ಜೈ ಯುವ ಭಾರತ – ಜೈ ನವ ಭಾರತ

ಶ್ರೀ ಅನಿಲ್ ಕುಮಾರ್ ಎಸ್.ಎಸ್.

ಮೂವತ್ತೈದು ವರ್ಷದೊಳಗಿನ ಸುಮಾರು ಎಂಭತ್ತು ಕೋಟಿ ಯುವಜನತೆಯಿಂದಾಗಿ ನಮ್ಮ ದೇಶ ‘ಯುವ ಭಾರತ’ ಎಂದು ವಿಶ್ವದಲ್ಲಿ ಮಾನ್ಯತೆಯನ್ನು ಹೊಂದಿದೆ. ಈ ಯುವಶಕ್ತಿ ಒಂದು ರೀತಿಯಲ್ಲಿ ನಮ್ಮ ದೇಶಕ್ಕೆ ವರದಾನ. ಸದೃಢಕಾಯ ಮತ್ತು ಆರೋಗ್ಯವಂತ ದೇಹ, ತೀಕ್ಷ÷್ಣ ಬುದ್ಧಿವಂತಿಕೆಯನ್ನೂ ಹೊಂದಿರುವ ಯುವಜನತೆಯಿಂದಾಗಿ ಒಂದು ದೇಶದಲ್ಲಿ ಅಪರಿಮಿತವಾದ ಸಂಪನ್ಮೂಲಗಳನ್ನು ಸೃಷ್ಟಿಸಲು ಸಾಧ್ಯವಿದೆ. ದೇಶದ ಜಿ.ಡಿ.ಪಿ.ಗೆ ಕಾರಣೀಭೂತವಾದ ಕೃಷಿ, ಉತ್ಪಾದಕ ಚಟುವಟಿಕೆ ಹಾಗೂ ಸೇವಾ ವಲಯದಲ್ಲಿ ಇಂದು ಯುವಜನತೆಯದ್ದೇ ಮೇಲುಗೈ. ಎಷ್ಟೋ ದೊಡ್ಡ ದೊಡ್ಡ ಕಂಪೆನಿಗಳ ಆಡಳಿತ ವ್ಯವಸ್ಥೆಯಲ್ಲಿ ಯುವ ನಿರ್ದೇಶಕರಿರುವುದು ಇಂದು ಸಾಮಾನ್ಯವಾದ ವಿಚಾರವಾಗಿದೆ. ವಿಜ್ಞಾನಿಗಳು, ವೈದ್ಯರು, ವಕೀಲರು, ಲೆಕ್ಕಪರಿಶೋಧಕರಿರಲಿ ಇಂತಹ ಯಾವುದೇ ವೃತ್ತಿಪರ ಸೇವೆಗಳಲ್ಲೂ ಕೂಡಾ ಯುವಕರ ಪಡೆ ಬಲು ದೊಡ್ಡದಿದೆ. ಸೈನ್ಯ, ಪೊಲೀಸ್ ಹಾಗೂ ಇತರ ತನಿಖಾದಳದಲ್ಲಂತೂ ಕೇಳುವುದೇ ಬೇಡ. ಆಶ್ಚರ್ಯಕರ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಇಂದಿನ ಕೃಷಿ ಚಟುವಟಿಕೆಯಲ್ಲೂ ಕೂಡಾ ಇಂದು ಯುವ ಪ್ರತಿಭೆಗಳು ಮೊಳಕೆಯೊಡೆದು ಚಿಗುರುತ್ತಿವೆ. ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಇತರ ಎಲ್ಲಾ ಚಟುವಟಿಕೆಗಳಲ್ಲಿ, ಅಂದರೆ ಸಣ್ಣಪುಟ್ಟ ಗುಡಿ ಕೈಗಾರಿಕೆಗಳು, ಆರ್ಥಿಕ ಚಟುವಟಿಕೆಗಳು, ಕೃಷಿಯೇತರ ಚಟುವಟಿಕೆಗಳು ಇತರೆ ಸ್ವಉದ್ದಿಮೆಗಳಲ್ಲಿಯೂ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಬಹಳಷ್ಟು ಜಾಸ್ತಿಯಾಗುತ್ತಿದೆ. ಈಗ ಈ ಬಿಸಿ ರಾಜಕೀಯ ರಂಗಕ್ಕೂ ತಲುಪುತ್ತಿದೆ. ಯುವ ರಾಜಕೀಯ ಮುಖಂಡರು ಇಂದು ಸುಲಭವಾಗಿ ವಿಧಾನಸಭೆ, ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಕೇವಲ ವಯಸ್ಸು ಮತ್ತು ಯೌವ್ವನ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರ್ಣ ಮಾನದಂಡವಾಗಿದೆ ಎನ್ನುವ ಬದಲಾಗಿ ಎಂತಹ ಮೌಲ್ಯಯುತವಾದ ಯುವಜನತೆಯನ್ನು ಆ ದೇಶ ಹೊಂದಿದೆ ಎನ್ನುವುದು ಬಹಳ ಮುಖ್ಯವಾದ ವಿಚಾರ. ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ನಮ್ಮ ದೇಶದ ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿಯೂ ಯುವಜನತೆಯು ಸಮಾಜದ ಆಧಾರ ಸ್ತಂಭವಾಗಿರುವುದು ಸ್ಪಷ್ಟವಾಗಿ ಕಂಡಿದೆ. ಹಾಗೆಯೇ ಆ ಆಧಾರಸ್ತಂಭಗಳು ನೈತಿಕ ಮೌಲ್ಯಗಳ ಬಲಿಷ್ಠವಾದ ಅಡಿಪಾಯದಲ್ಲಿ ನಿಂತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆದ್ದರಿಂದಲೇ ನಮ್ಮ ಪೂರ್ವಜರ ಕಾಲಘಟ್ಟದಲ್ಲಿದ್ದ ಸಮಾಜವು ಅತ್ಯಂತ ಸ್ವಾಸ್ಥö್ಯ ಸಮಾಜವಾಗಿತ್ತು. ಅಂದಿನ ಮಕ್ಕಳು ಬೆಳೆಯುತ್ತಿದ್ದ ಮನೆಯ ವಾತಾವರಣದಿಂದ ಹಿಡಿದು, ಕಲಿಯುವ ಗುರುಕುಲ, ಮುಂದೆ ಬೆರೆಯುವ ಸಮಾಜ ಎಲ್ಲೆಲ್ಲಿಯೂ ಉನ್ನತ ಮೌಲ್ಯಗಳೇ ತುಂಬಿಕೊoಡಿದ್ದವು. ಆಧ್ಯಾತ್ಮಿಕ ಆಚಾರ – ವಿಚಾರಗಳು ಈ ಮೌಲ್ಯಗಳನ್ನು ಗಟ್ಟಿಗೊಳಿಸಿ ಸದಾ ಪ್ರಖರತೆಯಲ್ಲಿ ಇರಿಸುತ್ತಿತ್ತು. ಇಂತಹ ಪ್ರಖರತೆ ಹೊಂದಿದ ಯುವಜನತೆಯ ರಕ್ತವು ಎಷ್ಟೇ ಬಿಸಿಯಾಗಿದ್ದರೂ ಕೂಡಾ ಅದು ಸಮಾಜದ ಸ್ವಾಸ್ಥö್ಯವನ್ನು ಎಂದಿಗೂ ಕಾಪಾಡುವುದಕ್ಕೆ ಮೀಸಲಾಗಿತ್ತು.
ಇಂದಿನ ಮಕ್ಕಳು, ಯುವಜನತೆ ಬೆಳೆಯುತ್ತಿರುವ ವಾತಾವರಣದಲ್ಲಿ ಪಡೆಯುತ್ತಿರುವ ಶಿಕ್ಷಣದ ವ್ಯವಸ್ಥೆಯನ್ನು ಹಾಗೂ ಬೆರೆಯುತ್ತಿರುವ ಸಮಾಜದ ವ್ಯವಸ್ಥೆಯಲ್ಲಿ ಉತ್ತಮ ಬದುಕನ್ನು ರೂಪಿಸುವ ನೈತಿಕ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಆದ್ಯತೆ ಕೊಡಲಾಗಿದೆ ಎಂಬುದು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ. ಯಾವುದೇ ಕಷ್ಟಗಳು ತಮ್ಮ ಮಕ್ಕಳ ಅನುಭವಕ್ಕೆ ಬರಬಾರದೆಂದು ಎಲ್ಲಿಲ್ಲದ ಮುದ್ದಿನಿಂದ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುತ್ತಿರುವುದು, ಕೇವಲ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವ ಪ್ರಮುಖ ಉದ್ದೇಶದೊಂದಿಗಿನ ಶಿಕ್ಷಣದ ವ್ಯವಸ್ಥೆ, ಐಶಾರಾಮಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವಂತಹ ಸಮಾಜದಲ್ಲಿ ಎಷ್ಟರಮಟ್ಟಿನ ಜೀವನ ಮೌಲ್ಯಗಳನ್ನು ಪಡೆಯಲು ಸಾಧ್ಯವಿದೆ ಎನ್ನುವುದನ್ನು ನಾವಿಂದು ಯೋಚಿಸಬೇಕಾಗಿದೆ. ಧೂಮಪಾನ, ಮದ್ಯಪಾನ, ಡ್ರಗ್ಸ್ಗಳಂಹ ವಿಷಯಗಳು ಯುವಜನತೆಯನ್ನು ಫ್ಯಾಷನ್ ರೂಪದಲ್ಲಿ ಆಕರ್ಷಿಸುತ್ತಿದೆ. ಅಂದಿನ ಸಿನೆಮಾಗಳಲ್ಲಿ ಸಿಗರೇಟ್, ಮದ್ಯದ ಬಾಟಲಿಗಳು ಖಳನಾಯಕನ ಕೈಯಲ್ಲಿ ಇರುತ್ತಿದ್ದವು, ಆದರೆ ಇಂದಿನ ಸಿನಿಮಾಗಳಲ್ಲಿ ಅವುಗಳು ನಾಯಕ ನಟನ ಕೈಗೆ ಬಂದಿವೆ. ಕೋಟ್ಯಾಂತರ ರೂಪಾಯಿಗಳನ್ನು ಬುದ್ಧಿವಂತಿಕೆಯಿoದ ಲೂಟಿ ಮಾಡುವಂತಹ ನಾಯಕ ಪಾತ್ರಗಳು ಹಾಗೂ ಅತ್ಯಂತ ಹಿಂಸಾತ್ಮಕ ದೃಶ್ಯಗಳನ್ನೊಳಗೊಂಡ ಎಷ್ಟೋ ಸಿನಿಮಾಗಳು ಸಾಮಾನ್ಯವಾಗಿ ಹೊರ ಬರುತ್ತಿವೆ. ಇದರಿಂದ ಪ್ರಚೋದನೆಗೊಳ್ಳುವಂತಹ ಯುವಜನತೆಯ ಮನೋಸ್ಥಿತಿ ಹೇಗಿರಬಹುದೆಂದು ಊಹಿಸಲು ಅಸಾಧ್ಯ. ಇಂತಹ ವಾತಾವರಣದಲ್ಲಿ ಬೆಳೆಯುತ್ತಿರುವ ಯುವ ಜನತೆ ತಪ್ಪು ಹಾದಿ ಹಿಡಿಯುತ್ತಿದ್ದಲ್ಲಿ, ಅವರನ್ನೇ ದೂಷಿಸುವುದು ಖಂಡಿತಾ ತಪ್ಪು. ಏಕೆಂದರೆ ಇದರಲ್ಲಿ ಎಲ್ಲರ ಪಾತ್ರವೂ ಇದೆ.
ಇಂದಿನ ಯುವಜನತೆಯಲ್ಲಿ ಮುಗ್ಧತೆಯ ಮನಸ್ಸಿರುವುದು ಖಂಡಿತ ಸತ್ಯ. ಆದರೆ ದುಡುಕು ಸ್ವಭಾವವೂ ಇದೆ. ಯುವಜನತೆಯ ಬಿಸಿ ರಕ್ತವು ಅವರ ತೋಳುಗಳಲ್ಲಿ ಸಂಚರಿಸುವುದಕ್ಕಿoತಲೂ ಜಾಸ್ತಿ ಅವರ ಮೆದುಳಲ್ಲಿ ಸಂಚರಿಸಲಿ ಎಂದು ಆಶಿಸೋಣ. ಮುಗ್ಧ ಯುವಜನತೆ ಎಲ್ಲೋ ದುಡುಕು ಸ್ವಭಾವದಿಂದ ಸತ್ಯ – ಅಸತ್ಯವನ್ನು ಅರಿಯುವುದರಲ್ಲಿ ಸೋಲುತ್ತಿದ್ದಾರೆ. ಒಳಿತು – ಕೆಡುಕುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊoಡು ಕೆಲವು ಸಮಾಜಘಾತುಕ ಶಕ್ತಿಗಳು ಈ ದೇಶದ ಸಮೃದ್ಧ ಆಸ್ತಿಯಾಗಬೇಕಾಗಿರುವ ಯುವಜನತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸುತ್ತಿದ್ದಾರೆ. ಪೋಷಕರು, ಪ್ರಜ್ಞಾವಂತ ನಾಗರಿಕರು ಈ ಮುಗ್ಧ ಯುವಜನತೆಯನ್ನು ಸೃಜನಾತ್ಮಕ ವಿಷಯದೆಡೆಗೆ ಸೆಳೆಯುವ ಮಹತ್ತರ ಜವಬ್ದಾರಿಯನ್ನು ಹೊರಬೇಕಾಗಿದೆ. ಪ್ರೀತಿ, ಸಲುಗೆ, ಗೆಳತನದಿಂದ ಮುಗ್ಧ ಯುವಜನತೆಯ ಜೊತೆಗೆ ಬೆರೆಯಬೇಕಾಗಿದೆ. ತಮ್ಮ ಅನುಭವಗಳನ್ನು ಅವರಿಗೆ ಧಾರೆಯೆರೆಯಬೇಕಾಗಿದೆ. ಇಂತಹ ವಾತಾವರಣದಲ್ಲಿ ಆ ಮುಗ್ದ ಮನಸ್ಸುಗಳು ತಾಳ್ಮೆಯಿಂದ ಸತ್ಯ – ಅಸತ್ಯಗಳನ್ನು, ಒಳಿತು – ಕೆಡುಕುಗಳನ್ನು ವಿಮರ್ಶಾತ್ಮಕವಾಗಿ ಹಾಗೂ ಸತ್ಯಾಧಾರಿತವಾಗಿ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ತನ್ಮೂಲಕ ಉನ್ನತ ಜೀವನ ಮೌಲ್ಯಗಳನ್ನು ಹಾಗೂ ಸೃಜನಾತ್ಮಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಆಗ ಮಾತ್ರ ‘ಯುವ ಭಾರತದ ನವ ಭಾರತ ಯುಗ ಪ್ರಾರಂಭವಾಗುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *