ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹಿಂದಿನ ಸಂಚಿಕೆಯಲ್ಲಿ ವೃದ್ಧಾಪ್ಯ ಕಾಲದಲ್ಲಿ ಯಾರು ಇಲ್ಲದೇ ಅಸಹಾಯಕರಾಗಿ ಯಾತನೆಯಿಂದ ಬದುಕುತ್ತಿರುವವರ ಹಿನ್ನೆಲೆಯನ್ನು ತಿಳಿದುಕೊಂಡಿದ್ದೇವೆ. ಹಾಗೆಯೇ ಅಂತಹ ಅಸಹಾಯಕ ವ್ಯಕ್ತಿಗಳ ಪೋಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳವು ‘ಮಾಸಾಶನ’ ಕಾರ್ಯಕ್ರಮದ ಮೂಲಕ ಹೇಗೆ ನೆರವಾಗಿದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಪೂಜ್ಯ ಶ್ರೀ ಹೆಗ್ಗಡೆಯವರು 1990ರಲ್ಲಿ ಯೋಜನೆಯ ಮೂಲಕ ಮಾಸಾಶನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ವಾತ್ಸಲ್ಯ ಕಾರ್ಯಕ್ರಮವು ನಮ್ಮ ದೇಶಕ್ಕೇ ಒಂದು ಮಾದರಿ ಕಾರ್ಯಕ್ರಮವಾಗಿದೆ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ನಂತರ ವೃದ್ಧಾಪ್ಯರಿಗೆ ಮತ್ತು ಅಸಹಾಯಕರಿಗೆ ನೀಡುತ್ತಿರುವ ಅತೀ ದೊಡ್ಡ ‘ಮಾಸಾಶನ’ ಇದಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಜಾಲ ರಾಜ್ಯದ ಪ್ರತೀ ಹಳ್ಳಿಹಳ್ಳಿಗೂ ಪಸರಿಸಿದೆ. ಸುಮಾರು 42,000 ಕಾರ್ಯಕರ್ತರ ಬೃಹತ್ ಸೇವಾಸೈನ್ಯ ಶ್ರೀ ಕ್ಷೇತ್ರ ಧರ್ಮಸ್ಥಳದ ದಾನ ಪರಂಪರೆಯನ್ನು ಪೂಜ್ಯ ಶ್ರೀ ಹೆಗ್ಗಡೆಯವರ ಆಶಯದಂತೆ ಮನೆಮನೆಗೆ ತಲುಪಿಸುತ್ತಿದೆ. ಅರ್ಹ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಿ, ಸೂಕ್ತವಾದ ಯೋಜನೆಯ ಕಾರ್ಯಕ್ರಮಗಳನ್ನು ಅವರಿಗೆ ತಲುಪಿಸುವಂತಹ ಶ್ರೇಷ್ಠ ಸೇವೆಯನ್ನು ಯೋಜನೆಯ ಕಾರ್ಯಕರ್ತರು ಮಾಡುತ್ತಿದ್ದಾರೆ. ದುಡಿಯುವ ಶಕ್ತಿಯನ್ನು ಕಳೆದುಕೊಂಡ ಅಸಹಾಯಕರು ಮತ್ತು ವೃದ್ಧಾಪ್ಯರ ಪೋಷಣೆಗೆ ಯಾರೂ ಇಲ್ಲದೇ ಇರುವ ಸಂದರ್ಭದಲ್ಲಿ ಯೋಜನೆಯ ಕಾರ್ಯಕರ್ತರು, ವಿಶೇಷವಾಗಿ ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿಗಳು ಅವರಿರುವಲ್ಲಿಗೆ ಭೇಟಿ ನೀಡಿ ಒಂದು ಸಮಗ್ರ ಪರಿಶೀಲನೆಯನ್ನು ನಡೆಸುತ್ತಾರೆ. ಅವರ ಬದುಕಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ಜೀವನದ ಕನಿಷ್ಠ ಅವಶ್ಯಕತೆಗಳನ್ನು ಪರಿಗಣಿಸಿ, ವಾತ್ಸಲ್ಯ ಮಾಸಾಶನದ ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಕಳುಹಿಸುತ್ತಾರೆ. ಕೇಂದ್ರ ಕಚೇರಿಯಲ್ಲಿ ಅನುಮೋದನೆಗೊಂಡ ನಂತರ ಪ್ರತೀ ತಿಂಗಳು ಯೋಜನೆಯ ಮೂಲಕ ಅವರಿಗೆ ‘ಮಾಸಾಶನ’ ದೊರೆಯುತ್ತದೆ. ಒಬ್ಬ ವ್ಯಕ್ತಿಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಮಾಸಿಕ ರೂ. 1,000/- ದಿಂದ ಗರಿಷ್ಠ ರೂ. 3,000/- ದವರೆಗೆ ಮಾಸಾಶನವನ್ನು ನೀಡಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಕುಟುಂಬವೇ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿರುವಾಗ ಈ ಮಾಸಾಶನವು ಆ ಒಂದು ಸಣ್ಣ ಕುಟುಂಬವನ್ನು ಪೋಷಿಸುತ್ತದೆ.
ಜ್ಞಾನವಿಕಾಸ ಕಾರ್ಯಕರ್ತರು ಆಗಿಂದಾಗ್ಗೆ ಮಾಸಾಶನ ಫಲಾನುಭವಿಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಅಂತಹ ಅಸಹಾಯಕ ಸ್ಥಿತಿಯಲ್ಲಿರುವವರ ಜೀವನದಲ್ಲಿಯೂ ಸಂತಸದ ಕ್ಷಣಗಳನ್ನು ಮೂಡಿಸುತ್ತಿದ್ದಾರೆ. ಪ್ರತೀ ವರ್ಷವೂ ಒಂದು ಸಮಗ್ರ ಪರಿಶೀಲನೆಯನ್ನು ನಡೆಸಿ, ಮಾಸಾಶನವನ್ನು ನವೀಕರಣ ಮಾಡುವ ಪ್ರಕ್ರಿಯೆ ಇದ್ದು, ಅರ್ಹ ಫಲಾನುಭವಿಗಳಿಗೆ ಮಾಸಾಶನ ನೀಡುವುದು ಪುನರಾವರ್ತನೆ ಆಗುತ್ತದೆ. ಇದು ಕೇವಲ ಅಸಹಾಯಕ ಹಾಗೂ ಯಾರೂ ಪೋಷಕರು ಇಲ್ಲದೇ ಇರುವ ವೃದ್ಧಾಪ್ಯ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ತೀವ್ರ ಅಂಗವಿಕಲತೆಯನ್ನು ಹೊಂದಿದ್ದು, ಜೀವನಕ್ಕೆ ಯಾವ ಆಧಾರವೂ ಇಲ್ಲದಿರುವ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ. ಒಟ್ಟಿನಲ್ಲಿ ಅಸಹಾಯಕ ವ್ಯಕ್ತಿಗಳು ಕೊನೆಯ ಪಕ್ಷ ಒಂದು ಕನಿಷ್ಠ ಸಾಮಾನ್ಯ ಜೀವನವನ್ನಾದರೂ ನಡೆಸಬೇಕೆನ್ನುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸಾಶನ ಪಡೆಯುವ ಅಸಹಾಯಕ ವ್ಯಕ್ತಿಗಳಿಗೆ ‘ವಾತ್ಸಲ್ಯ ಕಿಟ್’ನ ಮೂಲಕ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಮಾತೃಶ್ರೀ ಹೇಮಾವತಿ ಅಮ್ಮನವರು ನೀಡಿರುತ್ತಾರೆ. ಮನೆಯಿಲ್ಲದವರಿಗೆ ‘ವಾತ್ಸಲ್ಯ ಮನೆ’ ನೀಡುವುದು ಹಾಗೂ ಇತರ ‘ವಾತ್ಸಲ್ಯ’ ಸೌಲಭ್ಯಗಳ ಕುರಿತಾಗಿ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ.
ದುಡಿಯುವ ಶಕ್ತಿಯನ್ನು ಕಳೆದುಕೊಂಡು ಪೋಷಿಸಲು ಯಾರೂ ಇಲ್ಲದೇ ಇದ್ದು, ವೃದ್ಧಾಪ್ಯದ ಜೀವನದಲ್ಲಿ ಅತ್ಯಂತ ಶೋಚನೀಯವಾಗಿ ಇನ್ನೊಬ್ಬರಲ್ಲಿ ಕಾಡಿ ಬೇಡಿ ಒಂದು ಹೊತ್ತಿನ ಊಟ ಪಡೆಯುವುದು ನರಕ ಯಾತನೆಯ ಜೀವನವಾಗಿದೆ. ಅಂತಹ ಯಾತನೆ ಅಸಹಾಯಕರಿಗೆ ಬಾರದಿರುವಂತೆ ಈ ‘ಮಾಸಾಶನ’ ಅವರನ್ನು ಕಾಪಾಡುತ್ತದೆ. ಮಾಸಾಶನವನ್ನು ಧರ್ಮಸ್ಥಳದ ಪ್ರಸಾದ ಎಂದು ಭಕ್ತಿ, ಗೌರವದಿಂದ ಪಡೆದು ಒಂದು ರೀತಿಯಲ್ಲಿ ಸ್ವಾಭಿಮಾನದ ಬದುಕನ್ನು ನಡೆಸುತ್ತಿರುವುದು ನಮ್ಮ ಯೋಜನೆಗೆ ಒಂದು ಹೆಮ್ಮೆಯಾಗಿದೆ. ಮಾತೃಶ್ರೀ ಅಮ್ಮನವರ ‘ವಾತ್ಸಲ್ಯ’ ಕಾರ್ಯಕ್ರಮ ಅಂತಹ ‘ಅಸಹಾಯಕರು ಅನಾಥರಲ್ಲ, ಅವರೊಂದಿಗೆ ಧರ್ಮಸ್ಥಳ ಇದೆ’ ಎನ್ನುವ ಭಾವನಾತ್ಮಕತೆಯನ್ನು ಮೂಡಿಸಿರುವುದು ಸಾಮಾಜಿಕ ಪರಿವರ್ತನೆಯ ಶ್ರೇಷ್ಠತೆಯನ್ನು ಸಾರಿದೆ.
ಇಲ್ಲಿಯವರೆಗೆ 80,876 ಅಸಹಾಯಕ ವ್ಯಕ್ತಿಗಳು ಮಾಸಾಶನವನ್ನು ಸ್ವೀಕರಿಸಿದ್ದಾರೆ. ಈ ಮಾಸಾಶನವನ್ನು ನೀಡಲು ಪೂಜ್ಯ ಶ್ರೀ ಹೆಗ್ಗಡೆಯವರು ಇಲ್ಲಿಯವರೆಗೆ ರೂ. 141.31 ಕೋಟಿ ಮೊತ್ತವನ್ನು ವಿನಿಯೋಗಿಸಿದ್ದಾರೆ. ಪ್ರತೀ ವರ್ಷ ಸುಮಾರು 18000 ದಿಂದ 20000 ಅಸಹಾಯಕ ವ್ಯಕ್ತಿಗಳ ಮಾಸಾಶನ ನವೀಕರಣ ಪ್ರಕ್ರಿಯೆ ನಡೆಯುತ್ತದೆ ಹಾಗೂ ಅರ್ಹ ಫಲಾನುಭವಿಗಳಿಗೆ ಮಾಸಾಶನ ನಿರಂತರವಾಗಿ ಮುಂದುವರಿಯುತ್ತದೆ. ಯೋಜನೆಯ ಮಾಸಾಶನ ಕಾರ್ಯಕ್ರಮ ಮಾನವೀಯ ಮೌಲ್ಯಗಳನ್ನು ಪರಾಕಾಷ್ಠೆಗೆ ಎತ್ತಿ ಹಿಡಿದ ಒಂದು ಶ್ರೇಷ್ಠ ಸಾಮಾಜಿಕ ಕಾರ್ಯಕ್ರಮವಾಗಿದೆ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ವಿಚಾರಗಳನ್ನು ತಿಳಿಯೋಣ.
