ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಜೀವನದಲ್ಲಿ ಸಮಸ್ಯೆ, ವಿಪತ್ತು ಅಥವಾ ಅಪಾಯಗಳು ಹೇಳಿ ಕೇಳಿ ಬರುವುದಿಲ್ಲ. ಅದು ಅನಿರೀಕ್ಷಿತ. ಯಾವಾಗ, ಹೇಗೆ, ಯಾವ ರೂಪ, ರೀತಿಯಲ್ಲಿ ಬಂದೆರಗುತ್ತವೆ ಎಂಬುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅನಾರೋಗ್ಯ, ಅಪಘಾತ, ಅವಘಡ, ಪ್ರಾಕೃತಿಕ ವಿಕೋಪ, ಕಷ್ಟ-ನಷ್ಟ, ನೋವು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಎದುರಾಗಬಹುದು. ಪರಿಣಾಮವಾಗಿ ನಿತ್ಯ ಜೀವನದಲ್ಲಿ ಏರು-ಪೇರುಗಳಾಗಬಹುದು. ಬದುಕೇ ಸಾಕೆಂದೆನಿಸಿ ಕೆಲವರು ಸಾಯುವ ತೀರ್ಮಾನಕ್ಕೂ ಬರಬಹುದು. ಪ್ರತಿಯೊಬ್ಬರು ಸಮಸ್ಯೆಗಳಿಗೆ ಎದುರುಗೊಳ್ಳುತ್ತಲೇ ಇರುತ್ತಾರೆ. ಕೆಲವರು ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸಿ ಸೋಲುತ್ತಾರೆ. ಇನ್ನು ಕೆಲವರು ಧೈರ್ಯದಿಂದ ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಪಡೆಯುತ್ತಾರೆ.
ಅನಾರೋಗ್ಯ ಸಮಸ್ಯೆಗಳು, ವೈಯಕ್ತಿಕ ಸಮಸ್ಯೆಗಳಿಂದ ದಂಪತಿಗಳ ನಡುವಿನ ವೈಮನಸ್ಸು, ಆಸ್ತಿ ಕಲಹ, ಕೌಟುಂಬಿಕ ಸಮಸ್ಯೆಗಳು, ಸಮರ್ಪಕ ರಸ್ತೆ, ಕುಡಿಯಲು ನೀರು ಇಲ್ಲದಿರುವುದು, ವಿದ್ಯುತ್ ಸಂಪರ್ಕ ಕಡಿತ, ಅವಘಡ ಇತ್ಯಾದಿ ಸಮಸ್ಯೆಗಳು ಎದುರಾದಾಗ ಅವನ್ನು ಎದುರಿಸುವ ರೀತಿಗಳು ಬೇರೆ ಬೇರೆಯದ್ದಾಗಿರುತ್ತದೆ. ಕೆಲವೊಮ್ಮೆ ನಾವು ಕುಟುಂಬಸ್ಥರ ಜೊತೆಯಾಗಿ ಅಥವಾ ಸಮುದಾಯದೊಂದಿಗೆ ಸೇರಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದ ಸಂದರ್ಭಗಳು ಎದುರಾಗುತ್ತವೆ. ಸಮಸ್ಯೆ ವ್ಯಕ್ತಿಯನ್ನು ಅವನತಿಯತ್ತ ಕೊಂಡೊಯ್ಯಬಹುದು ಅಥವಾ ಯಶಸ್ಸಿನ ಉತ್ತುಂಗಕ್ಕೂ ಏರಿಸಬಲ್ಲದು. ಅದು ನಾವು ಹೇಗೆ ಸಮಸ್ಯೆಯನ್ನು ಸ್ವೀಕರಿಸುತ್ತೇವೆ, ಎದುರಿಸುತ್ತೇವೆ ಎಂಬುವುದರ ಮೇಲೆ ನಿರ್ಧಾರವಾಗುತ್ತದೆ ಎನ್ನುವುದನ್ನು ಮರೆಯಬಾರದು.
ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ದಾನಗಳಲ್ಲಿ ಒಂದಾದ ಅಭಯ ದಾನಕ್ಕೂ ಸಾಕಷ್ಟು ಪ್ರಸಿದ್ಧವಾಗಿದೆ. ಈ ಮೊದಲು ಧರ್ಮಾಧಿಕಾರಿಗಳಾಗಿದ್ದವರೆಲ್ಲ ಈ ಪರಂಪರೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ನಾನೂ ಕೂಡ ಅದನ್ನು ಶ್ರೀ ಸ್ವಾಮಿಯ ಸೇವೆಯೊಂದಿಗೆ ಯಥಾಶಕ್ತಿಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ದಿನವೂ ಭಕ್ತರು ಶ್ರೀ ಸ್ವಾಮಿಯ ಸೇವೆ ಮಾಡಿ ಅಭಯ ದಾನಕ್ಕಾಗಿ ಬೀಡಿಗೆ ಬರುತ್ತಿರುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ, ಬೇಡಿಕೆ, ಅನಿಸಿಕೆ, ಅಭಿಪ್ರಾಯಗಳು ಇರುತ್ತವೆ. ಎಲ್ಲರನ್ನೂ, ಎಲ್ಲವನ್ನೂ ಆಲಿಸಿ ಅವರಿಗೆ ಸಾಂತ್ವಾನ, ಪರಿಹಾರ, ಮಾರ್ಗದರ್ಶನವನ್ನು ನೀಡುತ್ತೇನೆ. ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಇತರರನ್ನು ತುಳಿಯದೆ ತಿಳಿದು ಬದುಕಬೇಕು. ಅಂದರೆ ನಾವು ಬದುಕುವುದರ ಜೊತೆಗೆ ಇನ್ನೊಬ್ಬರಿಗೂ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ನಾನು ಆಗಾಗ ಹೇಳುತ್ತಿರುತ್ತೇನೆ.
‘ಬದುಕು’ ಎಂಬುವುದು ಭಗವಂತ ನಮಗೆ ಕೊಟ್ಟ ಒಂದು ಉತ್ತಮ ಅವಕಾಶ. ಅದನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳಬಾರದು. ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಬದುಕಬೇಕು. ಸತ್ತಾಗ ನಾಲ್ಕು ಜನರಿಂದ ಒಳ್ಳೆಯ ಮಾತುಗಳು ಬರಬೇಕೇ ಹೊರತು, ‘ಆತ ಸತ್ತದ್ದು ಒಳ್ಳೆಯದೇ ಆಯಿತು’ ಎನ್ನುವ ಹಾಗೆ ಬದುಕಬಾರದು. ಉಗ್ರಗಾಮಿಗಳು, ಭಯೋತ್ಪಾದಕರು ಸತ್ತಾಗ ಯಾರೂ ಕೂಡ ಅವರಿಗಾಗಿ ಮಿಡಿಯುವುದಿಲ್ಲ. ಆದರೆ ಕೆಲವೊಂದು ಮಹಾನ್ವ್ಯಕ್ತಿಗಳು, ಸಾಧು-ಸಂತರು, ಪರೋಪಕಾರಿಗಳು ನಿಧನರಾದಾಗ ಸಾವಿರಾರು ಜನರು ದುಃಖ ವ್ಯಕ್ತಪಡಿಸುತ್ತಾರೆ.
ಹೊಸದಾಗಿ ಮನೆ ಕಟ್ಟುವಾಗ ಅದಕ್ಕೊಂದು ರೂಪುರೇಷೆಯನ್ನು ಹಾಕಲಾಗುತ್ತದೆ. ಮನೆ ಸಣ್ಣದಿರಲಿ, ದೊಡ್ಡದಿರಲಿ ರೂಪುರೇಷೆ ಬೇಕೇ ಬೇಕು. ಖರ್ಚು ವೆಚ್ಚ, ಎಷ್ಟು ಕೋಣೆಗಳು, ಹಾಲ್, ಅಡುಗೆ ಮನೆ, ದೇವರ ಕೋಣೆ, ಮುಖ್ಯ ದ್ವಾರ, ಬಾಗಿಲು ಕಿಟಕಿಗಳನ್ನು ಎಲ್ಲಿ ಇಡಬೇಕು ಎಂದೆಲ್ಲ ತಜ್ಞರೊಂದಿಗೆ ಚರ್ಚಿಸಿ ಯೋಜನೆಯನ್ನು ರೂಪಿಸುತ್ತೇವೆ. ಹಾಗೆಯೇ ಬದುಕಿಗೂ ಆ ರೀತಿಯಾದ ಯೋಜನೆ ಬಹಳ ಮುಖ್ಯ. ಮದುವೆ, ಮಕ್ಕಳು, ಮಕ್ಕಳ ಶಿಕ್ಷಣ, ಅವರ ಬೇಕು ಬೇಡಗಳು, ಕುಟುಂಬ ನಿರ್ವಹಣೆ, ಆದಾಯ – ಖರ್ಚು ಹೀಗೆ ಎಲ್ಲದರ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿದ್ದರೆ ಬದುಕನ್ನು ಸುಗಮವಾಗಿ ಸಾಗಿಸಲು ಸಾಧ್ಯ. ಇಲ್ಲದಿದ್ದಲ್ಲಿ ಬದುಕು ಗೋಜಲು ಗೋಜಲಾಗಿ ಅಯ್ಯೋ ಈ ಜೀವನವೇ ಸಾಕು ಎಂಬ ಹತಾಶೆಯ ಭಾವನೆ ಮೂಡಬಹುದು. ನಿತ್ಯ ಜೀವನದಲ್ಲೂ ಅಷ್ಟೇ. ಬೆಳಗ್ಗೆ ಬೇಗನೇ ಎದ್ದರೆ ನಿತ್ಯ ಕರ್ಮಗಳ ಸಹಿತ ಎಲ್ಲಾ ಕೆಲಸ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಮಾಡಿ ಮುಗಿಸಬಹುದು. ಬದಲಾಗಿ ತಡವಾಗಿ ಎದ್ದರೆ ಎಲ್ಲಾ ಕೆಲಸ ಕಾರ್ಯಗಳನ್ನು ಗಡಿಬಿಡಿಯಿಂದಲೇ ಮಾಡಬೇಕಾದ ಪರಿಸ್ಥಿತಿಯ ಜೊತೆಗೆ ಮಾಡಿದ ಕೆಲಸವೂ ಪರಿಪೂರ್ಣವಾಗಲಾರದು.
ಇಂದು ಮಕ್ಕಳಿಗೆ, ಯುವ ಜನತೆಗೆ ಪಠ್ಯ ಶಿಕ್ಷಣ ಮಾತ್ರವಲ್ಲದೆ ಜೀವನ ಪಾಠವನ್ನೂ ತಿಳಿಸಿಕೊಡಬೇಕಾದ ಅಗತ್ಯವಿದೆ. ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ., ರೋವರ್ಸ್, ರೇಂಜರ್ಸ್ ಘಟಕ ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸರ್ವತೋಮುಖವಾಗಿ ವಿಕಾಸಗೊಳಿಸುವಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿವೆ. ನಾಯಕತ್ವ ಗುಣ, ಶಿಸ್ತು, ಕೌಶಲ್ಯವೃದ್ಧಿ, ಶ್ರಮ ಜೀವನ, ಸೇವಾ ಕಳಕಳಿ, ಸಮಾಜ ಸೇವೆ, ಕಾರ್ಯ ಬದ್ಧತೆ, ಟೀಮ್ ವರ್ಕ್ ಮುಂತಾದ ಮೌಲ್ಯಯುತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕಿನ ಮೌಲ್ಯ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ಜೊತೆಗೆ ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಸಹಕಾರಿಯಾಗುತ್ತವೆ.
ಹನುಮಂತನ ಶಕ್ತಿ-ಸಾಮರ್ಥ್ಯ ಏನೆಂಬುದು ಮೊದಲು ಆತನಿಗೆಯೇ ತಿಳಿದಿರಲಿಲ್ಲ. ಸಮುದ್ರವನ್ನು ಯಾರು ದಾಟಬಲ್ಲರು ಎಂಬ ಸಮಸ್ಯೆ ಉದ್ಭವಿಸಿದ ಸಂದರ್ಭದಲ್ಲಿ ಪರಿಹಾರೋಪಾಯಗಳನ್ನು ಯೋಚಿಸುವಾಗ ಹನುಮಂತನಲ್ಲಿರುವ ಶಕ್ತಿ ಎಲ್ಲರೆದುರು ಪ್ರಕಟವಾಯಿತು. ಹನುಮಂತನಿಗೆ ಅಪಾರ ಶಕ್ತಿ ಇದೆ ಎಂದು ಆತನಿಗೆ ತಿಳಿಯದಿರುವ ಶಾಪವಿತ್ತಂತೆ. ಮುಂದೆ ಆತನ ಶಕ್ತಿಗಳ ಗುಣಗಾನ ಮಾಡುತ್ತಾ ಹೋದಂತೆ ಆತನಿಗೆ ಸಮುದ್ರೋಲಂಘನದ ಶಕ್ತಿ ನೆನಪಿಗೆ ಬಂತು ಮತ್ತು ಸೀತೆಯನ್ನು ಹುಡುಕಲು ಸಮುದ್ರದ ಮೇಲೆ ಹಾರಿ ಲಂಕೆಯನ್ನು ತಲುಪಿ, ಸೀತಾಮಾತೆಯನ್ನು ಕಂಡು ಸಂದೇಶ ತಲುಪಿಸಿದ. ಬಹುಶಃ ಅಂತಹ ಸಮಸ್ಯೆ ಎದುರಾಗದೇ ಇದ್ದಿದ್ದರೆ ಹನುಮಂತನ ಶಕ್ತಿ ಬೆಳಕಿಗೆ ಬರುತ್ತಲೂ ಇರಲಿಲ್ಲ. ರಾಮಾಯಣದ ಸಮದ್ರೋಲ್ಲಂಘನದಲ್ಲಿ ಹನುಮಂತನ ವಿವಿಧ ಸಾಹಸಮಯ ಕತೆಗಳು ಹುಟ್ಟಿಕೊಳ್ಳುತ್ತಿರಲಿಲ್ಲ ಎಂದೆನಿಸುತ್ತದೆ. ಕೆಲವೊಮ್ಮೆ ಸಮಸ್ಯೆಗಳು ನಮ್ಮ ಒಳಿತಿಗೆ ಉದ್ಭವಿಸುತ್ತಿರುವಂತೆ ಭಾಸವಾಗುತ್ತದೆ. ಅದಕ್ಕಾಗಿಯೇ ಕೆಲವರು ಧನಾತ್ಮಕ ಚಿಂತನೆಯಿಂದ ಆಗುವುದೆಲ್ಲ ಒಳ್ಳೆಯದಕ್ಕೇ ಎಂದು ಹೇಳುತ್ತಿರುತ್ತಾರೆ.
ಸದಾ ಧನಾತ್ಮಕ ಚಿಂತನೆಯನ್ನು ಹೊಂದಿದ್ದರೆ ಯಾವುದೇ ಕಷ್ಟದ ಪರಿಸ್ಥಿತಿಯನ್ನು ಎದುರಿಸಬಹುದು. ಕಷ್ಟಗಳಿರಲಿ, ನೋವುಗಳಿರಲಿ ಅವು ಸಮುದ್ರದ ಮೇಲಿರುವ ತೆರೆಗಳಂತೆ ಒಮ್ಮೆ ದಡವನ್ನು ಅಪ್ಪಳಿಸಿ ಮತ್ತೆ ಹಿಂದಿರುಗಿ ಹೋಗುತ್ತವೆ. ತೆರೆಗಳಿಗೆ ಅಂಜಿ ದೋಣಿಯನ್ನು ನಡೆಸದೆ ದಡದಲ್ಲೇ ಕೂತರೆ ಮೀನುಗಾರರ ಬದುಕು ನಡೆಯದು. ಮುಗಿಲೆತ್ತರಕ್ಕೆ ಚಿಮ್ಮುವ ತೆರೆಗಳ ಮಧ್ಯೆ ಧೈರ್ಯದಿಂದ ದೋಣಿಯನ್ನು ನಡೆಸಿ, ಬಲೆ ಬೀಸಿ ಶ್ರಮದಿಂದ ದುಡಿದರೆ ಮಾತ್ರ ಬದುಕಿನ ಬುತ್ತಿಯನ್ನು ತುಂಬಿಸಿಕೊಳ್ಳಲು