ಶ್ರೀಮತಿ ಹೇಮಾವತಿ ವೀ, ಹೆಗ್ಗಡೆಯವರು
ಗ್ರಾಮಾಭಿವೃದ್ಧಿ ಯೋಜನೆಯ ಆರಂಭದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳಿಗೆ ನಮ್ಮ ಕಾರ್ಯಕರ್ತರು ತೆರಳಿದಾಗ ಮನೆಯೊಳಗಿದ್ದ ಮಹಿಳೆಯರು ಕಿಟಕಿಯಿಂದ ಇಣುಕಿ ನೋಡಿ ‘ಯಜಮಾನರು ಮನೆಯಲ್ಲಿ ಇಲ್ಲ, ನಾಳೆ ಬನ್ನಿ’ ಎಂದು ಹೇಳಿ ಮನೆಯೊಳಗೆ ಸೇರುತ್ತಿದ್ದರು. ಮನೆಯ ಹೊರಗೆ ಬಂದು ಮಾತನಾಡುವ ಧೈರ್ಯವಾಗಲಿ, ಪ್ರಯತ್ನವನ್ನಾಗಲಿ ಯಾವೊಬ್ಬ ಹೆಣ್ಣು ಮಗಳು ಮಾಡುತ್ತಿರಲಿಲ್ಲ. ಆ ದಿನಗಳಲ್ಲಿ ತಾನು ಕೂಡಾ ಆ ‘ಮನೆಯ ಯಜಮಾನಿ’ ಎಂಬ ಕಲ್ಪನೆ ಅವರಲ್ಲಿ ಇರಲಿಲ್ಲ. 1947ರಲ್ಲಿ ದೇಶಕ್ಕೆ ಸ್ವಾತಂತ್ರö್ಯ ದೊರೆತಿರುವುದು ನಿಜ. ಆದರೆ ಹಳ್ಳಿಯ ಮಹಿಳೆಯರ ಬದುಕುವ ಶೈಲಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲವೆಂದೇ ಹೇಳಬಹುದು.
ಕಳೆದ ನಾಲ್ಕು ದಶಕಗಳಿಂದ ಗ್ರಾಮಾಭಿವೃದ್ಧಿ ಯೋಜನೆಯು ‘ಜ್ಞಾನವಿಕಾಸ’ ಕಾರ್ಯಕ್ರಮದ ಮೂಲಕ ಮನೆಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯರಿಗೆ ಮಾಹಿತಿ ನೀಡಿ, ಅವರ ಗಂಡಂದಿರ ಮನವೊಲಿಸಿ ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಇದರಿಂದಾಗಿ ದಿನಕಳೆದಂತೆ ಮನೆಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರ ಪಾಲಿಗೂ ನಿಜವಾದ ಸ್ವಾತಂತ್ರ್ಯ ದೊರೆಯುವಂತಾಯಿತು. ಜ್ಞಾನವಿಕಾಸ ಕೇಂದ್ರಗಳು ಮಹಿಳೆಯರ ಪಾಲಿನ ಜ್ಞಾನದ ಬಾಗಿಲನ್ನು ತೆರೆದವು. ಮನೆಯಿಂದ ಹೊರಬಂದು ಜನರೊಂದಿಗೆ ಬೆರೆಯುವುದನ್ನು ಕಲಿತರು. ಅನೇಕ ಕಾರ್ಯಕ್ರಮಗಳ ಮೂಲಕ ಒಬ್ಬರಿಂದೊಬ್ಬರಿಗೆ ತಮ್ಮ ಸಾಧನೆ, ಅನುಭವಗಳು ಹಂಚಿಕೆಯಾದವು. ತಾನು ಕಲಿತ ಅಡುಗೆ ಕಲೆ, ತನಗೆ ಗೊತ್ತಿರುವ ಜನಪದ ಕಥೆ, ಹಳ್ಳಿಮದ್ದು ಮುಂತಾದವುಗಳು ವಿನಿಮಯಗೊಂಡವು. ಜ್ಞಾನವಿಕಾಸದ ‘ಹೊಸರುಚಿ’ ಎಂಬ ಹೆಸರಿನ ಕಾರ್ಯಕ್ರಮ ಅಡುಗೆ, ವಿಶೇಷ ತಿಂಡಿ ತಯಾರಿ ಮುಂತಾದವುಗಳನ್ನು ಮಾಡಿ-ನೋಡಿ ಕಲಿಯಲು ಅವಕಾಶವನ್ನೊದಗಿಸಿತು. ನಮ್ಮ ಸಂಸ್ಕೃತಿಯ ಭಾಗವಾಗಿದ್ದ ಹಾಡು, ನೃತ್ಯ, ಜನಪದ ಕಲೆಗಳ ವಿನಿಮಯಕ್ಕೂ ಇದೊಂದು ಮುಕ್ತ ವೇದಿಕೆಯಾಯಿತು. ತೆರೆಮರೆಗೆ ಸರಿಯುತ್ತಿದ್ದ ‘ಗದ್ದೆ ಹಾಡು’ಗಳೆಂದೆ ಹೆಸರು ಪಡೆದಿದ್ದ ಪಾಡ್ದನ, ಕಥೆ, ಶೋಭಾನೆ ಮುಂತಾದ ಹಾಡುಗಳಿಗೆ ಮಹಿಳೆಯರು ಹೊಸ ಸ್ಪರ್ಶವನ್ನು ನೀಡಿದರು. ಇವುಗಳನ್ನು ವೇದಿಕೆಗಳಲ್ಲಿ ಹಾಡುವಂತಾಯಿತು.
ತಿಂಗಳ ಸಭೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಸ್ತುತ, ಪ್ರಚಲಿತ, ದಿನನಿತ್ಯ ನಮ್ಮ ಸುತ್ತ ಮುತ್ತ ನಡೆಯುವ ವಿದ್ಯಮಾನಗಳ ಕುರಿತು ಸುದೀರ್ಘ ಮಾಹಿತಿ ದೊರೆತವು. ಎಷ್ಟೋ ಮಂದಿಯ ಸಣ್ಣಪುಟ್ಟ ಮನೆಯ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ದೊರೆಯಿತು. ‘ಮನೆ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯರು ನಾವು ಎಲ್ಲಿಗೆ ತಲುಪಿದೆವು!’ ಎಂದು ಆಶ್ಚರ್ಯಪಡುವಂತಾಯಿತು. ನಿಜವಾದ ಅರ್ಥದಲ್ಲಿ ಇದು ಮಹಿಳೆಯರ ಪಾಲಿಗೊದಗಿದ ನೈಜ ಸ್ವಾತಂತ್ರ್ಯವಾಯಿತು.
ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಸಬಲೀಕರಣಕ್ಕಾಗಿಯೇ ‘ಸ್ವಸಹಾಯ’ ಕಲ್ಪನೆಯಡಿ ಸಂಘಗಳನ್ನು ರಚಿಸಿತು. ಮೊದಲ ಬಾರಿಗೆ ಮಹಿಳೆಯರ ಕೈಗೆ ಆರ್ಥಿಕ ಶಕ್ತಿಯನ್ನು ನೀಡುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡಿತು. ವಾರದ ಉಳಿತಾಯದೊಂದಿಗೆ ಯೋಜನೆಯ ಸಹಾಯದ ಮೂಲಕ ಬ್ಯಾಂಕ್ನಿಂದ ಸಾಲ ಪಡೆದು ಮನೆಗೆ ಬೇಕಾದ ಅಗತ್ಯ ವಸ್ತುಗಳಾದ ಮಿಕ್ಸಿ, ಗ್ರ್ಯೈಂಡರ್, ಫ್ಯಾನ್, ಟಿ.ವಿ., ಪಾತ್ರೆಗಳು, ಸೀರೆ, ಮಕ್ಕಳಿಗೆ ಬಟ್ಟೆ-ಬರೆಗಳು ಮುಂತಾದ ಸಣ್ಣಪುಟ್ಟ ಅನುಕೂಲತೆಗಳನ್ನು ಮಹಿಳೆಯರೇ ವ್ಯವಸ್ಥೆಗೊಳಿಸಿದರು. ಆ ಮೂಲಕ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡರು. ಬ್ಯಾಂಕ್ಗಳಿಗೆ ತೆರಳುವುದು, ಹಣಕಾಸಿನ ವ್ಯವಹಾರದ ಕಲೆ ಅವರಿಗೆ ಗೊತ್ತಿಲ್ಲದೆಯೇ ಕರಗತವಾಯಿತು. ಇದರಿಂದಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ, ಆತ್ಮಗೌರವ ಬೆಳೆಯಿತು.
