ಚಿನ್ನದಂಥ ಸಾಲ ಮಾಡಿ ಜಾಣೆಯರಾದ ಯೋಜನೆಯ ಸದಸ್ಯರು

‘ಚಿನ್ನಕ್ಕೆ ಚಿನ್ನವೇ ಸಾಟಿ’ ಎನ್ನುವ ಮಾತಿದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಬೆಲೆಬಾಳುವ ವಸ್ತು ಚಿನ್ನ ಆಗಿದೆ. ಆರ್ಥಿಕ ವಿಚಾರದಲ್ಲಿ ಹಣ, ದುಡ್ಡು, ಕಾಸು ಭಾರತದಲ್ಲಿ ರೂಪಾಯಿ ಆದರೆ, ಅಮೆರಿಕಾದಲ್ಲಿ ಡಾಲರ್, ಜಪಾನ್‌ನಲ್ಲಿ ಯೆನ್ ಹಾಗೂ ಇತರ ದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಬಳಕೆಯಾಗುತ್ತಿವೆ. ಇವುಗಳ ಮೌಲ್ಯಗಳು ವಿದೇಶಿ ಕರೆನ್ಸಿಯ ವಿನಿಮಯದ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿವೆ. ಆದರೆ ಎಲ್ಲಾ ದೇಶಗಳಲ್ಲೂ ಆ ದೇಶದ ಕರೆನ್ಸಿಯ ನಂತರ ಗಟ್ಟಿಯಾಗಿ ನಿಲ್ಲುವ ಹಾಗೂ ಬೆಲೆಬಾಳುವ ವಸ್ತು ಇದ್ದರೆ ಅದು ಚಿನ್ನ. ಒಂದು ದೇಶದ ಆರ್ಥಿಕತೆಯ ಸುಭದ್ರತೆಯ ದೃಷ್ಟಿಯಿಂದ ವಿದೇಶಿ ಕರೆನ್ಸಿಯ ನಿಧಿಯನ್ನು (Foreign Currency Reserve Fund) ನಿರ್ವಹಿಸಲಾಗುತ್ತದೆ. ಅದೇ ರೀತಿ ಗಟ್ಟಿ ಚಿನ್ನವನ್ನು ಅಥವಾ ಚಿನ್ನವನ್ನು ಇತರ ಆಯಾಮಗಳಲ್ಲಿ ನಿಧಿಯಾಗಿಯೂ ನಿರ್ವಹಿಸಲಾಗುತ್ತಿದೆ. ಒಂದೆಡೆ ಇದು ದೇಶದ ಆರ್ಥಿಕತೆಯ ದೃಷ್ಟಿಯಾದರೆ, ಒಂದು ಕುಟುಂಬ ಅಥವಾ ವ್ಯಕ್ತಿಯ ವಿಚಾರಕ್ಕೂ ಚಿನ್ನ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರಾಚೀನ ಭಾರತದ ಸಂಸ್ಕೃತಿಯಲ್ಲಿಯೂ, ಪುರಾಣ ಕಾಲದಿಂದಲೂ ಚಿನ್ನದ ಉಲ್ಲೇಖವಿದೆ. ಇಂದಿಗೂ ಚಿನ್ನಕ್ಕೆ ಚಿನ್ನದ ಸ್ಥಾನವೇ ಇದೆ. ಎಂತಹ ಕಡುಬಡವರಾದರೂ ಕೊನೆ ಪಕ್ಷ ಮದುವೆ ಸಂದರ್ಭದಲ್ಲಾದರೂ ಚಿನ್ನವನ್ನು ಖರೀದಿಸುತ್ತಾರೆ, ಉಳಿಸಿಕೊಳ್ಳುತ್ತಾರೆ ಮತ್ತು ಹೆಚ್ಚಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಚಿನ್ನವು ಆಭರಣಕ್ಕಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದರೆ, ಕಳೆದ ಕೆಲವು ವರ್ಷಗಳಿಂದ ಚಿನ್ನ ಉಳಿತಾಯ ಮತ್ತು ಒಂದು ಪರಿಣಾಮಕಾರಿ ಹೂಡಿಕೆಯ ಮಾರ್ಗವಾಗಿದೆ. ಚಿನ್ನದಲ್ಲಿ ಹೂಡಿಕೆ ಮಾಡಿದಲ್ಲಿ ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರುವುದರಿಂದ ಪ್ರತಿಫಲ ನಿಶ್ಚಿತ. ಎಷ್ಟೋ ಸಂದರ್ಭಗಳಲ್ಲಿ ಇತರ ಎಲ್ಲಾ ಹೂಡಿಕೆಗಳಿಗಿಂತ ಅತೀ ಹೆಚ್ಚು ಪ್ರತಿಫಲವನ್ನು ಚಿನ್ನ ನೀಡಿದೆ. 