ಜೀವಜಲ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ನೀರು ಉಳಿಸಿ’ ಎಂಬ ಅಭಿಯಾನ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆರಂಭಗೊAಡಿದೆ. ಇಂದಿನ ದಿನಮಾನಕ್ಕೆ ಇದು ಅತ್ಯಂತ ಅಗತ್ಯವಾದ ಕಾರ್ಯಕ್ರಮ. ‘ಹನಿಗೂಡಿ ಹಳ್ಳ’ ಎಂಬ ಮಾತಿದೆ. ಹನಿ - ಹನಿ ಸೇರಿದಾಗ ಹೇಗೆ ಹಳ್ಳವಾಗಲು ಸಾಧ್ಯವಿದೆಯೋ ಹಾಗೆಯೇ ಹನಿ ಹನಿಯಾಗಿ ನೀರು ಸೋರಿದಾಗಲೂ ಹಳ್ಳದಷ್ಟು ನೀರು ವ್ಯರ್ಥವಾಗುವುದಕ್ಕೆ ಸಾಧ್ಯವಿದೆ. ಹೆಚ್ಚಿನ ಮನೆಗಳಲ್ಲಿ ಅಡುಗೆ ಮನೆ, ಸ್ನಾನದ ಮನೆ ಹೀಗೆ ಎಲ್ಲಾದರೊಂದು ಕಡೆ ಸೋರುವ ನಳ್ಳಿಗಳು ಇದ್ದೇ ಇರುತ್ತವೆ. ಆದರೆ ಅತ್ತ ಕಡೆ ಮನೆಯವರು ಗಮನ ಕೊಡುವುದು ಕಡಿಮೆ. ಜೊತೆಗೆ ಬೇಕಾದಾಗ ರಿಪೇರಿಯವರೂ ಸಿಗುವುದಿಲ್ಲ. ಇತ್ತೀಚೆಗೆ ಪತ್ರಿಕೆಯಲ್ಲೊಂದು ಬಂದ ವರದಿ ಹೀಗಿತ್ತು. ಓರ್ವ ವಯಸ್ಸಾದ ವ್ಯಕ್ತಿ ಕೈಯಲ್ಲೊಂದು ಬ್ಯಾಗ್ ಹಿಡಿದುಕೊಂಡು ಎಲ್ಲಿ ಸೋರುವ ನಳ್ಳಿಗಳಿರುತ್ತವೆಯೋ ಅಲ್ಲಿಗೆ ಹೋಗಿ ಧರ್ಮಾರ್ಥವಾಗಿ ನಳ್ಳಿ ರಿಪೇರಿ ಮಾಡಿ ಬರುತ್ತಿದ್ದರಂತೆ. ಅವರು ಹೇಳುತ್ತಿದ್ದರು,ನನಗೆ ಸೋರುವ ನಳ್ಳಿ ಶಬ್ದ ಕೇಳಿದ್ರೆ ಮೈಯ ರಕ್ತವೇ ಸೋರಿ ಹೋದಂತೆ ಅನ್ನಿಸುತ್ತದೆ. ಅದಕ್ಕಾಗಿ ನನ್ನ ಈ ಸೇವೆ’ ಎಂದು. ಸಾರ್ವಜನಿಕವಾಗಿ ಅಂದರೆ ಶಾಲೆ, ಕಲ್ಯಾಣ ಮಂಟಪ, ವಸತಿ ಛತ್ರ ಇಲ್ಲೆಲ್ಲಾ ನಳ್ಳಿಗಳು ಸೋರುತ್ತಿದ್ದರೆ ಅದನ್ನು ಗಮನಿಸುವವರೇ ಇರುವುದಿಲ್ಲ. ಯಾಕೆಂದರೆ ಅದು ನಮ್ಮ ಸ್ವಂತದ್ದಲ್ಲ ಎಂಬ ಅಸಡ್ಡೆಯ ಭಾವನೆ. ದಿನನಿತ್ಯದ ಸಣ್ಣ ಪುಟ್ಟ ಕೆಲಸಗಳು ಅಂದರೆ ಕೈ ತೊಳೆಯುವುದು, ಶೇವಿಂಗ್, ಸ್ನಾನ, ಬಟ್ಟೆ ಒಗೆಯುವುದು ಇಂಥಾ ಕಡೆಗಳಲ್ಲೆಲ್ಲಾ ಅನಗತ್ಯವಾಗಿ ನೀರನ್ನು ಪೋಲು ಮಾಡದೆ ಮಿತಬಳಕೆ ಮಾಡಬೇಕಿದೆ.
ಹಿಂದೆ ಎಲ್ಲದಕ್ಕೂ ನೀರನ್ನು ಬಾವಿಯಿಂದ ಎಳೆದೇ ಉಪಯೋಗಿಸಲಾಗುತ್ತಿತ್ತು. ಆಗ ಮಿತ ಬಳಕೆ ಬಗ್ಗೆ ತಿಳಿಹೇಳಬೇಕಾದ ಅಗತ್ಯವಿರಲಿಲ್ಲ. ಈಗಿನಂತೆ ಸ್ಪಿçಂಕ್ಲರ್, ಜೆಟ್‌ಗಳಿಲ್ಲದ ಆ ಕಾಲದಲ್ಲಿ ತೆಂಗಿನ ಮರದ ಬುಡಕ್ಕೆ ಸಣ್ಣಗೆ ತೂತು ಮಾಡಿದ ಮಡಕೆಯನ್ನಿಟ್ಟು ಅದಕ್ಕೆ ನೀರು ತುಂಬಿಸಿಡಬೇಕಾಗಿತ್ತು. ಹಿಂದಿನ ಕಾಲದಲ್ಲಿ ಒಂದು ಬಕೆಟ್ ನೀರು ಇಟ್ಟುಕೊಂಡು ತೆಂಗಿನ ನಾರಿನ ಕವಚದ ಮೂಲಕ ದನ – ಕರುಗಳನ್ನು ಉಜ್ಜಿ ತೊಳೆಯುತ್ತಿದ್ದರು. ಆದರೆ ಈಗ ದೂರದಲ್ಲಿ ನಿಂತು ಪೈಪ್ ಮೂಲಕ ನೀರು ಹಾರಿಸಿ ತೊಳೆಯುತ್ತಾರೆ. ಇದರಿಂದಾಗಿ ಇಲ್ಲೂ ಅಗತ್ಯಕ್ಕಿಂತ ಹೆಚ್ಚು ನೀರು ಖರ್ಚಾಗುತ್ತದೆ. ಉಪಯೋಗಕ್ಕಿಂತ ಹೆಚ್ಚು ಪೋಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೀಗೆಲ್ಲಾ ಖರ್ಚಾಗುವ ನೀರಿಗೆ ಲೆಕ್ಕವೇ ಇಲ್ಲವಾಗಿದೆ.
‘ಸಮುದ್ರದಲ್ಲಿ ನೀರು ಎಷ್ಟಿದ್ದರೇನು?! ಅದು ಜಿಪುಣನಲ್ಲಿರುವ ಹಣದಂತೆ ನಿರರ್ಥಕ’ ಎಂಬ ಮಾತಿತ್ತು. ಈಗ ಸಮುದ್ರ ನೀರನ್ನೂ ಸಿಹಿಯಾಗಿಸಿ ಉಪಯೋಗಿಸುವ ಪ್ರಯತ್ನ ನಡೆದಿದೆ. ಆದರೆ ನೀರಿನ ದುರ್ಬಳಕೆ ಇದೇ ರೀತಿ ಮುಂದುವರಿದರೆ ಮನುಷ್ಯನ ಈ ದಾಹಕ್ಕೆ ಸಮುದ್ರದ ನೀರೂ ಸಾಲದು!. ದಿನೇ ದಿನೇ ಆಳಕ್ಕೆ ಹೋಗಿ ಭೂಗರ್ಭದ ಒಡಲನ್ನೇ ಬಸಿದು ನೀರನ್ನು ಮೇಲಕ್ಕೆ ಎತ್ತಿದ್ದಾಯ್ತು, ಬೋರ್‌ವೆಲ್‌ನಲ್ಲಿ ಒಮ್ಮೆ ನೀರು ಬಂದರೆ ಮತ್ತೆ ಬೋರ್ ಬತ್ತಿ ಹೋಗುವವರೆಗೆ ನಿರಂತರ ನೀರಿನ ಬಳಕೆ ಮಾಡಿದ್ದಾಯ್ತು. ಆದರೆ ಒಂದು ಹನಿ ನೀರನ್ನು ಸೃಷ್ಟಿಸಲಾಗದ ನಾವು ಸೃಷ್ಟಿಯ ವರವಾದ ನೀರನ್ನು ಎಷ್ಟು ಪೋಲು ಮಾಡುತ್ತಿದ್ದೇವೆ ಎಂಬುದನ್ನು ಒಮ್ಮೆ ಯೋಚಿಸಬೇಕಾಗಿದೆ.