ಜ್ಞಾನವಿಕಾಸದ ಆರಂಭದ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಬಹಳಷ್ಟು ಮಹಿಳೆಯರು ಮಂಗಳೂರನ್ನೇ ನೋಡಿರಲಿಲ್ಲ. ಸಾಮಾನ್ಯವಾಗಿ ಅಪರೂಪಕ್ಕೊಮ್ಮೆ ಗಂಡನ ಜೊತೆ ಮನೆಯಿಂದ ಹೊರಗೆ ಹೋದರೂ ಒಂದೆರಡು ದೇವಸ್ಥಾನಗಳಿಗೆ ತೆರಳಿ ಹಿಂತಿರುಗುತ್ತಿದ್ದರು. ಜ್ಞಾನವಿಕಾಸ ಕೇಂದ್ರ ಮಹಿಳೆಯರಿಗಾಗಿ ಒಂದು ದಿನದ ಪ್ರವಾಸವನ್ನು ಏರ್ಪಡಿಸುತ್ತಿತ್ತು. ಇದರಿಂದಾಗಿ ಮಹಿಳೆಯರು ಒಗ್ಗಟ್ಟಾಗಿ ಸುತ್ತಾಡಲು, ತಮ್ಮ ಭಾವನೆ, ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಜ್ಞಾನವಿಕಾಸದಿಂದ ಆಯೋಜಿಸಲ್ಪಟ್ಟ ಪ್ರವಾಸಗಳು ದೇವಾಲಯ, ಸಮುದ್ರ ವೀಕ್ಷಣೆ, ಪ್ರವಾಸಿಕೇಂದ್ರ ಮಾತ್ರವಲ್ಲದೆ ನಮಗೆ ಬೇಕಾದ ವಸ್ತುಗಳ ಖರೀದಿಗೆ, ಮನೆಯ ಜಂಜಾಟ, ಒತ್ತಡ, ನೋವುಗಳನ್ನೆಲ್ಲ ಮರೆತು ಖುಷಿಯಿಂದ ಇತರ ಮಹಿಳೆಯರೊಂದಿಗೆ ಕಾಲ ಕಳೆಯಲು ಅವಕಾಶವನ್ನು ಮಾಡಿಕೊಟ್ಟಿತು. ಪ್ರವಾಸ ಅವರಿಗೊಂದು ಹೊಸ ಸ್ವಾತಂತ್ರö್ಯದ ಅನುಭವವನ್ನು ಕೊಟ್ಟಿತು.
ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಚೌಕಟ್ಟೊಂದನ್ನು ಈ ಸಮಾಜ ನಿರ್ಮಿಸಿಬಿಟ್ಟಿದೆ. ಹೆಣ್ಣು ಮಕ್ಕಳು ಮಾತ್ರ ಹೆಚ್ಚು ಮಾತನಾಡಬಾರದು, ನಗಬಾರದು, ಇತರರ ಜೊತೆ ಬೆರೆಯಬಾರದು ಮುಂತಾದ ಕಟ್ಟುಪಾಡುಗಳಿವೆ. ಹೆಂಡತಿಯಾದವಳು ಮನೆ ಕೆಲಸದವಳು ಎನ್ನುವ ಭಾವನೆಯೂ ಕೆಲವರಲ್ಲಿದೆ. ನಾಲ್ಕು ಜನರ ಮಧ್ಯೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡರೆ ‘ನಿನಗೇನು ಗೊತ್ತಿದೆ? ಸುಮ್ನೆ ಕುಳಿತುಕೊ’ ಎಂಬ ಗಂಡಂದಿರ ದರ್ಪದ ಮಾತನ್ನು ಕೇಳಬೇಕಾಗಿತ್ತು. ಒಟ್ಟಾರೆಯಾಗಿ ಎಲ್ಲಾ ನಿರ್ಧಾರಗಳು ಗಂಡ, ತಂದೆ, ಮಾವ ಹೀಗೆ ಪುರುಷರಿಂದಲೇ ಆಗುತ್ತಿದ್ದವು. ಮಾತನಾಡುವ ಅವಕಾಶವನ್ನೇ ಮಹಿಳೆಯರು ಕಳೆದುಕೊಂಡಿದ್ದರು. ಜ್ಞಾನವಿಕಾಸ ಕಾರ್ಯಕ್ರಮದ ಸಭೆಯಲ್ಲಿ ದಿನಕ್ಕೊಬ್ಬರು ಮಾತನಾಡಬೇಕೆಂಬ ನಿಯಮವಿದೆ. ಹೀಗೆ ಜ್ಞಾನವಿಕಾಸ ಕೇಂದ್ರಗಳು ಮಹಿಳೆಯರಿಗೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವೇದಿಕೆಯನ್ನೊದಗಿಸಿದವು. ಇದರಿಂದಾಗಿ ಮಹಿಳೆಯರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ದೊರೆತಂತಾಯಿತು.
ಯೋಜನೆಯ ಸಂಘಗಳಿಗೆ ಸೇರಿದ ಕಾರಣ ಮಹಿಳೆಯರು ಮೊಬೈಲ್ ಮೂಲಕ ಹಣಕಾಸಿನ ಮತ್ತು ಸಂಘದ ವ್ಯವಹಾರ ನಡೆಸುವುದು ಅನಿವಾರ್ಯವಾಯಿತು. ಹಿಂದೆ ‘ಹೆಣ್ಮಕ್ಕಳಿಗೇಕೆ ಮೊಬೈಲ್?’ ಎನ್ನುವ ಕಾಲವಿತ್ತು. ಆದರೆ ಯೋಜನೆಗೆ ಸೇರಿದ ನಂತರ ಮೊಬೈಲ್ ಅಗತ್ಯವಾಯಿತು. ಸಾಲದ ಬೇಡಿಕೆ, ಸಾಲ ಪಡೆಯಲು, ಮರುಪಾವತಿ, ಸಂಘದ ಲೆಕ್ಕಾಚಾರ ತಿಳಿಯಲು ಮೊಬೈಲ್ ಬಳಕೆಯಾಗುವ ಮೂಲಕ ಮಹಿಳೆಯರು ತಾಂತ್ರಿಕ ಜಗತ್ತಿಗೆ ತೆರೆದುಕೊಂಡರು. ಬ್ಯಾಂಕಿಂಗ್ ವ್ಯವಹಾರ ಅರಿತುಕೊಂಡರು. ಇದು ಗ್ರಾಮೀಣ ಮಹಿಳೆಯರ ಡಿಜಿಟಲ್ ಬದುಕಿಗೆ ಮೊದಲ ಹೆಜ್ಜೆಯಾಯಿತು. ಇಲ್ಲಿ ಸ್ವಾತಂತ್ರ್ಯದ ಮತ್ತೊಂದು ಮಜಲಿಗೆ ಬಂದಂತಾಯಿತು.
ಈ ಹಿಂದೆ ಎಲ್ಲದಕ್ಕೂ ತಂದೆಯನ್ನೇ ಅವಲಂಬಿಸಿದ್ದ ಮಕ್ಕಳಿಗೆ ಇದೀಗ ತಾಯಿಯು ಸಮಾನಳಾಗಿದ್ದಾಳೆ. ಶಾಲಾ ಶುಲ್ಕ ಪಾವತಿ, ಬ್ಯಾಗ್, ಬಟ್ಟೆ, ಪುಸ್ತಕ, ಶೂ ಮುಂತಾದವುಗಳನ್ನು ಖರೀದಿಸಿ ಕೊಡುವ ಮೂಲಕ ತಾಯಿ ಸಂಸಾರದ ಆರ್ಥಿಕ ಜವಾಬ್ದಾರಿಗೆ ಗಂಡನಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾಳೆ.
ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಳವಾಗಿದೆ. ಹಿಂದೆ ಉದ್ದಿಮೆ, ಸ್ವ ಉದ್ಯೋಗ ಅಂದರೆ ಅದು ಪುರುಷರಿಗೆ ಸೀಮಿತವಾಗಿತ್ತು. ಇದೀಗ ಕಾಲ ಬದಲಾಗಿದೆ. ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಸೀರೆ ವ್ಯಾಪಾರ, ಚಟ್ನಿ ಹುಡಿ, ರೊಟ್ಟಿ, ಕೈಬಳೆ, ಬ್ಯೂಟಿಪಾರ್ಲರ್, ಕಿರಾಣಿ ಅಂಗಡಿ, ಹೈನುಗಾರಿಕೆ, ಮಲ್ಲಿಗೆ ಕೃಷಿ ಹೀಗೆ ಬೇರೆ ಬೇರೆ ಸ್ವಉದ್ಯೋಗಗಳ ಮೂಲಕ ಬದುಕು ಕಟ್ಟಿಕೊಂಡ ಸಾವಿರಾರು ಮಹಿಳೆಯರಿದ್ದಾರೆ. ಹೀಗೆ ಯೋಜನೆಯ ಸಹಾಯದಿಂದ ಉದ್ಯಮ ಕ್ಷೇತ್ರಕ್ಕೂ ಮಹಿಳೆಯರು ಕಾಲಿರಿಸಿದ್ದಾರೆ.
ಜ್ಞಾನವಿಕಾಸದ ಗ್ರಂಥಾಲಯಗಳಲ್ಲದೆ ಊರಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿಕೊಟ್ಟು ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ ತಮಗೆ ಮತ್ತು ತಮ್ಮ ಮಕ್ಕಳಿಗೆ ಅಗತ್ಯವಾದ ಪುಸ್ತಕಗಳನ್ನು ಗ್ರಂಥಾಲಯಗಳಿಂದ ತಂದು ಓದಿ ಹಿಂದಿರುಗಿಸಿ ಈ ಬಗ್ಗೆ ಕೇಂದ್ರಗಳಲ್ಲಿ ಚರ್ಚಿಸುವ ಮೂಲಕ ಜ್ಞಾನದ ಬೆಳವಣಿಗೆಗೆ ಸಹಾಯವಾಯಿತು. ಯೋಜನೆಯ ಮೂಲಕ ಮಹಿಳೆಯರಿಗೆ ಮಾತುಗಾರಿಗೆ, ಉದ್ದಿಮೆದಾರರಾಗುವ, ಲೆಕ್ಕಪತ್ರದ ಕಲೆ, ಜ್ಞಾನಾರ್ಜನೆಯ ಸ್ವಾತಂತ್ರ್ಯ ದಕ್ಕಿದೆ. ಇದರೊಂದಿಗೆ ಬಡವರ ಮಕ್ಕಳಿಗೂ ಶಿಕ್ಷಿತರಾಗುವ ಸ್ವಾತಂತ್ರ್ಯವೂ ದೊರೆತಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸುವ ಬಡ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುವ ಕೆಲಸವನ್ನು ಯೋಜನೆಯ ಮೂಲಕ ಮಾಡಲಾಗುತ್ತಿದೆ.
‘ಸ್ವಾತಂತ್ರ್ಯ’ ಎಂಬ ಪದದ ಅರ್ಥ ವಿಶಾಲವಾಗಿದೆ. ಸ್ವಾತಂತ್ರ್ಯವನ್ನು ಹೊಸದೃಷ್ಟಿಯಲ್ಲಿ ನೋಡಿದಾಗ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಹಿಳೆಯರು ಈ ರೀತಿ ಸ್ವತಂತ್ರರಾಗಿರುವುದನ್ನು ಗಮನಿಸಬಹುದು. ಇದು ಗ್ರಾಮಾಭಿವೃದ್ಧಿ ಯೋಜನೆಯ ಪಾಲಿಗೆ ಖುಷಿ ಮತ್ತು ಹೆಮ್ಮೆಯ ವಿಷಯವಾಗಿದೆ.
ಮಹಿಳೆಯರಲ್ಲಾದ ಈ ಎಲ್ಲ ಬದಲಾವಣೆಗಳು ‘ಸ್ವಾತಂತ್ರ್ಯ’ ಎಂಬ ಪದಕ್ಕೆ ಹೊಸ ಅರ್ಥವೊಂದನ್ನು ಕಲ್ಪಿಸಿವೆ ಎಂದರೆ ತಪ್ಪಾಗಲಾರದು. ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
