ರಾಜೀವ ಹೆಗಡೆ
ಭಾರತದ ಸಂವಿಧಾನದಲ್ಲಿ ರಾಷ್ಟçಪತಿಯನ್ನು ಪ್ರಥಮ ಪ್ರಜೆ ಎಂದು ಉಲ್ಲೇಖಿಸಿದರೆ, ನಂತರದ ಸ್ಥಾನ ಉಪರಾಷ್ಟçಪತಿಗೆ ಸಿಗುತ್ತದೆ. ಆದರೆ ಆಡಳಿತ ಹಾಗೂ ಕಾನೂನು ದೃಷ್ಟಿಯಲ್ಲೂ ಈ ಹುದ್ದೆ ಬಹುತೇಕ ಉತ್ಸವ ಮೂರ್ತಿಯ ಹುದ್ದೆಯಷ್ಟೇ. ಪ್ರಾಯೋಗಿಕವಾಗಿ ನೋಡಿದಾಗ ಉಪರಾಷ್ಟçಪತಿಗೆ ಇರುವ ಅತ್ಯಂತ ದೊಡ್ಡ ಜವಾಬ್ದಾರಿಯೆಂದರೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯನ್ನು ನಡೆಸುವುದು. ಈ ಸಭೆಗೆ ಅಧ್ಯಕ್ಷರಾಗಿರುವುದೇ ಉಪರಾಷ್ಟçಪತಿಗೆ ಇರುವ ಬಹು ದೊಡ್ಡ ಅಧಿಕಾರವಾಗಿದೆ. ಇಂತಹ ಹುದ್ದೆಯು ಇತ್ತೀಚೆಗೆ ಅಚಾನಕ್ಕಾಗಿ ಖಾಲಿಯಾಯಿತು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದ್ದರಿಂದ ಆ ಹುದ್ದೆಗೆ ಸಿ.ಪಿ. ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ನಡೆಯುವ ಚುನಾವಣೆಯು ಭಿನ್ನವಾಗಿರುತ್ತದೆ.
ರಾಷ್ಟçಪತಿ ಹುದ್ದೆಯಂತೆಯೇ ಉಪರಾಷ್ಟçಪತಿ ಹುದ್ದೆಯ ಅವಧಿಯೂ ಐದು ವರ್ಷದಾಗಿರುತ್ತದೆ. ಆದರೆ ಈ ರೀತಿ ಮಧ್ಯೆ ಚುನಾವಣೆ ನಡೆದರೂ ರಾಧಾಕೃಷ್ಣನ್ ಅವರ ಅವಧಿಯು ಐದು ವರ್ಷವೇ ಆಗಿರಲಿದೆ.
ಚುನಾವಣೆ ಪ್ರಕ್ರಿಯೆ ಹೇಗೆ? : ಉಪರಾಷ್ಟçಪತಿ ಹುದ್ದೆಗಾಗಿ ಚುನಾವಣಾ ಆಯೋಗವು ನೂತನ ಉಪರಾಷ್ಟçಪತಿ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸುತ್ತದೆ. ನಾಮಪತ್ರ ಸಲ್ಲಿಕೆಯಿಂದ ಮತಗಣನೆಯವರೆಗಿನ ಪ್ರಕ್ರಿಯೆ ಅಧಿಸೂಚನೆಯಂತೆ ನಡೆಯುತ್ತದೆ. ಉಪರಾಷ್ಟçಪತಿ ಹುದ್ದೆಗೆ ಅರ್ಹರಾಗಿರಬೇಕಿದ್ದರೆ ಕಡ್ಡಾಯವಾಗಿ ಭಾರತೀಯರಾಗಿರಬೇಕು ಹಾಗೂ 35 ವರ್ಷ ವಯಸ್ಸಾಗಿರಬೇಕು. ನಾಮಪತ್ರ ಸಲ್ಲಿಸುವಾಗ ಪ್ರಾಥಮಿಕವಾಗಿ 20 ಅನುಮೋದಕ ಸಂಸದರ ಸಹಿ ಇರಬೇಕು. ಇದರ ಜೊತೆಗೆ ಇನ್ನಿಪ್ಪತ್ತು ಸಂಸದರು ದ್ವಿತೀಯ ಅನುಮೋದಕರೂ ಆಗಿರಬೇಕು. ಈ ಅನುಮೋದಕರು ಇಲ್ಲವಾದಲ್ಲಿ ನಾಮಪತ್ರವು ತಿರಸ್ಕೃತವಾಗುತ್ತದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಮೇಲೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಸದ್ಯದ ಮಟ್ಟಿಗೆ ಉಪರಾಷ್ಟçಪತಿ ಚುನಾವಣೆಗೆ 788 ಮತದಾರರು ಇದ್ದಾರೆ. ಲೋಕಸಭೆಯ 543 ಹಾಗೂ ರಾಜ್ಯಸಭೆಯ 245 ಸದಸ್ಯರು ಮತದಾನಕ್ಕೆ ಅರ್ಹರಾಗಿರುತ್ತಾರೆ. ರಾಜ್ಯಸಭೆಗೆ ಆಯ್ಕೆಯಾಗುವ ನಾಮ ನಿರ್ದೇಶಿತ ಸದಸ್ಯರು ಕೂಡ ಮತದಾನದ ಹಕ್ಕನ್ನು ಪಡೆದಿರುತ್ತಾರೆ. ರಾಷ್ಟçಪತಿ ಚುನಾವಣೆಯಂತೆ ವಿಧಾನಸಭೆ ಸದಸ್ಯರು ಇಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ.
ಸoಸತ್ತಿನ ಸದಸ್ಯರ ಮತದಾನ ಪ್ರಕ್ರಿಯೆಗೂ ಹಲವು ನಿಯಮಗಳಿವೆ. ವಿಧಾನ ಪರಿಷತ್ ಚುನಾವಣೆಗೆ ಇರುವಂತೆ ಇಲ್ಲಿಯೂ ಆದ್ಯತೆಯ ಮತಗಳಿರುತ್ತವೆ. ಸಂಸದರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮೊದಲ ಆದ್ಯತೆಯ ಮತವನ್ನಂತೂ ಕಡ್ಡಾಯವಾಗಿ ಹಾಕಬೇಕು. ಆಸಕ್ತಿಯಿದ್ದಲ್ಲಿ ನಂತರದ ಆದ್ಯತೆಯನ್ನು ಉಲ್ಲೇಖಿಸಲು ಅವಕಾಶವಿರುತ್ತದೆ. ಒಂದೊಮ್ಮೆ ಮೊದಲ ಆದ್ಯತೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಮತಗಳು ಬರದಿದ್ದರೆ ನಂತರದ ಆದ್ಯತೆಯ ಲೆಕ್ಕಗಳು ಆಗುತ್ತವೆ. ಮೊದಲ ಆದ್ಯತೆಯಲ್ಲೇ ಗೆಲುವು ಸಾಧಿಸಿದರೆ ನಂತರದ ಆದ್ಯತೆಗಳಿಗೆ ಯಾವುದೇ ಮಾನ್ಯತೆ ಬರುವುದಿಲ್ಲ.