2022ರಲ್ಲಿ 24 ಕ್ಯಾರೆಟ್‌ನ 10 ಗ್ರಾಂ. ಚಿನ್ನಕ್ಕೆ ರೂ. 55,017 ಇತ್ತು. ಪ್ರಸ್ತುತ ಇದು ರೂ. 1,53,930ಕ್ಕೆ ಏರಿದೆ. ಕೇವಲ ನಾಲ್ಕು ವರ್ಷಗಳಲ್ಲಿ ರೂ. 55000ದ ಹೂಡಿಕೆ ಸುಮಾರು ರೂ. 1,54,000ರಷ್ಟು ಪ್ರತಿಫಲವನ್ನು ನೀಡಿದೆ ಎಂದರೆ ಕೇವಲ 4 ವರ್ಷಗಳಲ್ಲಿ ಹೂಡಿಕೆಯ ಪ್ರತಿಫಲ ಮೂರುಪಟ್ಟಿನಷ್ಟಾಗಿದೆ. ಸಾಮಾನ್ಯ ಹೂಡಿಕೆಗಳಾದ ಠೇವಣಿ, ಆವರ್ತಕ ಠೇವಣಿ ಮೊದಲಾದ ವ್ಯವಸ್ಥೆಗಳಲ್ಲಿ ಹೂಡಿಕೆಯು ಎಂಟರಿoದ ಒಂಬತ್ತು ವರ್ಷಗಳ ನಂತರ ಹೆಚ್ಚೆಂದರೆ ಎರಡು ಪಟ್ಟಾಗಬಹುದು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರು ಬ್ಯಾಂಕುಗಳಿoದ ಹಳ್ಳಿಯ ಬಡಜನತೆಗೆ, ಮಹಿಳೆಯರಿಗೆ ನೇರವಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸ್ವಸಹಾಯ ಸಂಘದ ಮಾದರಿಯಲ್ಲಿ ಸಾಲ ಸೌಲಭ್ಯವನ್ನು ದೊರಕಿಸಿಕೊಡುವ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಯಾವುದೇ ಆಸ್ತಿ ಅಡಮಾನ ದಾಖಲೆಗಳಿಲ್ಲದೆ ತಾವಿರುವ ಗ್ರಾಮದಲ್ಲಿಯೇ ಬ್ಯಾಂಕಿನಿoದ ಗರಿಷ್ಠ ಸಾಲ ಸೌಲಭ್ಯವನ್ನು ಪಡೆದುಕೊಂಡು ಲಕ್ಷಾಂತರ ಬದುಕುಗಳು ಅಭಿವೃದ್ಧಿಯನ್ನು ಕಂಡಿರುವ ಈ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಸ್ವಸಹಾಯ ಸಂಘ ಮಾದರಿಯಲ್ಲಿ ಸಾಮಾಜಿಕ ಸಬಲೀಕರಣಗೊಳಿಸುವುದರ ಪ್ರಮುಖ ಭಾಗವಾಗಿ ಶಿಸ್ತುಬದ್ಧವಾದ ವಾರದ ಸಭೆ, ವಾರದ ಸಭೆಗಳಲ್ಲಿ ಅನೇಕ ವಿಷಯಗಳ ಅರಿವು ಪಡೆದುಕೊಳ್ಳುವುದು, ಮಾತೃಶ್ರೀ ಹೇಮಾವತಿ ಅಮ್ಮನವರ ಜ್ಞಾನವಿಕಾಸ ಕಾರ್ಯಕ್ರಮದ ಅರಿವು ಕಾರ್ಯಕ್ರಮಗಳು, ಅನೇಕ ತರಬೇತಿಗಳು, ಒಕ್ಕೂಟ ಸಭೆಗಳು ಯೋಜನೆಯ ಸದಸ್ಯರನ್ನು ಜಾಣೆಯರನ್ನಾಗಿ ಮಾಡಿವೆ. ಸದಸ್ಯರು ತಮ್ಮ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ತಮಗಾಗಿ ಅಥವಾ ತಮ್ಮ ಮಕ್ಕಳ ಮದುವೆಗಾಗಿಯೋ ಅಥವಾ ಭವಿಷ್ಯದ ಮದುವೆಯ ಪೂರ್ವಸಿದ್ಧತೆಗಾಗಿಯೋ ಸಂಘದ ಮೂಲಕ ಸಾಲವನ್ನು ಪಡೆದು ಚಿನ್ನವನ್ನು ಖರೀದಿಸಿದ್ದಾರೆ. ಅದು ಒಂದು ರೀತಿಯಲ್ಲಿ ‘ಚಿನ್ನದಂತಹ ಸಾಲ’ವಾಗಿದೆ. ಒಂದು ಲಕ್ಷಕ್ಕೆ ಒಂದು ವರ್ಷಕ್ಕೆ ಕೇವಲ ರೂ. 