ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ದೋಣಿಯೊಂದರಲ್ಲಿ ಒಂದಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಜೋರಾಗಿ ಬೀಸಿದ ಬಿರುಗಾಳಿಗೆ ಸಿಲುಕಿ ದೋಣಿ ಮಗುಚಿ ಬೀಳುತ್ತದೆ. ದೋಣಿಯಲ್ಲಿದ್ದ ಕೆಲವರು ನೀರು ಪಾಲಾಗುತ್ತಾರೆ. ಅವರಲ್ಲಿ ಇಬ್ಬರು ವ್ಯಕ್ತಿಗಳು ಈಜುತ್ತಾ ಹೇಗೋ ದಡ ಸೇರುತ್ತಾರೆ. ಅವರಲ್ಲೊಬ್ಬ ತನ್ನಲ್ಲಿದ್ದ ಕಂಪ್ಯೂಟರ್ ಅನ್ನು ನೀರು ತಾಗಿದರೂ ಒದ್ದೆಯಾಗದ ಬ್ಯಾಗ್ನಲ್ಲಿ ಇಟ್ಟಿದ್ದರಿಂದ ಅದು ಸುರಕ್ಷಿತವಾಗಿರುತ್ತದೆ. ಇನ್ನೊಬ್ಬನ ಕೈಯಲ್ಲಿ ಕೊಳಲು ಇರುತ್ತದೆ. ಅದೂ ಕೂಡ ಸುರಕ್ಷಿತವಾಗಿರುತ್ತದೆ. ಇಬ್ಬರು ದಡ ಸೇರಿದ ಕೆಲವೇ ಕ್ಷಣಗಳಲ್ಲಿ ಒಡೆದ ದೋಣಿ ಕೂಡ ದಡ ಸೇರುತ್ತದೆ. ನದಿ ದಡದಲ್ಲಿ ಅಂದರೆ ಯಾರೂ ಇಲ್ಲದ ಆ ನಿರ್ಜನ ಪ್ರದೇಶದಲ್ಲಿ ಏನು ಮಾಡುವುದೆಂದು ಇಬ್ಬರಿಗೂ ತಿಳಿಯುವುದಿಲ್ಲ. ಅವರಲ್ಲಿ ಓರ್ವ ಬ್ಯಾಗ್ನಿಂದ ಕೊಳಲನ್ನು ತೆಗೆದು ಊದಲು ಆರಂಭಿಸುತ್ತಾನೆ. ಆಗ ದೂರದಲ್ಲಿದ್ದ ಒಂದಷ್ಟು ಮಂದಿ ಇಂಪಾದ ಕೊಳಲ ಧ್ವನಿಗೆ ಮಾರು ಹೋಗಿ ನದಿ ದಡದ ಬಳಿ ಬರುತ್ತಾರೆ. ಆಗ ಮತ್ತೋರ್ವ ತನ್ನ ಬಳಿ ಇರುವ ಕಂಪ್ಯೂಟರ್ ಅನ್ನು ಆನ್ ಮಾಡಿ ಈ ಕಂಪ್ಯೂಟರ್ನಿoದ ಏನೆಲ್ಲಾ ಮಾಡಲು ಸಾಧ್ಯವಿದೆ ಎಂಬುವುದನ್ನು ಅಲ್ಲಿ ಬಂದವರಿಗೆ ವಿವರಿಸಲು ಪ್ರಯತ್ನಿಸುತ್ತಾನೆ. ಆದರೆ ಆ ತಾಂತ್ರಿಕತೆ ಅವರಿಗೆ ಅರ್ಥವಾಗುವುದಿಲ್ಲ. ಆದರೆ ಕೊಳಲಿನ ಮಾಧುರ್ಯಕ್ಕೆ ಅವರು ಸಂಪೂರ್ಣವಾಗಿ ಮನಸೋಲುತ್ತಾರೆ ಮಾತ್ರವಲ್ಲ, ಸಂತೋಷದಿoದ ಅವರಿಗೆ ತಿನ್ನಲು ಬೇಕಾದ ಹಣ್ಣು ಹಂಪಲುಗಳನ್ನು ತಂದುಕೊಡುತ್ತಾರೆ. ಇವರಿಬ್ಬರು ಆಡುವ ಭಾಷೆ ಅಲ್ಲಿ ಸೇರಿದವರಿಗೆ ಅರ್ಥ ಆಗದಿದ್ದರೂ ಒಡೆದ ದೋಣಿಯನ್ನು ಕಂಡು ಅದನ್ನು ರಿಪೇರಿ ಮಾಡಿಕೊಡುತ್ತಾರೆ. ಕೊನೆಗೆ ಅವರಿಗೆ ಕೃತಜ್ಞತೆ ಸಲ್ಲಿಸಿ ಇಬ್ಬರು ದೋಣಿಯನ್ನೇರಿ ತಮ್ಮ ಊರನ್ನು ಸೇರಿಕೊಳ್ಳುತ್ತಾರೆ.