ಮೊನ್ನೆ ನಡೆದ ಚುನಾವಣೆಯಲ್ಲಿ 765 ಮತಗಳು ಚಲಾವಣೆಯಾಗಿದ್ದವು. ಕೆಲ ಪಕ್ಷಗಳು ಮತದಾನದಿಂದ ದೂರವಿದ್ದರಿಂದ ಶತಪ್ರತಿಶತ ಮತದಾನವಾಗಲಿಲ್ಲ. ಅದರಲ್ಲಿ ಎನ್ಡಿಎ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ ಅವರಿಗೆ 452 ಮತಗಳು ಬಂದರೆ, ಇಂಡಿ ಕೂಟದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿಗೆ 300 ಮತಗಳು ಬಂದವು. ಅಚ್ಚರಿಯ ವಿಷಯವೆಂದರೆ 15 ಮತಗಳು ತಿರಸ್ಕೃತಗೊಂಡವು. ಸಂಸದರ ಮತಗಳು ಕೂಡ ತಿರಸ್ಕೃತವಾಗುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ತಿರಸ್ಕೃತವಾಗಿದ್ದೇಕೆ? : ಉಪರಾಷ್ಟçಪತಿ ಚುನಾವಣೆಯನ್ನು ಮತಚೀಟಿಯ ಮೂಲಕ ಮಾಡಲಾಗುತ್ತದೆ. ಇಲ್ಲಿ ಇ.ವಿ.ಎ.ಗಳನ್ನು ಬಳಸುವುದಿಲ್ಲ. ಹೀಗಾಗಿ ಮತಚೀಟಿಯಲ್ಲಿ ಸಣ್ಣ ಎಡವಟ್ಟು ಮಾಡಿದರೂ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಗುಲಾಬಿ ಬಣ್ಣದ ಮತಚೀಟಿಯಲ್ಲಿ ಮೊದಲ ಕಾಲಂನಲ್ಲಿ ಅಭ್ಯರ್ಥಿಯ ಹೆಸರಿದ್ದರೆ, ಎರಡನೇ ಕಾಲಂನಲ್ಲಿ ಸಂಸದರ ಆಯ್ಕೆಯನ್ನು ಉಲ್ಲೇಖಿಸಲು ಜಾಗವಿರುತ್ತದೆ. ಅಭ್ಯರ್ಥಿಗಳ ಹೆಸರಿನ ಮುಂದೆ ಭಾರತದ ಯಾವುದೇ ಭಾಷೆಯಲ್ಲಿ ತಮ್ಮ ಆದ್ಯತೆಯ ಸಂಖ್ಯೆ ನಮೂದಿಸಬೇಕು. ಮೊದಲ ಆದ್ಯತೆಯಾಗಿದ್ದರೆ ಅದನ್ನು ‘1’ ಎಂದು ಸಂಖ್ಯೆಯಲ್ಲಿ ಉಲ್ಲೇಖಿಸಬೇಕು. ಒಂದೊಮ್ಮೆ ಈ ಅಂಕಿಯ ಮುಂದೆ ಇನ್ಯಾವುದೇ ಸಂಕೇತಗಳನ್ನು ಮಾಡಿದ್ದರೆ, ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಒಂದೇ ರೀತಿಯ ಆದ್ಯತೆಯ ಸಂಖ್ಯೆ ನೀಡಿದ್ದರೆ,
ಮೊದಲ ಆದ್ಯತೆಯನ್ನು ಪ್ರಕಟಿಸದಿದ್ದರೆ ಅಂತಹ ಮತಗಳು ತಿರಸ್ಕೃತಗೊಳ್ಳುತ್ತವೆ. ಅಂದಹಾಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 15 ಮತಗಳು ತಿರಸ್ಕೃತಗೊಳ್ಳುವುದರ ಜೊತೆಗೆ ಎನ್ಡಿಎ ಒಕ್ಕೂಟಕ್ಕೆ ನಿರೀಕ್ಷೆಗಿಂತ 24 ಮತಗಳು ಹೆಚ್ಚುವರಿಯಾಗಿ ಬಂದಿದ್ದವು.
ಉಪರಾಷ್ಟçಪತಿ ಅಧಿಕಾರವೇನು? : ರಾಷ್ಟçಪತಿಯನ್ನು ದೇಶದ ಮೊದಲ ಪ್ರಜೆ ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಅದಕ್ಕೆ ತಕ್ಕಂತೆ ಅವರಿಗೆ ಒಂದಿಷ್ಟು ಶಾಸನಬದ್ಧ ಜವಾಬ್ದಾರಿ ಹಾಗೂ ಅಧಿಕಾರಗಳಿವೆ. ಎಲ್ಲ ಆಡಳಿತಾತ್ಮಕ ನಿರ್ಧಾರಗಳನ್ನು ಪ್ರಧಾನಿ ನೇತೃತ್ವದ ಕೇಂದ್ರ ಸರಕಾರವೇ ಮಾಡುವುದಾದರೂ, ಆದೇಶಗಳು ರಾಷ್ಟçಪತಿ ಭವನದಿಂದಲೇ ಬರುತ್ತವೆ. ಆದರೆ ಹೆಸರಿಗೆ ತಕ್ಕಂತೆ ಉಪರಾಷ್ಟçಪತಿಯನ್ನು ದ್ವಿತೀಯ ಪ್ರಜೆ ಎಂದು ಕರೆಯುವುದಿಲ್ಲ ಹಾಗೂ ಅಂತಹ ಯಾವುದೇ ಶಾಸನಬದ್ಧ ಅಧಿಕಾರಗಳಿಲ್ಲ. ಆದರೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯನ್ನು ಮುನ್ನಡೆಸುವ ಜವಾಬ್ದಾರಿ ಅವರಿಗಿರುತ್ತದೆ. ಲೋಕಸಭೆಯಲ್ಲಿ ಸದಸ್ಯರು ಸೇರಿ ಸ್ಪೀಕರ್ ಅನ್ನು ಆಯ್ಕೆ ಮಾಡುತ್ತಾರೆ. ಆದರೆ ರಾಜ್ಯಸಭೆಯಲ್ಲಿ ಉಪರಾಷ್ಟçಪತಿ ಹುದ್ದೆಯಲ್ಲಿದ್ದವರೇ ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಾರೆ. ಇದಕ್ಕೆ ಯಾವುದೇ ಚುನಾವಣೆ ಇರುವುದಿಲ್ಲ. ಆದರೆ ರಾಜ್ಯಸಭೆಯ ಉಪಾಧ್ಯಕ್ಷ ಹುದ್ದೆಗೆ ಮಾತ್ರ ರಾಜ್ಯಸಭೆಯ ಸದಸ್ಯರು ಚುನಾವಣೆ ನಡೆಸಿ ಆಯ್ಕೆ ಮಾಡುತ್ತಾರೆ.
ಪದಚ್ಯುತಿ ಹೇಗೆ? : ಹಿಂದಿನ ಉಪರಾಷ್ಟçಪತಿ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡುವ ಮುನ್ನ ಪದಚ್ಯುತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಸಂವಿಧಾನಿಕ ಹುದ್ದೆಯಲ್ಲಿ ಕುಳಿತವರ ಪದಚ್ಯುತಿಗೂ ಒಂದಿಷ್ಟು ನಿಯಮಗಳಿವೆ. ಒಂದೊಮ್ಮೆ ಸರಕಾರ ಅಥವಾ ಪ್ರತಿಪಕ್ಷಗಳು ಪದಚ್ಯುತಿ ನಿರ್ಣಯ ಮಾಡಿದರೆ, ಉಪರಾಷ್ಟçಪತಿಗೆ 14 ದಿನಗಳ ಮುನ್ನವೇ ನೋಟಿಸ್ ನೀಡಬೇಕು. ಈ ಅವಧಿಯಲ್ಲಿ ರಾಜೀನಾಮೆ ನೀಡುವ ಅಧಿಕಾರವು ಉಪರಾಷ್ಟçಪತಿಗಿರುತ್ತದೆ. ಒಂದೊಮ್ಮೆ ರಾಜೀನಾಮೆ ನೀಡದಿದ್ದರೆ, ರಾಜ್ಯಸಭೆಯಲ್ಲಿ ಬಹುಮತದಿಂದ ಆ ನಿರ್ಣಯವನ್ನು ಅಂಗೀಕರೀಸಬೇಕು. ಬಳಿಕ ಲೋಕಸಭೆಯಲ್ಲೂ ಬಹುಮತದ ಅಂಗೀಕಾರ ಅತ್ಯಗತ್ಯ. ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಉಪರಾಷ್ಟçಪತಿಯನ್ನು ಪದಚ್ಯುತಿಗೊಳಿಸಿಲ್ಲ. ಆದರೆ ಹಿಂದಿನ ಉಪರಾಷ್ಟçಪತಿ ಸೇರಿ ಮೂವರು ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ್ದರು.