ಹಿಂದೆ ನಮ್ಮ ಮನೆ ಅಂಗಳ, ಹಿತ್ತ್ತಿಲು, ಗದ್ದೆ, ರಸ್ತೆ, ತೋಡುಗಳು ಮಳೆಗಾಲದ ನೀರನ್ನು ಇಂಗಿಸುವ ಇಂಗು ಗುಂಡಿಗಳoತೆ ಕೆಲಸ ಮಾಡುತ್ತಿದ್ದವು. ಈಗ ಮನೆ ಅಂಗಳಕ್ಕೆ ಇಂಟರ್‌ಲಾಕ್, ಸಿಮೆಂಟ್, ರಸ್ತೆಗಳಿಗೆ ಡಾಂಬರು ಹಾಕಿರುವ ಕಾರಣ ನೀರಿಂಗುವಿಕೆ ಕಡಿಮೆ ಆಗಿದೆ.
ರಾಜಸ್ಥಾನದ ಮರುಭೂಮಿಯಲ್ಲಿ ಹೆಣ್ಣು ಮಕ್ಕಳ ಅರ್ಧ ಆಯುಷ್ಯ ನೀರು ಹೊರುವುದರಲ್ಲೆ ಸವೆದು ಹೋಗುತ್ತದೆಯಂತೆ. ಅಲ್ಲಿ ಹೆಂಡತಿಗೆ ವಯಸ್ಸಾದಾಗ ಗಂಡನಿಗೆ ಇನ್ನೊಂದು ಮದುವೆ ಆಗುವಂತೆ ಒತ್ತಾಯಿಸಿ ನೀರು ಹೊರುವ ಕೆಲಸವನ್ನು ಅವಳಿಗೆ ದಾಟಿಸುವ ಕೆಲಸವು ನಡೆಯುತ್ತದೆಯಂತೆ. ಒಂದು ಬಾರಿ ಅಲ್ಲಿನ ಒಂದು ಮನೆಗೆ ಭೇಟಿ ನೀಡಿದಾಗ ಮನೆ ಒಳಗಿನ ಅಂಗಳದಲ್ಲೊoದು ಕಲ್ಲು ಹಾಕಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಆ ಕಲ್ಲಿನಲ್ಲಿ ಕುಳಿತು ಸ್ನಾನ ಮಾಡಿ ಮತ್ತೆ ಅದೇ ನೀರನ್ನು ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಹೀಗೆ ಮರುಬಳಕೆ ಮಾಡಲಾಗುತ್ತದೆ ಎಂದು ತಿಳಿದು ಬಂತು. ಇದೊಂದು ಉತ್ತಮ ಪ್ರಯತ್ನ.
ಈಗಲಾದರೂ ನಾವು ಎಚ್ಚೆತ್ತುಕೊಂಡು ನೀರಿನ ಮಿತ ಬಳಕೆ ಮತ್ತು ಜಲ ಮೂಲದ ರಕ್ಷಣೆಯ ಬಗ್ಗೆ ಮಕ್ಕಳಿಗೆ ಬಾಲ್ಯದ ದಿನಗಳಿಂದಲೆ ಮಾಹಿತಿಯನ್ನು ನೀಡಬೇಕು. ಶಾಲಾ – ಕಾಲೇಜಿನ ಮಕ್ಕಳಿಗೂ ಈ ಬಗ್ಗೆ ಮಾಹಿತಿಕೊಟ್ಟು ಅವರಲ್ಲಿ ಜಾಗೃತಿ ಬೆಳೆಸಬೇಕಾಗಿದೆ. ದೊಡ್ಡವರನ್ನು ಅವರೇ ಎಚ್ಚರಿಸುವಂತೆ ಮಾಡಬೇಕು.
ನೀರಿನ ಮಿತ ಬಳಕೆ ಅಭಿಯಾನ ಜನ – ಜನಗಳ, ಮನೆ – ಮನೆಗಳ, ಊರಿನ ಅಭಿಯಾನ ಆಗಬೇಕು ಎಂಬ ಸಂಕಲ್ಪ ನಮ್ಮದಾಗಬೇಕು. ಹಾಗಾದಾಗ ಬರಿದಾಗುತ್ತಿರುವ ಜಲವೆಂಬ ಸಂಪನ್ಮೂಲವನ್ನು ನಮ್ಮ ಮುಂದಿನ ಜನಾಂಗಕ್ಕೂ ಉಳಿಸಬಹುದಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *