ಹೊಂದಾಣಿಕೆಯ ಬದುಕು

ಬೆಂಗಳೂರಿನ ಮಗಳ ಮನೆಯ ಟೆರೇಸ್‌ನಲ್ಲಿ ನಿಂತು ನೋಡಿದರೆ ಉದ್ದಕ್ಕೆ ಬೆಳೆದ ಒಂದು ಕ್ರಿಸ್‌ಮಸ್ ಟ್ರೀ ತುಂಬಾ ಬುಡದಿಂದ ತುದಿಯವರೆಗೆ ನೇರಳೆ ಬಣ್ಣದ ಹೂ ಬಿಟ್ಟಂತೆ ಕಾಣಿಸುತ್ತಿತ್ತು. ಇದೇನು ಪ್ರಕೃತಿ ವಿಚಿತ್ರ! ‘ಕ್ರಿಸ್‌ಮಸ್ ಟ್ರೀ ಹೂ ಬಿಟ್ಟಿದೆ’ ಎಂದು ಸೂಕ್ಷö್ಮವಾಗಿ ಗಮನಿಸಿದರೆ ಅಲ್ಲೊಂದು ಬಳ್ಳಿ ಇಡೀ ಮರವನ್ನು ಸುತ್ತಿಕೊಂಡು ಮೇಲಿನವರೆಗೂ ಹೋಗಿತ್ತು. ಆ ಬಳ್ಳಿ ತುಂಬಾ ನೇರಳೆ ಹೂಗಳು. ಮರ ಬಳ್ಳಿಗಳ ಈ ಹೊಂದಾಣಿಕೆ ಕಣ್ಣುಗಳಿಗೆ ಹಬ್ಬವನ್ನುಂಟುಮಾಡುವoತಿತ್ತು. ಬಳ್ಳಿಗೆ ಗಿಡವೇ ಆಸರೆಯಾದರೆ ಗಿಡಕ್ಕೆ ಬಳ್ಳಿಯಿಂದ ಶೋಭೆ.
ಈ ರೀತಿಯ ಹೊಂದಾಣಿಕೆಯಲ್ಲಿ ಬದುಕಿನ ಗುಟ್ಟು, ಸ್ವಾರಸ್ಯ ಅಡಗಿದೆ. ನಾವು ತೆಗೆದುಕೊಳ್ಳುವ ಶುದ್ಧ ಗಾಳಿ, ಆಮ್ಲಜನಕ ಗಿಡ – ಮರಗಳ ಕೊಡುಗೆಯಾದರೆ ಪ್ರತಿಯಾಗಿ ನಾವು ಬಿಡುವ ಇಂಗಾಲದ ಡೈ ಆಕ್ಸೆಡ್ ಗಿಡಗಳಿಗೆ ಅವಶ್ಯಕ. ಕಾಡಿನ ಮೃಗ ಪಕ್ಷಿಗಳನ್ನು ಗಮನಿಸಿದರೆ ಜಿಂಕೆಗಳು ನೆಲದ ಮೇಲಿನ ಅಪಾಯದ ಸೂಚನೆಯನ್ನು ಕೊಟ್ಟರೆ ಮರದ ಮೇಲಿರುವ ಕೋತಿಗಳು, ಹಕ್ಕಿಗಳು ದೂರದಿಂದ ಬರಬಹುದಾದ ಅಪಾಯದ ಮುನ್ಸೂಚನೆಯನ್ನು ಕೊಡುತ್ತವೆ. ಮರದಲ್ಲಿರುವ ಹಣ್ಣುಗಳನ್ನು ತಿಂದು ಪ್ರಾಣಿ – ಪಕ್ಷಿಗಳು ಬೀಜ ಪ್ರಸಾರಕ್ಕೆ ಕಾರಣರಾದರೆ ದುಂಬಿ, ಜೇನುಹುಳಗಳು ಹೂವಿನ ಮೇಲೆ ಕುಳಿತು ತಮ್ಮದೇ ಆದ ರೀತಿಯಲ್ಲಿ ಪರಾಗಸ್ಪರ್ಶಕ್ಕೆ ಆ ಮೂಲಕ ಹೂವು – ಕಾಯಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಕೆಲವೊಮ್ಮೆ ದೊಡ್ಡದಾಗಿ ಬಾಯಿ ತೆರೆದು ಮಲಗಿದ ಅಪಾಯಕಾರಿ ಮೊಸಳೆಯ ಬಾಯೊಳಗೆ ಹೊಕ್ಕು ಹಲ್ಲುಗಳನ್ನು ಸ್ವಚ್ಛಗೊಳಿಸುವ ಹಕ್ಕಿಗಳ ಧೈರ್ಯ ಕಂಡು ಆಶ್ಚರ್ಯವಾಗುತ್ತದೆ. ಹಾಗೆ ಕೋಣಗಳ ತಲೆ, ಕಿವಿ ಭಾಗಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕಾಗೆ ಮಾಡುತ್ತದೆ. ನಮ್ಮಲ್ಲಿ ಆನೆ ನಡೆದಾಡುತ್ತಿದ್ದರೆ ಅದರ ಹಿಂದೆಯೆ ಹೆಜ್ಜೆ ಹಾಕುವ ಹಕ್ಕಿಗಳು ಆನೆಯ ಪದಾಘಾತದಿಂದ ಮಣ್ಣಿನಡಿಯಿಂದ ಎದ್ದ ಹುಳ, ಹುಪ್ಪಟೆಗಳನ್ನು ಹುಡುಕುತ್ತವೆ. ಸಣ್ಣ ಮೀನುಗಳು ದೊಡ್ಡ ಮೀನುಗಳಿಂದ ತಪ್ಪಿಸಿಕೊಳ್ಳಲು ತಾವೆಲ್ಲಾ ಸೇರಿ ದೊಡ್ಡ ಮೀನಿನಾಕಾರದಲ್ಲಿ ಒಂದಾಗಿ ಚಲಿಸುತ್ತವೆ. ರಾಸಾಯನಿಕ ಗೊಬ್ಬರಗಳು ಬರುವ ಮುನ್ನ ಎರೆಹುಳುಗಳು ರೈತನಿಗೆ ಮಿತ್ರನಾಗಿ ಮಣ್ಣಿನಾಳಕ್ಕೆ ಇಳಿದು ಭೂಮಿಯನ್ನು ಫಲವತ್ತಾಗಿಸುತ್ತಿದ್ದವು.
ಪ್ರಾಣಿ-ಪಕ್ಷಿಗಳು ಮತ್ತು ಮನುಷ್ಯನ ಸಂಬoಧವು ಮಧುರವಾದುದು. ಪರಾಗಸ್ಪರ್ಶ ಕ್ರಿಯೆಗೆ ಪತಂಗಗಳು ಬೇಕೇ ಬೇಕು. ಅಂದರೆ ರೈತ ಬೆಳೆದ ಯಾವುದೇ ತರಕಾರಿ ಬಳ್ಳಿ ಕಾಯಿ ನೀಡಬೇಕಾದರೆ ಕೀಟಗಳು ಬೇಕು. ಭೂಮಿಯ ಫಲವತ್ತತೆಗೆ ಎರೆಹುಳ ಇರಬೇಕು. ಗೊಬ್ಬರಕ್ಕಾಗಿ ದನ – ಕರುಗಳು ಅಗತ್ಯ. ಹಿಂದಿನ ಕಾಲದಲ್ಲಿ ಇಂದಿನoತೆ ಸಾಗಾಟಕ್ಕೆ ರಿಕ್ಷಾ, ಜೀಪು, ಲಾರಿಗಳಿರಲಿಲ್ಲ. ಎತ್ತಿನಗಾಡಿ, ಕತ್ತೆ, ಕುದುರೆಗಳನ್ನು ಸಾಗಾಟಕ್ಕೂ ಬಳಸುತ್ತಿದ್ದರು.
ಜೀವನದಲ್ಲಿ ಯಾರೂ ಒಬ್ಬಂಟಿಯಾಗಿ ಬದುಕುವುದು ಸಾಧ್ಯವೇ ಇಲ್ಲ. ಒಬ್ಬರಿಗೊಬ್ಬರು ಸಹಾಯವನ್ನು ಮಾಡುತ್ತಾ ಹೊಂದಾಣಿಕೆಯ ಬದುಕನ್ನು ಸಾಗಿಸಬೇಕಾಗಿದೆ. ಆಗ ನಮ್ಮ ಬದುಕಿಗೊಂದು ನೈಜ ಅರ್ಥ ಬರುತ್ತದೆ.
‘ಪರಸ್ಪರೋಪಗ್ರಹೋ ಜೀವಾನಾಂ’ ಎಂಬ ಮಾತಿದೆ. ಜೀವಿಗಳು ಪರಸ್ಪರ ಉಪಕಾರ ಮಾಡುತ್ತಿರುತ್ತವೆ. ಪ್ರಾಣಿ, ಪಕ್ಷಿ, ಮನುಷ್ಯರ ನಡುವೆಯೂ ಸಣ್ಣ ಪುಟ್ಟ ಉಪಕಾರಗಳು ನಡೆಯುತ್ತಿರುತ್ತವೆ. ಯಾರಾದರೂ ಕಷ್ಟದಲ್ಲಿ ಆಸ್ಪತ್ರೆಯಲ್ಲಿರುವಾಗ ಆಸ್ಪತ್ರೆಗೆ ಪಕ್ಕದಲ್ಲಿರುವ ನೆಂಟರಿಷ್ಟರು ಊಟ-ತಿಂಡಿ ಕಳುಹಿಸುವುದು, ಹಳ್ಳಿಗಳಲ್ಲಿರುವ ಬಂಧುಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ದೂರ ಇದ್ದಲ್ಲಿ ಅವರನ್ನು ಮನೆಯಲ್ಲಿಟ್ಟುಕೊಂಡು ಶಾಲೆಗೆ ಕಳುಹಿಸುವುದು, ತಾವು ಒಂದು ಉದ್ಯಮ ನಡೆಸುವವರಾದರೆ ಬಂಧುಗಳ ಮಕ್ಕಳಿಗೂ ಕೆಲಸ ಕೊಟ್ಟು ಜೀವನೋಪಾಯಕ್ಕೆ ಸಹಾಯವಾಗುವುದು, ಅಣ್ಣ-ತಮ್ಮಂದಿರ ಮಕ್ಕಳ ಮದುವೆಯಲ್ಲಿ ತಾವೂ ಪಾಲುದಾರರಾಗಿ ಅವರ ಹೊರೆ ಕಡಿಮೆ ಮಾಡುವುದು, ‘ಕೊಟ್ಟಿದ್ದು ತನಗೆ ಎಂಬoತೆ’ ನಾವು ಮಾಡಿದ ಇಂಥಾ ಸಣ್ಣ ಪುಟ್ಟ ಸಹಾಯಗಳು ಮುಂದೆ ನಮ್ಮ ಜೀವನದಲ್ಲಿ ಬೇರೆ ಯಾರಿಂದಲಾದರೂ ಸಕಾಲಕ್ಕೆ ವಾಪಾಸ್ ಆಗುತ್ತಿರುತ್ತದೆ.
ಸಂಶೋಧಕನೊಬ್ಬ ಆಫ್ರಿಕಾ ಜನಾಂಗದ ಬಗ್ಗೆ ತಿಳಿದುಕೊಳ್ಳಲೆಂದು ಆಫ್ರಿಕಾಕ್ಕೆ ಹೋಗಿದ್ದಾಗ ಅಲ್ಲಿಯ ಮಕ್ಕಳಿಗಾಗಿ ಒಂದು ಸ್ಪರ್ಧೆ ಏರ್ಪಡಿಸಿದ. ದೂರದ ಮರದ ಕೆಳಗೆ ಒಂದು ಹಣ್ಣಿನ ಬುಟ್ಟಿಯನ್ನಿಟ್ಟು ಇಷ್ಟು ಜನರಲ್ಲಿ ಯಾರು ವೇಗವಾಗಿ ಓಡಿ ಆ ಮರದ ಬಳಿ ಹೋಗುತ್ತೀರೋ ಅಲ್ಲಿರುವ ಹಣ್ಣುಗಳೆಲ್ಲಾ ಅವರಿಗೆ ಸೇರುತ್ತದೆ ಎನ್ನುತ್ತಾನೆ. ಆದರೆ ಆ ಮಕ್ಕಳೆಲ್ಲರೂ ಕೈ ಕೈ ಹಿಡಿದುಕೊಂಡು ಒಟ್ಟಾಗಿ ಓಡಿದ್ದಲ್ಲದೆ ಅಲ್ಲಿರುವ ಹಣ್ಣುಗಳನ್ನೆಲ್ಲಾ ಹಂಚಿಕೊoಡು ತಿಂದರoತೆ. ಈ ಬಗ್ಗೆ ಆತ ವಿಚಾರಿಸಿದಾಗ ಅಲ್ಲಿ ಹಿರಿಯರು ಈ ಪದ್ಧತಿಯನ್ನು ನಾವು ‘ಉಬುಂಟೋ’ ಎಂದು ಕರೆಯುತ್ತೇವೆ. ‘ನಾವೆಲ್ಲರು ಇದ್ದಾಗ ನಾನು ಇದ್ದೇನೆ’ ಅನ್ನುವುದೇ ನಮ್ಮ ತತ್ವ ಅನ್ನುತ್ತಾರಂತೆ. ಈ ಸಂಸ್ಕೃತಿ ಅಲ್ಲಿನ ಮಕ್ಕಳಲ್ಲೂ ಬಂದಿದೆ. ನಮ್ಮ ‘ವಸುಧೈವ ಕುಟುಂಬಕo’ ಎಂಬ ತತ್ವದ ಅರ್ಥವೂ ಅದೇ ಆಗಿದೆ. ಅದನ್ನು ನಾವು ಇಂದಿನ ಮಕ್ಕಳಿಗೆ ಅರ್ಥೈಸುವ ಅಗತ್ಯತೆಯಿದೆ.

Facebook
Twitter
WhatsApp
LinkedIn
Telegram