಾರಿ ಭೂಮಿಗಳಲ್ಲಿ ಕೋಟ್ಯಾಂತರ ಎಕರೆ ಪ್ರದೇಶಗಳಲ್ಲಿ ಈ ಗಿಡಗಳನ್ನು ನೆಟ್ಟು ಬೆಳೆಸಲಾಯಿತು. 25 ವರ್ಷಗಳ ನಂತರ ಒಳ್ಳೆಯ ಮರಗಳು ದೊರೆತವು. ಆದರೆ ಕಾಡಿನಲ್ಲಿರುವಂತಹ ಪ್ರಾಣಿ ಪಕ್ಷಿಗಳಿಗೆ ಈ ಮರಗಳಿಂದ ಚಿಗುರು, ಹಣ್ಣು ಹಂಪಲು ಹೀಗೆ ಯಾವುದೇ ರೀತಿಯ ಆಹಾರ ದೊರೆಯುತ್ತಿರಲಿಲ್ಲ. ಹಾಗಾಗಿ ದಿನಕಳೆದಂತೆ ಕಾಡಿನಲ್ಲಿದ್ದ ಪ್ರಾಣಿಗಳೆಲ್ಲಾ ನಾಡಿಗೆ ಬರಲಾರಂಭಿಸಿದವು. ಇಂದು ಹೆಚ್ಚಿನೆಡೆ ಆಹಾರವನ್ನರಸುತ್ತಾ ಇಲಿ, ಹೆಗ್ಗಣ, ಹಾವು, ಕೋತಿ, ಆನೆ, ಚಿರತೆ ಹೀಗೆ ಚಿಕ್ಕ ಪ್ರಾಣಿಗಳಿಂದ ಘನ ಗಾತ್ರದ ಪ್ರಾಣಿಗಳೂ ಕೂಡ ನಾಡಿಗೆ ಬರುತ್ತಿವೆ. ಕೃಷಿಕರು ಕಷ್ಟಪಟ್ಟು ಬೆಳೆದ ಸಮೃದ್ಧವಾದ ಬೆಳೆಗಳನ್ನು ತಿನ್ನುತ್ತವೆ. ಇದೀಗ ಜನರು ಅವುಗಳನ್ನು ಹೇಗೆ ಕೊಲ್ಲುವುದು ಎನ್ನುವುದರ ಬಗ್ಗೆ ಯೋಚಿಸುತ್ತಿದ್ದಾರೆ. ಬಸವಣ್ಣನವರ ವಚನದಂತೆ ‘ನಿಜ ನಾಗರ ಕಂಡರೆ ಹೊಡೆದು ಕೊಲ್ಲುವರಯ್ಯ, ಕಲ್ಲನಾಗರ ಕಂಡರೆ ಹಾಲೆರೆವರಯ್ಯ’ ಎನ್ನುವುದು ಇಲ್ಲಿ ಸತ್ಯವೆಂದು ಭಾಸವಾಗುತ್ತದೆ.
ಕೆಲವು ವರ್ಷಗಳ ಹಿಂದೆ ಮೈಸೂರಿನ ಸಮೀಪದ ಪಕ್ಷಿಧಾಮವೊಂದಕ್ಕೆ ಪ್ರತಿವರ್ಷ ಯಥೇಚ್ಛವಾಗಿ ಸುಮಾರು 16 ಸಾವಿರದಷ್ಟು ಪಕ್ಷಿಗಳು ವಿದೇಶ ಹಾಗೂ ವಿವಿದೆಡೆಗಳಿಂದ ಬಂದು ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡಿಕೊಂಡು ಮರಿಗಳೊಂದಿಗೆ ಹೋಗುತ್ತಿದ್ದವು. ಆದರೆ ಆ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಬರಲೇ ಇಲ್ಲವಂತೆ. ಕಾರಣ ಏನೆಂದರೆ ಸಮುದ್ರವನ್ನು ದಾಟುವಾಗ ಏಡಿಗಳು ಅವುಗಳ ಆಹಾರವಂತೆ. ವಿದೇಶಗಳಲ್ಲಿ ಸಮುದ್ರದ ಬಳಿ ಏಡಿಗಳು ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲವಂತೆ. ಹಾಗಾಗಿ ಆ ವರ್ಷ ಪಕ್ಷಿಗಳಿಗೆ ಆಹಾರದ ಕೊರತೆಯಾಗಿ ಸಮುದ್ರ ದಾಟಲು ಶಶಕ್ತವಾಗದೆ ಸಮುದ್ರಯಾನ ಮಾಡುವುದನ್ನು ಕಡಿಮೆ ಮಾಡಿದ್ದವು.