ಇಂದು ಆಧುನಿಕತೆಯ ಮೋಡಿಗೊಳಗಾಗಿ ಮಕ್ಕಳು ತಮ್ಮ ಸುಂದರ ಬಾಲ್ಯವನ್ನು ಕಳೆದುಕೊಂಡಿದ್ದಾರೆ. ಆಟ ಆಡುವ ಮನಸ್ಸಿಲ್ಲ. ಯಾವುದೇ ವಿಚಾರಗಳು ಅವರಲ್ಲಿ ವಿಸ್ಮಯವನ್ನುಂಟು ಮಾಡುವುದಿಲ್ಲ. ಮನೆ ಊಟವಂತೂ ರುಚಿಸುವುದೇ ಇಲ್ಲ. ಅದೇ ಒಂದು ಕಾಲದಲ್ಲಿ ಮಕ್ಕಳನ್ನು ಆಟದ ಬಯಲಿನಿಂದ ಮನೆಗೆ ಕರೆ ತರುವುದೇ ದೊಡ್ಡ ಸಾಹಸವಾಗಿತ್ತು. ಊರ ಜಾತ್ರೆ, ಗದ್ದೆ ಕೊಯ್ಲು, ಪ್ರಾಣಿಪಕ್ಷಿ, ಅಜ್ಜಿ ಹೇಳುವ ಕತೆ, ಒಗಟುಗಳು ಮಕ್ಕಳಿಗೆ ಮುದ ನೀಡುತ್ತಿದ್ದವು. ಮನೆ ಊಟದ ಜೊತೆಗೆ ವಿಶೇಷ ಸಂದರ್ಭಗಳಲ್ಲಿ ಮಾಡುವ ಪಾಯಸ, ಪಂಚಕಜ್ಜಾಯ, ಚಕ್ಕುಲಿ, ನಿಪ್ಪಟ್ಟು, ಹಪ್ಪಳ ಮಕ್ಕಳ ಮನಗೆಲ್ಲುತ್ತಿದ್ದುವು. ನೆಂಟರಿಷ್ಟರು ಬರುವಾಗ ತರುವ ಬಿಸ್ಕೆಟ್, ಚಾಕಲೇಟ್ಗಳು, ಅವರು ಖರ್ಚಿಗೆಂದು ಮಕ್ಕಳ ಕೈಯಲ್ಲಿಡುವ ಪುಡಿಕಾಸುಗಳು ಅವರ ಬಗ್ಗೆ ಪ್ರೀತಿ, ಗೌರವದ ಭಾವನೆಯನ್ನು ಮೂಡಿಸುತ್ತಿದ್ದವು.