ಸಾಧ್ಯ. ಹಾಗೆಯೇ ಕಷ್ಟಗಳಿಗೆ ಅಂಜಿ ಕೂತರೆ ಬದುಕು ನಡೆಯದು. ದೇವರ ಕೃಪೆಯಿಂದ ಎದುರಿಸುತ್ತೇನೆ ಎಂದು ಮುನ್ನಡೆದಾಗ ಸ್ವತಃ ಭಗವಂತನೇ ಕಷ್ಟವನ್ನು ಪರಿಹರಿಸಲು ನಮ್ಮ ಬೆನ್ನ ಹಿಂದೆ ನಿಲ್ಲುತ್ತಾನೆ. ಸಮಸ್ಯೆಗಳು ಎದುರಾದಾಗ ಅವನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಮಾಡುವ ಪ್ರಯತ್ನಗಳೆಲ್ಲ ವಿಫಲವಾದರೂ ಅವು ನಮಗೆ ಹೊಸ-ಹೊಸ ಪಾಠಗಳನ್ನು ಕಲಿಸಿರುತ್ತವೆ. ಸೋಲುಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಿ ಹೊಸ-ಹೊಸ ದಾರಿಗಳನ್ನು ಕಂಡುಕೊಂಡು ಯಶಸ್ಸನ್ನು ಪಡೆಯಲು ನೆರವಾಗುತ್ತವೆ. ಹೆಚ್ಚು ಉಳಿಯ ಪೆಟ್ಟು ತಿನ್ನುವ ಕಲ್ಲು ದೇವರ ಮೂರ್ತಿಯಾಗುವಂತೆ ಕಷ್ಟ-ನಷ್ಟ, ನೋವುಗಳನ್ನು ಅನುಭವಿಸದೆ ಜೀವನದಲ್ಲಿ ಸುಖವನ್ನು ಪಡೆಯಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಯುವಜನತೆ ಸಣ್ಣಪುಟ್ಟ ವಿಷಯಗಳಿಗೂ ಮನನೊಂದು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಗಂಡ-ಹೆಂಡತಿಯ ನಡುವೆ ಸಣ್ಣ ವಿಷಯಕ್ಕೆ ಶುರುವಾದ ಜಗಳ ವಿಚ್ಛೇದನದವರೆಗೂ ಹೋಗುತ್ತದೆ. ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಪರಿಹರಿಸದೇ ಇದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಜ್ವರ, ತಲೆ, ಹೊಟ್ಟೆ ನೋವು ಬಂದ ತಕ್ಷಣ ಅದನ್ನು ಉಪಶಮನ ಮಾಡುವ ಔಷಧವನ್ನು ತೆಗೆದುಕೊಳ್ಳಬೇಕು. ನಾಳೆ ತೆಗೆದುಕೊಳ್ಳುವ, ನಾಡಿದ್ದು ನೋಡುವ ಎಂದು ಸುಮ್ಮನಿದ್ದರೆ ನೋವು ಉಲ್ಬಣವಾಗಿ ಮತ್ತೊಂದಷ್ಟು ಆರೋಗ್ಯ ಸಮಸ್ಯೆಗಳು ಕಾಡದೇ ಇರದು. ಹಾಗೆಯೇ ಸಮಸ್ಯೆಗಳು ಕೂಡಾ. ಅವುಗಳನ್ನು ಸಕಾಲದಲ್ಲಿ ಪರಿಹರಿಸುವ ಜಾಣತನವನ್ನು ಬೆಳೆಸಿಕೊಳ್ಳಬೇಕು.