ನಾವು ಪ್ರಕೃತಿಯ ‘ಇಕೋ ಸಿಸ್ಟಂ’ ಬಗ್ಗೆ ಮಾತನಾಡುತ್ತೇವೆ. ಇಕೋ ಸಿಸ್ಟಮ್ ಎಂದರೆ ಪ್ರಕೃತಿಯ ಸಮತೋಲನ. ಪ್ರಕೃತಿಯ ಸ್ವಾಭಾವಿಕವಾದಂತಹ ಕೆಲವು ಪದ್ಧತಿಗಳನ್ನು ಬದಲಾಯಿಸುವ ಕಾರ್ಯಗಳು ನಡೆದಾಗ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತದೆ. ಕೃಷಿಯ ಉಪಯೋಗಕ್ಕಾಗಿ ಅನೇಕ ಬೆಲೆ ಬಾಳುವ ಮರಗಳನ್ನು ಕಡಿದ ಪರಿಣಾಮ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಉಂಟಾಯಿತು. ಈ ಕುರಿತು ನಾವು ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯ. ರಬ್ಬರ್ ಗಿಡ ಯಾವುದೇ ಆಹಾರಗಳನ್ನು ಪ್ರಾಣಿ, ಪಕ್ಷಿಗಳಿಗೆ ಕೊಡುವುದಿಲ್ಲ. ಆದರೆ ರಬ್ಬರ್ ತೋಟದಲ್ಲಿ ಜೇನು ಸಾಕಣೆ ಮಾಡಿದರೆ ಈ ಜೇನುಗಳು ರಬ್ಬರ್ ಹೂವುಗಳ ಮಕರಂಧದಿoದ ಜೇನು ತಯಾರಿ ಮಾಡಿಕೊಳ್ಳುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ರಬ್ಬರ್ ಗಿಡಕ್ಕೆ ಬಿಟ್ಟಂತಹ ಔಷಧಿಗಳು ಜೇನು ನೊಣಗಳನ್ನು ನಾಶ ಮಾಡಿ ಜೇನಿನ ಗೂಡು ಕೂಡ ಖಾಲಿಯಾಗುವಂತೆ ಆಯಿತು ಎಂದು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಕರೊಬ್ಬರು ಹೇಳುತ್ತಿದ್ದರು. ಫಸಲನ್ನು ಹೆಚ್ಚು ಪಡೆಯಬೇಕು ಎಂದು ವಿಮಾನದ ಮೂಲಕ ಎಂಡೋ ಸಲ್ಫಾನ್‌ನಂತಹ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಿದ ಪರಿಣಾಮವಾಗಿ ನೂರಾರು ಜನರಿಗೆ ಅದರಿಂದ ತೊಂದರೆ ಆಯಿತು. ಕೆಲವರು ಅಂಗವಿಕಲರಾದರು, ಹುಟ್ಟುವ ಮಗುವೂ ಅಂಗವಿಕಲತೆ ಹಾಗೂ ಬುದ್ಧಿಭ್ರಮಣೆ ಹೊಂದಿದ್ದನ್ನು ನಾವು ಕಂಡಿದ್ದೇವೆ. ಬಳಿಕ ಸರಕಾರ ಈ ಅನಾಹುತಕ್ಕೆ ಪರಿಹಾರ ಕೊಡಲು ಪ್ರಾರಂಭಿಸಿತು. ಇದನ್ನೆಲ್ಲ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ಪ್ರಕೃತಿಯ ವಿರುದ್ಧವಾಗಿ ನಾವು ನಡೆದರೆ ಆಪತ್ತು ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಪಡಿಸಿ ಅಲ್ಲಿ ಇತರ ಚಟುವಟಿಕೆಗಳನ್ನು ನಡೆಸುತ್ತಾರೆ. ಎಷ್ಟೋ ಭಾರಿ ಪ್ರಕೃತಿ ಅವುಗಳನ್ನು ನಾಶಪಡಿಸಿ ತನ್ನ ಸಮತೋಲನ ಕಾಪಾಡಿಕೊಳ್ಳುತ್ತಿರುವ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿವೆ. ಪ್ರಕೃತಿಯನ್ನು ನಾಶಪಡಿಸುವ ಮುನ್ನ ಇದರ ಅರಿವು ನಮಗಿರಬೇಕು.