ಇಂದು ಯುವಕರಂತೂ ಇಂಜಿನಿಯರಿoಗ್ ಅಥವಾ ಯಾವುದೇ ಪದವಿ ಮುಗಿಸಿ ಬೆಂಗಳೂರಿಗೆ ಸೇರಿಕೊಂಡರೆ ಅಲ್ಲಿಯ ಪ್ರಯಾಣ, ಕೆಲಸದ ಒತ್ತಡದಲ್ಲಿ ಹೈರಾಣಾಗಿ ಹೋಗುತ್ತಾರೆ. ಯೌವನದ ಜೀವನೋತ್ಸಾಹ, ಹುಮ್ಮಸ್ಸುಗಳೆಲ್ಲವನ್ನು ಬೇಗ ಕಳೆದುಕೊಳ್ಳುತ್ತಾರೆ. ಮನುಷ್ಯ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ತಮ್ಮ ಆಯಾಸ, ನಿರುತ್ಸಾಹ, ಖಿನ್ನತೆಯನ್ನು ಪರಿಹರಿಸಿಕೊಳ್ಳಬೇಕಾದರೆ ಯಾವುದಾದರೊಂದು ಕಲೆಯನ್ನು ತಮ್ಮದಾಗಿಸಿಕೊಳ್ಳಬೇಕು. ಸಂಗೀತ, ನಾಟಕ ಪುಸ್ತಕಗಳನ್ನು ಓದುವ ಹವ್ಯಾಸ, ಪ್ರವಾಸಗಳು, ಗಾಯನ, ವಾದ್ಯ ನುಡಿಸುವ, ಕ್ರೀಡೆಗಳಲ್ಲಿ ಭಾಗವಹಿಸುವ ಹುಮ್ಮಸ್ಸನ್ನು ಬೆಳೆಸಿಕೊಂಡಲ್ಲಿ ಸದಾ ನವೋಲ್ಲಾಸವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಹವ್ಯಾಸಗಳನ್ನು ಕರಗತ ಮಾಡಿಕೊಳ್ಳಲು ಅಸಾಧ್ಯವಾದರೆ ಯಾವುದಾದರೊಂದು ಕಲೆಯನ್ನು ನೋಡಿ ಆನಂದಿಸುವ ಹವ್ಯಾಸವನ್ನಾದರೂ ಬೆಳೆಸಿಕೊಂಡರೆ ಬದುಕು ಹಗುರವಾಗುತ್ತದೆ ಮತ್ತು ನಮ್ಮ ಭಾವ ಜಗತ್ತು ವಿಸ್ತಾರಗೊಳ್ಳುತ್ತದೆ. ಇದರಿಂದ ಮನುಷ್ಯ ಸಂವೇದನಶೀಲನಾಗುತ್ತಾನೆ. ಇಂಥಾ ಭಾವನೆ, ಸಂವೇದನೆಗಳಿಲ್ಲದಾಗ ಮನಸ್ಸು ಕೊರಡಿನಂತಾಗುತ್ತದೆ.
ಮೊನ್ನೆ ತಾನೆ ನವರಾತ್ರಿಗೆ ನಡೆದ ಸಂಗೀತ ಕಾರ್ಯಕ್ರಮಗಳ ಪಟ್ಟಿ ನೋಡಿದರೆ ಅದರಲ್ಲಿ ಹಾಡಿದವರೆಲ್ಲರೂ ಇಂಜಿನಿರ್ಸ್, ಡಾಕ್ಟುçಗಳೇ ಆಗಿದ್ದರು. ಅವರ ಕಲಾ ಪ್ರತಿಭೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವರು ತಮ್ಮ ಕಠಿಣ ಶಿಕ್ಷಣದ ಜೊತೆಗೆ ಬಾಲ್ಯದಿಂದಲೇ ಹಾಡುವ ಹವ್ಯಾಸವನ್ನು ತಮ್ಮದಾಗಿಸಿಕೊಂಡದ್ದು ಮಾತ್ರವಲ್ಲ, ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಬಂದು ಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅಂದರೆ ಸಂಗೀತದ ಮೇಲಿರುವ ಅವರ ಆಸಕ್ತಿಯೇ ಇದಕ್ಕೆಲ್ಲ ಕಾರಣ. ಜೊತೆಗೆ ಅವರಿಗೆ ಮನೆಮಂದಿಯ ಪ್ರೋತ್ಸಾಹವೂ ದೊರೆತಿದೆ.
ನಾವು ಪೂಜಿಸುವ ಶಿವ, ಸರಸ್ವತಿ, ಗಣಪತಿ ಇವರೆಲ್ಲ ಕಲೆಯ ಆರಾಧ್ಯ ದೇವರುಗಳು. ನಟರಾಜನ ಮೂರ್ತಿ ಇಲ್ಲದೆ, ಗಣಪತಿಯ ಪೂಜೆ ಮಾಡದೆ ನೃತ್ಯ ಆರಂಭವಾಗುವುದಿಲ್ಲ. ಹಾಗೆಯೇ ಸಂಗೀತದಲ್ಲೂ ಗಣಪತಿಯೇ ಪ್ರಥಮ ವಂದಿತ. ಶಾಲೆಗಳಲ್ಲಿ ಹಿಂದೆ ಪ್ರತಿವಾರ ಭಜನೆ ನಡೆಯುತ್ತಿದ್ದು ನವರಾತ್ರಿಯಲ್ಲಿ ಸರಸ್ವತಿಗೆ ಮಕ್ಕಳು ನಡೆಸುವ ಶಾರದಾ ಪೂಜೆ ವೇಳೆ ಶಾರದೆಯೊಂದಿಗೆ ಅವರ ಪಾಠ ಪುಸ್ತಕಗಳೂ ಪೂಜೆಗೊಳ್ಳುತ್ತಿದ್ದವು. ಮನೆಯಲ್ಲಿ ಓದುವ ಮಕ್ಕಳಿಗೆ ಮೊದಲಿಗೆ ಹೇಳಿ ಕೊಡುವ ಶ್ಲೋಕವೇ ‘ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣೀ ವಿದ್ಯಾರಂಭ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ’ ಎಂಬುದಾಗಿ. ಹೀಗೆ ಭಾರತೀಯ ಕಲೆಗೆ ಧಾರ್ಮಿಕ ಮಹತ್ವವೂ ಇದೆ. ಇಂಥಾ ಕಲೆಗಳು ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿಗಳನ್ನು ಕರುಣಿಸುವ ಜೊತೆಗೆ ನೋಡುವ, ಕೇಳುವ ಸೋತ್ರುಗಳಿಗೂ ಆನಂದವನ್ನುoಟು ಮಾಡುತ್ತವೆ.
ಇಂದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಯುಗ. ಆದರೆ ಕೃತಕ ಬುದ್ಧಿಮತ್ತೆಯನ್ನು ಯಾವುದಕ್ಕೆ, ಎಲ್ಲಿ, ಎಷ್ಟು ಬೇಕು ಅಷ್ಟಕ್ಕೆ ಮಾತ್ರ ಸೀಮಿತವಾಗಿಟ್ಟುಕೊಳ್ಳಬೇಕು. ಅವು ನಮ್ಮ ಗುಲಾಮರಾಗಿರುವಂತೆ ನೋಡಿಕೊಳ್ಳಬೇಕಲ್ಲದೆ ನಾವು ಅವುಗಳ ಗುಲಾಮರಾಗದಂತೆ ಎಚ್ಚರವಹಿಸಬೇಕು. ಆರೋಗ್ಯಪೂರ್ಣ ಹವ್ಯಾಸಗಳನ್ನು ಕರಗತ ಮಾಡಿಕೊಂಡು ನಮ್ಮ ಕಲೆಗಳನ್ನು ನಾವು ಉಳಿಸಿ ಬೆಳೆಸೋಣ.