7,450 ಬಡ್ಡಿ ಇರುವಂತಹ ಅತೀ ಕಡಿಮೆ ಬಡ್ಡಿದರದ ಸಂಘದ ಸಾಲವನ್ನು ಸುಲಭವಾಗಿ ಮರುಪಾವತಿ ಮಾಡುತ್ತಾರೆ. ತಾವು ಖರೀದಿಸಿದ ಚಿನ್ನದ ಮೌಲ್ಯದ ವೃದ್ಧಿ ಬಡ್ಡಿ ಪಾವತಿಯ ಆರು ಪಟ್ಟುಗಳಿಗಿಂತಲೂ ಜಾಸ್ತಿಯಾದಲ್ಲಿ ಇದಕ್ಕಿಂತ ಜಾಣತನದ ಹೂಡಿಕೆ ಇನ್ನೊಂದಿದೆಯೇ? ಉದಾ : ಓರ್ವ ಸದಸ್ಯ 2022ರಲ್ಲಿ ರೂ. 3 ಲಕ್ಷ ಸಾಲವನ್ನು ಪಡೆದು ಚಿನ್ನದಲ್ಲಿ ಹೂಡಿಕೆ ಮಾಡಿದಲ್ಲಿ, ಸಾಲದ ಮರುಪಾವತಿಯನ್ನು ನಾಲ್ಕು ವರ್ಷದ ಅವಧಿಗೆ ಪಡೆದುಕೊಂಡಲ್ಲಿ, ನಾಲ್ಕು ವರ್ಷಕ್ಕೆ ಕಟ್ಟಬೇಕಾದ ಬಡ್ಡಿ ಕೇವಲ ರೂ. 91,498 ಆಗುತ್ತದೆ. ಆದರೆ ರೂ. 3 ಲಕ್ಷದ ಚಿನ್ನದ ಹೂಡಿಕೆಯ ಮೌಲ್ಯ ನಾಲ್ಕು ವರ್ಷಗಳಲ್ಲಿ ಸುಮಾರು ರೂ. 8.50 ಲಕ್ಷ ಆಗಿರುತ್ತದೆ. ಅಂದರೆ ಪ್ರತಿಫಲ ಸುಮಾರು ರೂ. 5.50 ಲಕ್ಷ. ಅದರಲ್ಲಿ ಬಡ್ಡಿ ಪಾವತಿ ರೂ. 91,498 ಅನ್ನು ಕಳೆದರೆ ನಿವ್ವಳ ಲಾಭ ರೂ. 4,58,502 ಬರುತ್ತದೆ. ಇವರು ಖಂಡಿತವಾಗಿಯೂ ಜಾಣರಲ್ಲವೇ? ಮುಂದಿನ ಸಂಖ್ಯೆಯನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. 2015 ರಿಂದ 2025ರವರೆಗೆ ಯೋಜನೆಯ ಹೆಮ್ಮೆಯ ಜಾಣ ಸದಸ್ಯರು ಮದುವೆಯ ಕಾರಣದಿಂದಾಗಿ ಮುಖ್ಯವಾಗಿ ಚಿನ್ನ ಖರೀದಿಸಲು ಸುಮಾರು ರೂ. 3,000 ಕೋಟಿ ಮೊತ್ತದ ಸಾಲವನ್ನು ಪಡೆದುಕೊಂಡಿದ್ದಾರೆ. ಚಿನ್ನವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ. ತಮ್ಮ ಅಥವಾ ತಮ್ಮ ಮಕ್ಕಳ ಮದುವೆ ಅಥವಾ ಶುಭಕಾರ್ಯಗಳಿಗೆ ಬಳಸಿದ್ದಾರೆ. ಭದ್ರವಾಗಿ ಅವುಗಳನ್ನು ವೃದ್ಧಿಸುತ್ತಿದ್ದಾರೆ. ತಮ್ಮ ಹೂಡಿಕೆಯ ಐದಾರು ಪಟ್ಟು ಲಾಭಗಳನ್ನು ಈಗಾಗಲೇ ಸಾವಿರಾರು ಜಾಣ ಸದಸ್ಯರು ಪಡೆದುಕೊಂಡಿದ್ದಾರೆ. ರೂ. 3000 ಕೋಟಿ ಮೊತ್ತದ ಚಿನ್ನದಂತಹ ಸಾಲದ ಸುಲಭ ಮರುಪಾವತಿಯಲ್ಲಿ ಈಗಾಗಲೇ ಹೆಚ್ಚಿನವು ಮರುಪಾವತಿಯಾಗಿದೆ.ಕೈಯಲ್ಲಿ ಗಟ್ಟಿಯಾದ ಚಿನ್ನ ಉಳಿದಿದೆ. ಅವುಗಳ ಅಂದಾಜು ಮೌಲ್ಯ ಸುಮಾರು ರೂ. 12,000 ಕೋಟಿ ಆಗುವಂತಾದರೆ ಪೂಜ್ಯ ಶ್ರೀ ಹೆಗ್ಗಡೆಯವರು ಬಡವರ ಕಲ್ಯಾಣಕ್ಕಾಗಿ ಮಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಸಾರ್ಥಕತೆಯ ಅನೇಕ ಸಾಧನೆಯ ಹೆಜ್ಜೆಗಳಲ್ಲಿ ಇದೂ ಒಂದು ಪ್ರಮುಖ ಭಾಗವಾಗುತ್ತದೆ.

Facebook
Twitter
WhatsApp
LinkedIn
Telegram