ಪ್ರಕೃತಿಯಲ್ಲಿ ಎಲ್ಲಾ ಜೀವ ಸಂಕುಲಗಳೂ ಬದುಕಬೇಕು. ಪ್ರಾಣಿ, ಪಕ್ಷಿಗಳು ಪ್ರಕೃತಿಯ ಒಂದು ಅವಿಭಾಜ್ಯ ಅಂಗವಾಗಿದ್ದು ಅರಿವಿನ ಜ್ಞಾನ ಹೊಂದಿರುವ ಮನುಷ್ಯ ಎಲ್ಲವನ್ನೂ ಸಂರಕ್ಷಿಸಿಕೊoಡು ಬಾಳಿದರೆ ಸಮತೋಲನದಿಂದ ಜೀವಿಸಲು ಸಾಧ್ಯವಾಗುತ್ತದೆ. ಪ್ರಕೃತಿಯ ಆಕ್ರಂದನ ನಮ್ಮ ಕಿವಿಗೆ ಕೇಳಬೇಕಿದೆ. ಅರಣ್ಯ ಸಂರಕ್ಷಣೆಗೆ ಗರಿಷ್ಠವಾದ ಕಾರ್ಯಗಳನ್ನು ಕೈಗೊಂಡು ಮರ-ಗಿಡಗಳನ್ನು ನೆಟ್ಟು ಅರಣ್ಯವನ್ನು ಬೆಳೆಸುವುದರ ಜೊತೆಗೆ ಜೀವ ವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪಣ ತೊಡಬೇಕಿದೆ. ಪ್ರಕೃತಿಯ ಒಡನಾಟದಲ್ಲಿ ನಮ್ಮ ಪ್ರತಿಯೊಂದು ಸಂಸ್ಕೃತಿಯು ಬೆಳೆದಿದೆ. ಹಾಗಾಗಿ ಪ್ರಕೃತಿ ಸಂರಕ್ಷಣೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಆಧುನಿಕ ಐಶಾರಾಮಿ ಜಗತ್ತನ್ನು ಸೃಷ್ಟಿಸುವ ಭರದಲ್ಲಿ ನೈಸರ್ಗಿಕ ಮಹತ್ವವನ್ನು ಮರೆಯದಿರೋಣ.
ಪ್ರಕೃತಿಯ ಮಡಿಲಲ್ಲಿದ್ದ ಅನೇಕ ಜೀವವೈವಿಧ್ಯ ಈಗಾಗಲೇ ನಶಿಸಿದೆ. ಇದೇ ರೀತಿ ಪ್ರಕೃತಿ ವೈಪರಿತ್ಯವಾದರೆ ಮುಂದೊoದು ದಿನ ಪ್ರಕೃತಿ ತನ್ನ ಸಮತೋಲನವನ್ನು ಸಂಪೂರ್ಣವಾಗಿ ಕಳೆದುಕೊಂಡು ಮನುಷ್ಯನ ಅಸ್ತಿತ್ವಕ್ಕೂ ಸಂಚಕಾರವಾಗಬಹುದು. ತನ್ನ ಸ್ವಾರ್ಥದಿಂದಾಗಿ ತನ್ನ ಅಳಿವಿಗೆ ತಾನೇ ನಾಂದಿ ಹಾಡಬಹುದು. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸಿ ಜೀವವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಬಳುವಳಿಯಾಗಿ ನೀಡುವುದರ ಬಗ್ಗೆ ನಮ್ಮ ಮನ ಸದಾ ಮಿಡಿಯಲಿ ಎನ್ನುವುದು ನಮ್ಮ ಆಶಯ.
‘ಬದುಕು ಮತ್ತು ಬದುಕಗೊಡು-ಜಿಯೋ ಔರ್ ಜೀನೆದೋ’ ಎನ್ನುವಂತೆ ನಾವು ಬದುಕಬೇಕು, ಇತರರೂ ಬದುಕುವಂತೆ ನೋಡಿಕೊಳ್ಳಬೇಕು ಎನ್ನುವುದು ಎಲ್ಲ ಧರ್ಮಗಳ ಸಂದೇಶವಾಗಿದೆ. ಅವುಗಳನ್ನು ಪಾಲಿಸುತ್ತಾ ಬದುಕೋಣ.