ಸಮಸ್ಯೆಗಳು ಸಣ್ಣದು ಅಥವಾ ದೊಡ್ಡದಾಗಿರಲಿ ಮೊದಲಾಗಿ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಬಳಿಕ ನಮ್ಮಿಂದ ಪರಿಹಾರ ಮಾಡಲು ಆಗದಿದ್ದರೆ ಆತ್ಮೀಯರು, ಬಂಧು-ಕುಟುಂಬವರ್ಗ ಅಥವಾ ನಂಬಿಕಸ್ಥರೊಡನೆ ಸಮಾಲೋಚಿಸಿ ಸಮಸ್ಯೆಯನ್ನು ನಿವಾರಿಸಬಹುದು. ಕೆಲವೊಂದು ಸಮಸ್ಯೆಗಳು ತನ್ನಿಂತಾನಾಗಿ ಬಂದರೆ ಕೆಲವೊಂದು ನಾವು ಸೃಷ್ಟಿಸಿಕೊಂಡವುಗಳು. ಸದಾ ನಾವು ಮಾಡುವ ಕೆಲಸ ನಮಗೆ ತೃಪ್ತಿ ನೀಡಬೇಕು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು, ಪಕ್ಕದ ಮನೆಯವ ಕಾರು ಖರೀದಿಸಿದ ಎಂದು ನಾವೂ ಸಾಲ ಮಾಡಿ ಆತನ ಕಾರಿಗಿಂತ ಹೆಚ್ಚು ಬೆಲೆಯ ಕಾರನ್ನು ಖರೀದಿಸುವುದು, ಯಾರೋ ಹಣ ಡಬಲ್ ಮಾಡಿಕೊಡುತ್ತಾರೆ ಎಂದು ನಮ್ಮಲ್ಲಿದ್ದ ಹಣವನ್ನು ಕೊಟ್ಟು ಮೋಸ ಹೋಗುವುದು, ಆನ್ಲೈನ್ ಗೇಮ್ನಲ್ಲಿ ಹಣ ಬರುತ್ತದೆಯೆಂಬ ಅತಿಯಾಸೆಗೆ ಇದ್ದುದನ್ನು ಕಳೆದುಕೊಳ್ಳುವುದು ಮುಂತಾದವುಗಳಿಂದ ದೂರವಿದ್ದರೇನೆ ಒಳ್ಳೆಯದು. ನಮ್ಮ ಹಿರಿಯರು ಬಹಳ ಅದ್ಭುತವಾದ ಮಾತನ್ನು ಹೇಳಿದ್ದಾರೆ; ‘ನಮ್ಮ ತಲೆಗೆ ನಮ್ಮದೇ ಕೈ.’ ಅಂದರೆ ಸುಖದಲ್ಲಿ ನಮ್ಮೊಂದಿಗೆ ಸಾಕಷ್ಟು ಜನ ಇರಬಹುದು. ಆದರೆ ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಬರುವವರು ಬೆರಳೆಣಿಕೆಯ ಮಂದಿ ಮಾತ್ರ. ಕಷ್ಟನಷ್ಟ ಅನುಭವಿಸಿದಾಗ ಯಾರೂ ನಮ್ಮ ಜೊತೆಗೆ ನಿಲ್ಲಲಾರರು. ಆಗ ನಮ್ಮ ತಲೆಯ ಮೇಲೆ ನಮ್ಮ ಕೈಯನ್ನು ಇಟ್ಟುಕೊಳ್ಳಬೇಕಷ್ಟೇ.
ಕಷ್ಟ, ಸಮಸ್ಯೆಗಳು ಮನುಷ್ಯನಿಗಷ್ಟೇ ಅಲ್ಲ, ದೇವಾನು ದೇವತೆಗಳೂ ಒಂದಲ್ಲ ಒಂದು ರೀತಿಯ ಕಷ್ಟಗಳನ್ನು ಅನುಭವಿಸಿ ಬಳಿಕ ಜಯವನ್ನು ಪಡೆದ ಬಗ್ಗೆ ಪುರಾಣ ಕತೆಗಳಲ್ಲಿ ಓದಿದ್ದೇವೆ. ಈಗ ನಾವು ಎಷ್ಟೇ ಕಷ್ಟ ಅನುಭವಿಸಿದರೂ ಕಾಲಾನಂತರದಲ್ಲಿ ಕಷ್ಟವು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ.
ಬದುಕು ಬೇವು ಬೆಲ್ಲದಂತೆ ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣ. ನಾವಿಂದು ಹಬ್ಬ-ಹರಿದಿನಗಳನ್ನೆಲ್ಲ ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ದುಷ್ಟ ಶಕ್ತಿಗಳನ್ನು ದೂರ ಮಾಡುವ ದೇವರನ್ನು ಆರಾಧಿಸಿ, ನಮಗೂ ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತೇವೆ. ಇದರೊಂದಿಗೆ ನಾವು ಪ್ರಯತ್ನಗಳನ್ನು ಪಡಬೇಕಾಗಿದೆ. ಆಗ ಮಾತ್ರ ನಮ್ಮ ಕಷ್ಟಗಳು ದೂರವಾಗಬಲ್ಲವು. ಇಂದಿನ ಯುವಜನತೆ ಬದುಕಿನ ಈ ಸತ್ಯವನ್ನು ತಿಳಿದುಕೊಂಡಲ್ಲಿ ಬದುಕು ಸರಳವಾಗಬಲ್ಲದು.
