ಕುಟುಂಬಕ್ಕೊಂದು ಇತಿಮಿತಿಯ ಬಜೆಟ್‌ ಇರಲಿ

ಕಳೆದ ಎರಡು-ಮೂರು ದಶಕಗಳಿಂದ ದುಡಿದು ಸಂಪಾದಿಸುತ್ತಿರುವ ಮಧ್ಯಮ ವಯಸ್ಸಿನ ಉದ್ಯೋಗಿಗಳು ಸಹಜವಾಗಿಯೆ ಕೆಲವೊಮ್ಮೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ‘ಹಿಂದೆ ತಿಂಗಳಿಗೆ ರೂ. 2 ಸಾವಿರ ಸಂಬಳ ಪಡೆಯುತ್ತಿದ್ದೆವು. ಆದರೆ ಇದೀಗ ತಿಂಗಳಿಗೆ ರೂ. 2 ಲಕ್ಷ ಸಂಬಳ ಕೈ ಸೇರುತ್ತಿದೆ. ಆದರೆ ರೂ. 2 ಸಾವಿರ ಸಂಬಳ ಪಡೆಯುತ್ತಿದ್ದಾಗ ದೊರೆಯುತ್ತಿದ್ದ ನೆಮ್ಮದಿ ಇಂದು ಇಲ್ಲವಾಗಿದೆ. ಇಂದು ತಿಂಗಳಿಗೆ ರೂ. 2 ಲಕ್ಷ ದುಡಿದರೂ ಆ ಹಣ ಕೈಯಲ್ಲಿ ಉಳಿಯುತ್ತಿಲ್ಲ.’ ಇದಕ್ಕೆ ಹೇಳುವುದು ಮಾನವನ ಆಸೆಗೆ ಮಿತಿಯಿಲ್ಲವೆಂದು. ‘ಕಡಿಮೆ ಸಂಬಳ ಇರುವಾಗ ಹೆಚ್ಚು ಉಳಿತಾಯವಾಗುತ್ತಿತ್ತು. ಸಂಬಳ ಹೆಚ್ಚಾದಾಗ ಉಳಿಕೆ ಹೆಚ್ಚಾಗಬೇಕಿತ್ತು. ಬದಲಾಗಿ ಕಡಿಮೆಯಾಗಿದೆ.’ ಎನ್ನುವ ಉದ್ಯೋಗಿಗಳು ಇದ್ದಾರೆ. ಇದಕ್ಕೆ ಕಾರಣ ಉದ್ಯೋಗಿಗಳ ಜೀವನ ಶೈಲಿ ಮತ್ತು ಖರ್ಚು-ವೆಚ್ಚಗಳ ನಡುವೆ ಆಗಿರುವ ಅಸಮತೋಲನ. ಸಣ್ಣ ಮೊತ್ತದ ಸಂಬಳ ದೊರೆಯುತ್ತಿದ್ದರೂ ದೊಡ್ಡ ಕುಟುಂಬವೊಂದರ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಿ ಅದರಲ್ಲಿ ಉಳಿತಾಯ ಮಾಡುವ ಜಾಣರು ಒಂದು ಕಡೆಯಾದರೆ ಕೈತುಂಬಾ ಸಂಬಳವಿದ್ದು ಕುಟುಂಬದ ಯಾವುದೇ ಜವಾಬ್ದಾರಿ ಇಲ್ಲದಿದ್ದರೂ ಗಳಿಸಿದ್ದನ್ನೆಲ್ಲ ಉಳಿಸದೆ ಖಾಲಿ ಮಾಡಿ ಮತ್ತೊಂದಷ್ಟು ಸಾಲ ಮಾಡಿ ಬದುಕುವವರು ಇದ್ದಾರೆ. ಒಬ್ಬ ವ್ಯಕ್ತಿಯ ಅಥವಾ ಕುಟುಂಬದ ಖರ್ಚು-ವೆಚ್ಚಗಳು ದಿನಕಳೆದಂತೆ ಕಡಿಮೆಯಾಗಲು ಸಾಧ್ಯವೇ ಇಲ್ಲ. ಅವುಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಹಾಗೆಯೇ ಸಾಮಾನ್ಯವಾಗಿ ಆದಾಯವು ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ ಈ ಮಧ್ಯಂತರದಲ್ಲಿ ಆಸೆಗಳು ಹೆಚ್ಚಾದಲ್ಲಿ ಮಾತ್ರ ಈ ಏರುಪೇರುಗಳು ಸಾಧ್ಯವಾಗುತ್ತದೆ. ತನ್ನ ಆದಾಯಕ್ಕೆ ಸಮಾನವಾದ, ಸೂಕ್ತವಾದ ಜೀವನಶೈಲಿಯನ್ನು ರೂಢಿಸಿಕೊಂಡಲ್ಲಿ ಯಾವುದೇ ದೊಡ್ಡ ವ್ಯತ್ಯಯಗಳಿಲ್ಲದೆ ಜೀವನವನ್ನು ಸುಂದರವಾಗಿ ನಡೆಸಬಹುದು. ತನ್ನ ಆದಾಯಕ್ಕಿಂತ ದುಬಾರಿಯಾದ ಜೀವನಶೈಲಿಯನ್ನು ರೂಢಿಸಿಕೊಂಡಲ್ಲಿ ಮುಂದೆ ಜೀವನದಲ್ಲಿ ದುಬಾರಿ ಬೆಲೆ ತೆರಬೇಕಾಗುತ್ತದೆ. ಮುಂದಿನ ಭವಿಷ್ಯದ ಯೋಚನೆಯಿಲ್ಲದೆ ಸಾಲ ಮಾಡಿ ಶೋಕಿಗಾಗಿ, ನೆರೆಹೊರೆಯವರು, ಸಹೋದ್ಯೋಗಿಗಳಿಗೆ ಪೈಪೋಟಿಗಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ನಂತರ ಪಡೆದ ಸಾಲವನ್ನು ತೀರಿಸಲಾಗದೆ ಮತ್ತೊಂದಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವವರು ಇದ್ದಾರೆ.
ಇಂದು ಜವಾಬ್ದಾರಿಯುತವಾದ ಜೀವನವನ್ನು ನಡೆಸಲು ಸ್ವಲ್ಪ ವಿವೇಚನೆ ಇದ್ದರೆ ಸಾಕಾಗುತ್ತದೆ. ಎಷ್ಟೋ ಕಡೆ ಇಂದು ಯಾವುದೇ ಎಂ.ಬಿ.ಎ. ಮುಂತಾದ ದೊಡ್ಡ ದೊಡ್ಡ ಪದವಿಗಳಿಲ್ಲದೆ ಅನಕ್ಷರಸ್ಥ ಮಹಿಳೆಯು ಕೂಡಾ ತನ್ನ ಕುಟುಂಬದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವುದನ್ನು ನಾವು ನೋಡಿದ್ದೇವೆ. ಇವರಿಗೆ ಯಾವುದೇ ಲೆಕ್ಕಾಚಾರ ತಿಳಿಯದಿದ್ದರೂ ಕೂಡ ತಮ್ಮ ಆದಾಯದ ಮಿತಿಯೊಳಗೆ ಕುಟುಂಬವನ್ನು ಸುಂದರವಾಗಿ ಸಾಗಿಸುವ ಕಲೆ, ನೈಪುಣ್ಯತೆ ಕರಗತವಾಗಿರುತ್ತದೆ. ಬಹುಶಃ ಇವರೇ ನಿಜವಾದ ಆರ್ಥಿಕ ತಜ್ಞರು. ಉನ್ನತ ಪದವಿಯನ್ನು ಗಳಿಸಿ ದೊಡ್ಡ ಕಂಪನಿಯಲ್ಲಿ ಕೈತುಂಬಾ ಸಂಬಳ ಪಡೆದುಕೊಂಡು ತನ್ನ ಇತಿಮಿತಿಯನ್ನು ಮೀರಿ ಐಷಾರಾಮಿ ಜೀವನ ಸಾಗಿಸುತ್ತಿರುವ ಪದವೀಧರರು ಈ ಮಹಿಳೆಯರ ಮುಂದೆ ಅನಕ್ಷರಸ್ಥರಾಗುತ್ತಾರೆ. ಇದಕ್ಕಾಗಿ ನಮ್ಮ ಹಿರಿಯರು ‘ಹಾಸಿಗೆ ಇದ್ದಷ್ಟೇ ಕಾಲು ಚಾಚು!’ ಎಂಬ ಒಳ್ಳೆಯ ಗಾದೆಯನ್ನೇ ಹೇಳಿದ್ದಾರೆ.
ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಆಕಸ್ಮಿಕ ಅವಘಡ, ಸಮಸ್ಯೆಗಳು ಎದುರಾಗುವುದು ಸಹಜ. ಅವುಗಳನ್ನು ಎದುರಿಸಲು ಸಿದ್ಧತೆಯನ್ನು ಪ್ರತಿಯೊಬ್ಬರು ಮಾಡಿಟ್ಟುಕೊಳ್ಳಲೇಬೇಕಾಗುತ್ತದೆ. ಅಂದರೆ ಒಬ್ಬ ತನ್ನ ಆದಾಯದಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಉಳಿಕೆ ಮಾಡುತ್ತಾ ಒಂದು ಭದ್ರತಾ ಠೇವಣಿಯನ್ನು ಬೆಳೆಸಿದ್ದಲ್ಲಿ ಮುಂದಿನ ಆಪತ್ತುಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಎದುರಿಸಬಹುದಾಗಿದೆ.
ಇಂದಿನ ಯುವಜನತೆಯಲ್ಲಿ ಉಳಿತಾಯದ ಮನೋಭಾವನೆಯಿಲ್ಲದೆ ಇರುವುದನ್ನು ನಾವು ಗಮನಿಸುತ್ತೇವೆ. ಹೆಚ್ಚಿನವರು ಜೀವನದಲ್ಲಿ ಎಲ್ಲವೂ ಸುಗಮವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಕಷ್ಟ ಬಂದಾಗ ಕಂಗಾಲಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಆ್ಯಪ್‌ನಿಂದ ಸಾಲ ಪಡೆದು ಅಥವಾ ಒಂದಿಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಹಿಂದೆ ಆರ್ಥಿಕ ಸಮಸ್ಯೆಗಾಗಿ ಇಂತಹ ಆತ್ಮಹತ್ಯೆಗಳು ಆಗುತ್ತಿರಲಿಲ್ಲ. ಯಾಕೆಂದರೆ ಬದುಕುವ ಕಲೆ ಅವರಲ್ಲಿತ್ತು. ಇಂದು ಯಾವುದೇ ಇತಿಮಿತಿ ಇಲ್ಲದೆ ತನ್ನ ಚೌಕಟ್ಟನ್ನು ಮೀರಿ ಬದುಕುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಅದನ್ನು ಎದುರಿಸುವ ಶಕ್ತಿಯಿಲ್ಲದೆ ಸೂಕ್ಷ್ಮ ಮನಸ್ಸಿನಿಂದ ಆತ್ಮಹತ್ಯೆಗೆ ಬಲಿಯಾಗುತ್ತಿರುವುದು ಒಂದು ದುರಾದೃಷ್ಟವೇ ಸರಿ. ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ದುಬಾರಿ ವಸ್ತುಗಳನ್ನು ನೀಡುವ ಅಭ್ಯಾಸವನ್ನು ರೂಢಿಸುವುದು ಒಳ್ಳೆಯದಲ್ಲ. ಮಕ್ಕಳಿಗೂ ಚಿಕ್ಕಂದಿನಿoದಲೇ ಜೀವನದ ಕೆಲವು ಕಷ್ಟಗಳ ಪರಿಚಯವನ್ನು ಮಾಡಿಕೊಡಬೇಕು. ಕೊನೆಯ ಪಕ್ಷ ಅವುಗಳ ಅರಿವಾದರೂ ಇರಬೇಕು. ಮುಂದಿನ ದಿನಗಳಲ್ಲಿ ಅವರು ಗಳಿಕೆ ಮಾಡುವಾಗಲು ಪೋಷಕರ ಗಳಿಕೆಯ ಮಹತ್ವ ಅವರಿಗೆ ತಿಳಿಯುವುದಲ್ಲದೇ ತಾವು ಕೂಡಾ ಶಿಸ್ತುಬದ್ಧ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ನಮ್ಮ ದೇಶಕ್ಕೆ ಒಂದು ಬಜೆಟ್ ಇದ್ದು ಆ ಬಜೆಟ್‌ನ ಇತಿಮಿತಿಯೊಳಗೆ ಇಡೀ ವರ್ಷದ ಆರ್ಥಿಕತೆ ನಡೆಯುತ್ತದೆ. ಹಾಗಿರುವಾಗ ನಮಗೊಂದು ಬಜೆಟ್ ಬೇಡವೇ? ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೂ ಇತಿಮಿತಿಯೊಳಗಿನ ಯೋಜಿತ ಬಜೆಟ್ ಇರಲಿ. ಆ ಬಜೆಟ್‌ನಂತೆಯೆ ಆ ವ್ಯಕ್ತಿ ಅಥವಾ ಕುಟುಂಬ ಸಾಗಿದ್ದಲ್ಲಿ ಬಹುಶಃ ಹೆಚ್ಚು ಏರಿಳಿತ ಇಲ್ಲದ ಒಂದು ಅರ್ಥಪೂರ್ಣವಾದ ಬದುಕು ಅವರದ್ದಾಗುತ್ತದೆ.

Facebook
Twitter
WhatsApp
LinkedIn
Telegram